ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಆರೋಪಿ ನಟ ದರ್ಶನ್ ಜೈಲು ಸೇರಿ ನಾಲ್ಕು ತಿಂಗಳಾಗಿವೆ. ಆರಂಭದ 14 ದಿನ ಪೊಲೀಸ್ ಕಸ್ಟಡಿಯಲ್ಲಿದ್ದ ದರ್ಶನ್ ಆ ನಂತರ ಕಳೆದಿದ್ದೆಲ್ಲ ಜೈಲಿನಲ್ಲೆ. ಮೊದಲಿಗೆ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ ಅಲ್ಲಿ ರಾಜಾತಿಥ್ಯ ಸ್ವೀಕರಿಸಿದ ಆರೋಪ ಹೊತ್ತು ಅಲ್ಲಿಂದ ಈಗ ಬಳ್ಳಾರಿ ಜೈಲಿಗೆ ಶಿಫ್ಟ್ ಆಗಿದ್ದಾರೆ. ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾಗಲೇ ತಮಗೆ ಬೆನ್ನು ಮತ್ತು ಕೈ ನೋವು ಇರುವ ಕಾರಣ ವಿಶೇಷ ಬೆಡ್ ಬೇಕೆಂದು, ಮನೆ ಊಟ ಬೇಕೆಂದು ಬೇಡಿಕೆ ಇಟ್ಟಿದ್ದರು. ಆದರೆ ಅದನ್ನು ನೀಡಲಾಗಿರಲಿಲ್ಲ. ನ್ಯಾಯಾಲಯದ ಹೋರಾಟವೂ ವ್ಯರ್ಥವೇ ಆಯ್ತು. ಆ ಬಳಿಕ ಬಳ್ಳಾರಿ ಜೈಲು ಸೇರಿರುವ ದರ್ಶನ್ಗೆ ಬೆನ್ನು ನೋವು ಹೆಚ್ಚಾಗಿದೆ. ಆದರೆ ದರ್ಶನ್ರ ಬೆನ್ನು ನೋವು ಕಾರಾಗೃಹ ಸಿಬ್ಬಂದಿಗೆ ತಲೆನೋವಾಗಿ ಪರಿಣಿಮಿಸಿದೆ.
ದರ್ಶನ್ಗೆ ಬೆನ್ನು ನೋವು ಹೆಚ್ಚಾಗಿದ್ದು, ಕಾರಾಗೃಹದ ವೈದ್ಯರು ವೀಕ್ಷಿಸಿ ಪೇಯಿನ್ ಕಿಲ್ಲರ್ ನೀಡಿದ್ದಾರೆ. ಅದಾದ ಬಳಿಕ ಹೊರಗಿನಿಂದ ವೈದ್ಯರನ್ನು ಕರೆಸಿ ತೋರಿಸಲಾಗಿದೆ. ವೈದ್ಯರು ಎಂಆರ್ಐ ಮತ್ತು ಇತರೆ ಕೆಲ ಸ್ಕ್ಯಾನ್ಗೆ ಸಲಹೆ ನೀಡಿದ್ದಾರೆ. ಆದರೆ ದರ್ಶನ್ ತಾವು ಯಾವುದೇ ಸ್ಕ್ಯಾನ್ಗೆ ಒಳಗಾಗುವುದಿಲ್ಲ ಎಂದು ಹಠ ಹಿಡಿದಿದ್ದಾರೆ. ಮಾತ್ರವೇ ಅಲ್ಲದೆ, ನಾನು ಚಿಕಿತ್ಸೆ ಪಡೆದುಕೊಂಡರೆ ಅದು ಬೆಂಗಳೂರಿನಲ್ಲೇ ಎಂದು ಪಟ್ಟು ಹಿಡಿದಿದ್ದಾರೆ. ಇದು ಪೊಲೀಸರಿಗೆ ತಲೆ ನೋವಾಗಿದೆ.
ಇದನ್ನೂ ಓದಿ:
ದರ್ಶನ್ ಅನ್ನು ಬಳ್ಳಾರಿಯ ಬೀಮ್ಸ್ ಆಸ್ಪತ್ರೆ ವೈದ್ಯರು ಪರೀಕ್ಷಿಸಿ ಸಿಟಿ ಸ್ಕ್ಯಾನ್ ಮತ್ತು ಎಂಆರ್ಐ ಸ್ಕ್ಯಾನ್ಗೆ ಸೂಚನೆ ನೀಡಿದ್ದಾರೆ. ಅಲ್ಲದೆ ದರ್ಶನ್ಗೆ ಶಸ್ತ್ರಚಿಕಿತ್ಸೆಯ ಅಗತ್ಯ ಇದೆ ಎಂದು ಸಹ ಹೇಳಿದ್ದಾರೆ. ವೈದ್ಯರ ಸಲಹೆಯಂತೆ ಬಳ್ಳಾರಿಯಲ್ಲಿಯೇ ಸಿಟಿ ಸ್ಕ್ಯಾನ್ ಮತ್ತು ಎಂಆರ್ಐ ಸ್ಕ್ಯಾನ್ ಮಾಡಲು ಪೊಲೀಸರು ಮುಂದಾಗಿದ್ದಾರೆ. ಆದರೆ ದರ್ಶನ್ ಇದನ್ನು ನಿರಾಕರಿಸಿದ್ದಾರೆ. ಯಾವುದೇ ಕಾರಣಕ್ಕೂ ನಾನು ಬಳ್ಳಾರಿಯಲ್ಲಿ ಚಿಕಿತ್ಸೆಯಾಗಲಿ ಅಥವಾ ಇನ್ಯಾವುದೇ ಸ್ಕ್ಯಾನ್ ಆಗಲಿ ಮಾಡಿಸಿಕೊಳ್ಳುವುದಿಲ್ಲ ಎಂದು ಪಟ್ಟು ಹಿಡಿಸಿದ್ದಾರೆ. ದರ್ಶನ್ರ ಮೊಂಡುತನದ ಬಗ್ಗೆ ಹಿರಿಯ ಅಧಿಕಾರಿಗಳ ಜೊತೆಗೆ ಬಳ್ಳಾರಿ ಪೊಲೀಸ್ ಸಿಬ್ಬಂದಿ ಮಾತನಾಡಿದ್ದಾರೆ. ದರ್ಶನ್ರ ಕುಟುಂಬಸ್ಥರು ಬಳ್ಳಾರಿ ಜೈಲಿಗೆ ಬಂದಾಗ ಅವರಿಗೆ ಪರಿಸ್ಥಿತಿಯ ಗಂಭೀರತೆಯನ್ನು ತಿಳಿಸಿ, ದರ್ಶನ್ರ ಮನವೊಲಿಸುವಂತೆ ಮಾಡುವ ಪ್ರಯತ್ನವನ್ನು ಬಳ್ಳಾರಿ ಜೈಲು ಸಿಬ್ಬಂದಿ ಮಾಡಲು ನಿರ್ಣಯಿಸಿದ್ದಾರೆ.
ಇನ್ನು ದರ್ಶನ್ ಜಾಮೀನು ಅರ್ಜಿಯ ವಿಚಾರಣೆ ಬೆಂಗಳೂರಿನ 57ನೇ ಸಿಸಿಎಚ್ ನ್ಯಾಯಾಲಯದಲ್ಲಿ ಇತ್ತೀಚೆಗಷ್ಟೆ ಮುಗಿದಿದ್ದು, ಸೋಮವಾರದಂದು ಜಾಮೀನು ಅರ್ಜಿಯ ತೀರ್ಪು ಹೊರಬೀಳಲಿದೆ. ಅದೇ ದಿನ ಪವಿತ್ರಾ ಸೇರಿದಂತೆ ಇತರೆ ಕೆಲವು ಆರೋಪಿಗಳ ಜಾಮೀನು ಅರ್ಜಿ ತೀರ್ಪು ಸಹ ಹೊರಗೆ ಬೀಳಲಿದೆ. ಸೋಮವಾರ ದರ್ಶನ್ಗೆ ಜಾಮೀನು ದೊರಕುವ ವಿಶ್ವಾಸದಲ್ಲಿ ಕುಟುಂಬಸ್ಥರು ಇದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ