
ಈ ವರ್ಷದ ಬಹುನಿರೀಕ್ಷಿತ ಸಿನಿಮಾಗಳಲ್ಲಿ ಒಂದಾದ ‘777 ಚಾರ್ಲಿ’ ಸಿನಿಮಾ (777 Charlie) ಇಂದು (ಜೂನ್ 10) ರಿಲೀಸ್ ಆಗಿದೆ. ಈ ಚಿತ್ರ ನೋಡಲು ಸಿನಿಪ್ರೇಮಿಗಳು ಹಲವು ದಿನಗಳಿಂದ ಕಾದಿದ್ದರು. ಈಗ ಭಾರತ ಮಾತ್ರವಲ್ಲದೇ ವಿದೇಶದ ಹಲವು ಕಡೆಗಳಲ್ಲಿ ಈ ಸಿನಿಮಾವನ್ನು ರಿಲೀಸ್ ಮಾಡಲಾಗಿದೆ. ಎಲ್ಲ ಸೇರಿ ಸಾವಿರಕ್ಕೂ ಅಧಿಕ ಸ್ಕ್ರೀನ್ಗಳಲ್ಲಿ ‘777 ಚಾರ್ಲಿ’ ಚಿತ್ರ ಇಂದು ಪ್ರದರ್ಶನ ಆರಂಭಿಸಿದೆ. ರಕ್ಷಿತ್ ಶೆಟ್ಟಿ (Rakshit Shetty) ಅಭಿಮಾನಿಗಳು ಈ ಸಿನಿಮಾವನ್ನು ನೋಡಿ ಎಂಜಾಯ್ ಮಾಡುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಎಲ್ಲ ಸಿನಿಮಾಗಳಿಗೆ ಪೈರಸಿ (Piracy) ಕಾಟ ಎದುರಾಗುತ್ತಿದೆ. ಆ ರೀತಿ ಆಗಬಾರದು ಎಂದು ‘777 ಚಾರ್ಲಿ’ ಬಳಗ ಒಂದಷ್ಟು ಕ್ರಮಗಳನ್ನು ಕೈಗೊಂಡಿದೆ. ಆ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಳ್ಳಲಾಗಿದೆ.
ಒಂದು ವೇಳೆ ಯಾರಾದರೂ ‘777 ಚಾರ್ಲಿ’ ಸಿನಿಮಾವನ್ನು ಪೈರಸಿ ಮಾಡಿದ್ದು ಗಮನಕ್ಕೆ ಬಂದರೆ ಆ ಬಗ್ಗೆ ಮಾಹಿತಿ ನೀಡುವಂತೆ ಪ್ರೇಕ್ಷಕರಲ್ಲಿ ಚಿತ್ರತಂಡ ಮನವಿ ಮಾಡಿಕೊಂಡಿದೆ. ಯಾವ ಖಾತೆಗೆ ಟ್ವೀಟ್ ಮತ್ತು ಇ-ಮೇಲ್ ಮೂಲಕ ರಿಪೋರ್ಟ್ ಮಾಡಬೇಕು ಎಂಬುದನ್ನು ತಿಳಿಸಲಾಗಿದೆ. ಪೈರಸಿ ತಡೆಯಲು ಒಂದು ತಾಂತ್ರಿಕ ತಂಡವನ್ನು ‘777 ಚಾರ್ಲಿ’ ಟೀಮ್ ನೇಮಿಸಿದೆ.
ಇದನ್ನೂ ಓದಿ: 777 Charlie Review: ಪ್ರಾಣಿಪ್ರಿಯರನ್ನು ನಗಿಸಿ, ಅಳಿಸುವ ಧರ್ಮ-ಚಾರ್ಲಿಯ ಎಮೋಷನಲ್ ಜರ್ನಿ; ಇಲ್ಲಿದೆ ವಿಮರ್ಶೆ
ಈ ಸಿನಿಮಾದಲ್ಲಿ ಶ್ವಾನ ಮತ್ತು ಮನುಷ್ಯನ ನಡುವಿನ ಸಂಬಂಧದ ಕಥೆಯನ್ನು ಹೇಳಲಾಗಿದೆ. ಕಿರಣ್ ರಾಜ್ ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ರಕ್ಷಿತ್ ಶೆಟ್ಟಿ ಜೊತೆಗೆ ಸಂಗೀತಾ ಶೃಂಗೇರಿ, ದಾನಿಶ್ ಸೇಠ್, ರಾಜ್ ಬಿ. ಶೆಟ್ಟಿ, ಬಾಬಿ ಸಿಂಹ, ಗೋಪಾಲಕೃಷ್ಣ ದೇಶಪಾಂಡೆ ಮುಂತಾದವರು ಈ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಚಿತ್ರಕ್ಕೆ ನೋಬಿನ್ ಪೌಲ್ ಸಂಗೀತ ನೀಡಿದ್ದಾರೆ.
ರಕ್ಷಿತ್ ಶೆಟ್ಟಿ ಅವರ ‘ಪರಂವಾ ಸ್ಟುಡಿಯೋಸ್’ ಮೂಲಕ ‘777 ಚಾರ್ಲಿ’ ಸಿನಿಮಾ ತಯಾರಾಗಿದೆ. ಕನ್ನಡ ಮಾತ್ರವಲ್ಲದೇ ಹಿಂದಿ, ತಮಿಳು, ತೆಲುಗು, ಮಲಯಾಳಂ ಭಾಷೆಗಳಿಗೆ ಡಬ್ ಆಗಿಯೂ ತೆರೆಕಂಡಿದೆ. ಈಗಾಗಲೇ ದೇಶದ 21 ನಗರಗಳಲ್ಲಿ ಇದರ ಪ್ರೀಮಿಯರ್ ಶೋ ಆಗಿದ್ದು, ಸಿನಿಪ್ರಿಯರಿಂದ ಮೆಚ್ಚುಗೆ ವ್ಯಕ್ತವಾಗಿದೆ. ರಮ್ಯಾ, ರಿಷಬ್ ಶೆಟ್ಟಿ ಸೇರಿದಂತೆ ಕನ್ನಡ ಚಿತ್ರರಂಗದ ಅನೇಕ ಸೆಲೆಬ್ರಿಟಿಗಳು ಕೂಡ ಈ ಸಿನಿಮಾ ನೋಡಿ ಖುಷಿಪಟ್ಟಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.