
ದೈವಜ್ಞ (Daivajna) ಸಮಾಜದ ಹಿರಿಮೆ, ಸಂಸ್ಕೃತಿ ಮತ್ತು ಪಾರಂಪರಿಕ ಮೌಲ್ಯಗಳನ್ನು ಸಾರುವ ‘ದೈವಜ್ಞರು’ (Daivajnaru) ಸಿನಿಮಾದ ಶೀರ್ಷಿಕೆ ಮತ್ತು ಹಾಡುಗಳು ಬಿಡುಗಡೆ ಆಗಿದೆ. ಕರ್ಕಿ ಶ್ರೀ ಜ್ಞಾನೇಶ್ವರೀ ಪೀಠದ ಪೀಠಾಧಿಪತಿಗಳಾದ ಪರಮಪೂಜ್ಯ ಶ್ರೀ ಶ್ರೀ ಸಚ್ಚಿದಾನಂದ ಜ್ಞಾನೇಶ್ವರ ಭಾರತೀ ಮಹಾಸ್ವಾಮಿಗಳವರು ಟೈಟಲ್ ಮತ್ತು ಆಡಿಯೋ ಲೋಕಾರ್ಪಣೆ ಮಾಡಿ ಆಶೀರ್ವದಿಸಿದರು.
ಶಿವಮೊಗ್ಗ ಜಿಲ್ಲೆಯ ಸಾಗರ ಪಟ್ಟಣದ ದೈವಜ್ಞ ಬ್ರಾಹ್ಮಣ ಸಭಾಭವನದಲ್ಲಿ ವೈಭವದಿಂದ ಜರುಗುತ್ತಿರುವ ಶ್ರೀಗಳವರ 41ನೇ ಚಾತುರ್ಮಾಸ್ಯ ವ್ರತಾಚರಣೆಯ ಧಾರ್ಮಿಕ ಮಹೋತ್ಸವದ ಶುಭ ಸಂದರ್ಭದಲ್ಲಿ ‘ದೈವಜ್ಞರು’ ಸಿನಿಮಾದ ಶೀರ್ಷಿಕೆ ಮತ್ತು ಹಾಡುಗಳ ಬಿಡುಗಡೆ ಕಾರ್ಯಕ್ರಮ ನಡೆಯಿತು. ಇದು ದೈವಜ್ಞ ಸಮಾಜದ ಕಲೆ-ಸಂಸ್ಕೃತಿ ಬಿಂಬಿಸುವ ಸಿನಿಮಾ ಎಂದು ಚಿತ್ರತಂಡ ಹೇಳಿದೆ.
ಶ್ರೀ ಸಚ್ಚಿದಾನಂದ ಜ್ಞಾನೇಶ್ವರ ಭಾರತೀ ಮಹಾಸ್ವಾಮಿಗಳವರು ಚಿತ್ರತಂಡದ ಪ್ರಯತ್ನವನ್ನು ಶ್ಲಾಘಿಸಿದರು. ‘ದೈವಜ್ಞ ಬ್ರಾಹ್ಮಣ ಸಮಾಜವು ಕಲೆ, ಕರಕುಶಲತೆ ಹಾಗೂ ಧಾರ್ಮಿಕ ಪರಂಪರೆಯಲ್ಲಿ ತನ್ನದೇ ಆದ ವಿಶಿಷ್ಟ ಛಾಪು ಮೂಡಿಸಿದೆ. ಇಂತಹ ಶ್ರೀಮಂತ ಇತಿಹಾಸ ಮತ್ತು ಸಾಂಸ್ಕೃತಿಕ ಬೇರುಗಳನ್ನು ಇಂದಿನ ಯುವ ಪೀಳಿಗೆಗೆ ಸಿನಿಮಾದಂತಹ ದೃಶ್ಯ ಮಾಧ್ಯಮದ ಮೂಲಕ ಪರಿಚಯಿಸುತ್ತಿರುವುದು ಶ್ಲಾಘನೀಯ ಕಾರ್ಯ’ ಎಂದು ಅವರು ಶುಭ ಹಾರೈಸಿದರು.
ಇದನ್ನೂ ಓದಿ: ಶಿವನ ಭಕ್ತರಿಗೆ ಶುಭ ಸುದ್ದಿ ನೀಡಿದ ಸದ್ಗುರು; ಶೀಘ್ರದಲ್ಲೇ ತೆರೆಕಾಣಲಿದೆ ‘ಶಿವ -ದಿ ಆದಿಯೋಗಿ’ ಅನಿಮೇಷನ್ ಸಿನಿಮಾ
ಈ ಸಿನಿಮಾದ ನಾಯಕ ನಟ ಹಾಗೂ ನಿರ್ದೇಶಕರಾದ ಅಜಯಕುಮಾರ್ ದೈವಜ್ಞ ಅವರು ಚಿತ್ರದ ಕಥಾಹಂದರ ಹಾಗೂ ಉದ್ದೇಶವನ್ನು ವಿವರಿಸಿದರು. ಈ ಕಾರ್ಯಕ್ರಮದಲ್ಲಿ ಕಾರವಾರ ಕ್ಷೇತ್ರದ ಮಾಜಿ ಶಾಸಕ ಗಂಗಾಧರ್ ಭಟ್, ಸಮಾಜದ ಪ್ರಮುಖರಾದ ಅರುಣ್ ಕುಮಾರ್, ಮಂಜುನಾಥ್ ಪರಮೇಶ್ವರ್ ಶೇಟ್ (ಹೊನ್ನಾವರ), ಮೋಹನ್ ಶೇಟ್, ರವಿ ಗಾಂವ್ಕರ್, ಅಶೋಕ್ ರೇವಣಕರ್, ಸಿಎ ಶಶಿಕಾಂತ್ ಆರ್.ಎಸ್., ಉಲ್ಲಾಸ್, ಅಶೋಕ್ ಶೇಟ್ ಸೇರಿದಂತೆ ಹಲವು ಗಣ್ಯರು, ಸಮಾಜ ಬಾಂಧವರು ಉಪಸ್ಥಿತರಿದ್ದರು. ಎಲ್ಲರೂ ಚಿತ್ರತಂಡಕ್ಕೆ ಶುಭ ಕೋರಿದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.