ಭಾರತದ ಅತಿ ದೊಡ್ಡ ಬಜೆಟ್ನ ಸಿನಿಮಾ ‘ರಾಮಾಯಣ’ (Ramayana) ಸೆಟ್ಟೇರಿದ್ದು, ಸಿನಿಮಾದ ಚಿತ್ರೀಕರಣ ಚಾಲ್ತಿಯಲ್ಲಿದೆ. ಸಿನಿಮಾದಲ್ಲಿ ರಣ್ಬೀರ್ ಕಪೂರ್ (Ranbir Kapoor) ರಾಮನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸೀತಾಮಾತೆಯ ಪಾತ್ರದಲ್ಲಿ ದಕ್ಷಿಣ ಭಾರತದ ಜನಪ್ರಿಯ ನಟಿ ಸಾಯಿ ಪಲ್ಲವಿ ನಟಿಸುತ್ತಿದ್ದಾರೆ. ಸಾಯಿ ಪಲ್ಲವಿ ಸಾಮಾನ್ಯವಾಗಿ ಗಟ್ಟಿ ಪಾತ್ರಗಳಿರುವ ಸಿನಿಮಾಗಳನ್ನಷ್ಟೆ ಒಪ್ಪಿಕೊಳ್ಳುತ್ತಾರೆ. ಆದರೆ ‘ರಾಮಾಯಣ’ ಸಿನಿಮಾದ ಸೀತೆ ಪಾತ್ರ ಭಾರತೀಯರ ಪಾಲಿಗೆ ಅತ್ಯಂತ ಮಹತ್ವದ್ದಾಗಿರುವ ಕಾರಣ ಈ ಪಾತ್ರವನ್ನು ಒಪ್ಪಿಕೊಂಡಿದ್ದಾರೆ. ಮತ್ತು ಈ ಸಿನಿಮಾಕ್ಕೆ ಭಾರಿ ದೊಡ್ಡ ಸಂಭಾವನೆಯನ್ನು ಸಾಯಿ ಪಲ್ಲವಿ ಪಡೆದಿದ್ದಾರೆ.
ಸಾಯಿ ಪಲ್ಲವಿ ಸಾಮಾನ್ಯವಾಗಿ ಹೊಸ ತಂಡಗಳೊಟ್ಟಿಗೆ ಕೆಲಸ ಮಾಡುತ್ತಾರೆ. ದೊಡ್ಡ ನಿರ್ಮಾಣ ಸಂಸ್ಥೆ, ಸ್ಟಾರ್ ನಟರ ಸಿನಿಮಾಗಳ ಬದಲಾಗಿ ಸಣ್ಣ ತಂಡಗಳು, ಹೊಸ ನಿರ್ಮಾಣ ಸಂಸ್ಥೆಗಳೊಟ್ಟಿಗೆ ಕೆಲಸ ಮಾಡುತ್ತಾರೆ. ಮಹಿಳಾ ಪ್ರಧಾನ ಸಿನಿಮಾಗಳು, ಸಮಾಜಕ್ಕೆ ಸಂದೇಶ ನೀಡುವ ಸಿನಿಮಾಗಳಲ್ಲಿ ಮಾತ್ರವೇ ಸಾಯಿ ಪಲ್ಲವಿ ನಟಿಸುತ್ತಿದ್ದು, ಅಂಥಹಾ ಸಿನಿಮಾಗಳು ಹೆಚ್ಚು ಹಣ ಗಳಿಸುವುದಿಲ್ಲವಾದ್ದರಿಂದ ಸಂಭಾವನೆಯನ್ನು ಕಡಿಮೆಯೇ ತೆಗೆದುಕೊಳ್ಳುತ್ತಾರೆ ಸಾಯಿ ಪಲ್ಲವಿ. ಕೆಲವು ಸಿನಿಮಾಗಳಿಗೆ ಅವರೇ ಸಹ ನಿರ್ಮಾಪಕಿಯೂ ಆಗಿರುತ್ತಾರೆ.
ಇದನ್ನೂ ಓದಿ:ಬರಲಿದೆ ಸಾಯಿ ಪಲ್ಲವಿ ಸ್ಪೆಷಲ್ ವಿಡಿಯೋ: ಹುಟ್ಟುಹಬ್ಬಕ್ಕೆ ‘ತಂಡೇಲ್’ ಸಿಹಿ ಸುದ್ದಿ
ಆದರೆ ಈಗ ‘ರಾಮಾಯಣ’ ಸಿನಿಮಾಕ್ಕೆ ಭಾರಿ ಮೊತ್ತದ ಸಂಭಾವನೆಯನ್ನು ನಟಿ ಸಾಯಿ ಪಲ್ಲವಿ ಪಡೆಯುತ್ತಿದ್ದಾರೆ. ತಾವು ಸಾಮಾನ್ಯವಾಗಿ ತೆಗೆದುಕೊಳ್ಳುವ ಸಂಭಾವನೆಗಿಂತಲೂ ಸುಮಾರು 10 ಪಟ್ಟು ಹೆಚ್ಚು ಸಂಭಾವನೆಯನ್ನು ಸಾಯಿ ಪಲ್ಲವಿ ಪಡೆಯಲಿದ್ದಾರೆ. ಸಾಯಿ ಪಲ್ಲವಿ ಸುಮಾರು 50 ಕೋಟಿ ಸಂಭಾವನೆಯನ್ನು ‘ರಾಮಾಯಣ’ ಸಿನಿಮಾಕ್ಕಾಗಿ ಪಡೆಯಲಿದ್ದಾರೆ. ಈ ಸಿನಿಮಾ ಎರಡು ಭಾಗಗಳಲ್ಲಿ ಬಿಡುಗಡೆ ಆಗಲಿದ್ದು, ಪ್ರತಿ ಭಾಗಕ್ಕೆ 50 ಕೋಟಿ ಸಂಭಾವನೆ ಸಾಯಿ ಪಲ್ಲವಿ ಅವರಿಗೆ ಸಿಗಲಿದೆ ಎಂದು ಕೆಲವು ಸುದ್ದಿಗಳು ಬಾಲಿವುಡ್ ಅಂಗಳದಲ್ಲಿ ಹರಿದಾಡುತ್ತಿವೆ.
ಸಾಯಿ ಪಲ್ಲವಿ ಪ್ರಸ್ತುತ ‘ಅಮರನ್’ ಹೆಸರಿನ ಸಿನಿಮಾದಲ್ಲಿ ಶಿವಕಾರ್ತಿಕೇಯ ಜೊತೆ ನಟಿಸುತ್ತಿದ್ದಾರೆ. ಈ ಸಿನಿಮಾಕ್ಕೆ ಕಮಲ್ ಹಾಸನ್ ಬಂಡವಾಳ ಹೂಡಿದ್ದಾರೆ ಎನ್ನಲಾಗುತ್ತಿದೆ. ತೆಲುಗಿನಲ್ಲಿ ‘ತಂಡೇಲ್’ ಹೆಸರಿನ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ‘ತಂಡೇಲ್’ ಸಿನಿಮಾನಲ್ಲಿ ಅಕ್ಕಿನೇನಿ ನಾಗ ಚೈತನ್ಯ ನಾಯಕ. ಇದು ಮೀನುಗಾರರ ಕುರಿತಾದ ಕತೆಯನ್ನು ಒಳಗೊಂಡಿದೆ. ಆಮಿರ್ ಖಾನ್ ಪುತ್ರ ನಟಿಸಿರುವ ಹಿಂದಿ ಸಿನಿಮಾನಲ್ಲಿಯೂ ಸಾಯಿ ಪಲ್ಲವಿ ನಟಿಸಿದ್ದು, ಇದು ಅವರ ಮೊದಲ ಬಾಲಿವುಡ್ ಸಿನಿಮಾ. ಈ ಸಿನಿಮಾದ ಚಿತ್ರೀಕರಣ ಪೂರ್ಣಗೊಂಡಿದೆ. ಅವುಗಳ ಜೊತೆಗೆ ಇದೀಗ ‘ರಾಮಾಯಣ’ ಸಿನಿಮಾನಲ್ಲಿ ನಟಿಸಲಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ