ಬಾಕ್ಸ್ ಆಫೀಸ್​​ನಲ್ಲಿ ‘ಬೇಲ್’ ಕಮಾಲ್, ಎರಡು ವಾರಾಂತ್ಯದ ಬಳಿಕವೂ ತಗ್ಗದ ಅಬ್ಬರ

ಶಿವರಾಜ್ ಕುಮಾರ್ ಪ್ರಮುಖ ಪಾತ್ರದಲ್ಲಿ ನಟನೆ ಮಾಡಿರುವ ‘ಬೇಲ್’ ಸಿನಿಮಾ ಅಕ್ಟೋಬರ್ 2ರ ಗಾಂಧಿ ಜಯಂತಿಯಂತು ರಿಲೀಸ್ ಆಗಿ ಎರಡು ವಾರಾಂತ್ಯಗಳ ಬಳಿಕವೂ ಒಳ್ಳೆಯ ಪ್ರದರ್ಶನವನ್ನು ಚಿತ್ರಮಂದಿರಗಳಲ್ಲಿ ತೋರುತ್ತಿದೆ. ಪ್ರೇಕ್ಷಕರು ತಂಡೋಪತಂಡವಾಗಿ ಚಿತ್ರಮಂದಿರಕ್ಕೆ ಧಾವಿಸುತ್ತಿದ್ದು, ಶಿವರಾಜ್ ಕುಮಾರ್ ಸಿನಿಮಾ ಅನ್ನು ನೋಡಿ ಸಂಭ್ರಮಿಸುತ್ತಿದ್ದಾರೆ.

ಬಾಕ್ಸ್ ಆಫೀಸ್​​ನಲ್ಲಿ ‘ಬೇಲ್’ ಕಮಾಲ್, ಎರಡು ವಾರಾಂತ್ಯದ ಬಳಿಕವೂ ತಗ್ಗದ ಅಬ್ಬರ
Shiva Rajkumar Bail

Updated on: Oct 24, 2026 | 3:48 PM

ಮುಖ್ಯಾಂಶಗಳು

  • ಶಿವಣ್ಣ ‘ಬೇಲ್’ ಸಿನಿಮಾ ಭರ್ಜರಿ ಪ್ರದರ್ಶನ
  • ರಾಜ್ಯದಾದ್ಯಂತ ಹೌಸ್​ಫುಲ್ ಶೋ ನೀಡುತ್ತಿರುವ ‘ಬೇಲ್’
  • ಮೂರನೇ ವಾರದಲ್ಲೂ ಅಬ್ಬರಿಸುತ್ತಿರುವ ‘ಬೇಲ್’ ಸಿನಿಮಾ

ಶಿವರಾಜ್‌ಕುಮಾರ್ ನಟನೆಯ ‘ಬೇಲ್’ ಸಿನಿಮಾ, ಗಾಂಧಿ ಜಯಂತಿಯಂದು ಬಿಡುಗಡೆ ಆಗಿ ಭರ್ಜರಿ ಆರಂಭ ಪಡೆದಿತ್ತು. ಇದೀಗ ಮೂರು ವಾರದಲ್ಲೂ ಚಿತ್ರಮಂದಿರಗಳಲ್ಲಿ ಅದೇ ಭರ್ಜರಿ ಓಟವನ್ನು ಮುಂದುವರಿಸಿದೆ. ರಾಜ್ಯದಾದ್ಯಂತ ಪ್ರೇಕ್ಷಕರು ಸಿನಿಮಾ ನೋಡಲು ಚಿತ್ರಮಂದಿರಗಳತ್ತ ಧಾವಿಸಿ ಬರುತ್ತಿದ್ದು, ವಿಶೇಷವಾಗಿ ಸಂಜೆಯ ಪ್ರದರ್ಶನಗಳಿಗೆ ಅತ್ಯುತ್ತಮ ಪ್ರತಿಕ್ರಿಯೆ ದೊರಕುತ್ತಿದೆ. ಬೆಂಗಳೂರು, ಮೈಸೂರು, ಮಂಗಳೂರು, ಹುಬ್ಬಳ್ಳಿ ಸೇರಿದಂತೆ ಹಲವು ನಗರಗಳ ಸಿಂಗಲ್ ಸ್ಕ್ರೀನ್ ಹಾಗೂ ಮಲ್ಟಿಪ್ಲೆಕ್ಸ್‌ಗಳಲ್ಲಿ ವಾರದ ದಿನಗಳಲ್ಲೂ ಉತ್ತಮ ಜನಸಂದಣಿ ಕಾಣುತ್ತಿರುವುದು ವಿಶೇಷ. ಕೆಲವೆಡೆ ಹೆಚ್ಚಿನ ಪ್ರದರ್ಶನಗಳನ್ನು ಸಹ ಪ್ರದರ್ಶಿಸಲಾಗುತ್ತಿದೆ.

ಸಿನಿಮಾ ರಿಲೀಸ್​​ಗೆ ಮುಂಚೆ ಶಿವರಾಜ್ ಕುಮಾರ್ ಸೇರಿದಂತೆ ಚಿತ್ರದ ತಾರಾಗಣ, ನಿರ್ದೇಶಕರುಗಳು ಒಳ್ಳೆಯ ಪ್ರಚಾರ ಮಾಡಿದ್ದರು. ಆದರೆ ಸಿನಿಮಾ ಬಿಡುಗಡೆ ಆದ ಬಳಿಕ ಪ್ರೇಕ್ಷಕರು ನೀಡಿದ ಬಾಯಿಮಾತಿನ ಪ್ರಚಾರ ಸಿನಿಮಾ ಅನ್ನು ಚಿತ್ರಮಂದಿರಗಳಲ್ಲಿ ಜೀವಂತವಾಗಿರಿಸಿದೆ. ಸಿನಿಮಾ ಬಿಡುಗಡೆ ಆದ ಮೊದಲ ವಾರದಲ್ಲಿ ಚಿತ್ರ ನೋಡಿದವರು ಇತರರಿಗೆ ಶಿಫಾರಸು ಮಾಡುತ್ತಿದ್ದಾರೆ, ಅದು ವಾರದ ದಿನಗಳ ಕಲೆಕ್ಷನ್‌ನಲ್ಲಿ ಎದ್ದು ಕಾಣುತ್ತಿದೆ. ಅಭಿಮಾನಿಗಳ ಜೊತೆಗೆ ಕುಟುಂಬ ಸಮೇತ ಬರುವ ಪ್ರೇಕ್ಷಕರೂ ಹೆಚ್ಚಾಗಿದ್ದಾರೆ. ಹಬ್ಬದ ಸಂದರ್ಭದ ಸಾಮಾನ್ಯ ಬಿಡುಗಡೆಯಲ್ಲದ ಚಿತ್ರಕ್ಕೆ ಇದು ಶುಭ ಲಕ್ಷಣ ಎನ್ನುತ್ತಿದೆ ಚಿತ್ರತಂಡ.

ಶಿವರಾಜ್ ಕುಮಾರ್, ಕನ್ನಡದ ಸ್ಟಾರ್ ನಟ. ಸಹಜವಾಗಿಯೇ ಅಭಿಮಾನಿಗಳು ಅವರ ಸಿನಿಮಾ ಅನ್ನು ಸಂಭ್ರಮಿಸುತ್ತಿದ್ದಾರೆ. ಶಿವರಾಜ್ ಕುಮಾರ್, ಸಾಯಿ ಕುಮಾರ್, ಜಯರಾಂ, ಲೂಸ್ ಮಾದ ಯೋಗಿ, ದೀಕ್ಷಿತ್ ಅವರ ನಟನೆ, ಡೈಲಾಗ್​​ಗಳಿಗೆ, ಆಕ್ಷನ್ ದೃಶ್ಯಗಳಿಗೆ ಪ್ರೇಕ್ಷಕರು ಅದ್ಭುತವಾಗಿ ಸ್ಪಂದಿಸುತ್ತಿದ್ದು, ಚಿತ್ರಮಂದಿರಗಳಲ್ಲಿ ಶಿಳ್ಳೆ, ಚಪ್ಪಾಳೆಗಳ ಸುರಿಮಳೆ ಆಗುತ್ತಿದೆ. ಅದರಲ್ಲಿಯೂ ಶಿವಣ್ಣ ತೆರೆ ಮೇಲೆ ಕಂಡಾಗಲೆಲ್ಲ ಚಿತ್ರಮಂದಿರದ ಒಳಗೆ ಹಬ್ಬದ ವಾತಾವರಣವೇ ಸೃಷ್ಟಿಯಾಗುತ್ತಿದೆ.

ಇದನ್ನೂ ಓದಿ:Bail Movie Review: ದುಷ್ಟರ ಸಂಹಾರಕ್ಕೆ ಪರ್ಯಾಯ ಮಾರ್ಗ ತೋರಿಸಿದ ‘ಬೇಲ್’ ಸಿನಿಮಾ

ವಿಶೇವಾಗಿ ‘ಶಿವಣ್ಣ ಆಂಥಮ್’ ಹಾಡು ಬಂದಾಗಲಂತೂ ಅಭಿಮಾನಿಗಳು ಕುಣಿಯುವುದು, ಮೊಬೈಲ್​​ಗಳಲ್ಲಿ ದೃಶ್ಯಗಳನ್ನು ಕ್ಯಾಪ್ಚರ್ ಮಾಡುವುದು ಎಲ್ಲ ಚಿತ್ರಮಂದಿರಗಳಲ್ಲಿ ಸಾಮಾನ್ಯ ಆಗಿಬಿಟ್ಟಿದೆ. ಈ ಹಾಡು ಈಗಾಗಲೇ ವಿವಿಧ ವೇದಿಕೆಗಳಲ್ಲಿ ಹತ್ತು ಲಕ್ಷ ವೀಕ್ಷಣೆಗಳ ಗಡಿ ದಾಟಿದೆ. ‘ಕಮ್ಲಿ ಕಮ್ಲಿ’ ಹಾಡಿಗೂ ಉತ್ತಮ ಸ್ಪಂದನೆ ಸಿಕ್ಕಿದ್ದು, ಶೋ ಮುಗಿದ ಮೇಲೆ ಥಿಯೇಟರ್ ಹೊರಗೇ ಅಭಿಮಾನಿಗಳು ಕುಣಿದು ಆ ವೀಡಿಯೊಗಳನ್ನು ಆನ್‌ಲೈನ್‌ನಲ್ಲಿ ಹಂಚಿಕೊಳ್ಳುತ್ತಿದ್ದಾರೆ.

ಆರಂಭದ ದಿನಗಳಲ್ಲಿ ‘ಬೇಲ್’ ಸಿನಿಮಾ ಸುಮಾರು ₹5 ಕೋಟಿ ಗಳಿಕೆ ದಾಖಲಿಸಿತ್ತು. ಸಾಕಷ್ಟು ಸ್ಪರ್ಧೆಯ ನಡುವೆಯೂ ಇದು ಬಹಳ ಒಳ್ಳೆಯ ಗಳಿಕೆ. ಎರಡನೇ ವಾರದ ಅಂತ್ಯಕ್ಕೆ ಸಿನಿಮಾ 10 ಕೋಟಿ ಗಳಿಕೆಯನ್ನು ದಾಟಿದ್ದು, ಇನ್ನೂ ಒಳ್ಳೆಯ ಗಳಿಕೆಯನ್ನು ನಿರೀಕ್ಷಿಸಲಾಗುತ್ತಿದೆ. ಸಾಮಾನ್ಯವಾಗಿ ಯಾವುದೇ ಸಿನಿಮಾಗಳು ಮೊದಲ ವೀಕೆಂಡ್ ಬಳಿಕ ಮುಗ್ಗರಿಸುತ್ತವೆ. ಆದರೆ ‘ಬೇಲ್’ ಸಿನಿಮಾ ವಾರದ ದಿನಗಳಲ್ಲಿಯೂ ಬಾಕ್ಸ್ ಆಫೀಸ್​​ ಮೇಲೆ ಹಿಡಿತ ಸಾಧಿಸಿಕೊಂಡಿದೆ. ದೊಡ್ಡ ಓಪನಿಂಗ್ ಪಡೆದು ಸೋಮವಾರಕ್ಕೇ ಕುಸಿಯುವ ಚಿತ್ರಗಳು ಮತ್ತೆ ಚೇತರಿಸಿಕೊಳ್ಳುವುದು ಅಪರೂಪ. ‘ಬೇಲ್’ ಸಿನಿಮಾ ಅದಕ್ಕೆ ಅಪವಾದ. ವಾರವಿಡೀ ಥಿಯೇಟರ್‌ಗಳನ್ನು ಬ್ಯುಸಿಯಾಗಿಟ್ಟುಕೊಂಡಿದೆ. ಹಲವು ವೇದಿಕೆಗಳಲ್ಲಿ ಪ್ರೇಕ್ಷಕರ ರೇಟಿಂಗ್ 10ರಲ್ಲಿ ಸುಮಾರು 9ರ ಹತ್ತಿರ ತಲುಪಿದೆ. ವಿಮರ್ಶಕರು ಹಾಗೂ ಪ್ರೇಕ್ಷಕರಿಂದಲೂ ಸಿನಿಮಾಕ್ಕೆ ಧನಾತ್ಮಕ ಪ್ರತಿಕ್ರಿಯ ದೊರೆತಿದೆ.

ವ್ಯವಸ್ಥೆಯ ಮೇಲಿನ ನಂಬಿಕೆ ಕಳೆದುಕೊಂಡು, ತಾನು ಜೀವನವಿಡೀ ರಕ್ಷಿಸಿದ ಕಾನೂನನ್ನೇ ಮೀರಿ ಹೆಜ್ಜೆ ಇಡುವ ನಿವೃತ್ತ ಪೊಲೀಸ್ ಕಮಿಷನರ್ ವಿಜಯ್ ಕುಮಾರ್ (ಶಿವರಾಜ್ ಕುಮಾರ್) ಕಥೆ ಇದು. ಪೊಲೀಸ್ ಚಿತ್ರಗಳಲ್ಲಿ ಇದು ಪರಿಚಿತ ಎಳೆಯೇ ಆದರೂ, ಅದನ್ನು ನಿರೂಪಿಸಿರುವ ರೀತಿ ಬೇರೆಯಾಗಿದೆ. ಕೊಲೆ ರಹಸ್ಯಕ್ಕೆ ಸಾಕಷ್ಟು ಸಮಯ ನೀಡಿ ನಿಧಾನವಾಗಿ ಬಿಚ್ಚಿಡಲಾಗಿದೆ. ಆ್ಯಕ್ಷನ್ ದೃಶ್ಯಗಳನ್ನು ತುರುಕದೆ, ಸನ್ನಿವೇಶಗಳ ಅವಶ್ಯಕತೆಗೆ ತಕ್ಕಂತೆ ರೂಪಿಸಲಾಗಿದೆ.

ಶಿವರಾಜ್‌ಕುಮಾರ್, ಹಲವು ಬಾರಿ ಪೊಲೀಸ್ ಪಾತ್ರ ನಿರ್ವಹಿಸಿದ್ದಾರೆ, ಹಾಗಾಗಿ ಈ ಪಾತ್ರವನ್ನು ಹೊಸದಾಗಿ ನಿರ್ದೇಶಕರು ತೋರಿಸುವ ಪ್ರಯತ್ನ ಮಾಡಿದ್ದಾರೆ. ಶಿವರಾಜ್ ಕುಮಾರ್ ಸಹ ಸಂಯಮದ ಅಭಿನಯದ ಮೂಲಕ ಸಾಧಿಸಿದ್ದಾರೆ. ಕೆಲಸದಲ್ಲಿ ಕಟ್ಟುನಿಟ್ಟು, ಮನೆಯಲ್ಲಿ ಮೃದು ಸ್ವಭಾವದ ವ್ಯಕ್ತಿಯಾಗಿ ಅವರು ಕಾಣಿಸಿಕೊಂಡಿದ್ದಾರೆ. ಶಿವರಾಜ್‌ಕುಮಾರ್, ಸಾಯಿಕುಮಾರ್ ಮತ್ತು ಜಯರಾಮ್ ಮೂವರೂ ಚಿತ್ರದಲ್ಲಿ ತೆರೆ ಹಂಚಿಕೊಂಡಿದ್ದು, ಅವರ ಜೊತೆಯ ದೃಶ್ಯಗಳೇ ಚಿತ್ರದ ದೊಡ್ಡ ಆಕರ್ಷಣೆಗಳಲ್ಲಿ ಒಂದಾಗಿವೆ. ಪ್ರತಿಯೊಬ್ಬರೂ ತಮ್ಮದೇ ಆದ ಶೈಲಿಯನ್ನು ಚಿತ್ರಕ್ಕೆ ತಂದಿದ್ದಾರೆ. ಈ ಮೂವರ ದೃಶ್ಯಗಳು ವೀಕ್ಷಕರಿಗೆ ಮುದ ನೀಡುತ್ತವೆ.

ಇದನ್ನೂ ಓದಿ:ಬಿಡುಗಡೆ ಆಯ್ತು ಶಿವಣ್ಣನ ‘ಬೇಲ್’ ಸಿನಿಮಾ ಟ್ರೈಲರ್

ಬಹಳ ಕಾಲದ ನಂತರ ಕನ್ನಡ ಚಿತ್ರರಂಗಕ್ಕೆ ಮರಳಿರುವ ಸಂಗೀತಾ ಅವರು ಸಹಜವಾಗಿ ಪಾತ್ರದಲ್ಲಿ ಬೆರೆತುಹೋಗಿದ್ದಾರೆ. ವಿಜಯ್ ಕುಮಾರ್ ಅವರ ಮಗಳ ಪಾತ್ರದಲ್ಲಿ ಪದಾರ್ಪಣೆ ಮಾಡಿರುವ ರೂಪಾಲಿ ಸೂದ್ ಆತ್ಮವಿಶ್ವಾಸದ ನಟನೆ ನೀಡಿದ್ದಾರೆ. ಪವನ್ ಒಡೆಯರ್ ಅವರ ನಿರ್ದೇಶನ ಕಥೆಯನ್ನೇ ಮುಂಚೂಣಿಯಲ್ಲಿಟ್ಟಿದ್ದು, ಅಜನೀಶ್ ಲೋಕನಾಥ್ ಅವರ ಹಿನ್ನೆಲೆ ಸಂಗೀತ ಪ್ರಮುಖ ಕ್ಷಣಗಳಿಗೆ ಬಲ ನೀಡಿದೆ. ಮಾಸ್ ಎಂಟರ್‌ಟೈನರ್‌ಗೆ ಬೇಕಾದ ಅಂಶಗಳು ‘ಬೇಲ್’ನಲ್ಲಿವೆ, ಅದನ್ನೂ ಕಾಳಜಿಯಿಂದ ರೂಪಿಸಲಾಗಿದೆ. ಚಿತ್ರ ಎಷ್ಟು ದೂರ ಸಾಗುತ್ತದೆ ಎಂಬುದನ್ನು ಎರಡನೇ ವಾರಾಂತ್ಯ ತೋರಿಸಲಿದೆ. ಸದ್ಯಕ್ಕೆ ಥಿಯೇಟರ್‌ಗಳು ತುಂಬಿವೆ, ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ, ಚಿತ್ರ ಉತ್ತಮ ಪ್ರದರ್ಶನ ಕಾಣುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
Loading...
Unable to load recommendations.
Follow Us