ಬೆಂಗಳೂರಿನಲ್ಲಿ ನಟ ಪುನೀತ್ ಪುತ್ಥಳಿ ಪ್ರತಿಷ್ಠಾಪನೆಗೆ ಸಿದ್ಧತೆ ಅಭಿಮಾನಿಗಳು ಸಿದ್ಧತೆ ನಡೆಸಿದ್ದು, ಪುತ್ಥಳಿ ಪ್ರತಿಷ್ಠಾಪನೆಗೆ ಸ್ಥಳ ಗುರುತು ಮಾಡಿದ್ದಾರೆ. ಈ ನಡುವೆ ಬಿಬಿಎಂಪಿ ಫ್ಯಾನ್ಸ್ ಬಳಿ ಮನವಿ ಮಾಡಿಕೊಂಡಿದ್ದು, ಅನಧಿಕೃತವಾಗಿ ಪುತ್ಥಳಿ ಪ್ರತಿಷ್ಠಾಪಿಸದಂತೆ ಕೋರಿಕೊಂಡಿದೆ. ಅನಧಿಕೃತ ಪುತ್ಥಳಿ ತೆರವಿಗೆ ಹೈಕೋರ್ಟ್ ಸೂಚನೆ ಹಿನ್ನೆಲೆಯಲ್ಲಿ , ಅನುಮತಿ ಪಡೆಯದೆ ಯಾವುದೇ ಪುತ್ಥಳಿ ಸ್ಥಾಪಿಸುವಂತಿಲ್ಲ. ಹೀಗಾಗಿ ಬಿಬಿಎಂಪಿ ಅನುಮತಿ ಪಡೆಯುವಂತೆ ಸೂಚನೆ ನೀಡಲಾಗಿದೆ. ಸಾರ್ವಜನಿಕ ಸ್ಥಳದಲ್ಲಿ ಪುತ್ಥಳಿ ಇಡದಂತೆ ಸೂಚನೆ ನೀಡಲಾಗಿದ್ದು, ಫುಟ್ ಪಾತ್, ಸಾರ್ವಜನಿಕರು ಓಡಾಡೋ ಸ್ಥಳ, ವಾಹನ ಸಂಚಾರಕ್ಕೆ ಅಡ್ಡಿಯಾಗದಂತಹ ಸ್ಥಳ ಗುರುತಿಸಲು ಸೂಚನೆ ನೀಡಲಾಗಿದೆ.
ರಾಜ್ಯದ 550 ಚಿತ್ರಮಂದಿರಗಳಲ್ಲಿ ನಾಳೆ ಪುನೀತ್ ನಮನ:
ಅಕಾಲಿಕ ನಿಧನದಿಂದ ದೂರವಾದ ನಟ ಪುನೀತ್ ರಾಜಕುಮಾರ್ ಅವರಿಗೆ ರಾಜ್ಯದ 550ಕ್ಕೂ ಅಧಿಕ ಚಿತ್ರಮಂದಿರಗಳು ನಮನ ಸಲ್ಲಿಸಲಿವೆ. ನಾಳೆ ಸಂಜೆ 6ಕ್ಕೆ ರಾಜ್ಯದ ಚಿತ್ರಮಂದಿರಗಳಲ್ಲಿ ಕಾರ್ಯಕ್ರಮ ಏರ್ಪಡಿಸಲಾಗಿದ್ದು, ಗೀತಾಂಜಲಿ, ಪುಷ್ಪಾಂಜಲಿ, ದೀಪಾಂಜಲಿ ಮೂಲಕ ಚಿತ್ರ ಪ್ರದರ್ಶಕರಿಂದ ಪುನೀತ್‌ಗೆ ನಮನ ಸಲ್ಲಿಸಲಾಗುವುದು. ನಾಗೇಂದ್ರ ಪ್ರಸಾದ್ ರಚಿಸಿದ ಹಾಡಿನ ಮೂಲಕ ಗೀತಾಂಜಲಿ, ನಟ ಪುನೀತ್ ಭಾವಚಿತ್ರಕ್ಕೆ ಪುಷ್ಪನಮನ ಹಾಗೂ ಚಿತ್ರಮಂದಿರಗಳಲ್ಲಿ ಮೊಂಬತ್ತಿ ಹಚ್ಚಿ ಪುನೀತ್‌ಗೆ ದೀಪಾಂಜಲಿ ನಡೆಸಲಾಗುವುದು. ನಂತರ ಮೌನಾಚರಣೆ ಮೂಲಕ ಪುನೀತ್ ರಾಜ್‌ಕುಮಾರ್‌ಗೆ ನಮನ ಸಲ್ಲಿಸಲಾಗುವುದು. ಈ ಮೂಲಕ ಥಿಯೇಟರ್ ಸಿಬ್ಬಂದಿ, ಅಭಿಮಾನಿಗಳು ನೆಚ್ಚಿನ ನಟನಿಗೆ ಶ್ರದ್ಧಾಂಜಲಿ ಸಲ್ಲಿಸಲಿದ್ದಾರೆ.
ದಾವಣಗೆರೆ: ದೀಪಾವಳಿ ಹಿರಿಯರ ಹಬ್ಬದಲ್ಲಿ ಪುನೀತ್ ಫೊಟೋವಿಟ್ಟು ಪೂಜೆ
ದಾವಣಗೆರೆಯ ಪುನೀತ್ ಅಭಿಮಾನಿ ಶಂಕರ್ ಅವರು ದೀಪಾವಳಿ ಹಿರಿಯರ ಹಬ್ಬದಲ್ಲಿ ಪುನೀತ್ ಪೋಟೋ ಇಟ್ಟು ಪೂಜೆ ಸಲ್ಲಿಸಿದ್ದಾರೆ. ಪುನೀತ್ ಅಪ್ಪಟ ಆಭಿಮಾನಿಯಾಗಿರುವ ಶಂಕರ್, ಮನೆಯಲ್ಲಿ ಹಿರಿಯರ ಹಬ್ಬ ಮಾಡುವಾಗ ಮೃತಪಟ್ಟ ಅಕ್ಕ ಭಾವನ ಪೋಟೋ ಜೊತೆ ಪುನೀತ್ ಪೋಟೋ ಕೂಡ ಇಟ್ಟಿದ್ದಾರೆ. ದೀಪಾವಳಿ ಹಬ್ಬದಂದು ಮೃತಪಟ್ಟ ಕುಟುಂಬಸ್ಥರ ಪೋಟೋ ಇಟ್ಟು ಪೂಜೆ ಮಾಡುವುದು ವಾಡಿಕೆ. ಪುನೀತ್ ತಮ್ಮ ಕುಟುಂಬದ ಸದಸ್ಯ ಎಂದುಕೊಂಡು, ಮನೆ ಮಂದಿಯಲ್ಲಾ ಸೇರಿ ಪುನೀತ್‌ಗೆ ಪೂಜೆ ಸಲ್ಲಿಸಿದ್ದಾರೆ.
‘ಪುನೀತ ನಮನ’ ಕಾರ್ಯಕ್ರಮಕ್ಕೆ ಇಂದು ಸಭೆ:
ನವೆಂಬರ್ 16ರಂದು ‘ಪುನೀತ ನಮನ’ ಕಾರ್ಯಕ್ರಮ ನಡೆಯಲಿದ್ದು, ಕಾರ್ಯಕ್ರಮದ ಸಿದ್ಧತೆ ಬಗ್ಗೆ ಚರ್ಚಿಸಲು ಇಂದು ಸಭೆ ನಡೆಯಲಿದೆ. ಬೆಳಗ್ಗೆ 11.30ರ ನಂತರ ಕಾರ್ಯಕಾರಿಣಿ ಸಭೆ ಆರಂಭಗೊಳ್ಳಲಿದೆ. ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಸಭೆ ನಡೆಯಲಿದ್ದು, ಕಾರ್ಯಕ್ರಮಕ್ಕೆ ಯಾವ್ಯಾವ ಗಣ್ಯರನ್ನು ಆಹ್ವಾನಿಸಬೇಕು. ಹೇಗೆ ಕಾರ್ಯಕ್ರಮ ಮಾಡಬೇಕೆಂಬ ಬಗ್ಗೆ ಚರ್ಚೆ ನಡೆಯಲಿದೆ. ಸಭೆಯಲ್ಲಿ ಪ್ರದರ್ಶಕರ ವಲಯ, ನಿರ್ಮಾಪಕರ ವಲಯ ಹಾಗೂ ವಿತರಕರ ವಲಯದ ಅಧ್ಯಕ್ಷರು ಭಾಗಿಯಾಗಲಿದ್ದಾರೆ.
ಇಂದು ಕೂಡ ಪುನೀತ್ ದರ್ಶನಕ್ಕೆ ಸಾಲುಕಟ್ಟಿ ನಿಂತ ಅಭಿಮಾನಿಗಳು:
ನಟ ಪುನೀತ್ ರಾಜ್‌ಕುಮಾರ್ ನಿಧನರಾಗಿ ಇಂದಿಗೆ 9 ದಿನವಾಗಿದ್ದು, ಅಭಿಮಾನಿಗಳು ರಾಜ್ಯದ ವಿವಿಧ ಭಾಗದಿಂದ ಆಗಮಿಸಿ, ಅಪ್ಪು ಸಮಾಧಿಯ ದರ್ಶನ ಪಡೆಯುತ್ತಿದ್ದಾರೆ. ನಿನ್ನೆ ಮಳೆಯ ನಡುವೆಯೂ ಅಭಿಮಾನಿಗಳು ನಿಂತು ಸಮಾಧಿ ದರ್ಶನ ಪಡೆದಿದ್ದರು. ಇಂದು ಕೂಡ ಹೆಚ್ಚು ಜನರು ಆಗಮಿಸುವ ನಿರೀಕ್ಷೆ ಇದೆ. ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ಸಮಾಧಿ ಇದ್ದು, ಬೆಳಗ್ಗೆ 9ರಿಂದ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.
Published On - 9:46 am, Sat, 6 November 21