
ಸ್ಯಾಂಡಲ್ವುಡ್ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ (Rakshit Shetty) ಅಭಿನಯ 777 ಚಾರ್ಲಿ (777 Charlie) ಚಿತ್ರದ ನಾಗಾಲೋಟ ಮುಂದುವರೆದಿದೆ. ಬಾಕ್ಸಾಫೀಸ್ನಲ್ಲಿ ಭರ್ಜರಿ ಕಲೆಕ್ಷನ್ ಮಾಡುತ್ತಿರುವ ಚಾರ್ಲಿ ಮೋಡಿಯ ಬಗ್ಗೆ ಪರಭಾಷಾ ಸಿನಿಪ್ರಿಯರು ಸಹ ಹಾಡಿಹೊಗಳುತ್ತಿದ್ದಾರೆ. ಅದರಲ್ಲೂ ಖ್ಯಾತ ನಟ-ನಟಿಯರೂ ಕೂಡ ಚಿತ್ರಕ್ಕೆ ಮೆಚ್ಚುಗೆ ಸೂಚಿಸುತ್ತಿದ್ದಾರೆ. ಈ ಪಟ್ಟಿಗೆ ಹೊಸ ಸೇರ್ಪಡೆ ಸೂಪರ್ ಸ್ಟಾರ್ ರಜನಿಕಾಂತ್ (Rajinikanth). 777 ಚಾರ್ಲಿ ಚಿತ್ರವನ್ನು ತಲೈವಾ ರಜನಿ ವೀಕ್ಷಿಸಿ ಮೆಚ್ಚುಗೆ ಸೂಚಿಸಿರುವ ವಿಚಾರವನ್ನು ಖುದ್ದು ರಕ್ಷಿತ್ ಶೆಟ್ಟಿಯೇ ಬಹಿರಂಗಪಡಿಸಿದ್ದಾರೆ. ಅಲ್ಲದೆ ಮೇರುನಟನ ಮೆಚ್ಚುಗೆ ರಕ್ಷಿತ್ ಶೆಟ್ಟಿ ಸಂತಸಗೊಂಡಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ರಕ್ಷಿತ್ ಶೆಟ್ಟಿ, ಎಂತಹ ಅಧ್ಭುತ ದಿನದಾರಂಭ…ಇವತ್ತು ರಜನಿಕಾಂತ್ ಅವರಿಂದ ಕರೆ ಬಂತು. ಅವರು ನಿನ್ನೆ (ಮಂಗಳವಾರ) ರಾತ್ರಿ 777 ಚಾರ್ಲಿ ಚಿತ್ರವನ್ನು ನೋಡಿದ್ದಾರೆ. ಚಿತ್ರವನ್ನು ಮೆಚ್ಚಿಕೊಂಡಿರುವುದಾಗಿ ತಿಳಿಸಿದ್ದಾರೆ. ಅಷ್ಟೇ ಅಲ್ಲದೆ ನಮ್ಮ ಸಿನಿಮಾದ ಮೇಕಿಂಗ್ ಮತ್ತು ಡಿಸೈನ್ ಬಗ್ಗೆ ಮಾತನಾಡಿದರು. ಅದರಲ್ಲೂ ವಿಶೇಷವಾಗಿ ಕ್ಲೈಮ್ಯಾಕ್ಸ್ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು ಎಂದು ರಕ್ಷಿತ್ ಶೆಟ್ಟಿ ತಿಳಿಸಿದ್ದಾರೆ.
ಚಿತ್ರವು ಭಾವನಾತ್ಮಕ ಕೊನೆಗೊಂಡಿರುವುದರ ಬಗ್ಗೆ ರಜನಿಕಾಂತ್ ವಿಶೇಷ ಮೆಚ್ಚುಗೆ ವ್ಯಕ್ತಪಡಿಸಿರುವುದನ್ನು ಪ್ರಸ್ತಾಪಿಸಿರುವ ರಕ್ಷಿತ್ ಶೆಟ್ಟಿ, ಸೂಪರ್ ಸ್ಟಾರ್ ಅವರಿಂದ ಈ ರೀತಿಯ ಮಾತುಗಳನ್ನು ಕೇಳಿರುವುದು ಅದ್ಭುತ ಅನುಭವ. ತುಂಬಾ ಧನ್ಯವಾದಗಳು ರಜನಿಕಾಂತ್ ಸರ್ ಎಂದು ಟ್ವೀಟ್ ಮಾಡಿದ್ದಾರೆ.
ಇದಕ್ಕೂ ಮುನ್ನ ತೆಲುಗು ನಟ ರಾಣಾ ದಗ್ಗುಬಾಟಿ, ಬಾಲಿವುಡ್ ನಟಿ ರಕುಲ್ ಪ್ರೀತ್ ಸಿಂಗ್, ತಮಿಳಿನ ಖ್ಯಾತ ನಿರ್ದೇಶಕ ಕಾರ್ತಿಕ್ ಸುಬ್ಬರಾಜ್, ಮಲಯಾಳಂ ನಟ ಪೃಥ್ವಿರಾಜ್ ಸೇರಿದಂತೆ ಅನೇಕರು 777 ಚಾರ್ಲಿ ಚಿತ್ರವನ್ನು ಮೆಚ್ಚಿ ಹಾಡಿಹೊಗಳಿದ್ದರು. ಇದೀಗ ಕಾಲಿವುಡ್ ಸೂಪರ್ ಸ್ಟಾರ್ ರಜನಿಕಾಂತ್ ಕೂಡ ಚಿತ್ರಕ್ಕೆ ಬಹುಪರಾಕ್ ಅಂದಿರುವುದು ಚಿತ್ರ ತಂಡದ ಖುಷಿಯನ್ನು ಇಮ್ಮಡಿಗೊಳಿಸಿದೆ.
ಸದ್ಯ ಬಾಕ್ಸಾಫೀಸ್ನಲ್ಲಿ 777 ಚಾರ್ಲಿ ಚಿತ್ರದ ಅಬ್ಬರ ಮುಂದುವರೆದಿದ್ದು, ಧರ್ಮ ಮತ್ತು ಚಾರ್ಲಿಯ ಹೃದಯಸ್ಪರ್ಶಿ ಪ್ರಯಾಣವನ್ನು ವೀಕ್ಷಿಸಲು ದಿನದಿಂದ ದಿನಕ್ಕೆ ಜನರು ಥಿಯೇಟರ್ನತ್ತ ಧಾವಿಸುತ್ತಿದ್ದಾರೆ. ಅಲ್ಲದೆ ಚಾರ್ಲಿಯ ತುಂಟಾಟ, ಧರ್ಮನ ಪ್ರಾಣ ಸಂಕಟವನ್ನು ವೀಕ್ಷಿಸಿ ಪ್ರೇಕ್ಷಕರು ಕಣ್ಣೀರಿನೊಂದಿಗೆ ಥಿಯೇಟರ್ನಿಂದ ಹೊರಬರುತ್ತಿದ್ದಾರೆ. ಇದೀಗ ಚಾರ್ಲಿಯನ್ನು ವೀಕ್ಷಿಸಿರುವ ರಜನಿಕಾಂತ್ ಕೂಡ ಭಾವನಾತ್ಮಕ ಕ್ಲೈಮ್ಯಾಕ್ಸ್ಗೆ ಮೆಚ್ಚುಗೆ ಸೂಚಿಸಿದ್ದಾರೆ. ಇದರೊಂದಿಗೆ ಅದ್ಭುತ ಚಿತ್ರ ನೀಡಿದ್ದೇವೆ ಎಂಬ ಸಾರ್ಥಕತೆಯಲ್ಲಿದ್ದಾರೆ ನಿರ್ದೇಶಕ ಕಿರಣ್ ರಾಜ್ ಅ್ಯಂಡ್ ರಕ್ಷಿತ್ ಶೆಟ್ಟಿ ಟೀಮ್.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.