ದಿ ಫ್ಯಾಮಿಲಿ ಮ್ಯಾನ್ 2 ವೆಬ್ ಸೀರಿಸ್ ಶೂಟಿಂಗ್ ಆರಂಭವಾದಾಗಿನಿಂದಲೂ ನಟಿ ಸಮಂತಾ ಸುದ್ದಿಯಲ್ಲಿದ್ದಾರೆ. ಅವರು ಸ್ಯೂಸೈಡ್ ಬಾಂಬರ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ ಎಂಬುದು ಟ್ರೇಲರ್ನಲ್ಲಿ ಸ್ಪಷ್ಟವಾಗಿತ್ತು. ಈಗ ಅವರಿಗೆ ಎಚ್ಚರಿಕೆಯ ಪತ್ರವೊಂದು ಬಂದಿದೆ. ಅದೂ ಅಮೇಜಾನ್ ಪ್ರೈಮ್ ಕಡೆಯಿಂದ ಅನ್ನೋದು ವಿಶೇಷ.
2019ರಲ್ಲಿ ಬಿಡುಗಡೆ ಆಗಿದ್ದ ‘ದಿ ಫ್ಯಾಮಿಲಿ ಮ್ಯಾನ್’ ವೆಬ್ ಸಿರೀಸ್ ಸಿಕ್ಕಾಪಟ್ಟೆ ಹಿಟ್ ಆಗಿತ್ತು. ಮನೋಜ್ ಬಾಜಪೇಯ್, ಪ್ರಿಯಾಮಣಿ ಮುಂತಾದವರು ಮುಖ್ಯಭೂಮಿಕೆ ನಿಭಾಯಿಸಿದ್ದರು. ‘ದಿ ಫ್ಯಾಮಿಲಿ ಮ್ಯಾನ್ 2’ಗಾಗಿ ಎಲ್ಲರೂ ಕಾದಿದ್ದರು. ಆದರೆ, ವೆಬ್ಸೀರಿಸ್ ಟ್ರೇಲರ್ ತಮಿಳಿಯನ್ನರ ಆಕ್ರೋಶಕ್ಕೆ ಕಾರಣವಾಗಿದೆ. ತಮಿಳು ಜನರನ್ನು ಉಗ್ರಗಾಮಿಗಳ ರೀತಿಯಲ್ಲಿ ತೋರಿಸಲಾಗಿದೆ ಎನ್ನುವ ಆರೋಪ ಮಾಡಲಾಗಿದೆ. ಹೀಗಾಗಿ, ಅಮೇಜಾನ್ ಪ್ರೈಮ್ ಟ್ರೇಲರ್ ಎಡಿಟ್ ಮಾಡುವ ಕೆಲಸವನ್ನು ಕೂಡ ಮಾಡಿತ್ತು.
ಸಮಂತಾ ಸಾಕಷ್ಟು ಮಾಧ್ಯಮಗಳಿಗೆ ಈ ವೆಬ್ ಸೀರಿಸ್ ಕುರಿತಾಗಿ ಸಂದರ್ಶನ ನೀಡುತ್ತಿದ್ದಾರೆ. ಈ ಸಂದರ್ಶನದ ವೇಳೆ ವಿವಾದದ ಬಗ್ಗೆ ಪ್ರಶ್ನೆ ಎದುರಾಗೋದು ಸಾಮಾನ್ಯ. ಆದರೆ, ಯಾವುದೇ ಕಾರಣಕ್ಕೂ ಈ ವಿವಾದದ ಬಗ್ಗೆ ಮಾತನಾಡದಂತೆ ಅಮೇಜಾನ್ ಪ್ರೈಮ್ ಸಮಂತಾಗೆ ಎಚ್ಚರಿಸಿದೆ. ಈ ಮೂಲಕ ವಿವಾದ ದೊಡ್ಡದಾಗದಂತೆ ನೋಡಿಕೊಳ್ಳುವ ಆಲೋಚನೆ ಪ್ರೈಮ್ನದ್ದು.
ದೊಡ್ಡ ದೊಡ್ಡ ವೆಬ್ ಸೀರಿಸ್ಗಳು ಹಾಗೂ ಸಿನಿಮಾಗಳು ತೆರೆಕಾಣುತ್ತಿರುವಾಗ ಯಾರಾದರೂ ಒಬ್ಬರು ಸಣ್ಣ ಸಣ್ಣ ವಿಚಾರಗಳನ್ನು ಇಟ್ಟುಕೊಂಡು ತಕಾರಾರು ತೆಗೆಯುತ್ತಾರೆ. ಈಗ ತಮಿಳಿಯನ್ನರು ಉಗ್ರಗಾಮಿಗಳಂತೆ ತೋರಿಸಲಾಗುತ್ತಿದೆ ಎನ್ನುವ ವಿಚಾರ ಇಟ್ಟುಕೊಂಡು ಕೆಲವು ದಿ ಫ್ಯಾಮಿಲಿ ಮ್ಯಾನ್ 2 ವೆಬ್ ಸೀರಿಸ್ ಬ್ಯಾನ್ ಮಾಡುವಂತೆ ಆಗ್ರಹಿಸಿದ್ದಾರೆ. ಆದರೆ, ವೆಬ್ ಸೀರಿಸ್ ನೋಡದೆಯೇ ಈ ರೀತಿ ಹೇಳಿಕೆ ನೀಡೋದು ಸರಿಯಲ್ಲ ಎನ್ನುವ ಅಭಿಪ್ರಾಯವನ್ನು ತಂಡ ವ್ಯಕ್ತಪಡಿಸಿದೆ.
‘ದಿ ಫ್ಯಾಮಿಲಿ ಮ್ಯಾನ್ ಸೀಸನ್-2’ ಜೂನ್ 4ರಂದು ಅಮೇಜಾನ್ ಪ್ರೈಮ್ನಲ್ಲಿ ಪ್ರೀಮಿಯರ್ ಆಗುತ್ತಿದೆ. ಈ ವೆಬ್ ಸೀರಿಸ್ನ ನಿರ್ದೇಶನ ಜವಾಬ್ದಾರಿಯನ್ನು ರಾಜ್ ಮತ್ತು ಡಿ.ಕೆ. ನಿಭಾಯಿಸಿದ್ದಾರೆ. ಮೊದಲ ಸೀಸನ್ ದೊಡ್ಡಮಟ್ಟದಲ್ಲಿ ಹಿಟ್ ಆದ್ದರಿಂದ ಎರಡನೇ ಸೀಸನ್ಮೇಲೆ ಹೆಚ್ಚು ನಿರೀಕ್ಷೆ ಇದೆ.
ಇದನ್ನೂ ಓದಿ: ‘ದಿ ಫ್ಯಾಮಿಲಿ ಮ್ಯಾನ್ 2’ ವಿವಾದದ ಬಗ್ಗೆ ಮೌನ ಮುರಿದ ಮನೋಜ್ ಬಾಜಪೇಯ್