AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದಿನಕ್ಕೆ 20 ರೂಪಾಯಿ ಕೂಲಿ, ಈಗ ಪ್ರತಿ ಸಿನಿಮಾಕ್ಕೆ 25 ಕೋಟಿ ಸಂಭಾವನೆ, ಯಾರಿದು ಸೂರಿ?

ತಮಿಳಿನ ಜನಪ್ರಿಯ ನಟರಲ್ಲಿ ಒಬ್ಬರಾಗಿರುವ ಸೂರಿ, ನೋಡಲು ಕಡು ಕಪ್ಪು, ಉದ್ದ ಮೂತಿ, ಪೀಚು ದೇಹ, ಆದರೆ ಅದ್ಭುತ ನಟ. ನೋಡಿದ ಕೂಡಲೇ ಮುಗ್ಧ ಎನಿಸುವಂಥಹಾ ವ್ಯಕ್ತಿತ್ವ. ಇದೇ ಕಾರಣಕ್ಕೆ ಇವರು ಈಗ ತಮಿಳು ಸಿನಿಮಾ ಪ್ರೇಕ್ಷಕರ ನೆಚ್ಚಿನ ನಟ ಎನಿಸಿಕೊಂಡಿದ್ದಾರೆ. ಆದರೆ ಈ ಹಂತಕ್ಕೆ ಏರಲು ಅವರು ಪಟ್ಟ ಕಷ್ಟಗಳು ಒಂದೆರಡಲ್ಲ, ನಾನಾ ರೀತಿಯ ಕಷ್ಟಗಳನ್ನು ಅನುಭವಿಸಿ ಈಗ ಯಶಸ್ವಿ ನಾಯಕ ಎನಿಸಿಕೊಂಡಿದ್ದಾರೆ. ಆದರೆ ಇನ್ನೂ ಅದೇ ವಿನಯತೆ ಉಳಿಸಿಕೊಂಡಿದ್ದಾರೆ.

ದಿನಕ್ಕೆ 20 ರೂಪಾಯಿ ಕೂಲಿ, ಈಗ ಪ್ರತಿ ಸಿನಿಮಾಕ್ಕೆ 25 ಕೋಟಿ ಸಂಭಾವನೆ, ಯಾರಿದು ಸೂರಿ?
Soori
ಮಂಜುನಾಥ ಸಿ.
|

Updated on: Sep 11, 2026 | 12:48 PM

Share

ಮುಖ್ಯಾಂಶಗಳು

  • ತಮಿಳು ಚಿತ್ರರಂಗದ ಜನಪ್ರಿಯ ನಟ ಸೂರಿ
  • ದಿನಕ್ಕೆ 20 ರೂಪಾಯಿ ಕೂಲಿಗಾಗಿ ದುಡಿಯುತ್ತಿದ್ದ ಸೂರಿ
  • ಈಗ ಸಿನಿಮಾಕ್ಕೆ 25 ಕೋಟಿ ಸಂಭಾವನೆ ಪಡೆಯುತ್ತಿದ್ದಾರೆ.

ಒಂದು ಸಮಯದಲ್ಲಿ ದಿನಗೂಲಿ ಮಾಡುತ್ತಿದ್ದ ವ್ಯಕ್ತಿ ಈಗ ಪ್ರತಿ ಸಿನಿಮಾಕ್ಕೆ 25 ಕೋಟಿ ಸಂಭಾವನೆ ಪಡೆವ ನಾಯಕ ನಟ. ಈ ರೀತಿಯ ಅದ್ಭುತಗಳು ಬಹುಷಃ ದಕ್ಷಿಣ ಭಾರತ ಚಿತ್ರರಂಗದಲ್ಲಿ ಮಾತ್ರವೇ ನಡೆಯಲು ಸಾಧ್ಯ ಎನಿಸುತ್ತದೆ. ತಮಿಳಿನ ಜನಪ್ರಿಯ ನಟರಲ್ಲಿ ಒಬ್ಬರಾಗಿರುವ ಸೂರಿ, ನೋಡಲು ಕಡು ಕಪ್ಪು, ಉದ್ದ ಮೂತಿ, ಪೀಚು ದೇಹ, ಆದರೆ ಅದ್ಭುತ ನಟ. ನೋಡಿದ ಕೂಡಲೇ ಮುಗ್ಧ ಎನಿಸುವಂಥಹಾ ವ್ಯಕ್ತಿತ್ವ. ಇದೇ ಕಾರಣಕ್ಕೆ ಇವರು ಈಗ ತಮಿಳು ಸಿನಿಮಾ ಪ್ರೇಕ್ಷಕರ ನೆಚ್ಚಿನ ನಟ ಎನಿಸಿಕೊಂಡಿದ್ದಾರೆ. ಆದರೆ ಈ ಹಂತಕ್ಕೆ ಏರಲು ಅವರು ಪಟ್ಟ ಕಷ್ಟಗಳು ಒಂದೆರಡಲ್ಲ, ನಾನಾ ರೀತಿಯ ಕಷ್ಟಗಳನ್ನು ಅನುಭವಿಸಿ ಈಗ ಯಶಸ್ವಿ ನಾಯಕ ಎನಿಸಿಕೊಂಡಿದ್ದಾರೆ. ಆದರೆ ಇನ್ನೂ ಅದೇ ವಿನಯತೆ ಉಳಿಸಿಕೊಂಡಿದ್ದಾರೆ.

1977ರಲ್ಲಿ ಮಧುರೈನಲ್ಲಿ ಅತ್ಯಂತ ಬಡ ಕುಟುಂಬದಲ್ಲಿ ಜನಿಸಿದ ಸೂರಿ, ಕುಟುಂಬವನ್ನು ಸಾಕಲು ತಿರುಪ್ಪುರಕ್ಕೆ ಕೂಲಿ ಕೆಲಸಕ್ಕೆಂದು ಬಂದವರು. 1993ರಲ್ಲಿ ತಿರುಪ್ಪುರದಲ್ಲಿ ಕೂಲಿ ಕೆಲಸ ಮಾಡುತ್ತಿದ್ದ ಸೂರಿ, ಕಾರ್ಪೆಂಟರ್, ಎಲೆಕ್ರಿಷಿಯನ್ ಇನ್ನೂ ಕೆಲವು ಕೆಲಸಗಳನ್ನು ಕಲಿತರು. ಆಗೆಲ್ಲ ದಿನಕ್ಕೆ 20 ರೂಪಾಯಿ ಕೂಲಿ ಮೊತ್ತವಂತೆ. ಅದರಲ್ಲಿ ಪ್ರತಿ ವಾರ 140 ರೂಪಾಯಿ ಹಣವನ್ನು ಮನೆಗೆ ಕಳಿಸಲೇ ಬೇಕಾಗಿತ್ತಂತೆ. ಅಂಥಹಾ ಸಂಕಷ್ಟದ ಸಮಯದಲ್ಲೂ ರಜನೀಕಾಂತ್ ಅವರ ಸಿನಿಮಾಗಳನ್ನು ನೋಡುವುದು ಮಾತ್ರ ಬಿಡುತ್ತಿರಲಿಲ್ಲಂತೆ ಸೂರಿ. ಒಂದು ಹೊತ್ತು ಊಟ ಬಿಟ್ಟಾದರೂ ರಜನೀಕಾಂತ್ ಸಿನಿಮಾ ನೋಡಲು ಹಣ ಉಳಿಸಿಕೊಳ್ಳುತ್ತಿದ್ದರಂತೆ.

ಕೊನೆಗೆ ಅದೇ ರಜನೀಕಾಂತ್ ಮೇಲಿನ ಪ್ರೀತಿ, ಅಭಿಮಾನದಿಂದ 1997ರಲ್ಲಿ ಚೆನ್ನೈಗೆ ಬಂದ ಸೂರಿ 1998 ರಲ್ಲಿ ಮೊದಲ ಬಾರಿಗೆ ‘ಮಾರು ಮಲಾರ್ಚಿ’ ಹೆಸರಿನ ಸಿನಿಮಾನಲ್ಲಿ ಎಕ್​​ಸ್ಟ್ರಾ ಆಗಿ ಕಾಣಿಸಿಕೊಂಡಿದ್ದಾರೆ. ಅಂದರೆ ಹಲವಾರು ಜನಗಳಲ್ಲಿ ಒಬ್ಬರು. ಡೈಲಾಗ್ ಇಲ್ಲ, ನಟನೆ ಇಲ್ಲ. ಅದಾದ ಮೇಲೆ ಸಿನಿಮಾ ಸೆಟ್​ ಇಷ್ಟವಾಗಿ ಇನ್ನೂ ಕೆಲವು ಸಿನಿಮಾಗಳಿಗೆ ಎಕ್ಸ್ಟ್ರಾ ಆಗಿ ಕೆಲಸ ಮಾಡಿದ್ದಾರೆ, ಎಲೆಕ್ರ್ಟ್ರಿಕ್ ಕೆಲಸ, ಕಾರ್ಪೆಂಟರ್ ಕೆಲಸ ಬರುತ್ತಿದ್ದಾದ್ದರಿಂದ ಸಿನಿಮಾಗಳಲ್ಲಿ ಯೂನಿಟ್ ಸಿಬ್ಬಂದಿ ಆಗಿ ಸೇರಿಕೊಂಡು, ಹಲವು ಸಿನಿಮಾಗಳಿಗೆ ಲೈಟ್ ಮ್ಯಾನ್ ಆಗಿ, ಕಾರ್ಪೆಂಟರ್ ಆಗಿ ಕೆಲಸ ಮಾಡಿದರಂತೆ ಸೂರಿ.

ಇದನ್ನೂ ಓದಿ:ದೀಪಾವಳಿಗೆ ಬಿಡುಗಡೆ ಆಗಲಿದೆ ದುನಿಯಾ ವಿಜಯ್ ತಮಿಳು ಸಿನಿಮಾ

ಆದರೆ ನಟನೆ ಬಗ್ಗೆ ಆಸಕ್ತಿ ಬೆಳೆಸಿಕೊಂಡ ಸೂರಿ ಆಗೊಮ್ಮೆ ಈಗೊಮ್ಮೆ ಸಣ್ಣ ಪುಟ್ಟ ಪಾತ್ರಗಳಲ್ಲಿ ನಟನೆ ಸಹ ಮಾಡುತ್ತಿದ್ದರು. ಸುಮಾರು 20ಕ್ಕೂ ಹೆಚ್ಚು ಸಿನಿಮಾಗಳಲ್ಲಿ ‘ಕಾಣಿಸಿಕೊಂಡ’ ಬಳಿಕ 2009 ರಲ್ಲಿ ಬಂದ ‘ವೆನ್ನಿಲ ಕಬಡ್ಡಿ ಕೋಳು’ ಸಿನಿಮಾನಲ್ಲಿನ ಹಾಸ್ಯಪಾತ್ರ ಸೂರಿಗೆ ತುಸು ಗುರುತು ತಂದುಕೊಟ್ಟಿತು. ಆ ನಂತರ ಸಾಲು-ಸಾಲು ಸಿನಿಮಾಗಳಲ್ಲಿ ಹಾಸ್ಯನಟನ ಪಾತ್ರದಲ್ಲಿ ಸೂರಿ ನಟನೆ ಮಾಡಿದರು. ಬೇಡಿಕೆಯ ಹಾಸ್ಯನಟ ಎನಿಸಿಕೊಂಡ ಸೂರಿ, ಸಿಕ್ಕ ಪಾತ್ರಗಳಲ್ಲೆಲ್ಲ ತಮ್ಮದೇ ಆದ ಮ್ಯಾನರಿಸಂ ತುಂಬುತ್ತಾ ಪ್ರೇಕ್ಷಕರನ್ನು ನಗಿಸುತ್ತಲೇ ಬಂದರು.

ಹಾಸ್ಯ ನಟನಾಗಿ ಅದೆಷ್ಟು ಬೇಡಿಕೆ ಶುರುವಾಯ್ತೆಂದರೆ 2014ರಲ್ಲಿ ಒಂದೇ ವರ್ಷದಲ್ಲಿ ಸುಮಾರು 13 ಸಿನಿಮಾಗಳಲ್ಲಿ ಸೂರಿ ನಟನೆ ಮಾಡಿದರು. ಸೂರಿ ಜೀವನದಲ್ಲಿ ನಿಜವಾದ ಬದಲಾವಣೆ ಬಂದಿದ್ದು 2013 ರಲ್ಲಿ. ತಮಿಳಿನ ಖ್ಯಾತ ನಿರ್ದೇಶಕ ವೆಟ್ರಿಮಾರನ್, ‘ವಿಡುದಲೈ’ ಹೆಸರಿನ ಸಿನಿಮಾ ಮಾಡಿದರು. ಸಿನಿಮಾನಲ್ಲಿ ಸೂರಿ ನಾಯಕ. ಅಲ್ಲಿಯ ವರೆಗೆ ಹಾಸ್ಯನಟನಾಗಿದ್ದ ಸೂರಿಯನ್ನು ನಾಯಕನನ್ನಾಗಿ ಮಾಡಿದ್ದು ವೆಟ್ರಿಮಾರನ್, ‘ವಿಡುದಲೈ’ ಸಿನಿಮಾನಲ್ಲಿ ವಿಜಯ್ ಸೇತುಪತಿ ಎದುರು ಸೂರಿ ಅದ್ಭುತವಾಗಿ ನಟಿಸಿದ್ದರು.

‘ವಿಡುದಲೈ’ ಬಳಿಕ ಸೂರಿ, ಸತತವಾಗಿ ನಾಯಕನ ಪಾತ್ರಗಳಲ್ಲೇ ನಟಿಸುತ್ತಾ ಬರುತ್ತಿದ್ದಾರೆ ಮಾತ್ರವಲ್ಲದೆ ಸತತ ಹಿಟ್​​ಗಳನ್ನು ಸಹ ನೀಡುತ್ತಿದ್ದಾರೆ. 2024 ರಲ್ಲಿ‘ಗರುಡನ್’, ಅದೇ ವರ್ಷ ಬಂದ ‘ಕೊತ್ತುಕಾಲಿ’, ‘ವಿಡುದಲೈ ಪಾರ್ಟ್ 2’, 2025ರಲ್ಲಿ ಬಂದ ‘ಮಾಮನ್’ ಸಿನಿಮಾಗಳು ಹಿಟ್ ಎನಿಸಿಕೊಂಡವು. ಈಗ ‘ಮಂದಾಡಿ’ ಹೆಸರಿನ ಸಿನಿಮಾನಲ್ಲಿ ನಟಿಸಿದ್ದಾರೆ. ಪಕ್ಕಾ ಕಮರ್ಶಿಯಲ್ ಸಿನಿಮಾ ಇದಾಗಿದ್ದು, ಸೂರಿ ಸಖತ್ ಮಾಸ್ ಆಗಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾಕ್ಕೆ ಅವರು 25 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ ಎನ್ನಲಾಗುತ್ತಿದೆ. ಒಂದು ಸಮಯದಲ್ಲಿ ದಿನಕ್ಕೆ 20 ರೂಪಾಯಿ ದುಡಿಯುತ್ತಿದ್ದ ಸೂರಿ ಈಗ ಒಂದು ಸಿನಿಮಾಕ್ಕೆ 25 ಕೋಟಿ ಪಡೆಯುವ ಹಂತಕ್ಕೆ ಏರಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us