‘ಡಿಯರ್ ಹಸ್ಬೆಂಡ್’ ಸಿನಿಮಾದಲ್ಲಿ ಪೊಲೀಸ್ ಪಾತ್ರ ಮಾಡಲಿರುವ ಪಾವನಾ ಗೌಡ

‘ಡಿಯರ್ ಹಸ್ಬೆಂಡ್’ ಸಿನಿಮಾದ ಕೆಲಸಗಳು ಭರದಿಂದ ಸಾಗುತ್ತಿವೆ. ಮೂರನೇ ಹಂತದ ಚಿತ್ರೀಕರಣಕ್ಕೆ ಸಿದ್ಧತೆ ನಡೆಯುತ್ತಿದೆ. ಸೂರಜ್ ಗೌಡ, ಪ್ರವೀಣ್, ಕುಮಾರ್ ಬಂಗಾರಪ್ಪ ನಟಿಸುತ್ತಿರುವ ಈ ಚಿತ್ರಕ್ಕೆ ನಟಿ ಪಾವನಾ ಗೌಡ ಕೂಡ ಸೇರ್ಪಡೆ ಆಗಿದ್ದಾರೆ. ಅವರ ಪಾತ್ರದ ಬಗ್ಗೆ ಚಿತ್ರತಂಡ ಮಾಹಿತಿ ನೀಡಿದೆ.

‘ಡಿಯರ್ ಹಸ್ಬೆಂಡ್’ ಸಿನಿಮಾದಲ್ಲಿ ಪೊಲೀಸ್ ಪಾತ್ರ ಮಾಡಲಿರುವ ಪಾವನಾ ಗೌಡ
Paavana Gowda

Updated on: Aug 19, 2026 | 4:53 PM

ನಟಿ ಪಾವನಾ ಗೌಡ ಅವರು ಕನ್ನಡ ಚಿತ್ರರಂಗದಲ್ಲಿ (Kannada Film Industry) ತಮ್ಮದೇ ರೀತಿಯಲ್ಲಿ ಗುರುತಿಸಿಕೊಂಡಿದ್ದಾರೆ. ಇಲ್ಲಿಯವರೆಗೆ ಗ್ಲಾಮರಸ್ ಮತ್ತು ಸಾಂಪ್ರದಾಯಿಕ ಲುಕ್ ಇರುವ ಪಾತ್ರಗಳನ್ನು ಮಾಡಿ ಅವರು ಸೈ ಎನಿಸಿಕೊಂಡಿದ್ದರು. ಆದರೆ, ಇದೇ ಮೊದಲ ಬಾರಿಗೆ ಪಾವನಾ ಗೌಡ (Paavana Gowda) ಅವರು ರಗಡ್ ಆದಂತಹ ಒಂದು ಪಾತ್ರವನ್ನು ಒಪ್ಪಿಕೊಂಡಿದ್ದಾರೆ. ‘ಡಿಯರ್ ಹಸ್ಬೆಂಡ್’ (Dear Husband) ಸಿನಿಮಾದಲ್ಲಿ ಅವರಿಗೆ ಆ ರೀತಿಯ ಒಂದು ಡಿಫರೆಂಟ್ ಪಾತ್ರವನ್ನು ನೀಡಲಾಗಿದೆ. ಈ ಚಿತ್ರದಲ್ಲಿ ಅವರು ಉತ್ತರ ಕರ್ನಾಟಕದ ಖಡಕ್ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಳ್ಳಲಿದ್ದಾರೆ.

‘ಡಿಯರ್ ಹಸ್ಬೆಂಡ್’ ಸಿನಿಮಾವನ್ನು ‘ಜಿ9 ಕಮ್ಯುನಿಕೇಶನ್ ಆ್ಯಂಡ್ ಮೀಡಿಯಾ’ ಸಂಸ್ಥೆಯ ಅಡಿಯಲ್ಲಿ ನಿರ್ಮಿಸಲಾಗುತ್ತಿದೆ. ಗುರುರಾಜ ಕುಲಕರ್ಣಿ (ನಾಡಗೌಡ) ನಿರ್ದೇಶನದ ಈ ಸಿನಿಮಾಗೆ ಈಗಾಗಲೇ ಎರಡು ಹಂತದ ಚಿತ್ರೀಕರಣವನ್ನು ಮಾಡಲಾಗಿದೆ. ಈಗ ಮೂರನೇ ಹಂತದ ಚಿತ್ರೀಕರಣಕ್ಕೆ ತಯಾರಿ ಮಾಡಿಕೊಳ್ಳಲಾಗುತ್ತಿದೆ. ಅದರ ಜೊತೆ ನಟಿ ಪಾವನಾ ಗೌಡ ಅವರು ಚಿತ್ರತಂಡಕ್ಕೆ ಎಂಟ್ರಿ ನೀಡಿರುವ ಸುದ್ದಿಯನ್ನು ಬಿಟ್ಟುಕೊಡಲಾಗಿದೆ.

ಈ ಸಿನಿಮಾದಲ್ಲಿ ಪಾವನಾ ಗೌಡ ಅವರು ಮಾಡುತ್ತಿರುವ ಪಾತ್ರದ ಬಗ್ಗೆ ‘ಡಿಯರ್ ಹಸ್ಬೆಂಡ್’ ಚಿತ್ರತಂಡ ಮಾಹಿತಿ ನೀಡಿದೆ. ತಮ್ಮ ಪಾತ್ರದ ಬಗ್ಗೆ ಮಾತನಾಡಿರುವ ಪಾವನಾ ಗೌಡ, ‘ನಾನು ಇಲ್ಲಿಯವರೆಗೆ ಮಾಡಿರುವ ಪಾತ್ರಗಳಿಗಿಂತ ಸಂಪೂರ್ಣ ವಿಭಿನ್ನವಾಗಿರುವಂತಹ ಪಾತ್ರ ಇದಾಗಿದೆ. ಒಬ್ಬ ಜವಾಬ್ದಾರಿಯುತ ಮಹಿಳಾ ಪೊಲೀಸ್ ಅಧಿಕಾರಿ ಹೇಗಿರುತ್ತಾಳೆ? ಅವಳಿಗೆ ಏನೇನು ಸವಾಲುಗಳು ಎದುರಾಗುತ್ತವೆ? ಅವುಗಳ ನಡುವೆ ಆಕೆ ತನ್ನ ಕೆಲಸವನ್ನು ಹೇಗೆ ನಿಭಾಯಿಸುತ್ತಾಳೆ ಎಂಬುದನ್ನು ನನ್ನ ಪಾತ್ರ ತೋರಿಸುತ್ತದೆ’ ಎಂದಿದ್ದಾರೆ.

‘ನನಗಂತೂ ಇದೊಂದು ಸವಾಲಿನ ಪಾತ್ರವಾಗಿದೆ. ಖಡಕ್ ಡೈಲಾಗ್ ಜೊತೆಯಲ್ಲಿ ಆ್ಯಕ್ಷನ್ಸ್ ಕೂಡ ಈ ಪಾತ್ರದಲ್ಲಿ ನನಗಿದೆ’ ಎಂದು ಪಾವನಾ ಗೌಡ ಅವರು ಹೇಳಿದ್ದಾರೆ. ಆ ಮೂಲಕ ಅವರ ಅಭಿಮಾನಿಗಳಿಗೆ ಸಿನಿಮಾ ಮೇಲೆ ನಿರೀಕ್ಷೆ ಹೆಚ್ಚುವಂತೆ ಮಾಡಿದ್ದಾರೆ. ಪಾವನಾ ಅವರ ಈ ಪಾತ್ರದ ಬಗ್ಗೆ ನಿರ್ದೇಶಕ ಗುರುರಾಜ ಕುಲಕರ್ಣಿ ಕೂಡ ಒಂದಷ್ಟು ಮಾಹಿತಿ ಹಂಚಿಕೊಂಡಿದ್ದಾರೆ.

‘ಕಥೆಯಲ್ಲಿ ಇದೊಂದು ತುಂಬ ಪ್ರಮುಖವಾದ ಪಾತ್ರ. ಸಾಕಷ್ಟು ಹುಡುಕಾಟದ ನಂತರ ಈ ಪಾತ್ರಕ್ಕೆ ಅಂತಿಮವಾಗಿ ಪಾವನಾ ಗೌಡ ಅವರನ್ನು ಆಯ್ಕೆ ಮಾಡಿಕೊಂಡಿದ್ದೇವೆ. ಅವರು ಕೂಡ ಖುಷಿಯಿಂದ ಈ ಪಾತ್ರ ಮಾಡಲು ಒಪ್ಪಿಕೊಂಡಿದ್ದಾರೆ. ಈಗಾಗಲೇ ಚಿತ್ರದ ಒಂದಷ್ಟು ಭಾಗದ ಶೂಟಿಂಗ್ ಮಾಡಿ ಮುಗಿಸಿದ್ದೇವೆ. ಮುಂದಿನ ಹಂತದ ಚಿತ್ರೀಕರಣದಲ್ಲಿ ಪಾವನಾ ಗೌಡ ಭಾಗಿಯಾಗಲಿದ್ದಾರೆ. ಈ ಚಿತ್ರದ ಮೂಲಕ ಅವರಿಗೆ ಮತ್ತೊಂದು ಇಮೇಜ್ ಬರಬಹುದು. ಅಷ್ಟರ ಮಟ್ಟಿಗೆ ಮಹಿಳಾ ಪ್ರಧಾನ ಪಾತ್ರ ಇದಾಗಿದೆ’ ಎಂದು ವಿವರಣೆ ನೀಡಿದ್ದಾರೆ ನಿರ್ದೇಶಕರು.

ಇದನ್ನೂ ಓದಿ: ಸಾಂಪ್ರದಾಯಿಕ ದಿರಿಸಿನಲ್ಲಿ ನಟಿ ಪಾವನಾ ಗೌಡ ಫೋಟೋ ಶೂಟ್; ಚಿತ್ರಗಳು ಇಲ್ಲಿವೆ

ಸಸ್ಪೆನ್ಸ್ ಹಾಗೂ ಕ್ರೈಂ-ಥ್ರಿಲ್ಲರ್ ಶೈಲಿಯಲ್ಲಿ ಮೂಡಿಬರುತ್ತಿರುವ ‘ಡಿಯರ್ ಹಸ್ಬೆಂಡ್’ ಸಿನಿಮಾದಲ್ಲಿ ಸೂರಜ್ ಗೌಡ, ಪ್ರವೀಣ್, ಕುಮಾರ್ ಬಂಗಾರಪ್ಪ ಮುಂತಾದವರು ನಟಿಸುತ್ತಿದ್ದಾರೆ. ವೀರ್ ಸಮರ್ಥ್ ಅವರ ಸಂಗೀತ ನಿರ್ದೇಶನ, ಪ್ರಮೋದ ಮರವಂತೆ ಅವರ ಸಾಹಿತ್ಯ, ರಘು ನಿಡುವಳ್ಳಿ ಅವರ ಸಂಭಾಷಣೆ ಈ ಚಿತ್ರಕ್ಕಿದೆ. ಪಿಕೆಹೆಚ್ ದಾಸ್ ಅವರು ಛಾಯಾಗ್ರಹಣ ಮಾಡುತ್ತಿದ್ದಾರೆ. ಬಿ.ಎಸ್. ಕೆಂಪರಾಜ್ ಅವರು ಸಂಕಲನ ಮಾಡುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Loading...
Unable to load recommendations.
Follow Us