‘ಕಾಂತಾರ’ ದೋಣಿ ಅವಘಡ, ಹೊಂಬಾಳೆ ಕಾರ್ಯಕಾರಿ ನಿರ್ಮಾಪಕ ಸ್ಪಷ್ಟನೆ

Kantara Chapter 1: ರಿಷಬ್ ಶೆಟ್ಟಿ ನಟಿಸಿ, ನಿರ್ದೇಶನ ಮಾಡಿರುವ ‘ಕಾಂತಾರ: ಚಾಪ್ಟರ್ 1’ ಸಿನಿಮಾದ ಶೂಟಿಂಗ್ ವೇಳೆ ಅವಘಡವೊಂದು ನಡೆದಿದೆ. ಶೂಟಿಂಗ್ ನಡೆಯುವ ಸಮಯದಲ್ಲಿ ದೋಣಿ ಮುಗುಚಿಕೊಂಡಿದೆ. ಆದರೆ ಘಟನೆಯಲ್ಲಿ ಯಾವುದೇ ಸಾವು-ನೋವು ನಡೆದಿಲ್ಲ ಎನ್ನಲಾಗುತ್ತಿದೆ. ‘ಕಾಂತಾರ’ ಸಿನಿಮಾ ಅನ್ನು ಹೊಂಬಾಳೆ ನಿರ್ಮಾಣ ಮಾಡುತ್ತಿದ್ದು, ಸಂಸ್ಥೆಯ ಎಕ್ಸಿಕ್ಯೂಟಿವ್ ಪ್ರೊಡ್ಯೂಸರ್ ಇದೀಗ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

‘ಕಾಂತಾರ’ ದೋಣಿ ಅವಘಡ, ಹೊಂಬಾಳೆ ಕಾರ್ಯಕಾರಿ ನಿರ್ಮಾಪಕ ಸ್ಪಷ್ಟನೆ
Kantara Chapter 1

Updated on: Jun 15, 2025 | 2:46 PM

ರಿಷಬ್ ಶೆಟ್ಟಿ (Rishab Shetty) ನಟಿಸಿ, ನಿರ್ದೇಶನ ಮಾಡುತ್ತಿರುವ ‘ಕಾಂತಾರ: ಚಾಪ್ಟರ್ 1’ ಸಿನಿಮಾ ಸೆಟ್​ನಲ್ಲಿ ಅವಘಡಗಳ ಹಿಂದೆ ಅವಘಡಗಳು ನಡೆಯುತ್ತಲೇ ಇವೆ. ಸಿನಿಮಾದಲ್ಲಿ ಕೆಲಸ ಮಾಡುತ್ತಿರುವ ಮೂವರು ಕಲಾವಿದರು ಈ ವರೆಗೆ ಸಾವನ್ನಪ್ಪಿದ್ದಾರೆ. ಕೆಲ ದಿನಗಳ ಹಿಂದೆಯಷ್ಟೆ ‘ಕಾಂತಾರ’ ಸಿನಿಮಾನಲ್ಲಿ ಕೆಲಸ ಮಾಡುತ್ತಿದ್ದ ಕೇರಳದ ಕಲಾವಿದರೊಬ್ಬರು ನಿಧನ ಹೊಂದಿದ್ದರು. ನಿನ್ನೆ ಸಿನಿಮಾ ಶೂಟಿಂಗ್ ಮಾಡುವ ಸಂದರ್ಭದಲ್ಲಿ ದೋಣಿಯೊಂದು ಮುಗಿಚಿಕೊಂಡಿದೆ.

ಶಿವಮೊಗ್ಗನದ ಹೊಸನಗರದ ಸಮೀಪ ಮಾಣಿ ಜಲಾಶಯದಲ್ಲಿ ‘ಕಾಂತಾರ’ ಸಿನಿಮಾದ ಶೂಟಿಂಗ್ ನಡೆಯುತ್ತಿತ್ತು. ಸಂಜೆ ಸಮಯದಲ್ಲಿ ರಿಷನ್ ಶೆಟ್ಟಿ ಸೇರಿದಂತೆ ಹಲವು ಕಲಾವಿದರು ಇದ್ದ ಸೀನ್ ಒಂದರ ಶೂಟಿಂಗ್ ದೋಣಿಯಲ್ಲಿ ನಡೆಯುತ್ತಿತ್ತು. ಆದರೆ ಈ ವೇಳೆ ಮುಗಿಚಿಕೊಂಡಿದೆ. ಸುಮಾರು 30 ಕಲಾವಿದರು ಮತ್ತು ತಂತ್ರಜ್ಞರು ದೋಣಿಯಲ್ಲಿರುವಾಗಲೇ ದೋಣಿ ಮುಗುಚಿಕೊಂಡಿದೆ. ಈ ಘಟನೆಯಲ್ಲಿ ಯಾರಿಗೂ ಜೀವ ಹಾನಿ ಆಗಿಲ್ಲ ಎನ್ನಲಾಗುತ್ತಿದೆ.

ಘಟನೆ ನಿನ್ನೆ ಸಂಜೆ 7 ಗಂಟೆ ಸುಮಾರಿಗೆ ನಡೆದಿದೆ. ಇಂದು, ‘ಕಾಂತಾರ: ಚಾಪ್ಟರ್ 1’ ಸಿನಿಮಾದ ಎಕ್ಸಿಕ್ಯೂಟಿವ್ ನಿರ್ಮಾಪಕ ಆದರ್ಶ್ ಎಂಬುವರು ಘಟನೆ ಬಗ್ಗೆ ಸ್ಪಷ್ಟನೆ ನೀಡಿದ್ದು, ಈ ಘಟನೆಯಲ್ಲಿ ಯಾವುದೇ ಜೀವ ಹಾನಿ ಆಗಿಲ್ಲ. ಅಲ್ಲದೆ ಯಾರಿಗೂ ಸಹ ಗಂಭೀರ ಗಾಯಗಳು ಸಹ ಆಗಿಲ್ಲ ಎಂದಿದ್ದಾರೆ. ‘ನಾವು ಎಲ್ಲ ರೀತಿಯ ಎಚ್ಚರಿಕೆಗಳನ್ನು ತೆಗೆದುಕೊಂಡೇ ಸಿನಿಮಾದ ಶೂಟಿಂಗ್ ಮಾಡುತ್ತಿದ್ದೆವು, ಹಾಗಾಗಿ ಯಾರಿಗೂ ಸಹ ಯಾವುದೇ ತೊಂದರೆ ಆಗಿಲ್ಲ’ ಎಂದಿದ್ದಾರೆ.

ಇದನ್ನೂ ಓದಿ:ರಿಷಬ್ ಶೆಟ್ಟಿ ‘ಕಾಂತಾರ’ ಚಿತ್ರಕ್ಕೆ ಸಾಲು ಸಾಲು ಹಿನ್ನಡೆ; ದೈವದ ಎಚ್ಚರಿಕೆ ನಿಜವಾಯ್ತಾ?

ಆದರೆ ಸ್ಥಳೀಯರು ಹೇಳಿರುವಂತೆ, ಘಟನೆ ಬಳಿಕ ಕೆಲ ಆಂಬುಲೆನ್ಸ್​ಗಳು ಶೂಟಿಂಗ್ ನಡೆದ ಸ್ಥಳಕ್ಕೆ ಬಂದಿದ್ದವಂತೆ. ಗಾಯಾಳುಗಳನ್ನು ಆಸ್ಪತ್ರೆಗೆ ಸ್ಥಳಾಂತರಿಸಲಾಯ್ತಂತೆ. ತೀರ್ಥಹಳ್ಳಿಯ ಖಾಸಗಿ ಆಸ್ಪತ್ರೆಯಲ್ಲಿ ಕೆಲವು ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಗಿದೆ ಎಂದು ಕೆಲ ಸ್ಥಳೀಯರು ಹೇಳಿದ್ದಾರೆ. ಆದರೆ ಸಿನಿಮಾದ ಎಕ್ಸಿಕ್ಯೂಟಿವ್ ಪ್ರೊಡ್ಯೂಸರ್ ಆದರ್ಶ್, ಹೇಳಿರುವಂತೆ ಘಟನೆಯಲ್ಲಿ ಯಾರಿಗೂ ಗಂಭೀರ ಗಾಯಗಳಾಗಿಲ್ಲ ಎಂದಿದ್ದಾರೆ.

ದೋಣಿ ನೀರಿನಲ್ಲಿ ಮುಗುಚಿಕೊಂಡಾಗ ನಟ, ನಿರ್ದೇಶಕ ರಿಷಬ್ ಶೆಟ್ಟಿ ಸಹ ದೋಣಿಯಲ್ಲಿಯೇ ಇದ್ದರಂತೆ. ರಿಷಬ್ ಶೆಟ್ಟಿ ಸೇರಿದಂತೆ ಇನ್ನೂ ಕೆಲವರು ದೋಣಿಯಿಂದ ಹಾರಿ ಈಜಿಕೊಂಡು ದಡ ಸೇರಿದರಂತೆ. ಇನ್ನು ಕೆಲವರನ್ನು ಚಿತ್ರತಂಡದವರು ನೀರಿಗೆ ಹಾರಿ ರಕ್ಷಿಸಿದರಂತೆ. ಕ್ಯಾಮೆರಾ ಇನ್ನಿತರೆ ಸೆಟ್ ಪ್ರಾಪರ್ಟಿಗಳು ನೀರು ಪಾಲಾಗಿವೆ ಎನ್ನಲಾಗುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ