ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ‘ಸಲಾರ್’ ಸಿನಿಮಾ (Salaar Movie) ಸೆಪ್ಟೆಂಬರ್ 28ರಂದು ರಿಲೀಸ್ ಆಗಬೇಕಿತ್ತು. ಆದರೆ ಕಾರಣಾಂತರಗಳಿಂದ ಈ ಚಿತ್ರದ ಬಿಡುಗಡೆ ದಿನಾಂಕ ಮುಂದಕ್ಕೆ ಹೋಗಿದೆ. ಹೊಸ ಬಿಡುಗಡೆ ದಿನಾಂಕ ಇನ್ನೂ ಘೋಷಣೆ ಆಗಿಲ್ಲ. ಪ್ರಭಾಸ್ (Prabhas) ಮತ್ತು ಪ್ರಶಾಂತ್ ನೀಲ್ (Prashanth Neel) ಅಭಿಮಾನಿಗಳು ಈ ಚಿತ್ರದ ಮೇಲೆ ಭಾರಿ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಬಾಕ್ಸ್ ಆಫೀಸ್ನಲ್ಲಿ ಈ ಸಿನಿಮಾ ಎಷ್ಟು ಕಲೆಕ್ಷನ್ ಮಾಡುತ್ತದೋ ತಿಳಿಯದು. ಆದರೆ ಬಿಡುಗಡೆಗೂ ಮುನ್ನವೇ ‘ಸಲಾರ್’ ಸಿನಿಮಾಗೆ ನೂರಾರು ಕೋಟಿ ರೂಪಾಯಿ ಬಿಸ್ನೆಸ್ ಆಗಿದೆ. ಈ ಚಿತ್ರದ ಸ್ಯಾಟಲೈಟ್ ಹಕ್ಕು ಮತ್ತು ಒಟಿಟಿ ಹಕ್ಕುಗಳ ಮಾರಾಟದಿಂದ ಬರೋಬ್ಬರಿ 350 ಕೋಟಿ ರೂಪಾಯಿ ಆದಾಯ ಬಂದಿದೆ ಎಂದು ‘ಬಾಲಿವುಡ್ ಹಂಗಾಮ’ ವರದಿ ಮಾಡಿದೆ.
ಪ್ರಭಾಸ್ ಅವರು ಇತ್ತೀಚಿನ ವರ್ಷಗಳಲ್ಲಿ ಸಾಲು ಸಾಲು ಸೋಲು ಕಂಡಿರಬಹುದು. ಹಾಗಿದ್ದರೂ ಕೂಡ ‘ಸಲಾರ್’ ಸಿನಿಮಾದ ಮೇಲೆ ಅವರ ಅಭಿಮಾನಿಗಳು ಇಟ್ಟಿರುವ ನಿರೀಕ್ಷೆ ಕಡಿಮೆ ಆಗಿಲ್ಲ. ಈ ಚಿತ್ರದ ಮೇಲೆ ದೊಡ್ಡ ಮಟ್ಟದ ಹೈಪ್ ಸೃಷ್ಟಿಯಾಗಲು ಪ್ರಶಾಂತ್ ನೀಲ್ ಕಾರಣ. ಅವರ ಮೇಕಿಂಗ್ ಬೇರೆಯದೇ ರೀತಿಯಲ್ಲಿ ಇರುತ್ತದೆ. ಹಾಗಾಗಿ ‘ಸಲಾರ್’ ಚಿತ್ರಕ್ಕೆ ಭರ್ಜರಿ ಬೇಡಿಕೆ ಬಂದಿದೆ. ವರದಿಗಳ ಪ್ರಕಾರ ಈ ಚಿತ್ರದ ಎಲ್ಲ ಭಾಷೆಯ ಟಿವಿ ಮತ್ತು ಒಟಿಟಿ ಹಕ್ಕುಗಳ ಮಾರಾಟ ಆಗಿದೆ. ಈ ಸಿನಿಮಾ ಎರಡು ಪಾರ್ಟ್ಗಳಲ್ಲಿ ಮೂಡಿಬರುತ್ತಿದೆ.
ಇದನ್ನೂ ಓದಿ: ‘ಸಲಾರ್’ ಸಿನಿಮಾದ ಬಿಡುಗಡೆ ದಿನಾಂಕದ ಬಗ್ಗೆ ಕಡೆಗೂ ಮೌನ ಮುರಿದ ‘ಹೊಂಬಾಳೆ ಫಿಲ್ಮ್ಸ್’
‘ಸಲಾರ್’ ಪ್ಯಾನ್ ಇಂಡಿಯಾ ಸಿನಿಮಾ. ಖಾಸಗಿ ವಾಹಿನಿಯೊಂದು ಈ ಚಿತ್ರದ ಕನ್ನಡ, ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿ ವರ್ಷನ್ಗಳ ಪ್ರಸಾರ ಹಕ್ಕುಗಳನ್ನು ಖರೀದಿಸಿದೆ. ಅದೇ ರೀತಿ ನೆಟ್ಫ್ಲಿಕ್ಸ್ಗೆ ಎಲ್ಲ ಭಾಷೆಯ ಒಟಿಟಿ ರೈಟ್ಸ್ ಮಾರಾಟ ಆಗಿದೆ. ಈ ಪೈಕಿ ಯಾರು ಎಷ್ಟು ಹಣ ನೀಡಿದ್ದಾರೋ ಗೊತ್ತಿಲ್ಲ. ಒಟ್ಟಿನಲ್ಲಿ ಟಿವಿ ಮತ್ತು ಒಟಿಟಿಯಿಂದ ಸೇರಿ 350 ಕೋಟಿ ರೂಪಾಯಿಗೆ ಡೀಲ್ ಮುಗಿದಿದೆ ಎಂದು ವರದಿ ಆಗಿದೆ. ಈ ಬಗ್ಗೆ ಚಿತ್ರತಂಡದಿಂದ ಅಧಿಕೃತವಾಗಿ ಯಾವುದೇ ಮಾಹಿತಿ ಹೊರಬಿದ್ದಿಲ್ಲ.
ಇದನ್ನೂ ಓದಿ: ‘ಸಲಾರ್’ ಬಿಡುಗಡೆ ಮುಂದಕ್ಕೆ ಹೋಗಿದ್ದಕ್ಕೆ ರಣಬೀರ್ ಕಪೂರ್ಗೆ ಲಾಭ; ಏನಿದು ಲೆಕ್ಕಾಚಾರ?
ನಿರೀಕ್ಷೆಯ ಮಟ್ಟ ದೊಡ್ಡದಾಗಿರುವುದರಿಂದ ಅದಕ್ಕೆ ತಕ್ಕಂತೆ ‘ಸಲಾರ್’ ಸಿನಿಮಾವನ್ನು ಕಟ್ಟಿಕೊಡಲು ನಿರ್ದೇಶಕ ಪ್ರಶಾಂತ್ ನೀಲ್ ಪ್ರಯತ್ನಿಸುತ್ತಿದ್ದಾರೆ. ನೂರಾರು ಕೋಟಿ ರೂಪಾಯಿ ಬಜೆಟ್ನಲ್ಲಿ ಈ ಸಿನಿಮಾವನ್ನು ‘ಹೊಂಬಾಳೆ ಫಿಲ್ಮ್ಸ್’ ನಿರ್ಮಿಸುತ್ತಿದೆ. ಪ್ರಭಾಸ್, ಶ್ರುತಿ ಹಾಸನ್, ಪೃಥ್ವಿರಾಜ್ ಸುಕುಮಾರನ್ ಮುಂತಾದ ಕಲಾವಿದರು ಇದರಲ್ಲಿ ನಟಿಸುತ್ತಿದ್ದಾರೆ. ಚಿತ್ರದ ಕೊನೇ ಹಂತದ ಕೆಲಸಗಳು ನಡೆಯುತ್ತಿವೆ. ಆದಷ್ಟು ಬೇಗ ಹೊಸ ರಿಲೀಸ್ ಡೇಟ್ ಬಗ್ಗೆ ಮಾಹಿತಿ ಸಿಗಲಿ ಎಂದು ಫ್ಯಾನ್ಸ್ ಕಾದಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.