ಬದುಕು ಕಟ್ಟಿಕೊಳ್ಳಬೇಕು ಎನ್ನುವ ಕಾರಣಕ್ಕೆ ಸಾಕಷ್ಟು ಜನರು ಬೆಂಗಳೂರಿಗೆ ತೆರಳಿದ್ದಾರೆ. ಆದರೆ, ಕೊವಿಡ್ ಕಾಣಿಸಿಕೊಂಡ ನಂತರದಲ್ಲಿ ಅನೇಕರು ಹುಟ್ಟೂರಿಗೆ ಮರಳಿದ್ದಾರೆ. ಅಷ್ಟೇ ಅಲ್ಲ, ಬೆಂಗಳೂರಿನಿಂದ ಮರಳುವಾಗ ಬದುಕು ಕೊಟ್ಟ ಊರನ್ನು ತೆಗಳಿದ್ದಾರೆ. ಈ ಬಗ್ಗೆ ಸಾಕಷ್ಟು ಪರ-ವಿರೋಧ ಚರ್ಚೆಗಳು ನಡೆದಿದ್ದವು. ತಿಮ್ಮೇಗೌಡ ಎಂಜೆ ಅವರು ಈ ಬಗ್ಗೆ ಹಾಡನ್ನೇ ಸಿದ್ಧಪಡಿಸಿದ್ದಾರೆ. ಈ ಮೂಲಕ ಜನರ ಕಣ್ತೆರಿಸುವ ಪ್ರಯತ್ನ ಮಾಡಿದ್ದಾರೆ.
ಹಾಡಿನ ಪರಿಕಲ್ಪನೆ ಹುಟ್ಟಿದ್ದರ ಬಗ್ಗೆ ತಿಮ್ಮೇಗೌಡ ಟಿವಿ9 ಕನ್ನಡ ಡಿಜಿಟಲ್ ಜತೆಗೆ ಮಾತನಾಡಿದ್ದಾರೆ. ‘ಬೆಂಗಳೂರಿಗೆ ಬಂದು ಸಾಕಷ್ಟು ಜನರು ಬದುಕು ಕಟ್ಟಿಕೊಂಡಿದ್ದಾರೆ. ಕೊರೊನಾ ಬಂತು ಎನ್ನುವ ಒಂದೇ ಕಾರಣಕೊಟ್ಟು ಅನೇಕರು ಬದುಕು ಕೊಟ್ಟ ಊರಿಗೆ ಬೈದು ಹೋದರು. ಇದನ್ನು ಸುದ್ದಿವಾಹಿನಿಗಳಲ್ಲಿ ನೋಡಿದಾಗ ನನಗೆ ಬೇಸರವಾಯಿತು. ಜನ್ಮಕೊಟ್ಟ ತಾಯಿ- ಬದುಕು ಕೊಟ್ಟ ನಗರ ಎರಡೂ ಒಂದೇ. ಆಗ ನನಗೆ ಈ ಕಲ್ಪನೆ ಹುಟ್ಟಿಕೊಂಡಿತು’ ಎನ್ನುತ್ತಾರೆ ಅವರು.
‘ಈ ಕಲ್ಪನೆ ಬಗ್ಗೆ ನಮ್ಮ ಟೀಂ ಜತೆ ಮಾತನಾಡಿದೆ. ಎಲ್ಲರೂ ಈ ಕಾನ್ಸೆಪ್ಟ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಹೀಗಾಗಿ, ನಾನು ಈ ಪರಿಕಲ್ಪನೆಗೆ ಸಾಹಿತ್ಯ ಬರೆದು, ಸಂಗೀತ ಸಂಯೋಜನೆ ಮಾಡಿದೆ. ಗಾಯಕ ಅಶ್ವಿನ್ ಶರ್ಮಾ ಈ ಹಾಡನ್ನು ಹಾಡಿದರು. ಪ್ರಣಿತಾ ಸುಭಾಷ್, ವಸಿಷ್ಠ ಸಿಂಹ ಸೇರಿ ಸಾಕಷ್ಟು ಸೆಲೆಬ್ರಿಟಿಗಳು ಬೈಟ್ ಕಳುಹಿಸಿಕೊಟ್ಟರು. ಈ ಹಾಡು ತುಂಬಾನೇ ಕಡಿಮೆ ಬಜೆಟ್ನಲ್ಲಿ ಸಿದ್ಧಗೊಂಡಿದೆ. ಇದಕ್ಕೆ ಕಾರಣ ನನ್ನ ಟೀಂ. ಅವರೆಲ್ಲರಿಗೂ ನಾನು ಈ ಸಂದರ್ಭದಲ್ಲಿ ಧನ್ಯವಾದ ಅರ್ಪಿಸಲೇಬೇಕು. ಈ ಹಾಡಿಗೆ ಎಲ್ಲ ಕಡೆಯಿಂದ ಒಳ್ಳೆಯ ರೆಸ್ಪಾನ್ಸ್ ಬರುತ್ತಿದೆ ಎಂದು ಸಂತಸ ಹಂಚಿಕೊಳ್ಳುತ್ತಾರೆ’ ತಿಮ್ಮೇಗೌಡ.
ಈ ಹಾಡಿನ ಪರಿಕಲ್ಪನೆ, ಸಾಹಿತ್ಯ ಮತ್ತು ಸಂಗೀತ ಸಂಯೋಜನೆಯನ್ನು ತಿಮ್ಮೇಗೌಡ ಮಾಡಿದ್ದಾರೆ. ಹಾಡಿಗೆ ಗಾಯಕ ಅಶ್ವಿನ್ ಶರ್ಮ ಧ್ವನಿ ನೀಡಿದ್ದಾರೆ. ಪಂಕಜ್ ಅವರು ಸಂಗೀತ ನಿರ್ಮಾಣ ಮಾಡಿದ್ದು, ಕ್ರಿಯೇಟಿವ್ ಹೆಡ್ ಆಗಿ ಅಭಿಷೇಕ್, ಎಡಿಟಿಂಗ್‌ನಲ್ಲಿ ಕಿರಣ್, ಪ್ರೊಡಕ್ಷನ್ ವಿನ್ಯಾಸಕಾರರಾಗಿ ಮಮತಾ ಮಾರ್ದಲ ಕೆಲಸ ಮಾಡಿದ್ದಾರೆ.
ಖಾಸಗಿ ಸುದ್ದಿ ವಾಹಿನಿಯಲ್ಲಿ ಕ್ರೈಮ್ ರಿಪೋರ್ಟರ್ ಆಗಿದ್ದ ತಿಮ್ಮೇಗೌಡ ಅವರಿಗೆ ಸಂಗೀತದ ಮೇಲೆ ಎಲ್ಲಿಲ್ಲದ ಆಸಕ್ತಿ. ಹೀಗಾಗಿ, ಕೆಲಸ ತೊರೆದು ಹಂಸಲೇಖ ಅವರ ಶಿಷ್ಯರಾದರು. ಅಲ್ಲಿ 2 ವರ್ಷ ಕಲಿತ ನಂತರ, ಅವರ ಬತ್ತಳಿಕೆಯಿಂದ ಮೂಡಿ ಬಂದ ಮೊದಲ ಹಾಡು ಇದಾಗಿದೆ. ತಿಮ್ಮೇಗೌಡ ಅವರಿಗೆ ಮ್ಯೂಸಿಕ್ ವಿಡಿಯೋಗಳನ್ನು ಮಾಡುವ ಕನಸು ಇದೆ. ಈ ಮೊದಲು ಅವರು ‘ತಂಬೂರಿ’ ಹೆಸರಿನ ಕಿರುಚಿತ್ರ ಮಾಡಿದ್ದರು.
ಇದನ್ನೂ ಓದಿ: Bengaluru Unlock : ಸೋಮವಾರ ಬೆಳಗ್ಗೆ 6 ಗಂಟೆಯಿಂದಲೇ ಬೆಂಗಳೂರು ಅನ್ಲಾಕ್
Published On - 9:35 pm, Thu, 10 June 21