ಬೆಂಗಳೂರು: ಸ್ಯಾಂಡಲ್‌ವುಡ್‌ಗೆ ಡ್ರಗ್ಸ್ ಜಾಲದ ನಂಟು ಆರೋಪ ಕೇಸ್ಗೆ ಸಂಬಂಧಿಸಿದಂತೆ ನಟಿಯರಾದ ರಾಗಿಣಿ ಮತ್ತು ಸಂಜನಾರನ್ನು ಮತ್ತೆ ಮೂರು ದಿನಗಳ ಕಾಲ ಸಿಸಿಬಿ ಕಸ್ಟಡಿಗೆ ಒಪ್ಪಿಸಲಾಗಿದೆ. ಜೊತೆಗೆ, ಉಳಿದ 6 ಆರೋಪಿಗಳನ್ನು ಸಹ 3 ದಿನಗಳ ಕಾಲ ಸಿಸಿಬಿ ವಶಕ್ಕೆ ನೀಡಲಾಗಿದೆ.
ಬಂಧಿತ ಆರೋಪಿಗಳ ಪೊಲೀಸ್ ಕಸ್ಟಡಿ ಅವಧಿ ಅಂತ್ಯವಾದ ಹಿನ್ನೆಲೆಯಲ್ಲಿ ಅವರನ್ನು ಸಂಜೆ 4 ಗಂಟೆಗೆ ನ್ಯಾಯಾಧೀಶರ ಎದುರು ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರು ಪಡಿಸಲಾಯಿತು.
ಇಬ್ಬರು ನಟಿಯರು ನಮಗೆ ತನಿಖೆಗೆ ಸಹಕಾರ ನೀಡಿಲ್ಲ. ನಮಗೆ ಮತ್ತಷ್ಟು ದಿನಗಳ ಕಾಲ ವಿಚಾರಣೆ ಅಗತ್ಯವಿದೆ. ಡ್ರಗ್ಸ್ ದಂಧೆ ಬಗ್ಗೆ ಅವರಿಬ್ಬರ ಬಳಿ ಸಾಕಷ್ಟು ಮಾಹಿತಿ ಇದೆ. ಅವರು ಡ್ರಗ್ಸ್ ದಂಧೆಯಲ್ಲಿರುವ ಬಗ್ಗೆ ಸಾಕಷ್ಟು ಸಾಕ್ಷ್ಯವಿದೆ ಎಂದು ನ್ಯಾಯಾಧೀಶರ ಎದುರು ತನಿಖಾಧಿಕಾರಿ ಹೇಳಿದ್ದರು.
ಈ ನಡುವೆ ಇಬ್ಬರು ನಟಿಯರ ಬಳಿ ಯಾವುದೇ ಮಾದಕ ವಸ್ತು ಸಿಕ್ಕಿಲ್ಲ. ಮಾದಕವಸ್ತು ಸೇವಿಸಿರುವ ಬಗ್ಗೆಯೂ ಯಾವುದೇ ಸಾಕ್ಷ್ಯಗಳಿಲ್ಲ. ಹೀಗಾಗಿ, ಮತ್ತೆ ಕಸ್ಟಡಿಗೆ ಪಡೆಯುವ ಯಾವುದೇ ಅಗತ್ಯ ಇರುವುದಿಲ್ಲ ಎಂದು ನಟಿ ರಾಗಿಣಿ ಮತ್ತು ಸಂಜನಾ ಪರ ವಕೀಲರಿಂದ ವಾದ ಮಂಡಿಸಲಾಯಿತು.
ಯಾರದ್ದೋ ಒಂದು ಹೇಳಿಕೆಯಿಂದ ಅವರನ್ನ ಬಂಧಿಸಲಾಗಿದೆ. ಬಂಧಿತರ ಬಳಿ ಯಾವುದೇ ರೀತಿ ಮಾದಕ ವಸ್ತು ದೊರೆತಿಲ್ಲ ಎಂದು ಸಹ ವಾದ ಮಾಡಿದ್ದರು.
Published On - 5:50 pm, Fri, 11 September 20