
ದುನಿಯಾ ವಿಜಯ್, ಕನ್ನಡದ ಜನಪ್ರಿಯ ನಟರಲ್ಲಿ ಒಬ್ಬರು. ದಶಕಗಳಿಂದಲೂ ಕನ್ನಡ ಸಿನಿಮಾಗಳಲ್ಲಿ ನಟಿಸುತ್ತಾ ಬಂದಿರುವ ದುನಿಯಾ ವಿಜಯ್ ಅವರಿಗೆ ಪ್ರತ್ಯೇಕ ಅಭಿಮಾನಿ ವರ್ಗವೇ ಇದೆ. ನಿರ್ದೇಶಕರಾಗಿಯೂ ಸಹ ದುನಿಯಾ ವಿಜಯ್ ಯಶಸ್ವಿ ಆಗಿದ್ದಾರೆ. ವಿಜಯ್, ಇದೀಗ ಕನ್ನಡದ ನಟರಷ್ಟೆ ಅಲ್ಲ, ತೆಲುಗು ಮತ್ತು ತಮಿಳು ಸಿನಿಮಾಗಳಲ್ಲಿಯೂ ಸಹ ದುನಿಯಾ ವಿಜಯ್ ನಟನೆ ಮಾಡಿದ್ದಾರೆ. ಅವರ ಫಿಟ್ನೆಸ್ ಮತ್ತು ನಟನೆಗೆ ದೊಡ್ಡ ಅಭಿಮಾನಿಗಳಿದ್ದಾರೆ. ಆದರೆ ಇದೀಗ ತಮಿಳು ಚಿತ್ರರಂಗದ ನಟನೊಬ್ಬ, ದುನಿಯಾ ವಿಜಯ್ ಬಗ್ಗೆ ಕೀಳಾಗಿ ಮಾತನಾಡಿ ಅವಮಾನ ಮಾಡಿದ್ದಾರೆ.
ಇತ್ತೀಚೆಗಷ್ಟೆ ದುನಿಯಾ ವಿಜಯ್ ಅವರು ತಮಿಳಿನ ‘ಮೂಕುತ್ತಿ ಅಮ್ಮನ್ 2’ ಸಿನಿಮಾನಲ್ಲಿ ನಟನೆ ಮಾಡಿದ್ದಾರೆ. ಸಿನಿಮಾನಲ್ಲಿ ಅವರು ರಣಧೀರನ್ ಮತ್ತು ರುದ್ರಾ ಎಂಬ ಎರಡು ಪಾತ್ರಗಳಲ್ಲಿ ನಟನೆ ಮಾಡಿದ್ದಾರೆ. ದುನಿಯಾ ವಿಜಯ್ ಅವರ ನಟನೆಗೆ ಮೆಚ್ಚುಗೆ ವ್ಯಕ್ತವಾಗಿದೆ. ಆದರೆ ತಮಿಳಿನ ಹಾಸ್ಯ ನಟನೊಬ್ಬ ದುನಿಯಾ ವಿಜಯ್ ಬಗ್ಗೆ ತೀರ ಕೆಟ್ಟದಾಗಿ ಮಾತನಾಡಿದ್ದಾರೆ.
ಹಾಸ್ಯ ನಟ ಬಯಿಲ್ವಾನ್ ರಂಗನಾಥ್ ಎಂಬಾತ ಯೂಟ್ಯೂಬ್ ಪಾಡ್ಕಾಸ್ಟ್ ಒಂದರಲ್ಲಿ ‘ಮೂಕುತ್ತಿ ಅಮ್ಮನ್ 2’ ಸಿನಿಮಾ ಬಗ್ಗೆ ಮಾತನಾಡುತ್ತಾ, ವಿಜಯ್ ಅವರನ್ನು ಹಂದಿಗೆ ಹೋಲಿಕೆ ಮಾಡಿದ್ದಾರೆ. ಬಯಿಲ್ವಾನ್ ರಂಗನಾಥ್ ಕೆಲ ತಮಿಳು ಸಿನಿಮಾನಲ್ಲಿ ಹಾಸ್ಯ ನಟನಾಗಿ ನಟಿಸಿದ್ದು, ಇತ್ತೀಚೆಗೆ ಯೂಟ್ಯೂಬ್ನಲ್ಲಿ ಸಿನಿಮಾ ವಿಮರ್ಶೆ ಮಾಡುತ್ತಾರೆ. ಅದರ ಭಾಗವಾಗಿಯೇ ಯೂಟ್ಯೂಬ್ ಪಾಡ್ಕಾಸ್ಟ್ನಲ್ಲಿ ದುನಿಯಾ ವಿಜಯ್ ಬಗ್ಗೆ ನಾಲಗೆ ಹರಿಬಿಟ್ಟಿದ್ದಾರೆ.
ಇದನ್ನೂ ಓದಿ:ಯೂಟ್ಯೂಬರ್ ಬಳಿ ದುನಿಯಾ ವಿಜಯ್ ವಿಶೇಷ ಮನವಿ
‘ಹಂದಿಯನ್ನು ಹೋಲುವ ವ್ಯಕ್ತಿ’ ಎಂದಿರುವ ರಂಗನಾಥ್, ಮತ್ತೆ ಮುಂದುವರೆದು, ‘ನಮ್ಮ ಯೋಗಿಬಾಬು ಗಿಂತಲೂ ಕಡೆಯಾಗಿದ್ದಾನೆ ಆತ’ ಎಂದಿದ್ದಾನೆ. ಈ ವೇಳೆ ಎದುರಿಗೆ ಕೂತಿದ್ದ ಸಂದರ್ಶಕ, ‘ಬಾಡಿ ಶೇಮಿಂಗ್ ಮಾಡಬೇಡಿ’ ಎಂದರೂ ಕೇಳದೆ ತಮ್ಮ ವರಾತ ಮುಂದುವರೆಸಿ ಕೀಳಾಗಿ ಮಾತನಾಡಿದ್ದಾರೆ. ದುನಿಯಾ ವಿಜಯ್ ಬಗ್ಗೆ ಬಯಿಲ್ವಾನ್ ರಂಗನಾಥ್ ಕೀಳು ಹೇಳಿಕೆಗೆ ತೀವ್ರ ವಿರೋಧ ವ್ಯಕ್ತವಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಹಲವರು ಬಯಿಲ್ವಾನ್ ಆಡಿರುವ ಮಾತುಗಳನ್ನು ವಿರೋಧಿಸಿದ್ದು, ಕೆಲವರು ಕ್ಷಮೆಗೆ ಒತ್ತಾಯಿಸಿದ್ದಾರೆ.
ದುನಿಯಾ ವಿಜಯ್ ನಟಿಸಿದ ಮೊದಲ ತಮಿಳು ಸಿನಿಮಾ ‘ಮೂಕುತ್ತಿ ಅಮ್ಮನ್ 2’. ಈ ಸಿನಿಮಾನಲ್ಲಿ ನಯನತಾರಾ, ರೆಜಿನಾ ಕೆಸಾಂಡ್ರಾ, ಖುಷ್ಬು ಇನ್ನೂ ಕೆಲವು ನಟಿಯರಿದ್ದಾರೆ. ಸಿನಿಮಾ ಅನ್ನು ಹಿರಿಯ ನಿರ್ದೇಶಕ ಸುಂದರ್ ಸಿ ನಿರ್ದೇಶನ ಮಾಡಿದ್ದಾರೆ. ಸಿನಿಮಾ ಕಳೆದ ವಾರ ರಿಲೀಸ್ ಆಗಿ ಉತ್ತಮ ಪ್ರದರ್ಶನ ಕಂಡಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ