ನಟಿ ರವೀನಾ ಟಂಡನ್ (Raveena Tandon) ಅವರು ಬಾಲಿವುಡ್ ಹಾಗೂ ದಕ್ಷಿಣ ಭಾರತದ ಸಿನಿಮಾಗಳಲ್ಲಿ ನಟಿಸಿದ್ದಾರೆ. ‘ಕೆಜಿಎಫ್ 2’ ಚಿತ್ರದಲ್ಲಿ ಅವರು ಮಾಡಿದ ರಮಿಕಾ ಸೇನ್ ಪಾತ್ರ ಭರ್ಜರಿ ಗಮನ ಸೆಳೆದಿತ್ತು. ಈ ಚಿತ್ರದ ಮೂಲಕ ಅವರ ಜನಪ್ರಿಯತೆ ಹೆಚ್ಚಿತು. ಈಗ ಅವರ ಮಗಳು ರಾಶಾ ತಡಾನಿ (Rasha Thadani) ಕೂಡ ಚಿತ್ರರಂಗದಲ್ಲಿ ಮಿಂಚಲು ರೆಡಿ ಆಗಿದ್ದಾರೆ ಎಂದು ವರದಿ ಆಗಿದೆ. ರಾಮ್ ಚರಣ್ ಅವರ ಮುಂದಿನ ಸಿನಿಮಾದಲ್ಲಿ ರಾಶಾ ನಟಿಸಲಿದ್ದಾರಂತೆ. ಈ ವಿಚಾರ ಅನೇಕರಿಗೆ ಅಚ್ಚರಿ ಮೂಡಿಸಿದೆ. ಈ ಸಿನಿಮಾದಲ್ಲಿ ರಾಮ್ ಚರಣ್ಗೆ (Ram Charan) ಹೀರೋಯಿನ್ ಆಗಿ ಕಾಣಿಸಿಕೊಳ್ತಾರಾ ಅಥವಾ ಮಗಳ ಪಾತ್ರ ಮಾಡುತ್ತಾರಾ ಎನ್ನುವ ಪ್ರಶ್ನೆ ಅನೇಕರಿಗೆ ಮೂಡಿದೆ.
ರವೀನಾ ಚಿತ್ರರಂಗಕ್ಕೆ ಕಾಲಿಟ್ಟಿದ್ದು 1991ರಲ್ಲಿ. ಆ ಬಳಿಕ ಅವರು ತಮಿಳು, ತೆಲುಗು ಹಾಗೂ ಕನ್ನಡ ಸಿನಿಮಾಗಳಲ್ಲಿ ನಟಿಸಿದರು. ಅವರ ಪತಿ ಅನಿಲ್ ತಡಾನಿ ಬಾಲಿವುಡ್ನಲ್ಲಿ ಸಿನಿಮಾ ಹಂಚಿಕೆದಾರರು. ಈಗ ಮಗಳಿಗೆ 18 ವರ್ಷ ತುಂಬಿದೆ. ಈ ಕಾರಣದಿಂದ ಮಗಳನ್ನು ಚಿತ್ರರಂಗಕ್ಕೆ ಪರಿಚಯಿಸಲು ಇಬ್ಬರೂ ನಿರ್ಧರಿಸಿದ್ದಾರೆ ಎಂದು ವರದಿ ಆಗಿದೆ. ದಕ್ಷಿಣ ಭಾರತದ ಚಿತ್ರರಂಗದ ಮೂಲಕ ಸಿನಿ ಪಯಣ ಆರಂಭಿಸಲು ರಾಶಾ ರೆಡಿ ಆಗಿದ್ದಾರೆ. ಈ ವಿಚಾರದ ಬಗ್ಗೆ ಅಧಿಕೃತ ಘೋಷಣೆ ಆಗಬೇಕಿದೆ.
ಅಮ್ಮನ ಜೊತೆ ಸಖತ್ ಕ್ಯೂಟ್ ಆಗಿ ಪೋಸ್ ಕೊಟ್ಟ ನಟಿ ರವೀನಾ ಟಂಡನ್ ಮಗಳು
ರಾಮ್ ಚರಣ್ ಅವರು ಬುಚಿ ಬಾಬು ಸನಾ ಜೊತೆ ಸಿನಿಮಾ ಮಾಡಬೇಕಿದೆ. ‘ಉಪ್ಪೇನಾ’ ಸಿನಿಮಾ ಮಾಡಿ ಅವರು ಜನಪ್ರಿಯತೆ ಪಡೆದಿದ್ದಾರೆ. ಈಗ ಅವರು ಹೊಸ ಕಥೆ ಸಿದ್ಧಪಡಿಸಿಕೊಂಡಿದ್ದಾರೆ. ಈ ಚಿತ್ರದ ಬಜೆಟ್ 300 ಕೋಟಿ ರೂಪಾಯಿಯಲ್ಲಿ ಮೀರಲಿದೆ ಎನ್ನಲಾಗುತ್ತಿದೆ. ಈ ವಿಚಾರ ಕೇಳಿ ಫ್ಯಾನ್ಸ್ ಸಖತ್ ಖುಷಿಪಟ್ಟಿದ್ದಾರೆ.
ರವೀನಾ ಹಾಗೂ ಅನಿಲ್ ತಡಾನಿ ಅವರು ಬುಚ್ಚಿ ಬಾಬುನ ಆಯ್ಕೆ ಮಾಡಿಕೊಳ್ಳಲು ಮತ್ತೊಂದು ಕಾರಣ ಇದೆ. ‘ಉಪ್ಪೇನಾ’ ಸಿನಿಮಾದಲ್ಲಿ ನಟಿಸುವಾಗ ಕೃತಿ ಶೆಟ್ಟಿಗೆ 17 ವರ್ಷ ಆಗಿತ್ತು. ಆದರೂ ಅವರ ಪಾತ್ರವನ್ನು ಒಳ್ಳೆಯ ರೀತಿಯಲ್ಲಿ ಕಟ್ಟಿಕೊಟ್ಟಿದ್ದು ಬುಚ್ಚಿ ಬಾಬು. ಈಗ ಅವರು ರಾಶಾಗಾಗಿ ಒಂದೊಳ್ಳೆಯ ಕಥೆ ರೆಡಿ ಮಾಡಿಕೊಂಡಿದ್ದಾರೆ. ಈ ಬಗ್ಗೆ ಅಧಿಕೃತ ಘೋಷಣೆ ಆಗಲಿ ಎಂದು ಫ್ಯಾನ್ಸ್ ಕಾಯುತ್ತಿದ್ದಾರೆ.
ಈ ಮೊದಲು ಮಾತನಾಡಿದ್ದ ರವೀನಾ ಅವರು ಮಗಳ ಸಿನಿಮಾಗೆ ಕಾಲಿಡುವ ಬಗ್ಗೆ ಮಾಹಿತಿ ನೀಡಿದ್ದರು. ‘ರಾಶಾ ತನ್ನ ಶಿಕ್ಷಣವನ್ನು ಪೂರ್ಣಗೊಳಿಸಿಕೊಳ್ಳಬೇಕಿದೆ. ಸಿನಿಮಾ ರಂಗದಲ್ಲಿ ಅವಳು ಹಿಟ್ ಆಗಬಹುದು, ಆಗದೇ ಇರಬಹುದು. ಚಿತ್ರರಂಗದಲ್ಲಿ ಯಶಸ್ಸು ಕಾಣದೇ ಇದ್ದರೆ ಅವಳು ಕೆಲಸವನ್ನು ಆಯ್ಕೆ ಮಾಡಿಕೊಳ್ಳಬಹುದು. ಅದಕ್ಕೆ ಶಿಕ್ಷಣ ಬೇಕು’ ಎಂದು ಅವರು ಹೇಳಿದ್ದರು. ಸದ್ಯ ರಾಮ್ ಚರಣ್ ಅವರು ‘ಗೇಮ್ ಚೇಂಜರ್’ ಸಿನಿಮಾ ಕೆಲಸದಲ್ಲಿ ಬ್ಯುಸಿ ಇದ್ದಾರೆ. ಈ ಚಿತ್ರಕ್ಕೆ ಶಂಕರ್ ಅವರು ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರದ ಕೆಲಸಗಳು ಭರದಿಂದ ಸಾಗುತ್ತಿವೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 4:16 pm, Sun, 1 October 23