
ಆನ್ಲೈನ್ನಲ್ಲಿ ಇತ್ತೀಚೆಗೆ ವಂಚನೆ ಮಾಡುವ ಜಾಲಗಳ ಸಂಖ್ಯೆ ದೊಡ್ಡ ಮಟ್ಟದಲ್ಲಿ ಹುಟ್ಟಿಕೊಳ್ಳುತ್ತಿದೆ. ನಿಮ್ಮ ಬ್ಯಾಂಕ್ ಖಾತೆಗೆ ಕನ್ನ ಹಾಕುವವರದ್ದೇ ಒಂದು ಗುಂಪಾದರೆ, ಅವಕಾಶ ನೀಡುತ್ತೇನೆಂದು ಪಂಗನಾಮ ಹಾಕುವವರದ್ದು ಮತ್ತೊಂದು ಗುಂಪು. ಇದೇ ರೀತಿ ಡಾಲಿ ಧನಂಜಯ್ ಹೆಸರಲ್ಲಿ ಅವಕಾಶ ನೀಡುತ್ತೇನೆಂದು ಪೋಸ್ಟ್ಗಳನ್ನು ಹಾಕುತ್ತಿರುವ ವಿಚಾರ ಈಗ ಬೆಳಕಿಗೆ ಬಂದಿದೆ. ಆ ಬಗ್ಗೆ ಖುದ್ದು ಧನಂಜಯ್ ಎಚ್ಚರಿಕೆ ನೀಡಿದ್ದಾರೆ.
ಟಗರು ಸಿನಿಮಾದಲ್ಲಿ ಡಾಲಿ ಹೆಸರಿನ ರೌಡಿ ಆಗಿ ಕಾಣಿಸಿಕೊಂಡಿದ್ದ ಧನಂಜಯ್, ನಂತರ ಅದೇ ಹೆಸರಲ್ಲಿ ಖ್ಯಾತಿ ಪಡೆದುಕೊಂಡು ಬಿಟ್ಟರು. ಈಗಲೂ ಕೂಡ ಅನೇಕ ನಿರ್ದೇಶಕರು ಡಾಲಿ ಧನಂಜಯ್ ಕಾಲ್ಶೀಟ್ಗೆ ಕಾದು ನಿಲ್ಲುತ್ತಾರೆ. ಈ ಮಧ್ಯೆ ಅನೇಕರು, ಧನಂಜಯ್ ಹೆಸರನ್ನು ಬಳಕೆ ಮಾಡಿಕೊಂಡು ಅವಕಾಶ ನೀಡುವುದಾಗಿ ನಕಲಿ ಪೋಸ್ಟ್ ಹಾಕಿರುವ ಪ್ರಕರಣ ಬೆಳಕಿಗೆ ಬಂದಿದೆ.
ಈ ಬಗ್ಗೆ ಧನಂಜಯ್ ತಮ್ಮ ಟ್ವಿಟರ್ ಅಕೌಂಟ್ನಲ್ಲಿ ಫೇಸ್ಬುಕ್ನಲ್ಲಿ ಪ್ರಕಟವಾಗಿದ್ದ ಸ್ಕ್ರೀನ್ಶಾಟ್ ಒಂದನ್ನು ಪೋಸ್ಟ್ ಮಾಡಿದ್ದಾರೆ. ಅದರಲ್ಲಿ, ಹೊಸ ಕನ್ನಡ ಸಿನಿಮಾಗೆ ನಾವು ಪೋಷಕ ಪಾತ್ರಧಾರಿಗಳನ್ನು ಹುಡುಕುತ್ತಿದ್ದೇವೆ. ಈ ಸಿನಿಮಾದಲ್ಲಿ ಡಾಲಿ ಧನಂಜಯ್ ನಟಿಸುತ್ತಿದ್ದಾರೆ. ಯಾರಿಗಾದರೂ ಆಸಕ್ತಿ ಇದ್ದರೆ ಇನ್ಬಾಕ್ಸ್ನಲ್ಲಿ ಮೆಸೇಜ್ ಮಾಡಿ. ವೃತ್ತಿಪರರಿಗೆ ಮಾತ್ರ ಆದ್ಯತೆ ಎಂದಿತ್ತು.
ಈ ಬಗ್ಗೆ ಬರೆದಿರುವ ಧನಂಜಯ್, ಈ ರೀತಿಯ ಪೋಸ್ಟ್ಗಳನ್ನು ನಂಬಿ ಮೋಸ ಹೋಗಬೇಡಿ. ಈ ತರಹ ಎರಡು ಮೂರು ಘಟನೆಗಳು ಗಮನಕ್ಕೆ ಬಂದಿವೆ. ಸಾಮಾಜಿಕ ಜಾಲತಾಣದಲ್ಲಿ ಬರುವ ಯಾವುದೇ ವಿಚಾರವನ್ನು ನಂಬುವ ಮೊದಲು ಪರಿಶೀಲನೆ ನಡೆಸಿ ಎಂದು ಕೋರಿದ್ದಾರೆ.
ಸಿನಿಮಾ ವಿಚಾರಕ್ಕೆ ಬರೋದಾದರೆ ಡಾಲಿ ಧನಂಜಯ್ 10ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಸಲಗ, ಯುವರತ್ನ ಸೇರಿ ಪ್ರಮುಖ ಸಿನಿಮಾಗಳು ಅವರ ಕೈಯಲ್ಲಿವೆ. ತೆಲುಗಿನ ಪುಷ್ಪ ಚಿತ್ರದಲ್ಲೂ ಧನಂಜಯ್ ಬಣ್ಣ ಹಚ್ಚುತ್ತಿದ್ದಾರೆ.
Published On - 2:45 pm, Mon, 7 December 20