ಪೊಲೀಸ್ ಠಾಣೆ ಮೆಟ್ಟಿಲೇರಿದ ನಿರ್ದೇಶಕ-ನಿರ್ಮಾಪಕರ ಗಲಾಟೆ; ಕಡ್ಡಿಪುಡಿ ಚಂದ್ರು ವಿರುದ್ಧ ಪಿಸಿ ಶೇಖರ್​ ದೂರು

|

Updated on: May 21, 2023 | 8:32 AM

Love Birds Movie: ‘ಲವ್​ ಬರ್ಡ್ಸ್​’ ಸಿನಿಮಾ ಇತ್ತೀಚೆಗೆ ಬಿಡುಗಡೆ ಆಯಿತು. ಈ ಸಿನಿಮಾದಲ್ಲಿ ಡಾರ್ಲಿಂಗ್​ ಕೃಷ್ಣ ಮತ್ತು ಮಿಲನಾ ನಾಗರಾಜ್​ ನಟಿಸಿದ್ದರು. ಚಿತ್ರತಂಡದ ಒಳಗೆ ಕಿರಿಕ್​ ಆಗಿರುವುದು ಈಗ ಬೆಳಕಿಗೆ ಬಂದಿದೆ.

ಪೊಲೀಸ್ ಠಾಣೆ ಮೆಟ್ಟಿಲೇರಿದ ನಿರ್ದೇಶಕ-ನಿರ್ಮಾಪಕರ ಗಲಾಟೆ; ಕಡ್ಡಿಪುಡಿ ಚಂದ್ರು ವಿರುದ್ಧ ಪಿಸಿ ಶೇಖರ್​ ದೂರು
ಕಡ್ಡಿಪುಡಿ ಚಂದ್ರು, ಪಿ.ಸಿ. ಶೇಖರ್
Follow us on

ಚಿತ್ರರಂಗದಲ್ಲಿ ವಿವಾದಗಳು ಕಾಮನ್​. ದುಡ್ಡಿನ ವಿಚಾರದಲ್ಲಿ ಮೋಸ ಆದ ಬಗ್ಗೆ ಸುದ್ದಿ ಕೇಳಿಬರುತ್ತಲೇ ಇರುತ್ತವೆ. ​ಈಗ ನಿರ್ದೇಶಕ ಪಿ.ಸಿ. ಶೇಖರ್​ (PC Shekar) ಮತ್ತು ನಿರ್ಮಾಪಕ ಕಡ್ಡಿಪುಡಿ ಚಂದ್ರು ನಡುವೆ ಗಲಾಟೆ ಆಗಿದೆ. ಈ ಪ್ರಕರಣ ಈಗ ಪೊಲೀಸ್​ ಠಾಣೆ ಮಟ್ಟಿಲೇರಿದೆ. ಕಡ್ಡಿಪುಡಿ ಚಂದ್ರು ಮತ್ತು ಪಿಸಿ ಶೇಖರ್​ ಅವರು ಲವ್​ ಬರ್ಡ್ಸ್​’ (Love Birds Movie) ಸಿನಿಮಾದಲ್ಲಿ ಜೊತೆಯಾಗಿ ಕೆಲಸ ಮಾಡಿದ್ದರು. ಆದರೆ ಹಣಕಾಸಿನ ವಿಚಾರದಲ್ಲಿ ಇಬ್ಬರ ನಡುವೆ ಮನಸ್ತಾಪ ಉಂಟಾಗಿದೆ. ತಮಗೆ ಬರಬೇಕಾದ ಸಂಭಾವನೆಯನ್ನು ನಿರ್ಮಾಪಕರು ನೀಡಿಲ್ಲ ಎಂದು ಪಿ.ಸಿ. ಶೇಖರ್​ ಅವರು ಆರೋಪಿಸಿದ್ದಾರೆ. ಅಲ್ಲದೇ ಕಡ್ಡಿಪುಡಿ ಚಂದ್ರು (Kaddipudi Chandru) ಅವರು ಅವಾಚ್ಯ ಪದಗಳಿಂದ ನಿಂದಿಸಿದ್ದಾರೆ ಎಂಬುದಾಗಿಯೂ ಪಿ.ಸಿ. ಶೇಖರ್​ ದೂರಿನಲ್ಲಿ ತಿಳಿಸಿದ್ದಾರೆ.

ನಿರ್ಮಾಪಕನಾಗಿ ಮತ್ತು ನಟನಾಗಿ ಚಂದ್ರು ಅಲಿಯಾಸ್ ಕಡ್ಡಿಪುಡಿ ಚಂದ್ರು ಅವರು ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ನಿರ್ದೇಶಕ ಪಿಸಿ ಶೇಖರ್ ಕೂಡ ಹಲವು ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ಆ್ಯಕ್ಟೀವ್​ ಆಗಿದ್ದಾರೆ. ಪಿಸಿ ಶೇಖರ್ ನಿರ್ದೇಶನ ಮತ್ತು ಕಡ್ಡಿ ಪುಡಿ ಚಂದ್ರು ಅವರ ನಿರ್ಮಾಣದಲ್ಲಿ ಮೂಡಿಬಂದ ‘ಲವ್​ ಬರ್ಡ್ಸ್​’ ಸಿನಿಮಾ ಇತ್ತೀಚೆಗೆ ಬಿಡುಗಡೆ ಆಯಿತು. ಈ ಸಿನಿಮಾದಲ್ಲಿ ಡಾರ್ಲಿಂಗ್​ ಕೃಷ್ಣ ಮತ್ತು ಮಿಲನಾ ನಾಗರಾಜ್​ ಅವರು ಜೋಡಿಯಾಗಿ ನಟಿಸಿದ್ದರು. ಚಿತ್ರತಂಡದ ಒಳಗೆ ಕಿರಿಕ್​ ಆಗಿರುವುದು ಈಗ ಬೆಳಕಿಗೆ ಬಂದಿದೆ.

ಇದನ್ನೂ ಓದಿ: ಡಾರ್ಲಿಂಗ್ ಕೃಷ್ಣ-ಮಿಲನಾ ನಾಗರಾಜ್​ಗೆ ವಿವಾಹ ವಾರ್ಷಿಕೋತ್ಸವ; ಇಲ್ಲಿದೆ ‘ಲವ್​ ಬರ್ಡ್ಸ್​​’ನ ಕ್ಯೂಟ್ ಫೋಟೋಸ್

20 ಲಕ್ಷ ರೂಪಾಯಿಗೆ ಸಿನಿಮಾ ನಿರ್ದೇಶಕರಾಗಿ ಕೆಲಸ ಮಾಡಲು ಅಗ್ರಿಮೆಂಟ್ ಆಗಿತ್ತು. ಅದರಂತೆ ಪಿ.ಸಿ. ಶೇಖರ್ ಕೆಲಸ ಮಾಡಿದ್ದಾರೆ. ಈ ನಡುವೆ ಸಿನಿಮಾ ಎಡಿಟಿಂಗ್​ ಸಲುವಾಗಿ ಐದು ಲಕ್ಷ ರೂಪಾಯಿ ಹೆಚ್ಚುವರಿ ಖರ್ಚು ಆಗಿತ್ತು. ಒಟ್ಟು 25 ಲಕ್ಷ ರೂಪಾಯಿ ಹಣವನ್ನು ನಿರ್ದೇಶಕರಿಗೆ ಕಡ್ಡಿಪುಡಿ ಚಂದ್ರು ನೀಡಬೇಕಿತ್ತು. ಆದರೆ ಅವರು ಕೊಟ್ಟಿರುವುದು 6.5 ಲಕ್ಷ ರೂಪಾಯಿ ಮಾತ್ರ.

ಉಳಿದ ಹಣ ಕೇಳಿದರೆ ಕಡ್ಡಿಪುಡಿ ಚಂದ್ರು ಅವರು ಅವಾಚ್ಯವಾಗಿ ನಿಂದಿಸಿ, ಹಣ ಕೊಡದೇ ಬೆದರಿಕೆ ಹಾಕಿದ್ದಾರೆ. ನಂತರ ಸಿನಿಮಾ ಸೆನ್ಸಾರ್ ಮತ್ತು ಇತರೆ ವ್ಯವಹಾರ ನಡೆಸುವಾಗ ನಿರ್ದೇಶಕರ ಗಮನಕ್ಕೆ ಬಂದಿಲ್ಲ. ಪಿ.ಸಿ. ಶೇಖರ್ ಅವರಿಂದ ಕ್ಲಿಯರೆನ್ಸ್ ಪಡೆದಿರುವುದಾಗಿ ನಕಲಿ ಸಹಿ ಮಾಡಿರುವ ಆರೋಪ ಕೂಡ ಕಡ್ಡಿಪುಡಿ ಚಂದ್ರು ಮೇಲಿದೆ.

ಇದನ್ನೂ ಓದಿ: ಡಾರ್ಲಿಂಗ್ ಕೃಷ್ಣ-ಮಿಲನಾ ನಟನೆಯ ‘ಲವ್​ ಬರ್ಡ್ಸ್​​’ ಚಿತ್ರದ ಕಥೆ ಏನು? ಇಲ್ಲಿದೆ ಮಾಹಿತಿ

‘ಹದಿನೆಂಟೂವರೆ ಲಕ್ಷ ರೂಪಾಯಿ ಹಣ ಸಹ ಕೊಟ್ಟಿಲ್ಲ. ನಕಲಿ ಸಹಿ ಮಾಡಿ ನನಗೆ ಕೊಡಬೇಕಿದ್ದ ಹಣ ನೀಡಿಲ್ಲ. ನನ್ನ ಬಗ್ಗೆಯೇ ಕೆಟ್ಟದಾಗಿ ಸಿನಿಮಾ ರಂಗದಲ್ಲಿ ಮಾತನಾಡಿದ್ದಾರೆ. ಹಲವಾರು ನಿರ್ಮಾಪಕರ ಬಳಿ ಸಿನಿಮಾದಲ್ಲಿ ಅವಕಾಶ ನೀಡದಂತೆ ಬೆದರಿಸಿದ್ದಾರೆ’ ಎಂದು ಪಿ.ಸಿ. ಶೇಖರ್​ ಅವರು ದೂರಿನಲ್ಲಿ ತಿಳಿಸಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲು ಮಾಡಲಾಗಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.