ಮೈಸೂರು: ಕರ್ನಾಟಕ ಅರಣ್ಯ ಇಲಾಖೆ ಸಹಯೋಗದಿಂದ ನಿರ್ಮಿಸಿರುವ ವೈಲ್ಡ್ ಕರ್ನಾಟಕ ಸಾಕ್ಷ್ಯ ಚಿತ್ರ ದೇಶದಾದ್ಯಂತ ಹೆಸರು ಗಳಿಸಿತ್ತು. ಇದೀಗ ಈ ಸಾಕ್ಷ್ಯಚಿತ್ರ ಕನ್ನಡ, ತಮಿಳು, ತೆಲುಗು ಹಾಗೂ ಹಿಂದಿ ಭಾಷೆಯಲ್ಲಿ ಬಿಡುಗಡೆಯಾಗುತ್ತಿದೆ. ಮೊದಲಿಗೆ ಖ್ಯಾತ ವನ್ಯಜೀವಿ ತಜ್ಞ ಡೇವಿಡ್ ಅಟೇನ್ ಬರೋ ಧ್ವನಿಯಲ್ಲಿ ಇಂಗ್ಲಿಷ್ ಅವತರಣಿಕೆಯಲ್ಲಿ ಬಿಡುಗಡೆಯಾಗಿ ಸಾಕಷ್ಟು ಮೆಚ್ಚುಗೆಗಳಿಸಿತ್ತು.
ಇದೀಗಾ ಡಿಸ್ಕವರಿ ಹಾಗೂ ಅನಿಮಲ್ ಪ್ಲಾನೆಟ್ ವಾಹಿನಿಯಲ್ಲಿ ವಿಶ್ವ ಪರಿಸರ ದಿನವಾದ ಜೂನ್ 5ರಂದು ಖ್ಯಾತ ನಟರ ಹಿನ್ನೆಲೆ ಧ್ವನಿಯಲ್ಲಿ ಬಿಡುಗಡೆಯಾಗುತ್ತಿದೆ. ಕನ್ನಡದಲ್ಲಿ ನಟ-ನಿರ್ದೇಶಕ ರಿಷಬ್ ಶೆಟ್ಟಿ ಹಿನ್ನೆಲೆ ಧ್ವನಿ ನೀಡಿದ್ದಾರೆ. ಅದೇ ರೀತಿ ತಮಿಳು ಹಾಗೂ ತೆಲುಗಿನ ಅವತರಣಿಕೆಗೆ ನಟ ಪ್ರಕಾಶ್ ರೈ ಹಿನ್ನೆಲೆ ಧ್ವನಿ ನೀಡುತ್ತಿದ್ದಾರೆ. ಅದೇ ರೀತಿ ಹಿಂದಿಯಲ್ಲಿ ರಾಜ್ ಕುಮಾರ್ ರಾವ್ ಧ್ವನಿ ಕೊಡುತ್ತಿದ್ದಾರೆ.
ಕರ್ನಾಟಕದ ಕಾಡಿನಲ್ಲಿ ನಿರ್ಮಾಣವಾಗಿರುವ ಈ ಚಿತ್ರವನ್ನು ಕರ್ನಾಟಕ ಅರಣ್ಯ ಇಲಾಖೆ ಸಹಯೋಗದೊಂದಿಗೆ ವನ್ಯಜೀವಿ ಛಾಯಾಗ್ರಾಹಕರಾದ ಕಲ್ಯಾಣ್ ವರ್ಮ, ಅಮೋಘ ವರ್ಷ ನಿರ್ಮಿಸಿದ್ದಾರೆ. ಸುಮಾರು 50 ನಿಮಿಷದ ಚಿತ್ರವನ್ನು 4K ಕ್ವಾಲಿಟಿಯಲ್ಲಿ ಚಿತ್ರೀಕರಣಮಾಡಲಾಗಿತ್ತು. ಈ ಚಿತ್ರ ಈಗಾಗಲೇ ಸಿನಿಮಾ ಮಂದಿರ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಬಿಡುಗಡೆಯಾಗಿ ಸಾಕಷ್ಟು ಮೆಚ್ಚುಗೆ ಗಳಿಸಿದೆ. ಇದೀಗ ಕನ್ನಡದಲ್ಲೇ ನಮ್ಮ ಕಾಡಿನ ಕಥೆ ಕೇಳಬಹುದಾಗಿದೆ. ಈಗಾಗಲೇ ಯೂಟ್ಯೂಬ್ನಲ್ಲಿ 4 ಭಾಷೆಯ ಟೀಸರ್ ಬಿಡುಗಡೆಯಾಗಿದ್ದು ಸಾಕ್ಷ್ಯ ಚಿತ್ರ ಸಾಕಷ್ಟು ನಿರೀಕ್ಷೆ ಹುಟ್ಟಿಸಿದೆ.
ಸಾಕ್ಷ್ಯ ಚಿತ್ರದ ವಿಶೇಷತೆ:
ಸಾಕ್ಷ್ಯ ಚಿತ್ರ ಕರ್ನಾಟಕದ ಬೇರೆ ಬೇರೆ ಕಾಡುಗಳಲ್ಲಿ ಚಿತ್ರೀಕರಿಸಲಾಗಿದೆ. ಕಾಡಿನ 400ಕ್ಕೂ ಹೆಚ್ಚು ಅಪರೂಪದ ವನ್ಯಜೀವಿಗಳ ದೃಶ್ಯಗಳಿವೆ. ಸಾಕ್ಷ್ಯಚಿತ್ರದಲ್ಲಿ ಪ್ರಾಣಿಗಳ ಅಪರೂಪದ ಸ್ವಭಾವ, ಜೀವನಕ್ರಮದ ಬಗ್ಗೆ ಚಿತ್ರೀಕರಿಸಲಾಗಿದೆ. ಅದರಲ್ಲಿ ಕೆಲವು ಗೊತ್ತಿರದ ಅಚ್ಚರಿ ಸಂಗತಿಗಳು ಕೂಡ ಒಳಗೊಂಡಿದೆ. ಸುಮಾರು ನಾಲ್ಕು ವರ್ಷಗಳ ಕಾಲ ಈ ಚಿತ್ರವನ್ನು ತೆಗೆಯಲಾಗಿದೆ. ಕೇವಲ ಕಾಡಿನಲ್ಲಿ ಮಾತ್ರವಲ್ಲದೆ ಸಮುದ್ರ ಹಾಗೂ ನದಿಯೊಳಗೆ ಜಲಚರಗಳನ್ನು ಸೆರೆಹಿಡಿದಿರುವುದು ಅದ್ಭುತವಾಗಿ ಮೂಡಿ ಬಂದಿದೆ.
Published On - 1:10 pm, Wed, 27 May 20