‘ಅನಿಮಲ್’ ನಿರ್ದೇಶಕನ ಜೊತೆ ರಿಷಬ್ ಶೆಟ್ಟಿ ಸಿನಿಮಾ? ಮೂಡಿತು ಕುತೂಹಲ

ಕಾಂತಾರದ ಯಶಸ್ಸಿನ ನಂತರ ರಿಷಬ್ ಶೆಟ್ಟಿ ಅವರು ಪ್ಯಾನ್ ಇಂಡಿಯಾ ನಟರಾಗಿ ಬೆಳೆದಿದ್ದಾರೆ. ತೆಲುಗು ಮತ್ತು ಹಿಂದಿ ಚಿತ್ರಗಳಲ್ಲಿ ಅವರ ಬೇಡಿಕೆ ಹೆಚ್ಚಾಗಿದೆ. ಅವರು 'ಅನಿಮಲ್' ನಿರ್ದೇಶಕ ಸಂದೀಪ್ ರೆಡ್ಡಿ ವಂಗ ಜೊತೆ ಕೆಲಸ ಮಾಡಲು ಆಸಕ್ತಿ ವ್ಯಕ್ತಪಡಿಸಿದ್ದಾರೆ. ಇದು ಸಾಕಷ್ಟು ಕುತೂಹಲ ಮೂಡಿಸಿದೆ.

‘ಅನಿಮಲ್’ ನಿರ್ದೇಶಕನ ಜೊತೆ ರಿಷಬ್ ಶೆಟ್ಟಿ ಸಿನಿಮಾ? ಮೂಡಿತು ಕುತೂಹಲ
ಸಂದೀಪ್-ರಿಷಬ್

Updated on: Dec 20, 2024 | 2:48 PM

‘ಕಾಂತಾರ’ ಮೂಲಕ ಜನಪ್ರಿಯತೆ ಪಡೆದ ರಿಷಬ್ ಶೆಟ್ಟಿ ಅವರು ಈಗ ಪ್ಯಾನ್ ಇಂಡಿಯಾ ಹೀರೋ. ಅವರಿಗೆ ಕನ್ನಡ ಮಾತ್ರವಲ್ಲದೆ ಪರಭಾಷೆಯಲ್ಲೂ ಬೇಡಿಕೆ ಸೃಷ್ಟಿ ಆಗಿದೆ. ಅವರು ಈಗಾಗಲೇ ಒಂದು ತೆಲುಗು ಹಾಗೂ ಹಿಂದಿ ಸಿನಿಮಾ ಒಪ್ಪಿಕೊಂಡಿದ್ದಾರೆ. ಈಗ ಅವರು ‘ಅನಿಮಲ್’ ನಿರ್ದೇಶಕ ಸಂದೀಪ್ ರೆಡ್ಡಿ ವಂಗ ಜೊತೆ ಕೆಲಸ ಮಾಡುವ ಆಸೆ ಹೊರಹಾಕಿದ್ದಾರೆ. ಇದು ನಿಜವಾಗುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ.

ರಿಷಬ್ ಶೆಟ್ಟಿ ಅವರು ‘ದಿ ರಾಣಾ ದಗ್ಗುಬಾಟಿ ಶೋ’ನಲ್ಲಿ ಭಾಗಿ ಆಗಿದ್ದಾರೆ. ರಾಣಾ ಅವರು ಕುಂದಾಪುರಕ್ಕೆ ಬಂದು ಈ ಶೋನ ಶೂಟ್ ಮಾಡಿದ್ದಾರೆ. ಈ ಶೋನಲ್ಲಿ ಭಾಗಿ ಆದಾಗ ರಿಷಬ್ ಅವರು ಮನದಾಳದ ಆಸೆಯನ್ನು ಹೊರಹಾಕಿದ್ದಾರೆ. ರಿಷಬ್ ಶೆಟ್ಟಿ ನಿರ್ದೇಶಕ ಕೂಡ ಹೌದು. ಅವರು ಓರ್ವ ನಿರ್ದೇಶಕನಾಗಿ ಮತ್ತೋರ್ವ ನಿರ್ದೇಶಕನ ಕೆಲಸವನ್ನು ಬಾಯ್ತುಂಬ ಹೊಗಳಿದ್ದಾರೆ.

‘ಸಂದೀಪ್ ಅವರ ರೀತಿ ಯೋಚಿಸಲು ಯಾರಿಂದಲೂ ಸಾಧ್ಯವಿಲ್ಲ. ಒಮ್ಮೆ ಆಲೋಚಿಸಿದಂತೆ ಅವರು ಮತ್ತೆ ಯೋಚಿಸಲು ಸಾಧ್ಯವಿಲ್ಲ ಎಂದು ನನಗೆ ಅನಿಸುತ್ತದೆ. ಅವರು ಮಾಡುತ್ತಿರುವ ಯಾವುದೇ ಸಿನಿಮಾದಲ್ಲಿ ಬೇಕಿದ್ದರೂ ನಾನು ನಟಿಸಲು ಸಿದ್ಧ’ ಎಂದಿದ್ದಾರೆ ರಿಷಬ್ ಶೆಟ್ಟಿ.

‘ನನ್ನ ಬಾಲ್ಯದಿಂದ ಒಂದು ಕನಸು ಇತ್ತು. ನನ್ನ ಗ್ರಾಮ ಕೆರಾಡಿಯಲ್ಲಿ ಹಾಗೂ ಇಲ್ಲಿನ ಕಾಡಿನಲ್ಲಿ ಸಿನಿಮಾ ಶೂಟ್ ಮಾಡಬೇಕು ಎಂಬ ಕನಸು ಇತ್ತು. ನಾನು ಸಾಕಷ್ಟು ಸಿನಿಮಾಗಳಿಗೆ ಈ ಜಾಗ ಬಳಸಿಕೊಳ್ಳಲು ಹೋದೆ. ಆದರೆ, ಹೊಂದಿಕೆ ಆಗಿಲ್ಲ. ಕೊನೆಗೆ ಕಾಂತಾರ ಸಿನಿಮಾ ಕಥೆಗೂ ಈ ಜಾಗಕ್ಕೂ ಹೊಂದಿಕೆ ಆಯಿತು. ಗ್ರಾಮದ 700 ಜನರು ಈ ಚಿತ್ರಕ್ಕಾಗ ಕೆಲಸ ಮಾಡಿದ್ದಾರೆ’ ಎಂದಿದ್ದಾರೆ ಅವರು.

ಇದನ್ನೂ ಓದಿ:ಕುಂದಾಪುರಕ್ಕೆ ಬಂದು ರಿಷಬ್ ಬಳಿ ರಾಜ್​ಕುಮಾರ್ ಸಿನಿಮಾ ಡೈಲಾಗ್​ ಕಲಿತ ರಾಣಾ ದಗ್ಗುಬಾಟಿ 

ಸಂದೀಪ್ ರೆಡ್ಡಿ ವಂಗ ಸಿನಿಮಾಗಳು ಸಾಕಷ್ಟು ವಿವಾದಾತ್ಮಕ ವಿಚಾರಗಳನ್ನು ಹೊಂದಿರುತ್ತವೆ. ‘ಅರ್ಜುನ್ ರೆಡ್ಡಿ’ ಸಿನಿಮಾಗೆ ಸಂದೀಪ್ ಅವರೇ ನಿರ್ದೇಶನ ಮಾಡಿದ್ದರು. ಈ ಚಿತ್ರ ಟೀಕೆಗೆ ಗುರಿಯಾಗಿತ್ತು. ಅದೇ ರೀತಿ ‘ಅನಿಮಲ್’ ಚಿತ್ರವನ್ನು ಕೆಲವರು ಟೀಕೆ ಮಾಡಿದರೆ ಇನ್ನೂ ಕೆಲವರು ಮೆಚ್ಚುಗೆ ಸೂಚಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 2:47 pm, Fri, 20 December 24