ಹೈದರಾಬಾದ್: ಮಾಜಿ IAS ಅಧಿಕಾರಿ ಉಮಾಪತಿ ರಾವ್ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದ ಮೆಗಾಸ್ಟಾರ್ ಚಿರಂಜೀವಿ ಕುಟುಂಬಸ್ಥರ ಮೇಲೆ ಜೇನುನೊಣಗಳು ದಾಳಿ ನಡೆಸಿವೆ. ಕ್ಷಣಾರ್ಧದಲ್ಲಿ ಜೇನುಹುಳಗಳ ದಾಳಿಯಿಂದ ಚಿರಂಜೀವಿ, ರಾಮ್ ಚರಣ್ ಹಾಗೂ ಉಪಾಸನ ಪಾರಾಗಿದ್ದಾರೆ.
ಅನಾರೋಗ್ಯದಿಂದ ಮೇ 27ರಂದು ಉಪಾಸನ ಅವರ ತಾತ ಉಮಾಪತಿ ಸಾವನ್ನಪ್ಪಿದ್ದರು. ಇಂದು ನಿಜಾಮಾಬಾದ್ ಜಿಲ್ಲೆಯ ದೊಮಕೊಂಡದಲ್ಲಿ ಅಂತ್ಯಕ್ರಿಯೆ ಇತ್ತು. ಹೀಗಾಗಿ ಚಿರು ಫ್ಯಾಮಿಲಿ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದರು. ಈ ವೇಳೆ ಏಕಾಏಕಿ ಜೇನುನೊಣಗಳು ದಾಳಿ ನಡೆಸಿವೆ. ತಕ್ಷಣ ಚಿರಂಜೀವಿ ಕುಟುಂಬಸ್ಥರನ್ನು ಪಕ್ಕದಲ್ಲೇ ಇದ್ದ ಮನೆಯೊಳಗೆ ಸಿಬ್ಬಂದಿ ಕರೆದುಕೊಂಡು ಹೋಗಿದ್ದಾರೆ.
ಇನ್ನು ಅಂತ್ಯಕ್ರಿಯೆಯಲ್ಲಿ ಭಾಗಿಯಾಗಿದ್ದ ಕೆಲವರಿಗೆ ಜೇನುನೊಣಗಳು ಕಚ್ಚಿ ಸ್ವಲ್ಪ ಗಾಯಗಳಾಗಿದೆ. ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಜೇನುನೊಣಗಳನ್ನು ಚದುರಿಸಿದ ನಂತರ ಅಂತ್ಯಕ್ರಿಯೆ ನೆರವೇರಿಸಿದ್ದಾರೆ.