ಸಿನಿಮಾದವರಿಗೆ ಕೆಲವು ನಂಬಿಕೆಗಳಿರುತ್ತವೆ. ಆ ನಂಬಿಕೆಗಳನ್ನು ಅವರು ಬಲು ಗಟ್ಟಿಯಾಗಿ ನಂಬಿರುತ್ತಾರೆ. ಹಲವು ನಟರು ತಮ್ಮ ನೆಚ್ಚಿನ ಸಂಖ್ಯೆಯ ಮೊತ್ತವನ್ನೇ ಅಡ್ವಾನ್ಸ್ ಆಗಿ ಪಡೆಯುತ್ತಾರೆ. ಉದಾಹರಣೆಗೆ 99, 33 ಹೀಗೆ. ಕೆಲ ನಿರ್ದೇಶಕರು ತಮ್ಮ ಸಿನಿಮಾಗಳ ಹೆಸರುಗಳು ನಿರ್ದಿಷ್ಟ ಅಕ್ಷರದಿಂದ ಆರಂಭವಾಗುವಂತೆ ನೋಡಿಕೊಳ್ಳುತ್ತಾರೆ. ಇನ್ನು ಕೆಲ ನಿರ್ಮಾಪಕರು, ಸಿನಿಮಾ ಬಿಡುಗಡೆಗೆ ಮುನ್ನ ಸಿನಿಮಾದ ಕಾಪಿಯನ್ನು ತಿರುಪತಿಗೆ ಕಳಿಸುತ್ತಾರೆ. ಇನ್ನು ಕೆಲವರು ಮೊದಲ ಶಾಟ್ ಅನ್ನು ನಿರ್ದಿಷ್ಟ ಸ್ಥಳದಲ್ಲಿಯೇ ತೆಗೆಯುತ್ತಾರೆ. ಹೀಗೆ ಒಬ್ಬರ ನಂಬಿಕೆಗೆ ಇನ್ನೊಬ್ಬರ ನಂಬಿಕೆ ಭಿನ್ನವಾಗಿರುತ್ತದೆ. ಆದರೆ ತೆಲುಗು ಚಿತ್ರರಂಗದ ಎಲ್ಲರೂ ನಂಬುತ್ತಿದ್ದ ಒಂದು ನಂಬಿಕೆ ಮತ್ತು ಇಡೀ ತೆಲುಗು ಚಿತ್ರರಂಗಕ್ಕೆ ಬಹಳ ಅಪ್ಯಾಯಮಾನವಾದ, ಗೌರವ ನೀಡುತ್ತಿದ್ದ ವಸ್ತುವೆಂದರೆ ಅದು ‘ಸಿನಿಮಾ ಮರ’
ಗೋಧಾವರಿಯಲ್ಲಿ ಇರುವ ‘ಸಿನಿಮಾ ಟ್ರಿ’ ಎಂದರೆ ತೆಲುಗು ಚಿತ್ರರಂಗಕ್ಕೆ ಬಹಳ ಪ್ರೀತಿ ಮತ್ತು ಗೌರವ. ಆ ಸಿನಿಮಾದ ಕೆಳಗೆ ಅದೆಷ್ಟೋ ಜನ ಸಿನಿಮಾ ನಟರು ಸ್ಟಾರ್ಗಳಾಗಿದ್ದಾರೆ. ಆ ಸಿನಿಮಾದ ಕೆಳಗೆ ಶಾಟ್ ತೆಗೆದರೆ ಆ ಸಿನಿಮಾ ಬ್ಲಾಕ್ ಬಸ್ಟರ್ ಆಗುತ್ತದೆ ಎಂಬ ನಂಬಿಕೆ ಈಗಲೂ ಸಹ ಹಾಗೆಯೇ ಇದೆ. ಸೀನಿಯರ್ ಎನ್ಟಿಆರ್ ಇಂದ ಆರಂಭಿಸಿ ಇತ್ತೀಚೆಗಿನ ನಟರ ವರೆಗೂ ಹಲವಾರು ಮಂದಿ ಈ ಸಿನಿಮಾ ಮರದ ನೆರಳಿನಲ್ಲಿ ನಿಂತಿದ್ದಾರೆ, ಈ ಮರದ ನೆರಳಿನಲ್ಲಿ ನಟಿಸಿದ್ದಾರೆ. ಈ ಸಿನಿಮಾ ಮರ ಸುಮಾರು 300 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಕಾಣಿಸಿಕೊಂಡಿದೆ. ಕೇವಲ ತೆಲುಗು ಅಲ್ಲ ಹಿಂದಿ, ತಮಿಳಿನ ಕೆಲ ಸಿನಿಮಾಗಳಲ್ಲಿಯೂ ಈ ಸಿನಿಮಾ ಮರ ಕಾಣಿಸಿಕೊಂಡಿದೆ.
ಆದರೆ ಕಳೆದ ಆಗಸ್ಟ್ ತಿಂಗಳಲ್ಲಿ ಬಂದ ಭಾರಿ ಮಳೆ ಮತ್ತು ಪ್ರವಾಹದಲ್ಲಿ ನದಿ ದಂಡೆಯಲ್ಲಿರುವ ಈ ಸಿನಿಮಾ ಮರದ ಬುಡಕ್ಕೆ ಹಾನಿ ಆಗಿತ್ತು. ಆಗಸ್ಟ್ ತಿಂಗಳಲ್ಲಿ ಈ ಮರ ಎರಡು ಭಾಗವಾಗಿ ಮುರಿದು ಬಿತ್ತು. ಸಿನಿಮಾ ಮರ ಮುರಿದು ಬಿದ್ದಿದ್ದಕ್ಕೆ ತೆಲುಗು ಚಿತ್ರರಂಗ ಶೋಕ ವ್ಯಕ್ತಪಡಿಸಿತ್ತು. ಆದರೆ ಕೆಲ ನಿರ್ಮಾಪಕರು, ನಿರ್ದೇಶಕರು ಆ ಮರವನ್ನು ಪುನರುಜ್ಜೀವ ಗೊಳಿಸಲು ಸಹಾಯ ಮಾಡುವುದಾಗಿ ಮುಂದೆ ಬಂದರು. ರೋಟರಿ ಸಂಸ್ಥೆಯು ಈ ಮರವನ್ನು ಪುನರುಜ್ಜೀವನಗೊಳಿಸುವ ಜವಾಬ್ದಾರಿ ಹೊತ್ತುಕೊಂಡಿತು.
ಇದನ್ನೂ ಓದಿ:ಅಭಿಮಾನಿಗಳಿಗೆ ಕೈ ಸನ್ನೆ ಮಾಡಿದ ದರ್ಶನ್; ಬಳ್ಳಾರಿ ಜೈಲಿನಿಂದ ದಾಸ ಕೊಟ್ಟ ಸಿಗ್ನಲ್ ಏನು?
ಕೆಲವು ತಜ್ಞರ ನೆರವಿನಿಂದ ಎರಡು ಭಾಗವಾಗಿ ಮುರಿದು ಬಿದ್ದಿದ್ದ ಈ ಮರದ ಪುನರುಜ್ಜೀವನ ಕಾರ್ಯ ಪ್ರಾರಂಭವಾಗಿ, ಇದೀಗ ಮರದಿಂದ ಮೊದಲ ಸಸಿ ಮೂಡಿದೆ. ಮರದ ಪುನರುಜ್ಜೀವನ ಕಾರ್ಯದಲ್ಲಿ ನಿರತವಾಗಿರುವ ರೇಗುಪಲ್ಲಿ ದುರ್ಗಾಪ್ರಸಾದ್, ತೀಗಲ ರಾಜ ಹೇಳುವಂತೆ ಈ ಸಸಿ ಬೆಳೆದು 2025 ರ ಅಂತ್ಯದ ವೇಳೆ ಇದೇ ಸ್ಥಳದಲ್ಲಿ ಮತ್ತೆ ಜನರಿಗೆ ನೆರಳು ನೀಡಲಿದೆ ಎಂದಿದ್ದಾರೆ.
ಅಂದಹಾಗೆ ಈ ಸಿನಿಮಾ ಟ್ರೀ (ಸಿನಿಮಾ ಮರ) 300ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಕಾಣಿಸಿಕೊಂಡಿದೆ. ಕಲ್ಟ್ ಸಿನಿಮಾಗಳಾದ ‘ಶಂಕರಾಭರಣಂ’, ‘ಸ್ವಾತಿ ಮುತ್ಯಂ’, ಮೆಗಾಸ್ಟಾರ್ ಚಿರಂಜೀವಿಯ ‘ಸ್ವಯಂಕೃಷಿ’, ‘ಆನಂದ ಭೈರವಿ’, ‘ತ್ರಿಶೂಲಂ’, ‘ಖೈದಿ’, ಜೂ ಎನ್ಟಿಆರ್ ನಟನೆಯ ‘ಯಮದೊಂದ’, ರಾಮ್ ಚರಣ್ ನಟನೆಯ ‘ರಂಗಸ್ಥಳಂ’, ಹಿಂದಿಯ ‘ಹಿಮ್ಮತ್ವಾಲಾ’ ಇನ್ನೂ ಹಲವಾರು ಬ್ಲಾಕ್ ಬಸ್ಟರ್ ಸಿನಿಮಾಗಳಲ್ಲಿ ಈ ಮರ ಕಾಣಿಸಿಕೊಂಡಿದೆ. ಮೆಗಾಸ್ಟಾರ್ ಚಿರಂಜೀವಿ ಸಹ ಈ ಮರದ ನೆರಳಲ್ಲಿ ನಟಿಸಿದ ಬಳಿಕವೇ ಸ್ಟಾರ್ ಆಗಿದ್ದು ಎನ್ನುವ ನಂಬಿಕೆ ಇದೆ. ಇಂದಿಗೂ ಸಹ ಎಷ್ಟೋ ಮಂದಿ ನಟರು, ಮೊದಲ ಸಿನಿಮಾ ನಟಿಸುವ ಮುಂಚೆ ಈ ಮರದ ಬಳಿಕ ಬಂದು ಪೂಜೆ ಮಾಡಿ ಹೋಗುತ್ತಾರಂತೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ