‘ಸಿನಿಮಾಗಳು ನಮ್ಮ ಮೇಲೆ ಪ್ರಭಾವ ಬೀರುತ್ತೆ ಅನಿಸುತ್ತಾ’; ದರ್ಶನ್ ಅರ್ಜಿಗೆ ಹೈಕೋರ್ಟ್ ಜಡ್ಜ್​ ಪ್ರಶ್ನೆ

'ಬಾಸ್' ಚಿತ್ರದ ಬಿಡುಗಡೆಗೆ ತಡೆ ಕೋರಿ ನಟ ದರ್ಶನ್ ಸಲ್ಲಿಸಿದ ಅರ್ಜಿಯ ವಿಚಾರಣೆ ವೇಳೆ ಕರ್ನಾಟಕ ಹೈಕೋರ್ಟ್ ಮಹತ್ವದ ಪ್ರಶ್ನೆಗಳನ್ನು ಕೇಳಿದೆ. ಚಿತ್ರದ ಕಥೆ ಮತ್ತು ಪಾತ್ರಗಳ ಹೆಸರು ರೇಣುಕಸ್ವಾಮಿ ಕೊಲೆ ಪ್ರಕರಣಕ್ಕೆ ಹೋಲುತ್ತಿದ್ದು, ಇದು ತೀರ್ಪಿನ ಮೇಲೆ ಪ್ರಭಾವ ಬೀರಬಹುದು ಎಂಬ ವಕೀಲರ ವಾದಕ್ಕೆ ನ್ಯಾಯಾಧೀಶರು ಖಾರ ಪ್ರತಿಕ್ರಿಯೆ ನೀಡಿದ್ದಾರೆ. ಸದ್ಯಕ್ಕೆ ಸಿನಿಮಾ ಬಿಡುಗಡೆ ಮಾಡಲ್ಲ ಎಂದು ನಿರ್ಮಾಪಕರು ತಿಳಿಸಿದ್ದು, ಮುಂದಿನ ವಿಚಾರಣೆ ಜುಲೈ 3ಕ್ಕೆ ನಿಗದಿಯಾಗಿದೆ.

‘ಸಿನಿಮಾಗಳು ನಮ್ಮ ಮೇಲೆ ಪ್ರಭಾವ ಬೀರುತ್ತೆ ಅನಿಸುತ್ತಾ’; ದರ್ಶನ್ ಅರ್ಜಿಗೆ ಹೈಕೋರ್ಟ್ ಜಡ್ಜ್​ ಪ್ರಶ್ನೆ
ಬಾಸ್ ಸಿನಿಮಾ

Updated on: Jul 02, 2026 | 6:33 AM

ಮುಖ್ಯಾಂಶಗಳು

  • 'ಬಾಸ್' ಚಿತ್ರ ಮತ್ತು ದರ್ಶನ್ ಪ್ರಕರಣ: ಕಥೆಯ ಸಾಮ್ಯತೆ ಹಾಗೂ ಪಾತ್ರಗಳ ಹೆಸರಿನಲ್ಲಿ ಹುಟ್ಟಿದ ವಿವಾದ
  • ಸಿನಿಮಾಗಳನ್ನು ನೋಡಿ ನ್ಯಾಯಾಧೀಶರು ಪ್ರಭಾವಿತರಾಗುತ್ತಾರೆಯೇ?; ಹೈಕೋರ್ಟ್ ಪ್ರಶ್ನೆ
  • ಜುಲೈ 3ಕ್ಕೆ ಮುಂದಿನ ವಿಚಾರಣೆ

ಕನ್ನಡದ ‘ಬಾಸ್’ ಚಿತ್ರಕ್ಕೆ (Boss Movie) ಸಂಕಷ್ಟ ಎದುರಾಗಿದೆ. ಈ ಚಿತ್ರದ ಬಿಡುಗಡೆಗೆ ತಡೆ ನೀಡಬೇಕು ಎಂದು ನಟ ದರ್ಶನ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ಕರ್ನಾಟಕ ಹೈಕೋರ್ಟ್ ಮಹತ್ವದ ಪ್ರಶ್ನೆ ಕೇಳಿದೆ. ಸಿನಿಮಾ ಬಿಡುಗಡೆಯಾದರೆ ಕ್ರಿಮಿನಲ್ ಪ್ರಕರಣದ ವಿಚಾರಣೆಯ ಮೇಲೆ ಪ್ರಭಾವ ಬೀರುತ್ತದೆ ಎಂದು ದರ್ಶನ್ ಪರ ವಕೀಲರು ವಾದಿಸಿದ್ದರು. ಈ ವಾದವನ್ನು ಕೋರ್ಟ್ ಪ್ರಶ್ನಿಸಿದೆ.

ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಆರೋಪಿ ಆಗಿದ್ದಾರೆ. ಈ ಪ್ರಕರಣ ಸಾಕಷ್ಟು ಚರ್ಚೆ ಹುಟ್ಟುಹಾಕಿದೆ. ಈಗಾಗಲೇ ‘ಬಾಸ್’ ಹೆಸರಿನ ಸಿನಿಮಾ ಸಿದ್ಧವಾಗಿದೆ. ಇದು ರೇಣುಕಸ್ವಾಮಿ ಕೊಲೆ ಪ್ರಕರಣವನ್ನು ಆಧರಿಸಿ ಮಾಡಿದಂತೆ ಟ್ರೇಲರ್‌ನಲ್ಲಿ ಮೇಲ್ನೋಟಕ್ಕೆ ಕಾಣಿಸುತ್ತದೆ. ಆದರೆ, ಇದನ್ನು ತಂಡ ಅಲ್ಲಗಳೆಯುತ್ತಲೇ ಬಂದಿದೆ. ಹೀಗಿರುವಾಗಲೇ ನಟ ದರ್ಶನ್ ಮತ್ತು ಅವರ ಪತ್ನಿ ವಿಜಯಲಕ್ಷ್ಮಿ ಸಿನಿಮಾಗೆ ತಡೆಕೋರಿ ಅರ್ಜಿ ಸಲ್ಲಿಕೆ ಮಾಡಿದ್ದರು. ನ್ಯಾಯಮೂರ್ತಿ ಪ್ರದೀಪ್ ಸಿಂಗ್ ಯೇರೂರ್ ಅವರ ಪೀಠ ವಿಚಾರಣೆ ನಡೆಸಿತು.

ಕೋರ್ಟ್ ನೇರ ಪ್ರಶ್ನೆ

ವಿಚಾರಣೆ ವೇಳೆ ದರ್ಶನ್ ಪರ ವಕೀಲರು ಆಸಕ್ತಿದಾಯಕ ವಾದ ಮಂಡಿಸಿದರು. ‘ಸಿನಿಮಾದಲ್ಲಿ ಕೋರ್ಟ್ ಟ್ರಯಲ್, ಸಾಕ್ಷ್ಯ ದಾಖಲಾತಿ ಮತ್ತು ತೀರ್ಪು ಪ್ರಕಟಿಸುವ ದೃಶ್ಯಗಳಿವೆ. ಕೊನೆಯಲ್ಲಿ ನಾಯಕ ಖುಲಾಸೆಗೊಂಡು ಎಂಎಲ್‌ಎ ಆಗುತ್ತಾನೆ. ಇದು ಪ್ರಸ್ತುತ ನಡೆಯುತ್ತಿರುವ ದರ್ಶನ್ ಪ್ರಕರಣದ ವಿಚಾರಣೆಯ ಮೇಲೆ ಪ್ರಭಾವ ಬೀರಬಹುದು’ ಎಂದು ವಕೀಲರು ಆತಂಕ ವ್ಯಕ್ತಪಡಿಸಿದರು. ಅಲ್ಲದೆ, ಆರೋಪಿಗೆ ನ್ಯಾಯಯುತ ವಿಚಾರಣೆಯ ಜೊತೆಗೆ ಶಾಂತ ಮನಸ್ಸಿನ ತೀರ್ಪು ಪಡೆಯುವ ಮೂಲಭೂತ ಹಕ್ಕಿದೆ ಎಂದರು.

ಇದಕ್ಕೆ ನ್ಯಾಯಮೂರ್ತಿಗಳು ಖಾರವಾಗಿ ಪ್ರತಿಕ್ರಿಯಿಸಿದರು. ‘ಶಾಂತ ಮನಸ್ಸಿನ ತೀರ್ಪು ಎಂದರೇನು? ನ್ಯಾಯಾಧೀಶರು ಸಿಟ್ಟಿನಿಂದ ಇರುತ್ತಾರೆ ಎಂದರ್ಥವೇ? ನ್ಯಾಯಾಧೀಶರು ಸಿನಿಮಾಗಳನ್ನು ನೋಡಿ ಪ್ರಭಾವಿತರಾಗುತ್ತಾರೆ ಎಂದು ನೀವು ಭಾವಿಸುತ್ತೀರಾ? ಎಷ್ಟು ಜನ ನ್ಯಾಯಾಧೀಶರು ಸಿನಿಮಾ ನೋಡುತ್ತಾರೆ ಎಂಬುದೇ ನನಗೆ ಗೊತ್ತಿಲ್ಲ’ ಎಂದು ನ್ಯಾ. ಪ್ರದೀಪ್ ಸಿಂಗ್ ಪ್ರಶ್ನಿಸಿದರು.

ಬಳಿಕ ವಕೀಲರು ಸ್ಪಷ್ಟನೆ ನೀಡಿ, ಸಿನಿಮಾ ಬಿಡುಗಡೆಯಾದರೆ ಸಾಕ್ಷಿದಾರರ ಮೇಲೆ ಪ್ರಭಾವ ಬೀರಬಹುದು ಎಂಬುದು ನಮ್ಮ ಆತಂಕ ಎಂದರು.

ಪಾತ್ರಗಳ ಹೆಸರು ಮತ್ತು ಟ್ಯಾಗ್‌ಲೈನ್

ಈ ಚಿತ್ರವು ‘ನೈಜ ಘಟನೆಗಳ ಆಧಾರಿತ’ ಎಂಬ ಡಿಸ್ಕ್ಲೈಮರ್ ಹೊಂದಿದೆ. ಜೊತೆಗೆ ’ಸತ್ಯಮೇವ ಜಯತೇ’ ಎಂಬ ಟ್ಯಾಗ್‌ಲೈನ್ ಬಳಸಲಾಗಿದೆ ಎಂದು ದರ್ಶನ್ ಪರ ವಕೀಲರು ಹೇಳಿದರು. ಇದು ಕೋರ್ಟ್​​ನಲ್ಲಿ ವಿಚಾರಣೆಯಲ್ಲಿರುವ ಕ್ರಿಮಿನಲ್ ಪ್ರಕರಣಕ್ಕೆ ಹೋಲಿಕೆ ಯಾಗುತ್ತದೆಎಂದು ಅವರು ವಾದಿಸಿದರು. ಅಷ್ಟೇ ಅಲ್ಲದೆ, ಚಿತ್ರದಲ್ಲಿ ನಾಯಕನ ಪತ್ನಿಯ ಹೆಸರು ‘ಲಕ್ಷ್ಮಿ’ ಎಂದು ಇಡಲಾಗಿದೆ. ದರ್ಶನ್ ಪತ್ನಿಯ ಹೆಸರು ವಿಜಯಲಕ್ಷ್ಮಿ ಆಗಿದೆ. ಚಿತ್ರದಲ್ಲಿ ನಾಯಕನಿಗೆ ಗೆಳತಿ ಇರುವಂತೆಯೂ ತೋರಿಸಲಾಗಿದೆ. ಇದು ದರ್ಶನ್ ಅವರ ಪತ್ನಿಯ ತೇಜೋವಧೆ ಮಾಡಿದಂತಾಗಿದೆ ಎಂದು ವಕೀಲರು ಕೋರ್ಟ್ ಗಮನಕ್ಕೆ ತಂದರು.

ಇದನ್ನೂ ಓದಿ: ದರ್ಶನ್ ವಿರುದ್ಧ ಸಾಕ್ಷಿ ಹೇಳದಂತೆ ಪ್ರಾಣ ಬೆದರಿಕೆ; ‘ಡಿ ಕಂಪನಿ’ ಫ್ಯಾನ್ ಪೇಜ್ ಅಡ್ಮಿನ್ ಸೇರಿ 3 ಫ್ಯಾನ್ಸ್ ಅರೆಸ್ಟ್

ಮುಂದಿನ ವಿಚಾರಣೆ ಜುಲೈ 3ಕ್ಕೆ

ಚಿತ್ರದ ನಿರ್ಮಾಪಕರು ಸದ್ಯಕ್ಕೆ ಸಿನಿಮಾ ಬಿಡುಗಡೆ ಮಾಡುವುದಿಲ್ಲ ಎಂದು ಈ ಹಿಂದೆಯೇ ಕೋರ್ಟ್‌ಗೆ ತಿಳಿಸಿದ್ದರು. ಈ ಹೇಳಿಕೆಯನ್ನು ಆದೇಶದ ರೂಪದಲ್ಲಿ ನೀಡಬೇಕು ಎಂದು ದರ್ಶನ್ ವಕೀಲರು ಕೋರಿದರು. ಆದರೆ ನ್ಯಾಯಾಲಯ ಇದಕ್ಕೆ ನಿರಾಕರಿಸಿತು. ನಿರ್ಮಾಪಕರೇ ಸಿನಿಮಾ ರಿಲೀಸ್ ಮಾಡಲ್ಲ ಎಂದಿರುವುದರಿಂದ ಯಾವುದೇ ಪ್ರತ್ಯೇಕ ಆದೇಶದ ಅಗತ್ಯವಿಲ್ಲ ಎಂದು ನ್ಯಾಯಾಧೀಶರು ತಿಳಿಸಿದರು. ಮುಂದಿನ ವಿಚಾರಣೆ ಜುಲೈ 3ಕ್ಕೆ ನಿಗದಿ ಮಾಡಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ರಾಜೇಶ್ ದುಗ್ಗುಮನೆ

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us