
ಶಿವರಾಜ್ಕುಮಾರ್ (Shivarajkumar) ಅವರು ‘ಮಫ್ತಿ’ ಸಿನಿಮಾದಲ್ಲಿ ಭೈರತಿ ರಣಗಲ್ ಆಗಿ ಮಿಂಚಿದ್ದರು. ಈ ಪಾತ್ರ ಸಾಕಷ್ಟು ಗಮನಸೆಳೆದಿತ್ತು. ಇದೇ ಹೆಸರಲ್ಲಿ ಸಿನಿಮಾ ಬರಲಿದೆ ಎಂಬುದು ಈ ಮೊದಲೇ ಸುದ್ದಿ ಆಗಿತ್ತು. ಇಂದು (ಫೆಬ್ರವರಿ 18) ಶಿವರಾತ್ರಿ ಪ್ರಯುಕ್ತ ಈ ಸಿನಿಮಾ ಘೋಷಣೆ ಆಗಿದೆ. ಶಿವರಾಜ್ಕುಮಾರ್ ಅವರ ಲುಕ್ ಗಮನ ಸೆಳೆದಿದೆ. ಈ ಸಿನಿಮಾದ ಕಥೆ ಹೇಗಿರಲಿದೆ ಅನ್ನೋದು ಸದ್ಯದ ಕೂತೂಹಲ. ನರ್ತನ್ ಅವರ ಎರಡನೇ ಸಿನಿಮಾ ಇದಾಗಿದ್ದು, ಈ ಕಾರಣದಿಂದಲೂ ಚಿತ್ರ ಗಮನ ಸೆಳೆದಿದೆ.
‘ಮಫ್ತಿ’ ಸಿನಿಮಾದಲ್ಲಿ ಶಿವರಾಜ್ಕುಮಾರ್ ಬರೋದು ದ್ವಿತೀಯಾರ್ಧದಲ್ಲಿ. ಅಲ್ಲಿವರೆಗೆ ಕಥೆ ಶ್ರೀಮುರಳಿ ಮೇಲೆ ಸಾಗುತ್ತದೆ. ದ್ವಿತೀಯಾರ್ಧದಲ್ಲಿ ಬಂದರೂ ಭೈರತಿ ರಣಗಲ್ ಆಗಿ ಸಾಕಷ್ಟು ಗಮನ ಸೆಳೆದಿದ್ದರು ಶಿವಣ್ಣ. ಪಂಚೆ, ಶರ್ಟ್ ಗೆಟಪ್ನಲ್ಲಿ ಅವರು ಹೆಚ್ಚು ಅಂಕ ಗಿಟ್ಟಿಸಿಕೊಂಡಿದ್ದರು. ‘ಭೈರತಿ ರಣಗಲ್’ ಸಿನಿಮಾದಲ್ಲೂ ಈ ಗೆಟಪ್ ಮುಂದುವರಿಯಲಿದೆ. ಇದಕ್ಕೆ ಇಂದು ರಿಲೀಸ್ ಆದ ಪೋಸ್ಟರ್ ಸಾಕ್ಷ್ಯ ನೀಡಿದೆ.
‘ಭೈರತಿ ರಣಗಲ್’ ಚಿತ್ರಕ್ಕೆ ಈ ಮೊದಲು ಕೆವಿಎನ್ ಪ್ರೊಡಕ್ಷನ್ಸ್ ಬಂಡವಾಳ ಹೂಡಲಿದೆ ಎನ್ನಲಾಗಿತ್ತು. ಆದರೆ, ಅದು ಸುಳ್ಳಾಗಿದೆ. ಶಿವಣ್ಣ ಅವರ ಹೋಂ ಬ್ಯಾನರ್ನಲ್ಲಿ ಚಿತ್ರ ಮೂಡಿ ಬರುತ್ತಿದೆ. ‘ಗೀತಾ ಪಿಕ್ಚರ್ಸ್’ನಲ್ಲಿ ಮೂಡಿ ಬರುತ್ತಿರುವ ಎರಡನೇ ಸಿನಿಮಾ ಇದಾಗಿದೆ. ಈ ಮೊದಲು ‘ವೇದ’ ಚಿತ್ರ ‘ಗೀತಾ ಪಿಕ್ಚರ್ಸ್’ ಮೂಲಕ ಮೂಡಿ ಬಂದಿತ್ತು.
‘ಮಫ್ತಿ’ ಸಿನಿಮಾ ತೆರೆಗೆ ಬಂದಿದ್ದು 2017ರಲ್ಲಿ. ಅಲ್ಲಿಂದ ಇಲ್ಲಿಯವರೆಗೆ ನರ್ತನ್ ಅವರು ಯಾವುದೇ ಸಿನಿಮಾ ಘೋಷಣೆ ಆಗಿಲ್ಲರಲಿಲ್ಲ. ‘ಭೈರತಿ ರಣಗಲ್’ ಸಿನಿಮಾ ಕಾರಣಾಂತರಗಳಿಂದ ವಿಳಂಬ ಆಯಿತು. ಈಗ ಆರು ವರ್ಷಗಳ ಬಳಿಕ ನರ್ತನ್ ಕಡೆಯಿಂದ ಗುಡ್ನ್ಯೂಸ್ ಸಿಕ್ಕಿದೆ.
ಯಶ್ ಅವರ 19ನೇ ಚಿತ್ರಕ್ಕೆ ನಿರ್ದೇಶನ ಮಾಡೋದು ಯಾರು ಎನ್ನುವುದು ಯಕ್ಷ ಪ್ರಶ್ನೆ ಆಗಿದೆ. ಈ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ. ಯಶ್ 19ನೇ ಚಿತ್ರಕ್ಕೆ ನರ್ತನ್ ನಿರ್ದೇಶನ ಮಾಡಲಿದ್ದಾರೆ ಎನ್ನಲಾಗಿತ್ತು. ಆದರೆ, ಅದು ಸಾಧ್ಯವಾಗುತ್ತಿಲ್ಲ. ಮೂಲಗಳ ಪ್ರಕಾರ ಯಶ್ ಅವರ 20ನೇ ಸಿನಿಮಾಗೆ ನರ್ತನ್ ಆ್ಯಕ್ಷನ್ ಕಟ್ ಹೇಳಲಿದ್ದಾರಂತೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ