ನಟಿ ರಾಗಿಣಿ ದ್ವಿವೇದಿ ಅವರಿಗೆ (Ragini Dwivedi) ಇಂದು (ಮೇ 24) ಬರ್ತ್ಡೇ ಸಂಭ್ರಮ. ಸ್ಯಾಂಡಲ್ವುಡ್ನಲ್ಲಿ ಹಲವು ಸಿನಿಮಾಗಳನ್ನು ಮಾಡಿ ಮನಗೆದ್ದಿರುವ ಅವರಿಗೆ ಅಭಿಮಾನಿಗಳಿಂದ ಹುಟ್ಟುಹಬ್ಬದ ಶುಭಾಶಯಗಳು ಬರುತ್ತಿವೆ. ಈವರೆಗೆ ಇಪ್ಪತ್ತೈದಕ್ಕೂ ಹೆಚ್ಚಿನ ಚಿತ್ರಗಳಲ್ಲಿ ಅಭಿನಯಿಸಿರುವ ಅವರು ಇತ್ತೀಚೆಗೆ ಸಿನಿಮಾ ಆಯ್ಕೆಯಲ್ಲಿ ಚ್ಯೂಸಿ ಆಗಿದ್ದಾರೆ. ಪ್ರಸ್ತುತ ‘ಸಾರಿ (ಕರ್ಮ ರಿಟರ್ನ್ಸ್)’ ಸಿನಿಮಾದಲ್ಲಿ (SORRY Karma Returns) ಅವರು ನಟಿಸುತ್ತಿದ್ದಾರೆ. ಅವರ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಈ ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆ ಮಾಡಲಾಗಿದೆ. ಈ ಮೂಲಕ ಫ್ಯಾನ್ಸ್ಗೆ ಗಿಫ್ಟ್ ಸಿಕ್ಕಿದೆ.
ಮೋಷನ್ ಪೋಸ್ಟರ್ ರಿಲೀಸ್ಗೆ ಚಿತ್ರತಂಡ ಸುದ್ದಿಗೋಷ್ಠಿ ನಡೆಸಿತ್ತು. ಈ ವೇಳೆ ಸಿನಿಮಾ ಬಗ್ಗೆ ಮಾತನಾಡಿದ ರಾಗಿಣಿ, ‘ಪತ್ರಕರ್ತ ಅಫ್ಜಲ್ ನನ್ನನ್ನು ಭೇಟಿಯಾಗಿ ಈ ಚಿತ್ರದ ಕುರಿತು ಹೇಳಿದರು. ನನಗೆ ಇಷ್ಟವಾಯಿತು. ಈ ಚಿತ್ರದ ನಿರ್ದೇಶಕ ಬ್ರಹ್ಮ ಅವರ ಬಗ್ಗೆ ತಿಳಿದು ಆಶ್ಚರ್ಯವಾಯಿತು. ಅವರು ಅತ್ಯುತ್ತಮ ತಂತ್ರಜ್ಞರು. ನಾನು ಒಂದೇ ತರಹದ ಪಾತ್ರ ಮಾಡಲು ಇಷ್ಟ ಪಡುವುದಿಲ್ಲ. ಬೇರೆಬೇರೆ ಪಾತ್ರ ಮಾಡಬೇಕು ಎಂಬುದು ನನ್ನ ಆಸೆ. ಈ ಸಿನಿಮಾದಲ್ಲಿ ಈವರೆಗೂ ಮಾಡಿರದ ಪಾತ್ರದಲ್ಲಿ ಕಾಣಿಸಿಕೊಂಡಿದ್ದೀನಿ. ನಿಮ್ಮ ಹಾರೈಕೆ ಸದಾ ಇರಲಿ’ ಎಂದಿದ್ದಾರೆ.
ನಿರ್ದೇಶಕ ಬ್ರಹ್ಮ ಅವರು ಸಿನಿಮಾ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ‘ನಾನು 2000ನೇ ಇಸವಿಯಿಂದಲೂ ಅನಿಮೇಷನ್ ಹಾಗೂ ವಿಎಫ್ಎಕ್ಸ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಈ ಕುರಿತು ಕೆಲವರಿಗೆ ತರಗತಿ ಕೂಡ ನೀಡುತ್ತಿದ್ದೇನೆ. ಹಿಂದೆ ‘ಸಿದ್ದಿ ಸೀರೆ’ ಎಂಬ ಚಿತ್ರ ನಿರ್ದೇಶಿಸಿದ್ದ ನನಗೆ ಇದು ಎರಡನೇ ಚಿತ್ರ. ಅಫ್ಜಲ್ ಅವರು ಹೇಳಿದ ಒಂದೆಳೆ ಕಥೆ ಇಷ್ಟವಾಯಿತು. ನಾನು ಅದನ್ನು ಮುಂದುವರಿಸಿದೆ. ಇದರಲ್ಲಿ ಮಾಟ-ಮಂತ್ರ, ಬ್ಲ್ಯಾಕ್ ಮ್ಯಾಜಿಕ್ ಏನೂ ಇಲ್ಲ. ಇದೊಂದು ಕ್ರೈಂ ಥ್ರಿಲ್ಲರ್. ಸೂಪರ್ ಹೀರೋ ಕಾನ್ಸೆಪ್ಟ್ನ ಚಿತ್ರ ಕೂಡ ಎನ್ನಬಹುದು’ ಎನ್ನುತ್ತಾರೆ ಬ್ರಹ್ಮ.
ಇದನ್ನೂ ಓದಿ: ಬೋಲ್ಡ್ ಲುಕ್ನಲ್ಲಿ ರಾಗಿಣಿ ದ್ವಿವೇದಿ
ಸಿನಿಮಾ ಆರಂಭ ಆಗಿದ್ದು ಹೇಗೆ ಎನ್ನುವ ಬಗ್ಗೆ ಮಾತನಾಡಿದ್ದಾರೆ ಅಫ್ಜಲ್. ‘ಸಮಾರಂಭವೊಂದರಲ್ಲಿ ಬ್ರಹ್ಮ ಅವರ ಬಳಿ ಈ ಸಿನಿಮಾ ವಿಷಯ ಹೇಳಿದೆ. ನಂತರ ರಾಗಿಣಿ ಅವರು ಈ ಪಾತ್ರಕ್ಕೆ ಸೂಕ್ತ ಎನಿಸಿತು. ಅವರ ಬಳಿ ಹೋಗಿ ನೀವು ಈ ಚಿತ್ರದಲ್ಲಿ ನಟಿಸಬೇಕು ಎಂದು ಕೇಳಿದಾಗ, ತಕ್ಷಣ ಒಪ್ಪಿಕೊಂಡರು. ಅವರಿಗೆ ಧನ್ಯವಾದ’ ಎಂದಿದ್ದಾರೆ ಕಾರ್ಯಕಾರಿ ನಿರ್ಮಾಪಕ ಅಫ್ಜಲ್.
ಕೆನಡಾ ನಿವಾಸಿ ನವೀನ್ ಕುಮಾರ್ ಈ ಚಿತ್ರದ ನಿರ್ಮಾಪಕರು. ಜೈ ಕೃಪ್ಲಾನಿ ಹಾಗೂ ಜೇನ್ ಜಾರ್ಜ್ ಸಹ ನಿರ್ಮಾಪಕರು. ಬೆಂಗಳೂರು, ಸಕಲೇಶಪುರದ ಸುತ್ತ ಚಿತ್ರೀಕರಣ ಮಾಡಲಾಗಿದೆ. ಮುಂದಿನ ಭಾಗದ ಚಿತ್ರೀಕರಣ ಹೈದರಾಬಾದ್ನಲ್ಲಿ ನಡೆಯಲಿದೆ. ರಾಜೀವ್ ಗಣೇಶನ್ ಛಾಯಾಗ್ರಹಣ ಚಿತ್ರಕ್ಕೆ ಇದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 6:11 pm, Tue, 24 May 22