ಐದು ದಶಕದ ಅವಿರತ ಕಲಾಸೇವೆ: ಅನಂತ್ ನಾಗ್ ಅವರ ಸಿನಿ ಪಯಣದ ಪಕ್ಷಿ ನೋಟ

ಕನ್ನಡ ಚಿತ್ರರಂಗದ ಶ್ರೇಷ್ಠ ಕಲಾವಿದರಲ್ಲಿ ಒಬ್ಬರಾದ ಅನಂತ್ ನಾಗ್ ಅವರಿಗೆ ಭಾರತ ಸರ್ಕಾರವು ಚಿತ್ರರಂಗದಲ್ಲಿ ಸೇವೆ ಸಲ್ಲಿಸಿದವರಿಗೆ ಕೊಡಮಾಡುವ ಅತ್ಯುನ್ನತ ಪ್ರಶಸ್ತಿಯಾದ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ಘೋಷಿಸಿದೆ. ಅನಂತ್ ನಾಗ್ ಅವರು ಕಳೆದ ಅರ್ಧ ಶತಮಾನದಿಂದಲೂ ಕಲಾ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವವರು. ಅವರ ಸಿನಿಮಾ ಪಯಣದ ಪಕ್ಷಿ ನೋಟ ಇಲ್ಲಿದೆ...

ಐದು ದಶಕದ ಅವಿರತ ಕಲಾಸೇವೆ: ಅನಂತ್ ನಾಗ್ ಅವರ ಸಿನಿ ಪಯಣದ ಪಕ್ಷಿ ನೋಟ
Anant Nag

Updated on: Sep 16, 2026 | 7:18 PM

ಸ್ಟೈಲ್, ಮಾಸ್ ಡೈಲಾಗ್, ಆಕ್ಷನ್, ಮ್ಯಾನರಿಸಂ, ಅತಿಯಾದ ನಾಟಕೀಯತೆ 70-80ರ ದಶಕದ ಹಲವು ನಾಯಕ ನಟರುಗಳು ಸ್ಟಾರ್​​ಗಳು ಎನಿಸಿಕೊಂಡಿದ್ದು ಇವುಗಳಿಂದಲೇ. ಎಲ್ಲರೂ ‘ಮೆಲೊಡ್ರಾಮಾ’, ‘ನಾಟಕೀಯ ಶೈಲಿಯ ನಟನೆ’ಯ ಹಿಂದೆ ಓಡುತ್ತಿದ್ದಾಗ ‘ಸಟಲ್ ಆಕ್ಟಿಂಗ್’ ಅಥವಾ ನೈಜ ನಟನೆಗೆ ಕಟ್ಟುಬಿದ್ದು ಅದೊಂದರಿಂದಲೇ ಎಲ್ಲಾ ವರ್ಗದ ಪ್ರೇಕ್ಷಕರನ್ನು ರಂಜಿಸಿದ, ಮೆಚ್ಚುಗೆ ಗಳಿಸಿದ ಏಕೈಕ ನಟ ಅನಂತ್ ನಾಗ್. ಒಳ್ಳೆಯ ನಟನಿಗೆ ಪಾತ್ರ, ಭಾಷೆ, ಜಾನರ್ ಯಾವುದರ ಹಂಗು, ಗಡಿ ಇರುವುದಿಲ್ಲ, ಅನಂತ್ ನಾಗ್​​ ಅವರಿಗೆ ಈ ಮಾತು ನೂರಕ್ಕೆ ನೂರು ಅನ್ವಯಿಸುತ್ತದೆ. ಕಲಾತ್ಮಕ, ಕಮರ್ಶಿಯಲ್, ಪೌರಾಣಿಕ, ಬಂಡಾಯ, ಬ್ರಿಜ್ ಮಾದರಿ ಸಿನಿಮಾ, ಹಾಸ್ಯ ಪ್ರಧಾನ, ಕೌಟುಂಬಿಕ, ಹಾರರ್, ವಿಲನ್ ಒಂದಲ್ಲ ಎರಡಲ್ಲ ಅನೇಕ ರೀತಿಯ ಪಾತ್ರಗಳಲ್ಲಿ ನಟಿಸಿರುವ ಅನಂತ್ ನಾಗ್ ಅವರಿಗೆ ಪಾತ್ರ ಯಾವುದಾದರೂ ಅದರಲ್ಲಿ ತಲ್ಲೀನಗೊಳ್ಳುವುದು ಹೂವೆತ್ತಿದಷ್ಟೆ ಅನಾಯಾಸ.

ಕಳೆದ ಅರ್ಧ ಶತಮಾನದಿಂದಲೂ (1973 ಮೊದಲ ಸಿನಿಮಾ) ಚಿತ್ರರಂಗದಲ್ಲಿ ಸಕ್ರಿಯರಾಗಿರುವ ಈಗಲೂ ಸಹ ಸಿನಿಮಾಗಳಲ್ಲಿ ನಟಿಸುತ್ತಿರುವ ಅನಂತ್ ನಾಗ್ ಅವರು ತಮ್ಮ ಜೀವನದ ಅರ್ಧಕ್ಕಿಂತಲೂ ಹೆಚ್ಚಿನ ಭಾಗವನ್ನು ಕಲಾ ಸೇವೆಗಾಗಿ ಮೀಸಲಿಟ್ಟ ಅನಂತ್ ನಾಗ್ ಅವರಿಗೆ ಇದೀಗ ಭಾರತ ಸರ್ಕಾರವು ಸಿನಿಮಾ ಕಲಾವಿದರಿಗೆ ನೀಡಲಾಗುವ ಶ್ರೇಷ್ಠ ಗೌರವವಾದ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಯ ಮೂಲಕ ಗೌರವಿಸಲು ಮುಂದಾಗಿರುವುದು ದಶಕಗಳಿಂದಲೂ ಈ ಕಲಾಜೀವಿಗೆ ಸಂದಾಯವಾಗಬೇಕಿದ್ದ ಗೌರವದ ಬಾಕಿಯನ್ನು ಮುಟ್ಟಿಸಿದಂತಾಗಿದೆ.

ಭಟ್ಕಳದ ಶಿರಾಲಿಯಲ್ಲಿ, ಸ್ವಾತಂತ್ರ್ಯ ಬಂದ ಮರುವರ್ಷ (1948) ಜನಿಸಿದ ಅನಂತ್ ನಾಗ್ ಅವರ ಬಾಲ್ಯದ ಹೆಸರು ಅನಂತ್ ನಾಗರಕಟ್ಟೆ. ವಯಸ್ಸು 16 ಆಗುವ ಮುನ್ನವೇ ಮುಂಬೈಗೆ ಕಳಿಸಲ್ಪಟ್ಟ ಅನಂತ್ ಅಲ್ಲಿ ಶಿಕ್ಷಣ ಮುಂದುವರೆಸಿದರು. ಅನಂತ್ ಅವರಿಗೆ ಸೈನ್ಯ ಸೇರಬೇಕು ವಿಶೇಷವಾಗಿ ವಾಯು ಸೇನೆಗೆ ಸೇರುವ ಬಯಕೆ ಇತ್ತು. ಆದರೆ ಅವರ ಕೃಷ ದೇಹದ ಕಾರಣ ಆ ಕನಸು ನನಸಾಗಲಿಲ್ಲ. ಆದರೆ ಸ್ಪುರದ್ರೂಪಿಯಾಗಿದ್ದ ಅವರನ್ನು ರಂಗಭೂಮಿ ಸೆಳೆಯಿತು. ಮಹಾರಾಷ್ಟ್ರದಾದ್ಯಂತ ವಿಶೇಷವಾಗಿ ಮುಂಬೈನಲ್ಲಿ ಆಧುನಿಕ ರಂಗಭೂಮಿಯ ಚಳವಳಿಯೇ ನಡೆಯುತ್ತಿದ್ದ ಸಮಯವದು. ಅನಂತ್ ನಾಗ್ ಅವರು ಅಮೋಲ್ ಪಾಲೇಕರ್ ಸೇರಿದಂತೆ ಹಲವು ದಿಗ್ಗಜರ ನಾಟಕಗಳಲ್ಲಿ ನಟಿಸಿದರು. ಹಿಂದಿ, ಕನ್ನಡ, ಕೊಂಕಣಿ, ಮರಾಠಿ ಹೀಗೆ ಭಾಷೆಯ ಹಂಗಿಲ್ಲದೆ ಸಿಕ್ಕ ಅವಕಾಶಗಳನ್ನೆಲ್ಲ ಬಾಚಿಕೊಂಡರು.

ಇದನ್ನೂ ಓದಿ:ಶಂಕರ್​ ನಾಗ್​​ಗೆ ಅಣ್ಣ ಮಾತ್ರ ಅಲ್ಲ, ಸಾಕು ತಂದೆಯೂ ಆಗಿದ್ದ ಅನಂತ್ ನಾಗ್

1973ರಲ್ಲಿ ಮೊದಲ ಸಿನಿಮಾನಲ್ಲಿ ಅನಂತ್ ನಾಗ್ ನಟಿಸುವಷ್ಟರಲ್ಲೇ ನಟನೆಯ ಎಲ್ಲ ಪಟ್ಟುಗಳು ಅವರಿಗೆ ಕರಗತ ಆಗಿಬಿಟ್ಟಿದ್ದವು. ಸುಮಾರು 70ಕ್ಕೂ ಹೆಚ್ಚು ನಾಟಕಗಳಲ್ಲಿ ಅವರು ಅದಾಗಲೇ ನಟಿಸಿಬಿಟ್ಟಿದ್ದರು. ಚಿತ್ರರಂಗಕ್ಕೆ ಕಾಲಿರಿಸಿದ ಆರಂಭದಲ್ಲಿ ಹೊಸ ಅಲೆಯ ನಾಯಕ ಎನಿಸಿಕೊಂಡಿದ್ದ ಅನಂತ್ ನಾಗ್ ಶ್ಯಾಮ್ ಬೆನಗಲ್, ಅಮೋಲ್ ಪಾಲೇಕರ್, ಶಬಾನಾ ಆಜ್ಮಿ ಇನ್ನೂ ಹಲವರೊಟ್ಟಿಗೆ ಕೆಲಸ ಮಾಡಿದರು. 1974 ರಿಂದ 78ರ ವರೆಗೆ ಕನ್ನಡದ ಜೊತೆ-ಜೊತೆಗೆ ಹಿಂದಿ ಮತ್ತು ತೆಲುಗು ಸಿನಿಮಾಗಳಲ್ಲಿಯೂ ಅನಂತ್ ನಾಗ್ ಕೆಲಸ ಮಾಡಿದರು. ಅವರ ಮೊದಲ ಹಿಂದಿ ಸಿನಿಮಾ ‘ಅಂಕುರ್’ಗೆ ಬರೋಬ್ಬರಿ ಮೂರು ರಾಷ್ಟ್ರಪ್ರಶಸ್ತಿಗಳು ಧಕ್ಕಿದ್ದವು.

ಚಿತ್ರರಂಗಕ್ಕೆ ಕಾಲಿರಿಸಿದ ಕೆಲವೇ ವರ್ಷಗಳಲ್ಲಿ ಸ್ಟಾರ್ ಆಗಿ ಬಿಟ್ಟರು ಅನಂತ್ ನಾಗ್, ರೊಮ್ಯಾಂಟಿಕ್ ಪಾತ್ರವಾದರೆ ಅನಂತ್ ನಾಗ್ ಅವರೇ ಹೀರೋ ಎನ್ನುವಷ್ಟರ ಮಟ್ಟಿಗೆ ಆರಂಭದಲ್ಲಿಯೇ ಬ್ರ್ಯಾಂಡ್ ಆಗಿಬಿಟ್ಟರು. ಚಿತ್ರರಂಗ ಅವರನ್ನು ನಿರ್ದಿಷ್ಟ ಜಾನರ್​​ಗೆ ಬ್ರ್ಯಾಂಡ್ ಮಾಡಲು ಯತ್ನಿಸಿತಾದರೂ ಅನಂತ್ ನಾಗ್ ಯಾವ ಸಿದ್ಧ ಸೂತ್ರಕ್ಕೂ ಒಳಪಡದೆ ನಟನೆಗೆ ಅವಕಾಶವಿದ್ದ ಎಲ್ಲ ರೀತಿಯ ಪಾತ್ರಗಳನ್ನೂ ಒಪ್ಪಿಕೊಂಡರು, ಕನ್ನಡ ಪ್ರೇಕ್ಷಕರನ್ನು ಅವರನ್ನು ಅಪ್ಪಿಕೊಂಡರು.

ಆರಂಭದಲ್ಲಿ ಲವ್ವರ್ ಬಾಯ್ ರೀತಿಯ ಅನೇಕ ಪಾತ್ರಗಳ ಜೊತೆ-ಜೊತೆಗೆ ‘ಕನ್ನೇಶ್ವರ ರಾಮ’, ‘ಹಂಸಗೀತೆ’ ಅಂಥಹಾ ಸಂಪೂರ್ಣ ಭಿನ್ನ ರೀತಿಯ ಸಿನಿಮಾಗಳಲ್ಲಿಯೂ ಅನಂತ್ ನಾಗ್ ನಟಿಸಿದರು. ಮಾತ್ರವಲ್ಲದೆ ಮುಖ್ಯವಾಹಿನಿ ಸಿನಿಮಾಗಳಲ್ಲಿ ಸ್ಟಾರ್​​ಗಿರಿ ಸಿಕ್ಕ ಮೇಲೂ ಸಹ ಪ್ರಯೋಗಾತ್ಮಕ ಚಿತ್ರಗಳಲ್ಲಿ ನಟಿಸುವುದನ್ನೂ ಅವರು ಎಂದಿಗೂ ನಿಲ್ಲಿಸಲಿಲ್ಲ. ಆಗಲೂ ಅಷ್ಟೆ, ಈಗಲೂ ಅಷ್ಟೆ. ಅವರ ಈ ನಟನಾ ಚಾಂಚಲ್ಯದಿಂದಲೇ ‘ನಾ ನಿನ್ನ ಬಿಡಲಾರೆ’ ಅಂಥಹಾ ಹಾರರ್, ‘ಕನ್ನೇಶ್ವರ ರಾಮ’ ಅಂಥಹಾ ಪೌರಾಣಿಕ, ‘ಮಾತು ತಪ್ಪದ ಮಗ’ ಅಂಥಹಾ ಸಾಮಾಜಿಕ, ‘ಗಣೇಶ’ ಸರಣಿ ಮೂಲಕ ಹಾಸ್ಯ, ‘ಶಾಂತಿ-ಕ್ರಾಂತಿ’ಯ ವಿಲನ್ ಹೀಗೆ ಹಲವಾರು ಜಾನರ್​​ನ ಸಿನಿಮಾಗಳಲ್ಲಿ ಅನಂತ್ ನಾಗ್ ನಟಿಸಿದ್ದು ಮತ್ತು ರಂಜಿಸಿದ್ದು.

ಅನಂತ್ ನಾಗ್ ಅವರು ಪ್ರತಿಭಾವಂತ ನಟ ಆಗಿರುವ ಜೊತೆಗೆ ದಣಿವರಿಯದ ನಟರೂ ಹೌದು. 70-80ರ ದಶಕದ ನಟರು ಬಹುತೇಕ ಸಿನಿಮಾ ರಂಗದಿಂದ ದೂರವಾಗಿ ವಿಶ್ರಾಂತ ಜೀವನಕ್ಕೆ ತಮ್ಮನ್ನು ಸೀಮಿತಗೊಳಿಸಿಕೊಂಡಿರುವಾಗ ಅನಂತ್ ನಾಗ್ ಮಾತ್ರ ಇನ್ನೂ ಸಿನಿಮಾ ರಂಗದಲ್ಲಿ ಸಕ್ರಿಯರಾಗಿದ್ದಾರೆ. ಈಗಲೂ ಪ್ರತಿ ದಿನ ಹೊಸ ಕತೆಗಳನ್ನು ಕೇಳುತ್ತಾರೆ. ಸಿನಿಮಾಗಳಲ್ಲಿ ನಟನೆ ಮಾಡುತ್ತಾರೆ. ಅವರಿಗೆ 75 ಆಗಿದ್ದಾಗ ನೀಡಿದ ಸಂದರ್ಶನವೊಂದರಲ್ಲಿ ಮಾತನಾಡದ್ದ ಅವರು ‘ಈಗಲೂ ಪ್ರತಿ ದಿನ ಕತೆ ಕೇಳುತ್ತೇನೆ, ಆದರೆ ಚಿತ್ರಕತೆಯ ಆಯ್ಕೆಯಲ್ಲಿ ಹೆಚ್ಚು ಚ್ಯೂಸಿ ಆಗಿದ್ದೇನೆ. ಪ್ರಮುಖ ಪಾತ್ರ ಇರಬೇಕೆಂದಲ್ಲ, ಇಡೀ ಸಿನಿಮಾನಲ್ಲಿ ಅಶ್ಲೀಲತೆ ಇರಬಾರದು, ಸಮಾಜಕ್ಕೆ ಕೆಟ್ಟ ಸಂದೇಶ ಇರಬಾರದು’ ಎಂದಿದ್ದರು. ಇದು ಅನಂತ್ ನಾಗ್ ಅವರು ಎಂಥಹಾ ಸಮಾಜಪರ ಕಾಳಜಿಯುಳ್ಳ ನಟ ಎಂಬುದನ್ನು ತೋರಿಸುತ್ತದೆ.

ಅಂದಹಾಗೆ ಅನಂತ್ ನಾಗ್ ಅವರು ಕೇವಲ ನಟರು ಮಾತ್ರವೇ ಅಲ್ಲ. ಅವರು ನಿರ್ಮಾಪಕರು ಹೌದು, ಸಾಹಸಿ ಉದ್ಯಮಿಯೂ ಹೌದು ಮತ್ತು ರಾಜಕಾರಣಿಯೂ ಹೌದು. ಅನಂತ್ ನಾಗ್ ಅವರು ಎಂಎಲ್​​ಸಿ ಆಗಿ, ಬೆಂಗಳೂರು ಅಭಿವೃದ್ಧಿ ಸಚಿವರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ. ಜೆಎಚ್ ಪಟೇಲರ ಸಮಯದಲ್ಲಿ ರಾಜಕೀಯದಲ್ಲಿ ಸಕ್ರಿಯರಾಗಿದ್ದರು ಅನಂತ್ ನಾಗ್. ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಮಾಜಿ ಸಿಎಂ, ದಿವಂಗತ ಎಸ್​​ಎಂ ಕೃಷ್ಣ ಎದುರು ಸ್ಪರ್ಧೆ ಸಹ ಮಾಡಿದ್ದರು. 2023ರಲ್ಲಿ ಅನಂತ್ ನಾಗ್ ಅವರು ಬಿಜೆಪಿ ಸೇರಲಿದ್ದಾರೆ ಎಂದು ಸುದ್ದಿ ಹರಿದಾಡಿತ್ತು. ಆದರೆ ಅದು ನಿಜವಾಗಲಿಲ್ಲ.

ಅನಂತ್ ನಾಗ್ ಅವರು ಸುಮಾರು 300 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟನೆ ಮಾಡಿದ್ದಾರೆ. ಆದರೆ ದಶಕದ ಹಿಂದಷ್ಟೆ ಸಿನಿಮಾ ರಂಗ ಪ್ರವೇಶಿಸಿದವರಿಗೆಲ್ಲ ಪದ್ಮ ಪ್ರಶಸ್ತಿಗಳು ಸಿಕ್ಕಾಗ ಕನ್ನಡಿಗರು ಸಹಜವಾಗಿಯೇ ಅಸಮಾಧಾನ ವ್ಯಕ್ತಪಡಿಸಿದ್ದರು. ಕೊನೆಗೆ ಅನಂತ್ ನಾಗ್ ಅವರಿಗೆ 2025 ರಲ್ಲಿ ಕೇಂದ್ರ ಸರ್ಕಾರವು ಪದ್ಮ ಭೂಷಣ ಪ್ರಶಸ್ತಿ ನೀಡಿತು. ಅದಾದ ಮರು ವರ್ಷವೇ ಚಿತ್ರರಂಗದ ಅತ್ಯುನ್ನತ ಮತ್ತು ಸುದೀರ್ಘ ಸೇವೆಗೆ ಕೊಡಮಾಡುವ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ಕೇಂದ್ರ ಸರ್ಕಾರವು ಅನಂತ್ ನಾಗ್ ಅವರಿಗೆ ನೀಡಿ ಗೌರವಿಸಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 7:10 pm, Wed, 16 September 26

Loading...
Unable to load recommendations.
Follow Us