ನಟ ಧ್ರುವ ಸರ್ಜಾ (Dhruva Sarja) ಅವರು ತಂದೆ ಆಗಿದ್ದಾರೆ. ಅವರ ಪತ್ನಿ ಪ್ರೇರಣಾ ಶಂಕರ್ (Prerana Shankar) ಅವರು ಇಂದು (ಅ.2) ಹೆಣ್ಣು ಮಗುವಿಗೆ (Baby Girl) ಜನ್ಮ ನೀಡಿದ್ದಾರೆ. ಈ ಸುದ್ದಿ ಕೇಳಿ ಧ್ರುವ ಸರ್ಜಾ ಅವರ ಅಭಿಮಾನಿ ಬಳಗಕ್ಕೆ ಖುಷಿ ಆಗಿದೆ. ಸರ್ಜಾ ಕುಟುಂಬದಲ್ಲಿ ಸಂತಸ ಮನೆ ಮಾಡಿದೆ. ಮಗು ಜನಿಸಿದ ಬಳಿಕ ಮೊದಲ ಬಾರಿಗೆ ಮಾಧ್ಯಮಗಳ ಜೊತೆ ಧ್ರುವ ಮಾತನಾಡಿದ್ದಾರೆ. ಖುಷಿಯ ಸುದ್ದಿಯನ್ನು ಹಂಚಿಕೊಂಡು ನಗು ಚೆಲ್ಲಿದ್ದಾರೆ. ‘ಮಗಳು ಜನಿಸಿದ ಮೇಲೆ ಹೆಣ್ಮಕ್ಕಳ ಮೇಲಿನ ಗೌರವ ಇನ್ನೂ ಜಾಸ್ತಿ ಆಯ್ತು’ ಎಂದು ಧ್ರುವ ಸರ್ಜಾ ಹೇಳಿದ್ದಾರೆ. ಧ್ರುವ-ಪ್ರೇರಣಾ ದಂಪತಿಗೆ ಎಲ್ಲರೂ ಅಭಿನಂದನೆ ಸಲ್ಲಿಸುತ್ತಿದ್ದಾರೆ.
ಹೆಣ್ಣು ಮಗು ಜನಿಸಬೇಕು ಎಂಬುದು ಧ್ರುವ ಸರ್ಜಾ ಅವರ ಆಸೆ ಆಗಿತ್ತು. ಅವರ ಆಸೆ ಈಡೇರಿದೆ. ‘ನನಗೆ ತುಂಬ ಖುಷಿ ಆಗಿದೆ. ಈ ಸಂದರ್ಭದಲ್ಲಿ ಒಂದು ಮಾತು ಹೇಳಲು ಇಷ್ಟಪಡುತ್ತೇನೆ. ಸಹಜವಾಗಿಯೇ ಹುಡುಗಿಯರು ಎಂದರೆ ನನ್ನ ಮನದಲ್ಲಿ ಗೌರವ ಇತ್ತು. ಇಂದು ಎಲ್ಲ ಪ್ರಕ್ರಿಯೆಗಳನ್ನು ನೋಡಿದ ಮೇಲೆ ಆ ಮರ್ಯಾದೆ ಸ್ವಲ್ಪ ಜಾಸ್ತಿ ಆಯ್ತು’ ಎಂದು ಅವರು ಹೇಳಿದ್ದಾರೆ.
‘ಎಲ್ಲರ ಜೀವನದಲ್ಲೂ ಏಳು-ಬೀಳು ಇದ್ದೇ ಇರುತ್ತದೆ. ಅದೇ ರೀತಿ ನಮ್ಮಲ್ಲೂ ಇತ್ತು. ಸಾಕಷ್ಟು ದಂಪತಿಗಳಿಗೆ ಗರ್ಭಪಾತ ಆಗಿರುತ್ತದೆ. ಅದರ ಬಗ್ಗೆ ಕೆಲವರು ಹೇಳಿಕೊಳ್ತಾರೆ, ಇನ್ನೂ ಕೆಲವರು ಹೇಳಿಕೊಳ್ಳಲ್ಲ. ಹೆಣ್ಮಕ್ಕಳು ಆತ್ಮವಿಶ್ವಾಸ ಕಳೆದುಕೊಳ್ಳಬೇಡಿ ಅಂತ ನಾನು ಮನವಿ ಮಾಡಿಕೊಳ್ಳುತ್ತೇನೆ. ಇದಕ್ಕೆ ನಾವೇ ಉದಾಹರಣೆ. ಅದನ್ನೆಲ್ಲ ಈಗ ಮಾತನಾಡೋದು ಬೇಡ. ಸದ್ಯಕ್ಕೆ ನಾವು ಖುಷಿಯಾಗಿದ್ದೇವೆ. ವೈದ್ಯರಿಗೆ ಧನ್ಯವಾದ’ ಎಂದು ಧ್ರುವ ಸರ್ಜಾ ಹೇಳಿದ್ದಾರೆ.
‘ಎಲ್ಲರ ಆಶೀರ್ವಾದದಿಂದ ನಮಗೆ ಮುದ್ದಾದ ಮಗು ಜನಿಸಿದೆ. ಇಡೀ ನಮ್ಮ ಕುಟುಂಬ ಖುಷಿಯಾಗಿದೆ. ಈ ಸಮಯದಲ್ಲಿ ನಾನು ನಮ್ಮ ಅಣ್ಣನನ್ನು ಮಿಸ್ ಮಾಡಿಕೊಳ್ಳುತ್ತೇನೆ. ನಮ್ಮ ಅಜ್ಜಿಯನ್ನೂ ಮಿಸ್ ಮಾಡಿಕೊಳ್ಳುತ್ತೇನೆ. ಅಂಕಲ್ (ಅರ್ಜುನ್ ಸರ್ಜಾ) ಬರುತ್ತಾರೆ’ ಎಂದಿದ್ದಾರೆ ಧ್ರುವ.
2019ರಲ್ಲಿ ಧ್ರುವ ಮತ್ತು ಪ್ರೇರಣಾ ವಿವಾಹ ನೆರವೇರಿತ್ತು. ಈಗ ಮೊದಲ ಮಗು ಜನಿಸಿದೆ. ಕನ್ನಡ ಚಿತ್ರರಂಗದಲ್ಲಿ ಬೇಡಿಕೆಯ ನಟನಾಗಿ ಧ್ರುವ ಸರ್ಜಾ ಗುರುತಿಸಿಕೊಂಡಿದ್ದಾರೆ. ‘ಪೊಗರು’ ಬಳಿಕ ‘ಮಾರ್ಟಿನ್’ ಚಿತ್ರದಲ್ಲಿ ಅವರು ನಟಿಸುತ್ತಿದ್ದಾರೆ. ಈ ಸಿನಿಮಾ ಮೇಲೆ ಅಭಿಮಾನಿಗಳಿಗೆ ಸಖತ್ ನಿರೀಕ್ಷೆ ಇದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 2:26 pm, Sun, 2 October 22