
ಭಾರತೀಯ ಚಿತ್ರರಂಗದ ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರಿಗೆ ಇಂದು (ಏ.7) ಜನ್ಮದಿನ. ಅವರಿಗೆ ಸೋಶಿಯಲ್ ಮೀಡಿಯಾದಲ್ಲಿ ಶುಭಾಶಯಗಳು ಹರಿದು ಬರುತ್ತಿವೆ. ಬಹುಭಾಷೆಯಲ್ಲಿ ಅಪಾರ ಜನಪ್ರಿಯತೆ ಪಡೆದ ಆರ್ಜಿವಿ 59ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಮೂರು ದಶಕಗಳ ವೃತ್ತಿಜೀವನದಲ್ಲಿ ಅವರು ಮಾಡಿಕೊಂಡ ವಿವಾದಗಳು ಒಂದೆರಡಲ್ಲ. ಆದರೂ ಅವರನ್ನು ಇಷ್ಟಪಡುವ ಲಕ್ಷಾಂತರ ಅಭಿಮಾನಿಗಳಿದ್ದಾರೆ. ಅವರೆಲ್ಲರೂ ಇಂದು ರಾಮ್ ಗೋಪಾಲ್ ವರ್ಮಾಗೆ ಶುಭಕೋರುತ್ತಿದ್ದಾರೆ.
ಸಂಪೂರ್ಣ ಡಿಫರೆಂಟ್ ಆಗಿ ಆಲೋಚಿಸುವಲ್ಲಿ ರಾಮ್ ಗೋಪಾಲ್ ವರ್ಮಾ ಫೇಮಸ್. ಡಿಫರೆಂಟ್ ಎನ್ನುವುದಕ್ಕಿಂತಲೂ ವಿಚಿತ್ರ ಮತ್ತು ವಿಲಕ್ಷಣ ಎಂಬ ಪದಗಳು ಆರ್ಜಿವಿಗೆ ಹೆಚ್ಚು ಸೂಕ್ತ ಎನಿಸುತ್ತವೆ. ಎಲ್ಲರೂ ಒಂದು ರೀತಿಯಲ್ಲಿ ಯೋಚಿಸಿದರೆ ಆರ್ಜಿವಿ ಅದಕ್ಕೆ ತದ್ವಿರುದ್ಧವಾಗಿ ಯೋಚಿಸುವಂತವರು. ಅದೇ ಕಾರಣಕ್ಕೋ ಏನೂ ಈಗ ನೆಟ್ಟಿಗರು ಕೂಡ ವರ್ಮಾಗೆ ಸಿಕ್ಕಾಪಟ್ಟೆ ವಿಚಿತ್ರವಾಗಿ ವಿಶ್ ಮಾಡುತ್ತಿದ್ದಾರೆ.
ಹುಟ್ಟುಹಬ್ಬಕ್ಕೆ ಹ್ಯಾಪಿ ಬರ್ತ್ಡೇ ಎಂದು ವಿಶ್ ಮಾಡುವುದು ಸಹಜ. ಆದರೆ ರಾಮ್ ಗೋಪಾಲ್ ವರ್ಮಾಗೆ ಎಲ್ಲರೂ ಅನ್ಹ್ಯಾಪಿ ಬರ್ತ್ಡೇ ಎಂದು ವಿಶ್ ಮಾಡುತ್ತಿದ್ದಾರೆ! ಹೌದು, ಆರ್ಜಿವಿ ರೀತಿಯೇ ಅವರ ಅಭಿಮಾನಿಗಳು ಕೂಡ ವಿಲಕ್ಷಣವಾಗಿಯೇ ವರ್ತಿಸುತ್ತಿದ್ದಾರೆ, ಸೋಶಿಯಲ್ ಮೀಡಿಯಾದಲ್ಲಿ ಹೀಗೆ ಹಾರೈಸುತ್ತಿದ್ದಾರೆ. #unhappybirthdayrgv ಎಂಬ ಹ್ಯಾಶ್ಟ್ಯಾಗ್ ಮೂಲಕ ಸದ್ದು ಮಾಡುತ್ತಿದ್ದಾರೆ. ಇದು ಟ್ವಿಟರ್ನಲ್ಲಿ ವೈರಲ್ ಆಗುತ್ತಿದೆ.
ಸ್ಟಾರ್ ನಟರ ಹುಟ್ಟುಹಬ್ಬದ ಸಂದರ್ಭದಲ್ಲಿ ಕಾಮನ್ ಡಿಪಿ ಬಿಡುಗಡೆ ಮಾಡಲಾಗುತ್ತದೆ. ಹಾಗೆಯೇ ಆರ್ಜಿವಿ ಬರ್ತ್ಡೇ ಪ್ರಯುಕ್ತ ಅವರ ಅಭಿಮಾನಿಗಳು ಒಂದು ಪೋಸ್ಟರ್ ಹಂಚಿಕೊಂಡಿದ್ದು, ಅದರಲ್ಲಿ ‘ಅನ್ಹ್ಯಾಪಿ ಬರ್ತ್ಡೇ ಬಾಸ್’ ಎಂದು ಬರೆದಿರುವುದು ಕಣ್ಣು ಕುಕ್ಕುತ್ತಿದೆ. ಈ ಟ್ವೀಟ್ಗಳಿಗೆ ವರ್ಮಾ ಯಾವ ರೀತಿ ಪ್ರತಿಕ್ರಿಯಿಸುತ್ತಾರೆ ಎಂಬ ಕೌತುಕ ಈಗ ನಿರ್ಮಾಣ ಆಗಿದೆ.
1989ರಲ್ಲಿ ಅಕ್ಕಿನೇನಿ ನಾಗಾರ್ಜುನ ನಟನೆಯ ‘ಶಿವ’ ಚಿತ್ರಕ್ಕೆ ನಿರ್ದೇಶನ ಮಾಡುವ ಮೂಲಕ ರಾಮ್ ಗೋಪಾಲ್ ವರ್ಮಾ ದೊಡ್ಡ ಮಟ್ಟದ ಜನಪ್ರಿಯತೆ ಗಳಿಸಿದರು. ಹೀಗೆ ತೆಲುಗು ಚಿತ್ರರಂಗದಿಂದ ಸಿನಿಜರ್ನಿ ಆರಂಭಿಸಿದ ಅವರು ನಂತರ ಬಾಲಿವುಡ್ಗೂ ಕಾಲಿಟ್ಟು ಗಮನ ಸೆಳೆದರು. ಅಮಿತಾಭ್ ಬಚ್ಚನ್, ಅಜಯ್ ದೇವಗನ್ ಮುಂತಾದ ನಟರ ಜೊತೆ ಸಿನಿಮಾ ಮಾಡಿ ಸೈ ಎನಿಸಿಕೊಂಡರು. ಕನ್ನಡದಲ್ಲಿ ಶಿವರಾಜ್ಕುಮಾರ್ ನಟನೆಯ ‘ಕಿಲ್ಲಿಂಗ್ ವೀರಪ್ಪನ್’ ಚಿತ್ರಕ್ಕೆ ನಿರ್ದೇಶನ ಮಾಡಿದರು. ಇತ್ತೀಚಿನ ದಿನಗಳಲ್ಲಿ ಕಡಿಮೆ ಅವಧಿಯ ಸಿನಿಮಾಗಳನ್ನು ಮಾಡಿ, ಆನ್ಲೈನ್ನಲ್ಲಿ ರಿಲೀಸ್ ಮಾಡುವ ಮೂಲಕ ತಮ್ಮದೇ ಹಾದಿಯಲ್ಲಿ ಆರ್ಜಿವಿ ಸಾಗುತ್ತಿದ್ದಾರೆ.
ಇದನ್ನೂ ಓದಿ: Ram Gopal Varma Top 5 Movies: ಸಿನಿಮಾ ರಂಗದ ದೈತ್ಯ ಪ್ರತಿಭೆ ರಾಮ್ ಗೋಪಾಲ್ ವರ್ಮಾರ 5 ವಿಲಕ್ಷಣ ಸಿನಿಮಾಗಳಿವು
(Ram Gopal Varma Birthday: Fans wish Unhappy Birthday to controversial director RGV)