
ನಟಿ ರಶ್ಮಿಕಾ ಮಂದಣ್ಣ (Rashmika Mandanna) ಅವರಿಗೆ ‘ಪುಷ್ಪ’ ಸಿನಿಮಾದಿಂದ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಜನಪ್ರಿಯತೆ ಸಿಕ್ಕಿತು. ಹಿಂದಿಗೆ ಡಬ್ ಆಗಿ ತೆರೆಕಂಡ ಆ ಚಿತ್ರದ ಗೆಲುವಿನ ಬಳಿಕ ಅವರಿಗೆ ಬಾಲಿವುಡ್ನಿಂದಲೂ ಆಫರ್ಗಳು ಬರಲು ಆರಂಭಿಸಿದವು. ಅಷ್ಟೇ ಅಲ್ಲ, ‘ಪುಷ್ಪ’ (Pushpa Movie) ಸಿನಿಮಾದಿಂದಾಗಿ ರಶ್ಮಿಕಾ ಮಂದಣ್ಣ ಅವರು ರಷ್ಯಾದಲ್ಲೂ ಫೇಮಸ್ ಆಗಲಿದ್ದಾರೆ! ಹೌದು, ಈ ಸಿನಿಮಾ ಶೀಘ್ರದಲ್ಲೇ ರಷ್ಯನ್ ಭಾಷೆಯಲ್ಲಿ ರಿಲೀಸ್ ಆಗಲಿದೆ. ಅದರ ಪ್ರೀಮಿಯರ್ ಶೋ ಸಲುವಾಗಿ ಇಡೀ ಚಿತ್ರತಂಡ ರಷ್ಯಾಗೆ ತೆರಳಲಿದೆ. ರಶ್ಮಿಕಾ ಮಂದಣ್ಣ, ಅಲ್ಲು ಅರ್ಜುನ್ (Allu Arjun), ನಿರ್ದೇಶಕ ಸುಕುಮಾರ್ ಸೇರಿದಂತೆ ಅನೇಕರು ರಷ್ಯಾದಲ್ಲಿ ಈ ಚಿತ್ರದ ಪ್ರಚಾರ ಮಾಡಲಿದ್ದಾರೆ.
ಭಾರತದಲ್ಲಿ ‘ಪುಷ್ಪ’ ಚಿತ್ರ ತೆರೆಕಂಡಿದ್ದು 2021ರ ಡಿಸೆಂಬರ್ 17ರಂದು. ಅದಾಗಿ ಒಂದು ವರ್ಷ ಕಳೆಯುವುದಕ್ಕೂ ಮುನ್ನವೇ ಈ ಸಿನಿಮಾ ರಷ್ಯಾದ ಮಾರುಕಟ್ಟೆಯಲ್ಲಿ ಕಮಾಯಿ ಮಾಡಲು ಮುಂದಾಗಿದೆ. ರಷ್ಯನ್ ಭಾಷೆಗೆ ಡಬ್ ಮಾಡಿ ರಿಲೀಸ್ ಮಾಡಲು ದಿನಾಂಕ ನಿಗದಿ ಆಗಿದೆ. ಡಿಸೆಂಬರ್ 8ರಂದು ರಷ್ಯಾದ ಅನೇಕ ಕಡೆಗಳಲ್ಲಿ ಈ ಚಿತ್ರ ತೆರೆಕಾಣಲಿದೆ. ಅದಕ್ಕೂ ಮುನ್ನ ಡಿ.1ರಂದು ಮಾಸ್ಕೋ ಹಾಗೂ ಡಿ.3ರಂದು ಪೀಟರ್ಸ್ಬರ್ಗ್ನಲ್ಲಿ ಈ ಚಿತ್ರದ ಪ್ರೀಮಿಯರ್ ಶೋ ನಡೆಯಲಿದೆ. ‘ಪುಷ್ಪ’ ಚಿತ್ರದ ರಷ್ಯನ್ ರಿಲೀಸ್ ಬಗ್ಗೆ ಸಿನಿಮಾದ ಅಧಿಕೃತ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಮಾಹಿತಿ ಹಂಚಿಕೊಳ್ಳಲಾಗಿದೆ. ರಶ್ಮಿಕಾ ಮಂದಣ್ಣ ಅಭಿಮಾನಿಗಳಿಗೆ ಈ ವಿಚಾರ ಹೆಮ್ಮೆ ತಂದಿದೆ.
ಕಳೆದ ವರ್ಷ ವಿಶ್ವಾದ್ಯಂತ ತೆರೆಕಂಡಿದ್ದ ಈ ಚಿತ್ರ 360 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿತ್ತು. ನಂತರ ಒಟಿಟಿಗೆ ಕಾಲಿಟ್ಟಿತು. ಈಗ ಮತ್ತೆ ರಷ್ಯಾದ ಚಿತ್ರಮಂದಿರಗಳಲ್ಲಿ ತನ್ನ ಅಬ್ಬರ ಶುರುಮಾಡಲಿದೆ. ರಷ್ಯಾದಲ್ಲಿನ ಕಲೆಕ್ಷನ್ ಕೂಡ ಸೇರ್ಪಡೆಯಾದರೆ ಈ ಚಿತ್ರದ ಒಟ್ಟು ಬಾಕ್ಸ್ ಆಫೀಸ್ ಗಳಿಕೆಯ ಮೊತ್ತ ಹೆಚ್ಚಾಗಲಿದೆ. ಆ ಕಾರಣದಿಂದಲೂ ರಷ್ಯಾದ ರಿಲೀಸ್ ತುಂಬ ಮುಖ್ಯವಾಗುತ್ತಿದೆ.
ಡಿಸೆಂಬರ್ 1ರಂದು ರಷ್ಯಾದಲ್ಲಿ ಇಂಡಿಯನ್ ಫಿಲ್ಮ್ ಫೆಸ್ಟಿವಲ್ ನಡೆಯಲಿದೆ. ಭಾರತದ ಅನೇಕ ಸಿನಿಮಾಗಳು ಇದರಲ್ಲಿ ಪ್ರದರ್ಶನ ಆಗಲಿವೆ. ‘ಪುಷ್ಪ’ ಜೊತೆಗೆ ‘ದಂಗಲ್’, ‘ವಾರ್’, ‘ಆರ್ಆರ್ಆರ್’, ‘ಮೈ ನೇಮ್ ಈಸ್ ಖಾನ್’ ಮುಂತಾದ ಚಿತ್ರಗಳನ್ನು ಪ್ರದರ್ಶನ ಮಾಡಲಾಗುವುದು.
ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ‘ಪುಷ್ಪ 2’ ಸಿನಿಮಾದ ಶೂಟಿಂಗ್ನಲ್ಲಿ ಈಗಾಗಲೇ ಅಲ್ಲು ಅರ್ಜುನ್ ಅವರು ಪಾಲ್ಗೊಂಡಿರಬೇಕಿತ್ತು. ಆದರೆ ಕಾರಣಾಂತರಗಳಿಂದ ಈ ಚಿತ್ರದ ಕೆಲಸಗಳು ವಿಳಂಬ ಆಗುತ್ತಿವೆ. ‘ಪುಷ್ಪ 2’ ಬಗ್ಗೆ ಆದಷ್ಟು ಬೇಗ ಅಪ್ಡೇಟ್ ಸಿಗಲಿ ಎಂದು ಫ್ಯಾನ್ಸ್ ಕಾಯುತ್ತಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.