
ಸೋತ ಸಿನಿಮಾನಲ್ಲಿ (Cinema) ನಟಿಸಿದ ಬಗ್ಗೆ ನಟ-ನಟಿಯರು ಪಶ್ಚಾತ್ತಾಪ ವ್ಯಕ್ತಪಡಿಸುವುದು ಸಾಮಾನ್ಯ, ಆದರೆ ಬಾಲಿವುಡ್ ನಟ ಸೈಫ್ ಅಲಿ ಖಾನ್, ಹಿಟ್ ಸಿನಿಮಾನಲ್ಲಿ ನಟಿಸಿದ್ದಕ್ಕೂ ಪಶ್ಚಾತ್ತಾಪ ವ್ಯಕ್ತಪಡಿಸಿದ್ದಾರೆ. ಆ ಸಿನಿಮಾನಲ್ಲಿ ನಾನು ನಟಿಸಬಾರದಿತ್ತು ಎಂದಿದ್ದಾರೆ. ಅದುವೇ 2012ರಲ್ಲಿ ಬಿಡುಗಡೆ ಆಗಿದ್ದ ‘ಕಾಕ್ಟೇಲ್’. ಆ ಸಿನಿಮಾನಲ್ಲಿ ಸೈಫ್ ಅಲಿ ಖಾನ್, ದೀಪಿಕಾ ಪಡುಕೋಣೆ ಮತ್ತು ಡಿಯಾನಾ ಪೆಂಟಿ ನಟನೆ ಮಾಡಿದ್ದರು. ಸಿನಿಮಾ ಸೂಪರ್ ಹಿಟ್ ಆಗಿತ್ತು. ಆದರೆ ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿರುವ ಸೈಫ್ ಅಲಿ ಖಾನ್, ಆ ಸಿನಿಮಾನಲ್ಲಿ ನಾನು ನಟಿಸಬಾರದಿತ್ತು ಎಂದಿದ್ದಾರೆ.
‘ಕಾಕ್ಟೇಲ್’ ಸಿನಿಮಾದ ಮುಖ್ಯ ಪಾತ್ರದಲ್ಲಿ ನಟಿಸುವುದರ ಜೊತೆಗೆ ಅದರ ಸಹನಿರ್ಮಾಪಕರೂ ಆಗಿದ್ದರು ಸೈಫ್ ಅಲಿ ಖಾನ್. ಇದೀಗ ‘ಗಲ್ಫ್ ನ್ಯೂಸ್’ ಜೊತೆಗಿನ ಸಂದರ್ಶನದಲ್ಲಿ ಮಾತನಾಡಿರುವ ಸೈಫ್ ಅಲಿ ಖಾನ್, ‘ಕಾಕ್‌ಟೈಲ್’ ಚಿತ್ರದಲ್ಲಿ ‘ಗೌತಮ್’ ಪಾತ್ರವನ್ನು ಆಯ್ಕೆ ಮಾಡಿಕೊಂಡಿದ್ದು ಆ ಪಾತ್ರಕ್ಕಾಗಿ ಅಲ್ಲ, ಬದಲಿಗೆ ಸಿನಿಮಾ ಹೇಗಾದರೂ ಮಾಡಿ ಸೆಟ್ಟೇರಲಿ ಎಂಬ ಕಾರಣಕ್ಕಾಗಿ ಎಂದಿದ್ದಾರೆ. ‘ನಾನು ಆ ಪಾತ್ರವನ್ನು ಮಾಡಿದೆ ಏಕೆಂದರೆ ನಾವು ಅದನ್ನು ನಿರ್ಮಿಸುತ್ತಿದ್ದೆವು. ನೂರಕ್ಕೆ ನೂರು ಪ್ರತಿಶತ ಅದು ತಪ್ಪೇ ಆಗಿತ್ತು, ಮತ್ತು ಅದು ಪ್ರಗತಿಪರ ಅಲ್ಲದ ಸ್ಕ್ರಿಪ್ಟ್ ಆಯ್ಕೆಯಾಗಿತ್ತು. ನಾನು ಆ ಪಾತ್ರಕ್ಕಾಗಿ ಅದನ್ನು ಮಾಡಲಿಲ್ಲ, ಬದಲಿಗೆ ಸಿನಿಮಾ ನಿರ್ಮಾಣಗೊಳ್ಳಬೇಕು ಎಂಬ ಕಾರಣಕ್ಕೆ ಮಾಡಿದೆ. ನಾವು ವಿವಿಧ ಕಾರಣಗಳಿಗಾಗಿ ಕೆಲಸಗಳನ್ನು ಮಾಡುತ್ತೇವೆ. ಅತ್ಯಾಕರ್ಷಕ ಪಾತ್ರ ಯಾವುದೆಂದರೆ ಅದು ವೆರೋನಿಕಾ ಪಾತ್ರ ಎಂಬುದು ನನಗೆ ಚೆನ್ನಾಗಿ ತಿಳಿದಿತ್ತು’ ಎಂದು ಅವರು ತಿಳಿಸಿದ್ದಾರೆ.
ಇದನ್ನೂ ಓದಿ:ಬಾಲಿವುಡ್‌ನದ್ದು ಕುರಿ ಹಿಂಡಿನ ಬುದ್ಧಿ ಎಂದ ಕರೀನಾ; ನಟಿಯ ಓಪನ್ ಮಾತು
ಸಿನಿಮಾ ಬಿಡುಗಡೆ ಆಗಿ ದಶಕಕ್ಕೂ ಹೆಚ್ಚು ಸಮಯ ಆಗಿದ್ದು, ಈಗ ‘ಕಾಕ್ಟೇಲ್’ ಸಿನಿಮಾದ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಸಿನಿಮಾನಲ್ಲಿ ದೀಪಿಕಾ ಪಡುಕೋಣೆ ‘ವೆರೊನಿಕಾ’ ಹೆಸರಿನ ಪಾತ್ರದಲ್ಲಿ ನಟಿಸಿದ್ದರು. ಅದೊಂದು ಒಳ್ಳೆಯ ಪಾತ್ರ ಆಗಿತ್ತು. ಆದರೆ ಸೈಫ್ ಅಲಿ ಖಾನ್ ವೆರೊನಿಕಾ ಜೊತೆಗೆ ಇದ್ದರೂ ಸಹ ಡಿಯಾನಾ ಪೆಂಟಿ ನಟಿಸಿದ್ದ ಮೀರಾ ಪಾತ್ರವನ್ನು ಮದುವೆ ಆಗುವ ಕತೆಯನ್ನು ಸಿನಿಮಾ ಒಳಗೊಂಡಿತ್ತು. ಈಗ ಈ ಬಗ್ಗೆ ಚರ್ಚೆಗಳು ನಡೆಯುತ್ತಿದ್ದು, ಮೀರಾ ಪಾತ್ರ ‘ಸಂಸ್ಕಾರಿ’ ಎಂಬ ಒಂದೇ ಕಾರಣಕ್ಕೆ ಸೈಫ್ ಪಾತ್ರವಾದ ಗೌತಮ್ ಆಕೆಯನ್ನು ಆಯ್ಕೆ ಮಾಡಿದ್ದು ತಪ್ಪು, ವೆರೊನಿಕಾ ಆಧುನಿಕ ಮಹಿಳೆ ಆಗಿದ್ದರೂ ಸಹ ಆಕೆಯದ್ದು ಮೆಚ್ಯೂರ್ಡ್ ವ್ಯಕ್ತಿತ್ವ, ಮಾನವೀಯ ವ್ಯಕ್ತಿತ್ವ, ಆದರೆ ಆಕೆ ಕೇವಲ ಬೋಲ್ಡ್, ಮಾಡರ್ನ್ ಎಂಬ ಕಾರಣಕ್ಕೆ ಆಕೆಯನ್ನು ವಿಲನ್ ಅಥವಾ ಅಪ್ರಮುಖ ಎಂದು ಚಿತ್ರಿಸಲಾಗಿದೆ ಎಂಬ ಟೀಕೆಗಳು ಕೇಳಿ ಬಂದಿವೆ.
ಇತ್ತೀಚೆಗಷ್ಟೆ ‘ಕಾಕ್ಟೇಲ್ 2’ ಸಿನಿಮಾ ಸಹ ಬಿಡುಗಡೆ ಆಗಿದೆ. ಸಿನಿಮಾನಲ್ಲಿ ಕನ್ನಡತಿ ರಶ್ಮಿಕಾ ಮಂದಣ್ಣ, ಕೃತಿ ಸನೋನ್ ಮತ್ತು ನಟ ಶಾಹಿದ್ ಕಪೂರ್ ಒಟ್ಟಿಗೆ ನಟಿಸಿದ್ದರು. ಬಾಕ್ಸ್ ಆಫೀಸ್ನಲ್ಲಿ ಸಾಧಾರಣ ಯಶಸ್ಸನ್ನಷ್ಟೆ ಈ ಸಿನಿಮಾ ಕಂಡಿತು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ