ಬೆಂಗಳೂರು:ಲಾಕ್ಡೌನ್ ಬಳಿಕ ಚಿತ್ರಮಂದಿರಗಳು ಬಿಕೋ ಅನ್ನುತ್ತಿದ್ದವು. ಸಿನಿಮಾ ಅಭಿಮಾನಿಗಳ ಸಂಭ್ರಮವನ್ನು ಕೊರೊನಾ ಕಸಿದುಕೊಂಡಿತ್ತು. ಈ ಮಧ್ಯೆ, ಹೊಸ ಸಿನಿಮಾ ಇಲ್ಲ.. ಎಂದು ಕೊರಗುತ್ತಿದ್ದ ಕಲಾರಸಿಕರಿಗೆ ನವೆಂಬರ್ 20 ಹೊಸ ಖುಷಿ ನೀಡಲಿದೆ. ಹರಿವು, ನಾತಿಚರಾಮಿ ಖ್ಯಾತಿಯ ಮಂಸೋರೆ ನಿರ್ದೇಶನದ ಹೊಸ ಚಿತ್ರ ‘ಆಕ್ಟ್-1978’ ನಾಳೆ ತೆರೆಕಾಣಲಿದೆ.
ಈ ಹಿಂದಿನ ಸಿನಿಮಾಗಳಲ್ಲಿ ಸಾಮಾಜಿಕ ಕಾಳಜಿಗೆ ವಿಶೇಷ ಪ್ರಾತಿನಿಧ್ಯ ನೀಡಿರುವ ನಿರ್ದೇಶಕರು ಈ ಸಿನಿಮಾದಲ್ಲೂ ಸಾಮಾಜಿಕ ಹೊಣೆಯ ಗುಣವನ್ನು ತೋರಿದ್ದಾರೆ. ಸರಣಿ ಪೋಸ್ಟರ್ಗಳ ಮೂಲಕ ಹಲವು ಸಾಮಾಜಿಕ ಕಳಕಳಿಯ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಈ ಬಗ್ಗೆ ಟಿವಿ9 ಡಿಜಿಟಲ್ ತಂಡದೊಂದಿಗೆ ಮಾತನಾಡಿರುವ ಮಂಸೋರೆ, ಚಿತ್ರದ ಆರಂಭಿಕ ಹಂತದಲ್ಲಿ ಸಂಶೋಧನೆ ನಡೆಸುತ್ತಿದ್ಧಾಗ ಸಿಕ್ಕ ವಿಷಯಗಳನ್ನು ಹೀಗೆ ಬಳಸಿಕೊಂಡಿದ್ದೇವೆ. ಇದು ಕಥೆಗಾರ ಟಿ.ಕೆ. ದಯಾನಂದ್ ಅವರ ಆಲೋಚನೆ ಎಂದಿದ್ದಾರೆ.
ಸಾಮಾಜಿಕ ಕಾಳಜಿಯು ಕೇವಲ ಪೋಸ್ಟರ್ ಮತ್ತು ಪ್ರಚಾರಗಳಿಗೆ ಸೀಮಿತವಾಗಿಲ್ಲ ಎಂದ ನಿರ್ದೇಶಕರು, ಸಾಮಾಜಿಕ ಕಾಳಜಿಯ ಎಲ್ಲಾ ನಾಗರಿಕರ ಜವಾಬ್ದಾರಿ. ಅದರಲ್ಲೂ ಕಲಾವಿದರಿಗೆ ಈ ಹೊಣೆ ತುಸು ಹೆಚ್ಚೇ ಇರುತ್ತದೆ. ಜನತೆಗೆ ಒಳ್ಳೆಯದನ್ನು ಕೊಟ್ಟ ತೃಪ್ತಿ ಕಲಾವಿದನಿಗೆ ಇರಬೇಕು. ನಮ್ಮ ಸಾಮಾಜಿಕ ಕಳಕಳಿ ನಿರ್ಮಾಪಕರಿಗೆ ಮುಳುವಾಗಬಾರದು. ನಿರ್ದೇಶಕನಾಗಿ ಆ ಯೋಚನೆಯೂ ನನಗೆ ಇರಬೇಕಾಗುತ್ತದೆ ಎಂದಿದ್ದಾರೆ.
ಜನಪ್ರಿಯ ಮಾದರಿಯ ಸಿನಿಮಾ ನಿರ್ಮಾಣದ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡ ಮಂಸೋರೆ, ಪಾಪ್ಯುಲರಿಸಂ ಅನ್ನು ಪೂರ್ಣವಾಗಿ ತಿರಸ್ಕರಿಸಲು ಆಗುವುದಿಲ್ಲ. ಅದನ್ನು ಜಾಗರೂಕತೆಯಿಂದ ಸಿನಿಮಾದಲ್ಲಿ ಅಳವಡಿಸಿಕೊಳ್ಳಬೇಕು. ಹಾಗೆ ಮಾಡುವುದನ್ನು ಹರಿವು, ನಾತಿಚರಾಮಿಯಲ್ಲಿ ಹಂತ ಹಂತವಾಗಿ ಕಲಿತಿದ್ದೇನೆ. ಈಗ ಆಕ್ಟ್-1978 ನಲ್ಲಿ ತುಸು ಹೆಚ್ಚು ಪರಿಣಾಮಕಾರಿಯಾಗಿ ಅಳವಡಿಸಿಕೊಂಡಿದ್ದೇನೆ ಎಂದಿದ್ದಾರೆ.
ಲಾಕ್ಡೌನ್ ಬಳಿಕ 100 ಚಿತ್ರಮಂದಿರಗಳಲ್ಲಿ ಬಿಡುಗಡೆ!
ಸಿನಿಮಾ ಬಿಡುಗಡೆ ಕುರಿತು ಮಾಹಿತಿ ಹಂಚಿಕೊಂಡ ನಿರ್ದೇಶಕ ಮಂಸೋರೆ, ಎಲ್ಲರೂ ಸಿನಿಮಾದ ಪ್ರಮೋಷನ್ ಮಾಡುತ್ತಿದ್ದರು. ಯಾರೂ ಸಿನಿಮಾ ಬಿಡುಗಡೆಗೆ ಮನಸ್ಸು ಮಾಡಿರಲಿಲ್ಲ. ಗ್ರೌಂಡ್ ಖಾಲಿ ಇತ್ತು. ಹಾಗಾಗಿ ನಾವು ಧೈರ್ಯ ಮಾಡಿ ಕಣಕ್ಕಿಳಿದೆವು. 35-40 ಮಲ್ಟಿಪ್ಲೆಕ್ಸ್ಗಳಲ್ಲಿ ಚಿತ್ರ ಬಿಡುಗಡೆಗೊಳಿಸುವ ಯೋಚನೆ ನಮ್ಮದಾಗಿತ್ತು.
ಆದರೆ ಟ್ರೈಲರ್ ರಿಲೀಸ್ ಆದನಂತರ ಸಿನಿಮಾ ಬಗ್ಗೆ ಬಹಳ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹಲವಾರು ಜನರನ್ನು ತಲುಪುವಲ್ಲಿ ಆಕ್ಟ್-1978 ಯಶಸ್ವಿಯಾಗಿದೆ. ಈಗ ಥಿಯೇಟರ್ ಮಾಲಿಕರೇ ಸಿನಿಮಾ ಹಾಕಿಕೊಳ್ಳುವಂತೆ ಕೇಳುತ್ತಿದ್ದಾರೆ. 85-90 ಎಂದು ಚಿತ್ರಮಂದಿರಗಳ ಪಟ್ಟಿ ಬೆಳೆಯುತ್ತಿದೆ. ನಾಳೆಯೊಳಗೆ 100 ಚಿತ್ರಮಂದಿರಗಳನ್ನು ತಲುಪುವ ನಿರೀಕ್ಷೆ ಇದೆ ಎಂದು ಹೇಳಿದ್ದಾರೆ.