2020 ಅನ್ನೋದು ಇತಿಹಾಸದ ಪುಟಗಳಲ್ಲಿ ಈ ಲೋಕ ಕಂಡ ಅತ್ಯಂತ ಕೆಟ್ಟ ವರ್ಷ -ನಟ ರವಿತೇಜ
2020 ಕರಾಳ ವರ್ಷವಾಗಿ ಸಾವು, ನೋವಿನಿಂದಲೇ ಹೆಚ್ಚಾಗಿ ತುಂಬಿದೆ. ಇನ್ನು ಕೋವಿಡ್ ನರ್ತನಕ್ಕೆ ಇಡೀ ಸಿನಿ ರಂಗ ತತ್ತರಿಸಿ ಹೋಗಿತ್ತು. ಈ ಬಗ್ಗೆ ನಿರ್ದೇಶಕ, ನಟ ರವಿತೇಜ ಮನದಾಳದ ಮಾತನ್ನು ಬಿಚ್ಚಿಟ್ಟಿದ್ದಾರೆ.
ಚಿಕ್ಕಮಗಳೂರು: ಕೊರೊನಾ ಲಸಿಕೆ ಬಳಕೆಗೆ ಬಂದಿದ್ದರೂ ಅದರ ಕಾಟ ಮಾತ್ರ ಕಡಿಮೆಯಾಗಿಲ್ಲ. 2020 ಕರಾಳ ವರ್ಷವಾಗಿ ಸಾವು, ನೋವಿನಿಂದಲೇ ಹೆಚ್ಚಾಗಿ ತುಂಬಿದೆ. ಇನ್ನು ಕೋವಿಡ್ ನರ್ತನಕ್ಕೆ ಇಡೀ ಸಿನಿ ರಂಗ ತತ್ತರಿಸಿ ಹೋಗಿತ್ತು. ಈ ಬಗ್ಗೆ ನಿರ್ದೇಶಕ, ನಟ ರವಿತೇಜ ಮನದಾಳದ ಮಾತನ್ನು ಬಿಚ್ಚಿಟ್ಟಿದ್ದಾರೆ.
2020 ಅನ್ನೋದು ಇತಿಹಾಸದ ಪುಟಗಳಲ್ಲಿ ಈ ಲೋಕ ಕಂಡ ಅತ್ಯಂತ ಕೆಟ್ಟ ವರ್ಷ ಅಂತಾನೆ ಹೇಳ್ಬೋದು. ಇಲ್ಲಿ ಯಾರಾದ್ರು ಏನಾದ್ರೂ ಮಾಡಿದ್ದಕ್ಕಿಂತ ಮಡಿದವರೆ ಜಾಸ್ತಿ. ಅದೆಷ್ಟೋ ಬಂಧುಗಳು, ಮಿತ್ರರು, ಹಿತೈಷಿಗಳನ್ನ ಕಳ್ಕೊಂಡ ವರ್ಷ ಇದು. ಇಡೀ ಚಿತ್ರರಂಗವೇ ICU ನಲ್ಲಿ ಇದೆ ಏನೊ ಅನ್ನೋ ಅಷ್ಟು ಸ್ತಬ್ಧವಾಗಿದೆ, ಯಾವಾಗ ಚೇತರಿಸಿಕೊಳ್ಳತ್ತೊ ಆ ದೇವರ ಬಲ್ಲ ಎಂದು ರವಿತೇಜ ಕಳೆದ ವರ್ಷದ ಕಹಿ ಘಟನೆಗಳನ್ನು ಮೆಲುಕು ಹಾಕಿದ್ರು.
ಮುಂದೆ ಎಲ್ಲಾ ಒಳ್ಳೆದಾಗುತ್ತೆ ಭವಿಷ್ಯ ಹೇಳುವವರ ಭವಿಷ್ಯನೆ ಉಲ್ಟಾ ಹೊಡ್ದ ವರ್ಷ ಇದು. ವೈಯಕ್ತಿಕ ವಿಚಾರಕ್ಕೆ ಬಂದ್ರೆ “ಸಾಗುತ ದೂರ ದೂರ” ಫೆಬ್ರವರಿ 14 ರಿಲೀಸ್ ಆಯ್ತು ನಿಧಾನವಾಗಿ ಜನ ಮನ್ನಣೆಗಳುಸ್ತಾ ಮುನ್ನುಗ್ತಾ ಇರ್ಬೇಕಾದ್ರೆ ಲಾಕ್ ಡೌನ್ ಆಯ್ತು. ನನ್ನ ಪರಿಸ್ಥಿತಿ ಹೇಗಿತ್ತು ಅಂದ್ರೆ ಆಯ್ಕೊಂಡು ತಿಂತಾ ಇದ್ದಿದ್ ಕೋಳಿನಾ ಕಾಲ್ ಮುರಿದು ಮೂಲೇಲಿ ಕೂರಿಸಿದರು ಅನ್ನೊಂಗೆ. ಆದ್ರು ಏನು ಮಾಡಕ್ಕಾಗಲ್ಲ ಕಾಲದ ಜೊತೆ ಕಾಲು ಹಾಕ್ಲೇಬೇಕು. ಕಳ್ಕೊಂಡಿದ್ದು ಕಳ್ಕೊಂಡಾಗಿದೆ ಮುಂದೇನ್ ಪಡ್ಕೊತ್ತೀವಿ ಅನ್ನೋ ನಿರೀಕ್ಷೆಯೊಂದಿಗೆ 2021ಗೆ ಕಾಲಿಡ್ತಾ ಇದ್ದೀವಿ. ಮುಂದೆ ಎಲ್ಲಾ ಒಳ್ಳೆದಾಗುತ್ತೆ ಅನ್ನೋ ಭರವಸೆಯಿದೆ.
ಈಗಾಗ್ಲೆ ನನ್ನ ಸ್ನೇಹಿತ ಕಲ್ಯಾಣ್ ಶುರು ಮಾಡಿರೋ CVR Cinetainment ಎಂಬ ಕಂಪೆನಿಯಲ್ಲಿ ಕೆಲಸ ಶುರು ಮಾಡಿದ್ದೀವಿ. ಇದರ ಮುಖಾಂತರ ಅನೇಕ ಸಿನಿಮಾಗಳನ್ನ ಮಾಡೋ ಯೋಜನೆ ಇದೆ. ಅಂದುಕೊಂಡಂತೆ ಎಲ್ಲ ನಡೆದರೆ “ದಿಲ್ ಮಾಂಗೆ ಮೋರ್” ಮತ್ತು “ಕಂಟ್ರಿ ಸರಾಯಿ” ಎರಡು ಸಿನಿಮಾವನ್ನು ಜನರ ಮುಂದೆ ತರುತ್ತೇವೆ. ನಾನು ನಾಯಕ ನಟನಾಗಿರೋ “ಶಾರ್ದೂಲ” ಕೂಡ ಫೆಬ್ರವರಿ ಅಥವಾ ಮಾರ್ಚ್ ತಿಂಗಳಲ್ಲಿ ಬಿಡುಗಡೆ ಮಾಡುವ ಸಂಭವವಿದೆ.
ಕಳೆದ ವರ್ಷಕ್ಕೆ ಬಾಯ್ ಹೇಳುತ್ತ ಹೊಸ ವರ್ಷಕ್ಕೆ ಹಾಯ್ ಹೇಳ್ತಾ ಕೊನೆದಾಗಿ ಒಂದು ಮಾತು ಹೇಳಕ್ಕೆ ಇಷ್ಟ ಪಡ್ತೀನಿ ಇಷ್ಟು ದಿನ ಕೆಟ್ಟ ಕೆಲಸ ಮಾಡ್ದೋರೆಲ್ಲಾ ಇನ್ಮುಂದೆ ಒಳ್ಳೆ ಕೆಲಸ ಮಾಡಿ. ಒಳ್ಳೆ ಕೆಲಸ ಮಾಡ್ತಿದ್ದೋರೆಲ್ಲಾ ಇನ್ನೂ ಒಳ್ಳೆ ಕೆಲಸ ಮಾಡಿ. ಆ ಭಗವಂತ ನಮಗೆ ನಿಮಗೆ ಹಾಗೂ ನಮ್ಮ ಮುಂದಿನ ಪೀಳಿಗೆಗೆ ಒಳ್ಳೇದು ಮಾಡ್ತಾನೆ. ಒಳ್ಳೆಯದನ್ನೇ ಮಾಡೋಣ ಒಳ್ಳೆದನ್ನೇ ಬಯಸೋಣ ಎಂದು ಹೊಸ ವರ್ಷಕ್ಕೆ ಹೊಸ ಹೊಸ ಯೋಜನೆಗಳೊಂದಿಗೆ ರವಿತೇಜ ಶುಭ ಹಾರೈಸಿದ್ರು.
Published On - 9:08 am, Sun, 3 January 21