Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಡ್ಡಿ ಸಮೇತ ಠೇವಣಿ ಹಣ ಹಿಂದಿರುಗಿಸದ ದೈವಜ್ಞ ಪತ್ತಿನ ಸಹಕಾರಿ ಸಂಘಕ್ಕೆ ದಂಡ ವಿಧಿಸಿದ ಧಾರವಾಡ ಗ್ರಾಹಕರ ಆಯೋಗ

ಧಾರವಾಡದ ದೈವಜ್ಞ ಪತ್ತಿನ ಸಹಕಾರಿ ಸಂಘದಲ್ಲಿ ಸುಮಿತ್ರಾ ಶೇಠ್ ಎಂಬವರು ಠೇವಣಿ ಇಟ್ಟಿದ್ದರು. ಆದರೆ ಬಡ್ಡಿ ಸಮೇತ ಠೇವಣಿ ಹಣ ಹಿಂದಿರುಗಿಸದ ದೈವಜ್ಞ ಪತ್ತಿನ ಸಹಕಾರಿ ಸಂಘ ವಿರುದ್ಧ ಗ್ರಾಹಕರ ಆಯೋಗಕ್ಕೆ ದೂರು ನೀಡಿದ್ದರು. ವಿಚಾರಣೆ ನಡೆಸಿದ ಆಯೋಗ, ದಂಡ ವಿಧಿಸಿ ದೂರುದಾರರಿಗೆ ಪರಿಹಾರ ನೀಡುವಂತೆ ಆದೇಶಿಸಿದೆ.

ಬಡ್ಡಿ ಸಮೇತ ಠೇವಣಿ ಹಣ ಹಿಂದಿರುಗಿಸದ ದೈವಜ್ಞ ಪತ್ತಿನ ಸಹಕಾರಿ ಸಂಘಕ್ಕೆ ದಂಡ ವಿಧಿಸಿದ ಧಾರವಾಡ ಗ್ರಾಹಕರ ಆಯೋಗ
ಬಡ್ಡಿ ಸಮೇತ ಠೇವಣಿ ಹಣ ಹಿಂದಿರುಗಿಸದ ದೈವಜ್ಞ ಪತ್ತಿನ ಸಹಕಾರಿ ಸಂಘಕ್ಕೆ ದಂಡ ವಿಧಿಸಿದ ಧಾರವಾಡ ಗ್ರಾಹಕರ ಆಯೋಗ (ಸಾಂದರ್ಭಿಕ ಚಿತ್ರ)
Follow us
ನರಸಿಂಹಮೂರ್ತಿ ಪ್ಯಾಟಿ, ಧಾರವಾಡ
| Updated By: Rakesh Nayak Manchi

Updated on: Jan 02, 2024 | 9:13 PM

ಧಾರವಾಡ, ಜ.2: ಬಡ್ಡಿ ಸಮೇತ ಠೇವಣಿ ಹಣ ಹಿಂದಿರುಗಿಸದ ದೈವಜ್ಞ ಪತ್ತಿನ ಸಹಕಾರಿ ಸಂಘಕ್ಕೆ ದಂಡ ವಿಧಿಸಿ ದೂರುದಾರರಿಗೆ ಪರಿಹಾರ ನೀಡುವಂತೆ ಧಾರವಾಡ (Dharwad) ಗ್ರಾಹಕರ ಆಯೋಗ ಆದೇಶ ಹೊರಡಿಸಿದೆ. ಆಕಾಶವಾಣಿ ರಸ್ತೆಯ ನಿವಾಸಿ ಸುಮಿತ್ರಾ ಶೇಠ್ 2018-19ರಲ್ಲಿ ಧಾರವಾಡದ ದೈವಜ್ಞ ಪತ್ತಿನ ಸಹಕಾರಿ ಸಂಘದಲ್ಲಿ 3,90,000 ರೂ. ಠೇವಣಿ ಇಟ್ಟಿದ್ದರು. ಅದರ ಮೇಲೆ ಶೇ.8.5 ರಂತೆ ಬಡ್ಡಿ ಕೊಡಲು ಸಂಘದವರು ಒಪ್ಪಿದ್ದರು.

ಅಲ್ಲದೇ ದೂರುದಾರರ ಉಳಿತಾಯ ಖಾತೆಯಲ್ಲಿ 56,568 ರೂ. ಬಾಕಿ ಇತ್ತು. ಅವಧಿ ಮುಗಿದರೂ ಎದುರುದಾರ ಸಂಘದವರು ದೂರುದಾರರಿಗೆ ಠೇವಣಿ ಹಣ ಮತ್ತು ಅದರ ಬಡ್ಡಿಯ ಹಣ ಕೊಟ್ಟಿರಲಿಲ್ಲ. ಉಳಿತಾಯ ಖಾತೆಯ ಹಣವನ್ನು ಪಡೆಯಲು ಅವರು ಅನುಮತಿಸಿರಲಿಲ್ಲ. ಈ ಬಗ್ಗೆ ಹಲವು ಬಾರಿ ಸಂಘದವರಿಗೆ ಸುಮಿತ್ರಾ ವಿನಂತಿಸಿದರೂ ಏನೂ ಪ್ರಯೋಜನ ಆಗಿರಲಿಲ್ಲ. ಇದರಿಂದ ನೊಂದ ಸುಮಿತ್ರಾ ಧಾರವಾಡ ಜಿಲ್ಲಾ ಗ್ರಾಹಕರ ಆಯೋಗಕ್ಕೆ ದೂರು ಸಲ್ಲಿಸಿದ್ದರು.

ದೈವಜ್ಞ ಪತ್ತಿನ ಸಹಕಾರಿ ಸಂಘದವರು ವಕೀಲರ ಮೂಲಕ ಹಾಜರಾಗಿ ತಮ್ಮ ಮೇಲಿನವರ ಸೂಚನೆಯಂತೆ ತಮ್ಮ ಸಂಘದಲ್ಲಿರುವ ಎಲ್ಲಾ ಸದಸ್ಯರ ಠೇವಣಿ ಮತ್ತು ಇತರೆ ಹಣವನ್ನು ಪಿಎಮ್​ಸಿ ಬ್ಯಾಂಕ್‍ನಲ್ಲಿ ಇಟ್ಟಿರುವುದಾಗಿಯೂ, ಆ ಬ್ಯಾಂಕ್ ನಂತರ ಯುನಿಟಿ ಸ್ಮಾಲ್ ಫೈನಾನ್ಸ್ ಬ್ಯಾಂಕ್​ನಲ್ಲಿ ವಿಲೀನವಾಗಿದೆ. ಹೀಗಾಗಿ ತಾವು ಇಟ್ಟಿರುವ ಹಣವನ್ನು ಆ ಬ್ಯಾಂಕಿನಿಂದ ವಾಪಸ್ಸು ಪಡೆದು ಗ್ರಾಹಕರಾದ ಸುಮಿತ್ರಾ ಅವರಿಗೆ ಹಿಂದಿರುಗಿಸಲು ಕ್ರಮ ಕೈಗೊಳ್ಳುವುದಾಗಿ ಹೇಳಿದ್ದರು. ತಮ್ಮಿಂದ ಯಾವುದೇ ರೀತಿ ಸೇವಾ ನ್ಯೂನ್ಯತೆ ಆಗಿಲ್ಲ ಅಂತಾ ದೈವಜ್ಞ ಪತ್ತಿನ ಸಹಕಾರಿ ಸಂಘದವರು ಹೇಳಿ ದೂರನ್ನು ವಜಾ ಮಾಡುವಂತೆ ಕೋರಿದ್ದರು.

ಇದನ್ನೂ ಓದಿ: ಫ್ಯ್ಲಾಟ್‌ ನಿರ್ಮಿಸಿಕೊಡದ ಬಿಲ್ಡರ್‌! ಧಾರವಾಡ ಗ್ರಾಹಕರ ಆಯೋಗದ ಆದೇಶವೇನು?

ಈ ದೂರಿನ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷ ಈಶಪ್ಪ ಭೂತೆ, ಸದಸ್ಯರಾದ ವಿಶಾಲಾಕ್ಷಿ ಬೋಳಶೆಟ್ಟಿ ಹಾಗೂ ಪ್ರಭು ಹಿರೇಮಠ ಅವರು ದೂರುದಾರರು ಮತ್ತು ಎದುರುದಾರ ಸಂಘದವರ ಮಧ್ಯೆ ಆಗಿರುವ ಒಪ್ಪಂದದಂತೆ ಬಡ್ಡಿ ಸಮೇತ ಠೇವಣಿ ಹಣವನ್ನು ಅವಧಿ ಮುಗಿದ ನಂತರ ವಾಪಸ್ಸು ಕೊಡುವುದು ಸಂಘದವರ ಕರ್ತವ್ಯವಾಗಿದೆ. ಆದರೆ ದೂರುದಾರರ ಠೇವಣಿ ಹಣ ಹಿಂದಿರುಗಿಸದೇ ಇರುವುದು ಮತ್ತು ಅವರ ಉಳಿತಾಯ ಖಾತೆಯ ಹಣವನ್ನು ಪಡೆಯಲು ನಿರಾಕರಿಸಿರುವುದು ಗ್ರಾಹಕರ ರಕ್ಷಣಾ ಕಾಯ್ದೆ ಅಡಿ ಸೇವಾ ನ್ಯೂನ್ಯತೆ ಆಗುತ್ತದೆ ಅಂತಾ ಅಭಿಪ್ರಾಯಪಟ್ಟು ತೀರ್ಪು ನೀಡಿದ್ದಾರೆ.

ತೀರ್ಪು ನೀಡಿದ ಮೂರು ತಿಂಗಳ ಒಳಗಾಗಿ ಯುನಿಟಿ ಸ್ಮಾಲ್ ಫೈನಾನ್ಸ್ ಬ್ಯಾಂಕ್​ನೊಂದಿಗೆ ವ್ಯವಹರಿಸಿ ದೂರುದಾರರ ಠೇವಣಿ ಹಣ ಮತ್ತು ಉಳಿತಾಯ ಖಾತೆಯ ಹಣ 6,12,154 ರೂ. ಮತ್ತು ಅದರ ಮೇಲೆ ಶೇ. 8.50 ರಂತೆ ಬಡ್ಡಿ ಸಮೇತ ಲೆಕ್ಕ ಹಾಕಿ ಹಿಂದಿರುಗಿಸುವಂತೆ ಆಯೋಗ ಆದೇಶಿಸಿದೆ. ದೂರುದಾರರಿಗೆ ಆಗಿರುವ ಅನಾನುಕೂಲತೆ ಮತ್ತು ಮಾನಸಿಕ ಹಿಂಸೆಗಾಗಿ 25,000 ರೂ. ಪರಿಹಾರ ಹಾಗೂ ಈ ಪ್ರಕರಣದ ಖರ್ಚು ವೆಚ್ಚ ಅಂತಾ 10,000 ರೂ. ನೀಡುವಂತೆ ದೈವಜ್ಞ ಪತ್ತಿನ ಸಹಕಾರಿ ಸಂಘಕ್ಕೆ ಆಯೋಗ ನಿರ್ದೇಶಿಸಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ