AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬದುಕಿನ ಆಟ ಮುಗಿಸಿ ಚಿರನಿದ್ರೆಗೆ ಜಾರಿದ ‘ಚಿರು’, ಬೆಳಗ್ಗೆ 10.30ರವರೆಗೆ ಅಂತಿಮ ದರ್ಶನ

ವಾಯುಪುತ್ರ.. ಅಕ್ಷರಶಃ ವಾಯುಪುತ್ರನಂತೆ ಬಂದ್ರು. ಗಂಡೆಂದೆ ತೋರಿಸಿ ದಂಡಂ ದಶಗುಣಂ ಎಂದ್ರು. ವರದನಾಯಕನಾಗಿ ಮೀಸೆ ತಿರುಗಿದ್ದೂ ಆಯ್ತು. ವಿಸಿಲ್​ ಹೊಡೆದು ಸಂಹಾರ ಮಾಡಿದ್ದೂ ಆಯ್ತು. ಅಮ್ಮಾ ಐ ಲವ್​ಯೂ ಅಂತ ಕಣ್ಣೀರು ತರಿಸಿದ್ದ ನಟನಿಗೆ ವಿಧಿ ಅನ್ನೋ ಆಟಗಾರ ಕಿಂಚಿತ್ತೂ ಕರುಣೆ ತೋರಲೇ ಇಲ್ಲ. ಹೆಸ್ರಲ್ಲೇ ಚಿರಾಯುಷ್ಯು ಅಂತ ಇದ್ರೂ ಬದುಕು ಪೂರ್ತಿ ಮುಗಿಸಲೇ ಇಲ್ಲ. ಬಣ್ಣದ ಬಂಡಿಯೊಂದಿಗೆ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ಚಿರು ಬಂದಷ್ಟೇ ವೇಗದಲ್ಲಿ ಚಿರನಿದ್ರೆಗೆ ಜಾರಿ ಬಿಟ್ರು. ಸ್ಯಾಂಡಲ್​ವುಡ್​​ ಎಂದೂ ಮರೆಯಲಾಗದ […]

ಬದುಕಿನ ಆಟ ಮುಗಿಸಿ ಚಿರನಿದ್ರೆಗೆ ಜಾರಿದ ‘ಚಿರು’, ಬೆಳಗ್ಗೆ 10.30ರವರೆಗೆ ಅಂತಿಮ ದರ್ಶನ
ಆಯೇಷಾ ಬಾನು
|

Updated on:Jun 08, 2020 | 2:10 PM

Share

ವಾಯುಪುತ್ರ.. ಅಕ್ಷರಶಃ ವಾಯುಪುತ್ರನಂತೆ ಬಂದ್ರು. ಗಂಡೆಂದೆ ತೋರಿಸಿ ದಂಡಂ ದಶಗುಣಂ ಎಂದ್ರು. ವರದನಾಯಕನಾಗಿ ಮೀಸೆ ತಿರುಗಿದ್ದೂ ಆಯ್ತು. ವಿಸಿಲ್​ ಹೊಡೆದು ಸಂಹಾರ ಮಾಡಿದ್ದೂ ಆಯ್ತು. ಅಮ್ಮಾ ಐ ಲವ್​ಯೂ ಅಂತ ಕಣ್ಣೀರು ತರಿಸಿದ್ದ ನಟನಿಗೆ ವಿಧಿ ಅನ್ನೋ ಆಟಗಾರ ಕಿಂಚಿತ್ತೂ ಕರುಣೆ ತೋರಲೇ ಇಲ್ಲ. ಹೆಸ್ರಲ್ಲೇ ಚಿರಾಯುಷ್ಯು ಅಂತ ಇದ್ರೂ ಬದುಕು ಪೂರ್ತಿ ಮುಗಿಸಲೇ ಇಲ್ಲ. ಬಣ್ಣದ ಬಂಡಿಯೊಂದಿಗೆ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ಚಿರು ಬಂದಷ್ಟೇ ವೇಗದಲ್ಲಿ ಚಿರನಿದ್ರೆಗೆ ಜಾರಿ ಬಿಟ್ರು. ಸ್ಯಾಂಡಲ್​ವುಡ್​​ ಎಂದೂ ಮರೆಯಲಾಗದ ಚಿರಂಜೀವಿ ಬಾರದ ಲೋಕಕ್ಕೆ ಪ್ರಯಾಣಿಸಿಬಿಟ್ರು.

ಯೆಸ್.. ಕಟ್ಟುಮಸ್ತಾದ ದೇಹ.. ರಗಡ್ ನೋಟ.. ತಾರಾ ಕುಟುಂಬದಿಂದ ಬಂದ ತಾರೆಯ ಬದುಕು, ಇಷ್ಟು ಬೇಗ ಅಂತ್ಯವಾಗುತ್ತೆ, ಎಲ್ಲರನ್ನ ಬಿಟ್ಟು ಬಾರದ ಲೋಕಕ್ಕೆ ಇಷ್ಟು ಬೇಗ ತೆರಳ್ತಾರೆ ಅಂತ ಯಾರೊಬ್ರೂ ಕೂಡ ಕಸನು ಮನಸ್ಸಿನಲ್ಲೂ ಅಂದುಕೊಂಡಿರಲ್ಲ. ಆದ್ರೆ, ಭಾನುವಾರವೇ ಚಂದನವನಕ್ಕೆ ಬರಸಿಡಿಲು ಬಂದಪ್ಪಳಿಸಿತ್ತು. ಚಂದನವನದ ಮನಸ್ಸುಗಳು ನಡುಗುವಂತೆ, ಅಭಿಮಾನಿಗಳ ಹೃದಯವೇ ಛಿದ್ರವಾಗುವಂತ ಆ ಒಂದು ಸುದ್ದಿ ಆಘಾತ ನೀಡಿತ್ತು. ಅದುವೇ, ಸರ್ಜಾ ಕುಟುಂಬದ ಕುಡಿ, ನಟ ಚಿರಂಜೀವಿ ಸರ್ಜಾ ಅಗಲಿಕೆ. ನಿಜ.. ಬರೀ 39 ವರ್ಷಕ್ಕೆ ಇಹಲೋಕದ ಪಯಣ ಮುಗಿಸಿ ವಿಧಿವಶರಾಗಿದ್ದಾರೆ. ಚಿರು ಹೃದಯವನ್ನ ಚುಚ್ಚಿದ ಘೋರ ವಿಧಿ ಗಂಡೆದೆ ಬಂಟನ ಪ್ರಾಣವನ್ನೇ ಹೊತ್ತೊಯ್ದಿದೆ. ನಗುವಿನ ಮೊಗದ ಸರದಾರನ ಖುಷಿ ಕಸಿದು ಕಣ್ಣೀರಧಾರೆಯನ್ನೇ ಹರಿಸಿದೆ.

‘ಬಣ್ಣ’ ಕಳಚಿ ಬದುಕಿನ ಆಟ ಮುಗಿಸಿದ ‘ಆಟಗಾರ’! ಹೌದು.. ಖ್ಯಾತ ನಟ ಅರ್ಜುನ್​ ಸರ್ಜಾರ ಸೋದರ ಅಳಿಯ, ಸ್ಯಾಂಡಲ್​​​ವುಡ್​​​ನ​ ನಟ ಚಿರಂಜೀವಿ ಸರ್ಜಾ ಬಂದಷ್ಟೇ ವೇಗವಾಗಿ 22 ಸಿನಿಮಾಗಳಲ್ಲಿ ನಟಿಸಿ, ಸ್ಟಾರ್ ನಟರ ಸಿನಿಮಾಗಳಿಗೂ ಸಾಥ್​​​ ಕೊಟ್ಟಿದ್ದ ನಟ ಇನ್ನಿಲ್ಲ. ಹೃದಯಘಾತ ಅನ್ನೋ ಕ್ರೂರಿ ಸದ್ದಿಲ್ಲದೇ ಯುವ ಸಾಮ್ರಾಟನ ಬದುಕನ್ನೇ ಅಂತ್ಯ ಆಡ್ಬಿಡ್ತು..

‘ಚಿರನಿದ್ರೆ’ಗೆ ಜಾರಿದ ‘ಚಿರು’ ಕಂಡು ಅರ್ಜುನ್ ಸರ್ಜಾ ಕಣ್ಣೀರು! ಇನ್ನು, ಸರ್ಜಾ ಕುಟುಂಬದ ಕುಡಿ ಅಗಲಿಕೆಯ ಶಾಕಿಂಗ್ ಸುದ್ದಿ ಕೇಳೀ ಇಡೀ ಚಿತ್ರರಂಗಕ್ಕೆ ಬರಸಿಡಿಲೇ ಬಡಿದಂತಾಗಿತ್ತು. ಕೊರೊನಾಂತಕದ ನಡುವೆ ಅರಗಿಸಿಕೊಳ್ಳಲಾಗದ ನೋವಿನ ಆಘಾತ ನಿಂತ ನೆಲವನ್ನೇ ಕುಸಿದಂತೆ ಮಾಡ್ತು. ಚಂದನವನದ ಕಲಾವಿದರೆಲ್ಲಾ ಆಸ್ಪತ್ರೆಯತ್ತ ಓಡೋಡಿ ಬಂದ್ರು. ಚಿರು ತಮ್ಮ ಧ್ರುವ ಸರ್ಜಾ ಕೂತಲ್ಲೇ ಕಣ್ಣೀರಾಗಿದ್ರು. ಪತ್ನಿ ಮೇಘನಾ ಪತಿಯ ಮೃತದೇಹದ ಎದುರು ಬಿಕ್ಕಿಬಿಕ್ಕಿ ಅಳುತ್ತಿದ್ರು. ತಮಿಳುನಾಡಿನ ವೇಲೂರಿನಿಂದ ಓಡೋಡಿ ಬಂದ ಚಿರು ಮಾವ ಅರ್ಜುನ್ ಸರ್ಜಾ ಅಳಿಯನ ಮೃತದೇಹದೆದುರು ಕಣ್ಣೀರ ಹೊಳೆಯನ್ನೇ ಹರಿಸಿದ್ರು. ಇಡೀ ಸರ್ಜಾ ಕುಟುಂಬ ನೋವಿನ ಸುನಾಮಿಗೆ ಸಿಲುಕಿ ತಬ್ಬಿಬ್ಬಾಯ್ತು.

ಇನ್ನು, ಸರ್ಜಾ ಕುಟುಂಬಕ್ಕೆ ಸಾಂತ್ವನ ಹೇಳಲು ಆಗದೆ, ಕಲಾವಿದರೆಲ್ಲಾ ಕಂಬನಿ ಮಿಡಿದ್ರು. ಅದ್ರಲ್ಲೂ ಹಿರಿಯ ನಟ ದ್ವಾರಕೀಶ್, ಶಿವಣ್ಣ, ದರ್ಶನ್, ಸೃಜನ್​ ಲೋಕೇಶ್, ವಸಿಷ್ಠ ಸಿಂಹ, ಅಭಿಷೇಕ್​ ಅಂಬರೀಶ್​​​​, ಕಿಚ್ಚ ಸುದೀಪ್​ ಸೇರಿದಂತೆ ನೂರಾರು ಕಲಾವಿದರು ಚಿರುವಿನ ಅಂತಿಮ ದರ್ಶನ ಪಡೆದ್ರು.

ಬೆಳಗ್ಗೆ 9 ಗಂಟೆಯವರೆಗೆ ‘ಚಿರು’ ಅಂತಿಮ ದರ್ಶನಕ್ಕೆ ವ್ಯವಸ್ಥೆ! ಇನ್ನು, ಕುಟುಂಬ.. ಅಭಿಮಾನಿ ಬಳಗ.. ಚಂದನವನವನ್ನ ಬಿಟ್ಟು ಬಾರದ ಲೋಕಕ್ಕೆ ಪಯಣಿಸಿದ ನಟನ ಅಂತ್ಯಸಂಸ್ಕಾರ ಇಂದು ನಡೆಯಲಿದೆ. ಬೆಳಗ್ಗೆ 10.30 ಗಂಟೆಯವರೆಗೆ ಚಿರು ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಇಂದು ಮಧ್ಯಾಹ್ನ 12 ಗಂಟೆಗೆ ಕನಕಪುರ ರಸ್ತೆಯ ನೆಲಗುಳಿ ಬಳಿಯಿರೋ ಧ್ರುವಾ ಸರ್ಜಾ ಫಾರ್ಮ್​ಹೌಸ್​ಗೆ ಚಿರು ಪಾರ್ಥಿವ ಶರೀರ ಕೊಂಡೊಯ್ಯಲಿದ್ದಾರೆ. ಸಹೋದರ ಚಿರಂಜೀವಿ ಸರ್ಜಾ ತನ್ನ ಜತೆ ಇರಬೇಕೆಂದು ಧ್ರುವ ಸರ್ಜಾ ಬೇಡಿಕೆಯಂತೆ ನಟ ಧ್ರುವ ಸರ್ಜಾ ಫಾರ್ಮ್​ಹೌಸ್​ನಲ್ಲೇ ಚಿರು ಅಂತ್ಯಕ್ರಿಯೆ ನಡೆಯಲಿದೆ. ಧ್ರುವಾ ಸರ್ಜಾ ಬೇಡಿಕೆಗೆ ಕುಟುಂಬ ಕೂಡ ಸಮ್ಮತಿ ಸೂಚಿಸಿದ್ದು ಇಂದು ಮಧ್ಯಾಹ್ನ 2ರಿಂದ 3 ಗಂಟೆ ವೇಳೆಗೆ ಚಿರಂಜೀವಿ ಸರ್ಜಾ ಅಂತ್ಯಕ್ರಿಯೆ ನಡೆಸಲು ನಿರ್ಧರಿಸಲಾಗಿದೆ.

ಮೃತ ಚಿರಂಜೀವಿ ಸರ್ಜಾ ಕೊವಿಡ್ ಟೆಸ್ಟ್ ವರದಿ ನೆಗೆಟಿವ್! ಇನ್ನು, ಕರುನಾಡಲ್ಲಿ ಕೊರೊನಾ ಅಟ್ಟಹಾಸ ಮೆರೀತಿರೋದ್ರಿಂದ ​ಮೃತ ಚಿರಂಜೀವಿ ಸರ್ಜಾ ಕೊವಿಡ್ ಟೆಸ್ಟ್ ಪರೀಕ್ಷೆ ಕೂಡ ಮಾಡಲಾಯ್ತು. ಕೊರೊನಾ ಸೋಂಕು ತಗುಲಿರಬಹುದೆಂಬ ಶಂಕೆ ಹಿನ್ನೆಲೆಯಲ್ಲಿ ಅಪೋಲೋ ಆಸ್ಪತ್ರೆ ವೈದ್ಯರು ಚಿರು ಗಂಟಲು ದ್ರವ ಪರೀಕ್ಷಿಸಿದ್ರು. ಆದ್ರೆ ವರದಿಯಲ್ಲಿ ಕೊರೊನಾ ನೆಗೆಟಿವ್ ಬಂದಿದೆ.

ಒಟ್ನಲ್ಲಿ, ವಾಯುಪುತ್ರನಂತೆ ಬಂದು, ಸಾಲು ಸಾಲು ಚಿತ್ರಗಳಲ್ಲಿ ನಟಿಸಿದ್ದ ಚಿರು ಅಭಿಮಾನಿಗಳ ಹೃದಯ ಗೆದ್ದಿದ್ರು.. ಚಂದನವನದಲ್ಲಿ ಯುವಸಾಮ್ರಾಟ್​​​ ಆಗಿದ್ದ ಚಿರಂಜೀವಿ ಸರ್ಜಾ ದಿಢೀರ್ ಅಗಲಿಕೆ ಇದೀಗ ಚಂದನವನಕ್ಕೆ ಗರ ಬಡಿದಂತಾಗಿದೆ.. ಸರ್ಜಾ ಕುಟುಂಬದ ಕುಡಿಯ ಸಾವಿಗೆ ಲಕ್ಷಾಂತರ ಅಭಿಮಾನಿಗಳು ಕಂಬನಿ ಹರಿಸಿದ್ದಾರೆ. ಅಯ್ಯೋ ವಿಧಿಯೇ ನಿನಗೆ ಕರುಣೆಯೇ ಇಲ್ವಾ ಅಂತ ಕೊರೊಗುವಂತಾಗಿದೆ.

Published On - 7:16 am, Mon, 8 June 20