ನಟ ಪುನೀತ್ ರಾಜ್ಕುಮಾರ್ (Puneeth Rajkumar) ನಿಧನದ ನಂತರದಲ್ಲಿ ಅವರನ್ನು ಬೇರೆ ಬೇರೆ ರೀತಿಯಲ್ಲಿ ನೆನಪಿಸಿಕೊಳ್ಳುವ ಕಾರ್ಯ ಆಗುತ್ತಿದೆ. ರಸ್ತೆ, ವೃತ್ತ, ಪಾರ್ಕ್ಗೆ ಪುನೀತ್ ರಾಜ್ಕುಮಾರ್ ಅವರ ಹೆಸರನ್ನು ಇಡಲಾಗುತ್ತಿದೆ. ಮೈಸೂರು ರಸ್ತೆಯಿಂದ ಬನ್ನೇರುಘಟ್ಟವರೆಗಿನ ರಸ್ತೆಗೆ ಪುನೀತ್ ಹೆಸರು ಇಡುವ ಪ್ರಸ್ತಾವನೆಗೆ ಒಪ್ಪಿಗೆ ಸಿಕ್ಕಿತ್ತು. ಮಂಗಳವಾರ (ಫೆ.7) ಈ ರಸ್ತೆ ಉದ್ಘಾಟನೆಗೊಳ್ಳಲಿದೆ. ಈ ಬಗ್ಗೆ ಬೆಂಗಳೂರಿನಲ್ಲಿ ಕಂದಾಯ ಇಲಾಖೆ ಸಚಿವ ಆರ್. ಅಶೋಕ್ (R Ashok) ಮಾಹಿತಿ ನೀಡಿದ್ದಾರೆ.
ಫೆಬ್ರವರಿ 7ರಂದು ಸಂಜೆ 6 ಗಂಟೆಗೆ ಪದ್ಮನಾಭನಗರದಲ್ಲಿ ಉದ್ಘಾಟನಾ ಸಮಾರಂಭ ನಡೆಯಲಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ರಸ್ತೆಯನ್ನು ಉದ್ಘಾಟನೆ ಮಾಡಲಿದ್ದಾರೆ. ‘ಪುನೀತ್ ರಾಜ್ಕುಮಾರ್ ಸಾಮಾಜಿಕ ಕೆಲಸ ಮಾಡಿದ ಹೃದಯವಂತ. ಕಾರ್ಯಕ್ರಮದಲ್ಲಿ ಶಿವರಾಜ್ಕುಮಾರ್, ರಾಘವೇಂದ್ರ ರಾಜ್ಕುಮಾರ್ ಸೇರಿ ಅನೇಕರು ಭಾಗಿ ಆಗುತ್ತಿದ್ದಾರೆ. ಪುನೀತ್ ಪತ್ನಿ ಅಶ್ವಿನಿಯವರು ಕೂಡ ಪಾಲ್ಗೊಳ್ಳುತ್ತಾರೆ’ ಎಂದು ಆರ್.ಅಶೋಕ್ ಹೇಳಿದ್ದಾರೆ.
‘ಪುನೀತ್ ಅವರನ್ನು ಕೆಲವರು ದೇವರು ಅಂತ ಕರೀತಾರೆ. ಜಾಹೀರಾತಿಗೆ ಸ್ಟಾರ್ಗಳು ಕೋಟ್ಯಾಂತರ ರೂಪಾಯಿ ತೆಗೆದುಕೊಳ್ಳುತ್ತಾರೆ. ಆದರೆ, ನಮ್ಮ ನಂದಿನಿ ಜಾಹೀರಾತಿಗೆ ಅವರು ಒಂದು ನಯಾಪೈಸಾ ತೆಗೆದುಕೊಂಡಿಲ್ಲ. ಫ್ರೀ ಆಗಿ ರಾಯಬಾರಿ ಆಗಿದ್ರು. ರೈತರ ಬೆನ್ನೆಲುಬಾಗಿ ನಾನು ಉಚಿತವಾಗಿ ಮಾಡ್ತೀನಿ ಅಂದಿದ್ರು. ಅವರ ನೆನಪು ಸದಾ ನಮ್ಮೊಂದಿಗೆ ಇರಬೇಕು ಎನ್ನುವ ಕಾರಣಕ್ಕೆ ಬೆಂಗಳೂರಿನ ರಿಂಗ್ ರಸ್ತೆಗೆ ಪುನೀತ್ ಹೆಸರು ಇಡುತ್ತಿದ್ದೇವೆ’ ಎಂದಿದ್ದಾರೆ ಆರ್. ಅಶೋಕ್.
ರೇಸ್ಕೋರ್ಸ್ ರಸ್ತೆಗೆ ಅಂಬರೀಷ್ ಅವರ ಹೆಸರು ಇಡಬೇಕು ಎಂಬುದು ಅವರ ಅಭಿಮಾನಿಗಳ ಕೋರಿಕೆ. ಈ ಸಂಬಂಧ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ಈ ಬಗ್ಗೆ ಮಾತನಾಡಿರುವ ಅಶೋಕ್ ಅವರು, ‘ಅಂಬರೀಷ್ ಅವರಿಗೂ ರೇಸ್ಕೋರ್ಸ್ ರಸ್ತೆಗೂ ಅವಿನಾಭಾವ ಸಂಬಂಧ ಇದೆ. ಈ ರಸ್ತೆಗೆ ಅಂಬರೀಷ್ ಹೆಸರು ಇಡಬೇಕು ಎಂಬ ಕೋರಿಕೆ ಬಂದಿದೆ. ಅದನ್ನು ಸಿಎಂಗೆ ತಲುಪಿಸುತ್ತೇನೆ. ಮೇನಲ್ಲಿ ನಾವೇ ಇರ್ತೀವಿ. ಆಗ ನೋಡೋಣ’ ಎಂದಿದ್ದಾರೆ ಅವರು.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ