ರೇಣುಕಾ ಸ್ವಾಮಿ ಕೊಲೆ ಆರೋಪಿ ದರ್ಶನ್ ಜೈಲು ಸೇರಿ ಐದು ತಿಂಗಳಾಗುತ್ತಾ ಬಂದಿದೆ. ಬಳ್ಳಾರಿ ಜೈಲಿನಲ್ಲಿರುವ ನಟ ದರ್ಶನ್ ಬೆನ್ನು ನೋವಿನಿಂದ ಒದ್ದಾಡುತ್ತಿದ್ದಾರೆ. ನ್ಯಾಯಾಲಯದಲ್ಲಿ ಸಲ್ಲಿಸಲಾಗಿದ್ದ ಜಾಮೀನು ಅರ್ಜಿ ವಜಾಗೊಂಡಿದೆ. ಇದೀಗ ಹೈಕೋರ್ಟ್ಗೆ ಜಾಮೀನು ಅರ್ಜಿ ಸಲ್ಲಿಸಲಾಗಿದ್ದು, ಅಕ್ಟೋಬರ್ 28 ರಂದು ವಿಚಾರಣೆ ನಡೆಯಲಿದೆ. ದರ್ಶನ್ ಕೊಲೆ ಆರೋಪದಲ್ಲಿ ಸಿಕ್ಕಿಕೊಂಡ ಬಳಿಕ ಕೆಲವು ಜಾಣ ನಿರ್ಮಾಪಕರು ದರ್ಶನ್ರ ಹಳೆ ಸಿನಿಮಾಗಳನ್ನು ಮರು ಬಿಡುಗಡೆ ಮಾಡುತ್ತಿದ್ದಾರೆ.
ದರ್ಶನ್ ಜೈಲು ಸೇರಿದ ಬಳಿಕ ಅವರ ನಟನೆಯ ‘ಮೆಜೆಸ್ಟಿಕ್’, ‘ಶಾಸ್ತ್ರಿ’ ಇನ್ನೂ ಕೆಲ ಸಿನಿಮಾಗಳನ್ನು ಮರು ಬಿಡುಗಡೆ ಮಾಡಲಾಗಿದೆ. ಈಗ ದರ್ಶನ್ ನಟನೆಯ ‘ನವಗ್ರಹ’ ಹಾಗೂ ‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ಸಿನಿಮಾಗಳು ಮರು ಬಿಡುಗಡೆ ಆಗುವ ಘೋಷಣೆ ಆಗಿತ್ತು. ಎರಡೂ ಸಿನಿಮಾಗಳು ಒಂದೇ ದಿನ ಮರು ಬಿಡುಗಡೆ ಆಗಲಿದ್ದವು. ಇದು ಅಭಿಮಾನಿಗಳ ಅಸಮಾಧಾನಕ್ಕೆ ಕಾರಣವಾಗಿತ್ತು. ಆದರೆ ಈಗ ಸಿನಿಮಾಗಳ ಬಿಡುಗಡೆ ದಿನಾಂಕವನ್ನು ಬದಲಾಯಿಸಲಾಗಿದೆ.
ದರ್ಶನ್ ನಟನೆಯ ಬ್ಲಾಕ್ ಬಸ್ಟರ್ ಸಿನಿಮಾ ‘ನವಗ್ರಹ’ ಅನ್ನು ನವೆಂಬರ್ 08 ಕ್ಕೆ ಮರು ಬಿಡುಗಡೆ ಮಾಡಲಾಗುತ್ತಿದೆ. ಮತ್ತೊಂದು ಸೂಪರ್ ಹಿಟ್ ಸಿನಿಮಾ ‘ಸಂಗೊಳ್ಳಿ ರಾಯಣ್ಣ’ ಸಿನಿಮಾದ ಬಿಡುಗಡೆ ದಿನಾಂಕ ಮುಂದೂಡಲಾಗಿದ್ದು, ಆ ಸಿನಿಮಾವನ್ನು ನವೆಂಬರ್ 22ಕ್ಕೆ ಮರು ಬಿಡುಗಡೆ ಮಾಡಲಾಗುತ್ತಿದೆ. ಮೊದಲಿಗೆ ಎರಡೂ ಸಿನಿಮಾಗಳು ನವೆಂಬರ್ 08 ರಂದೇ ಬಿಡುಗಡೆ ಆಗಲಿದ್ದವು. ಆದರೆ ಒಂದೇ ದಿನ ಎರಡು ಸಿನಿಮಾಗಳ ಮರು ಬಿಡುಗಡೆ ಬಗ್ಗೆ ಅಭಿಮಾನಿಗಳು ಆಕ್ಷೇಪ ವ್ಯಕ್ತಪಡಿಸಿದ್ದರು. ಅಭಿಮಾನಿಗಳ ಆಗ್ರಹ ಮನ್ನಿಸಿ ದಿನಾಂಕ ಬದಲಾವಣೆ ಮಾಡಲಾಗಿದೆ.
ಇದನ್ನೂ ಓದಿ:ದರ್ಶನ್ ತೂಗುದೀಪ ಬಂಧನವಾಗಿ ಇಂದಿಗೆ 100 ದಿನ; ಜೂನ್ 11ರಿಂದ ಇಲ್ಲಿಯವರೆಗೆ ಏನೆಲ್ಲ ಆಯ್ತು?
‘ನವಗ್ರಹ’ ಸಿನಿಮಾ ದರ್ಶನ್ ಅವರ ಹೋಂ ಬ್ಯಾನರ್ ಸಿನಿಮಾ ಆಗಿದ್ದು, ಸಿನಿಮಾದ ಮರು ಬಿಡುಗಡೆ ಬಗ್ಗೆ ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರು ಪೋಸ್ಟ್ ಹಂಚಿಕೊಂಡಿದ್ದರು. ಈ ಸಿನಿಮಾದ ಮರು ಬಿಡುಗಡೆಗೆ ಸಿನಿಮಾದಲ್ಲಿ ದರ್ಶನ್ ಗೆಳೆಯರ ಪಾತ್ರದಲ್ಲಿ ನಟಿಸಿದ್ದ ಕೆಲವು ಕಲಾವಿದರು ಒಟ್ಟಿಗೆ ಸೇರಲಿದ್ದು, ಎಲ್ಲರೂ ಒಟ್ಟಿಗೆ ದರ್ಶನ್ ಅಭಿಮಾನಿಗಳ ಜೊತೆ ಸೇರಿ ಸಿನಿಮಾ ವೀಕ್ಷಣೆ ಮಾಡಲಿದ್ದಾರೆ. ಸೃಜನ್ ಲೋಕೇಶ್, ವಿನೋದ್ ಪ್ರಭಾಕರ್, ತರುಣ್, ಗಿರಿ, ನಾಗೇಂದ್ರ ಅವರುಗಳು ಸಹ ಸಿನಿಮಾದ ಪ್ರಚಾರದಲ್ಲಿ ಭಾಗಿ ಆಗಲಿದ್ದಾರೆ. 16 ವರ್ಷದ ಹಿಂದೆ ಬಿಡುಗಡೆ ಆಗಿದ್ದ ‘ನವಗ್ರಹ’ ಈಗ ಮರು ಬಿಡುಗಡೆ ಆಗುತ್ತಿದೆ.
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ಸಿನಿಮಾ 2012 ರಲ್ಲಿ ಬಿಡುಗಡೆ ಆಗಿತ್ತು. ನಾಗೇಂದ್ರ ನಿರ್ದೇಶನ ಮಾಡಿದ್ದ ಈ ಸಿನಿಮಾವನ್ನು ಆನಂದ್ ಅಪ್ಪುಗೋಳ ನಿರ್ಮಾಣ ಮಾಡಿದ್ದರು. ಸಿನಿಮಾದಲ್ಲಿ ಜಯಪ್ರದಾ, ನಿಖಿತಾ ತುಕ್ರಾಲ್ ಅವರುಗಳು ನಟಿಸಿದ್ದರು. ಸಂಗೊಳ್ಳಿ ರಾಯಣ್ಣನ ಕತೆಯುಳ್ಳ ಈ ಸಿನಿಮಾ ಆಗ ದೊಡ್ಡ ಹಿಟ್ ಎನಿಸಿಕೊಂಡಿತ್ತು. ಈಗ ಸಿನಿಮಾ ಮರು ಬಿಡುಗಡೆ ಆಗುತ್ತಿದೆ. ‘ನಮ್ಮ ಪ್ರೀತಿಯ ರಾಮು’ ಸಿನಿಮಾ ಸಹ ಮರು ಬಿಡುಗಡೆ ಆಗಲಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 1:52 pm, Sat, 26 October 24