
ಪ್ರೇಮಲೋಕದಲ್ಲಿ ರಿಚ್ಚಿ ಕಾಣಿಸಿಕೊಂಡು..ಎಂತಾ ಸಾವ, ಶೂಟ್ ಮಾಡ್ಬೇಕಾ ಎಂದು ಕೇಳಿದ್ರೆ ಹೇಗಿರುತ್ತೆ? ಇಂತಹದೊಂದು ಅಪೂರ್ವ ಸಂಗಮಕ್ಕೆ ವೇದಿಕೆ ರೂಪಿಸಿದ್ದಾರೆ ಖ್ಯಾತ ನಿರೂಪಕಿ ಅನುಶ್ರೀ. ಹೌದು, ಅನುಶ್ರೀ ನಡೆಸಿಕೊಡುವ ವಿಶೇಷ ಸಂದರ್ಶನ ಕಾರ್ಯಕ್ರಮದಲ್ಲಿ ಪ್ರೇಮಲೋಕದ ಸೃಷ್ಟಿಕರ್ತ ವಿ ರವಿಚಂದ್ರನ್ (V Ravichandran) ಹಾಗೂ ಕಿರಿಕ್ ಪಾರ್ಟಿ ಕರ್ಣ ರಕ್ಷಿತ್ ಶೆಟ್ಟಿ (Rakshit Shetty) ಕಾಣಿಸಿಕೊಂಡಿದ್ದಾರೆ. ವಿಶೇಷ ಎಂದರೆ ಈ ಕಾರ್ಯಕ್ರಮದಲ್ಲಿ ರವಿಚಂದ್ರನ್ ಮುಂದೆ ತಮ್ಮ ವೈಯುಕ್ತಿಕ ಜೀವನದ ಬಗ್ಗೆ ಕೂಡ ರಕ್ಷಿತ್ ಶೆಟ್ಟಿ ಮಾತನಾಡಿದ್ದಾರೆ. ಈ ಇಂಟರ್ವ್ಯೂನ ವಿಡಿಯೋ ತುಣುಕನ್ನು ಖುದ್ದು ರವಿಚಂದ್ರನ್ ಅವರೇ ಹಂಚಿಕೊಂಡಿದ್ದು, ಪ್ರೊಮೊ ವಿಡಿಯೋದಲ್ಲೇ ಇಬ್ಬರು ನಟರುಗಳ ಹಲವು ಆಸಕ್ತಿಕರ ವಿಷಯಗಳನ್ನು ಶೇರ್ ಮಾಡಿರುವುದು ಕಂಡು ಬರುತ್ತದೆ.
ಅದರಲ್ಲೂ ರವಿಚಂದ್ರನ್ ಅವರಿಗೆ ರಕ್ಷಿತ್ ಶೆಟ್ಟಿ ರ್ಯಾಪಿಡ್ ಪ್ರಶ್ನೆಗಳನ್ನು ಕೇಳಿದ್ದಾರೆ. ಈ ವೇಳೆ ಸ್ಯಾಂಡಲ್ವುಡ್ನ ಅನೇಕ ಸ್ಟಾರ್ ನಟರುಗಳ ಹೆಸರುಗಳು ಉತ್ತರವಾಗಿ ಬಂದಿರುವುದು ಮತ್ತೊಂದು ವಿಶೇಷ. ಹಾಗಿದ್ರೆ ಪ್ರೊಮೊದಲ್ಲಿ ಇರುವಂತೆ ರವಿಮಾಮನಿಗೆ ಕಿರಿಕ್ ಕರ್ಣ ಕೇಳಿದ ಕೆಲ ಪ್ರಶ್ನೆಗಳೇನು, ಅದಕ್ಕೆ ಕ್ರೇಜಿಸ್ಟಾರ್ ನೀಡಿದ ಉತ್ತರವೇನು ನೋಡೋಣ..
ರಕ್ಷಿತ್ ಶೆಟ್ಟಿ ಪ್ರಶ್ನೆ: ಈ ಜನರೇಷನ್ನ ನಿಮ್ಮ ನೆಚ್ಚಿನ ನಟ?
ರವಿಚಂದ್ರನ್ ಉತ್ತರ: ಯಶ್
ಪ್ರಶ್ನೆ: ಈಗ ಶಾಂತಿಕ್ರಾಂತಿ ಚಿತ್ರ ಮಾಡಿದ್ರೆ ಯಾರು ನಾಯಕರಾಗಬಹುದು?
ಉತ್ತರ: ಸುದೀಪ್
ಪ್ರಶ್ನೆ: ರಣಧೀರ ಚಿತ್ರ ಯಾರು ಮಾಡಿದ್ರೆ ಉತ್ತಮ?
ಉತ್ತರ: ಮನೋರಂಜನ್
ಪ್ರಶ್ನೆ: ಪ್ರೇಮಲೋಕ ಚಿತ್ರವನ್ನು ಈಗ ಯಾರು ಮಾಡಬಹುದು?
ಉತ್ತರ: ಯಾರಿಗೂ ಕೊಡಲ್ಲ, ಅದು ನಾನೊಬ್ಬನೇ ಮಾಡೋದು.
ಪ್ರಶ್ನೆ: ಸಿಪಾಯಿ ಚಿತ್ರಕ್ಕೆ ಈಗಿನ ನಟರಲ್ಲಿ ಯಾರು ಸೂಕ್ತ?
ಉತ್ತರ: ದರ್ಶನ್
ಇನ್ನು ನಾನು ನಿಮ್ಮ ಯಾವ ಚಿತ್ರವನ್ನು ರಿಮೇಕ್ ಮಾಡಬಹುದು ಎಂದು ರಕ್ಷಿತ್ ಶೆಟ್ಟಿ ಕೇಳಿದಾಗ, ರಾಮಾಚಾರಿ ಚಿತ್ರ ಮಾಡಿ, ಹೀರೋಯಿನ್ ಆಗಿ ಮಾಲಾಶ್ರೀ ಅವರ ಮಗಳು ಕೂಡ ರೆಡಿಯಿದ್ದಾಳೆ ಎಂದು ರವಿಚಂದ್ರನ್ ಹಾಸ್ಯಚಟಾಕಿ ಹಾರಿಸಿದರು. ಇದೇ ವೇಳೆ ರಕ್ಷಿತ್ ಶೆಟ್ಟಿಗೆ ನೀವು ಇಷ್ಟ ಪಡುವ ಕನ್ನಡ ನಟಿ ಯಾರು ಎಂದು ಅನುಶ್ರೀ ಕೇಳಿದ್ದಾರೆ. ಇದಕ್ಕೆ ಸಿಂಪಲ್ ಸ್ಟಾರ್ ಕಡೆಯಿಂದ ಬಂದ ಉತ್ತರ ಮೋಹಕ ತಾರೆ ರಮ್ಯಾ.
ಇವೆಲ್ಲದರ ನಡುವೆ ನಿಮಗೆ ಲವ್ ಫೈಲ್ಯುರ್ ಆಗಿದಕ್ಕೆ ನೀವು ಇಂದು ಇಷ್ಟೊಂದು ಸಕ್ಸಸ್ ಆಗಿದ್ದೀರಿ ಎಂದು ರವಿಚಂದ್ರನ್ ಹೇಳಿದ್ದಾರೆ. ಈ ವೇಳೆ ಮಾತು ಮುಂದುವರೆಸಿದ ರಕ್ಷಿತ್ ಶೆಟ್ಟಿ ನನ್ನ ಪ್ರಕಾರ ನಂಗೆ ಲವ್ ಫೈಲ್ಯುರ್ ಆಗಿಲ್ಲ. ಆದರೆ ಜಗತ್ತು ಪೂರ್ತಿ ಅದನ್ನು ಲವ್ ಫೆಲ್ಯುರ್ ಅಂದ್ಕೊಂಡಿದೆ ಎಂದು ಹೇಳಿದರು.
ಸದ್ಯ ಆ್ಯಂಕರ್ ಅನುಶ್ರೀ ಈ ಸಂದರ್ಶನದ ವಿಡಿಯೋ ಪ್ರೊಮೊವನ್ನು ಮಾತ್ರ ಬಿಡುಗಡೆ ಮಾಡಿದ್ದು, ಇದಾಗ್ಯೂ ಈ ಕಾರ್ಯಕ್ರಮ ಯಾವಾಗ ಪ್ರಸಾರವಾಗಲಿದೆ ಎಂಬುದರ ಮಾಹಿತಿ ಹಂಚಿಕೊಂಡಿಲ್ಲ. ಅದಾಗ್ಯೂ ಶ್ರೀಘ್ರದಲ್ಲೇ ಸಿಂಪಲ್ ಸ್ಟಾರ್-ಕ್ರೇಜಿ ಸ್ಟಾರ್ ನಡುವಣ ಈ ವಿಶೇಷ ಸಂದರ್ಶನದ ವಿಡಿಯೋ ಆ್ಯಂಕರ್ ಅನುಶ್ರೀ ಯೂಟ್ಯೂಬ್ ಚಾನೆಲ್ನಲ್ಲಿ ಬಿಡುಗಡೆ ಆಗಲಿದೆ ಎಂದು ತಿಳಿದು ಬಂದಿದೆ.
ವಿ.ಸೂ: ಮೇಲೆ ನೀಡಲಾದ ಪ್ರಶ್ನೋತ್ತರವನ್ನು ಪ್ರೊಮೊ ವಿಡಿಯೋದಲ್ಲಿ ತೋರಿಸಿದಂತೆ ನೀಡಲಾಗಿದೆ. ಇಲ್ಲಿ ಪ್ರಶ್ನೆ ಮತ್ತು ಉತ್ತರ ನಡುವೆ ವಿಡಿಯೋ ಎಡಿಟರ್ ಬುದ್ದಿವಂತಿಕೆ ಪ್ರದರ್ಶಿಸಿದ್ದರೆ ಉತ್ತರಗಳು ಬದಲಾಗಬಹುದು. ಹಾಗಾಗಿ ಸಿಂಪಲ್ ಸ್ಟಾರ್ ಕೇಳಿದ ಪ್ರಶ್ನೆಗಳಿಗೆ ಕ್ರೇಜಿಸ್ಟಾರ್ ನೀಡಿರುವ ಉತ್ತರಗಳೇನು ಎಂದು ತಿಳಿಯಲು ನೀವು ಈ ಸಂದರ್ಶನದ ವಿಡಿಯೋ ಬಿಡುಗಡೆ ಆಗುವ ತನಕ ಕಾಯಲೇಬೇಕು.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 2:15 pm, Sat, 28 May 22