‘ವಿಕ್ರಾಂತ್ ರೋಣ’, ‘ಡೆಡ್ಲಿ ಸೋಮ’ ನಿರ್ಮಾಪಕನ ಜಾಕ್ ಮಂಜು ವಿರುದ್ಧ ಬೆಂಗಳೂರಿನ ಉಪ್ಪಾರ್ಪೇಟೆ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಕೊರ್ಟ್ನ ಪಿಸಿಆರ್ ಆಧರಿಸಿ ಎಫ್ಐಆರ್ ದಾಖಲು ಮಾಡಿಕೊಳ್ಳಲಾಗಿದೆ. ಕನ್ನಡದ ಮತ್ತೋರ್ವ ನಿರ್ಮಾಪಕ ಶಿವಶಂಕರ್ ಎಂಬುವವರು ಮಂಜು ವಿರುದ್ಧ ದೂರು ದಾಖಲು ಮಾಡಿದ್ದರು. ಮೋಸ ಮಾಡಿದ ಆರೋಪ ಜಾಕ್ ಮಂಜು ವಿರುದ್ಧ ಕೇಳಿ ಬಂದಿದೆ. ಜಾಕ್ ಮಂಜು ಜೊತೆ ಸಿದ್ದೇಶ್, ಮುರುಳಿ ಎಂಬುವವರ ವಿರುದ್ಧವೂ ಎಫ್ಐಆರ್ ದಾಖಲಾಗಿದೆ.
ಅನೀಶ್ ನಟನೆ ಮಾಡಿದ್ದ ‘ಮಾಯಾನಗರಿ’ ಚಿತ್ರದ ಸಂಬಂಧ ಕೇಸ್ ದಾಖಲಾಗಿದೆ. ಈ ಚಿತ್ರಕ್ಕೆ ಸಿದ್ದೇಶ್ ಎಂಬುವವರು ಎಕ್ಸಿಕ್ಯೂಟಿವ್ ಪ್ರೊಡ್ಯೂಸರ್ ಆಗಿ ನೇಮಕ ಮಾಡಲಾಗಿತ್ತು. ಅವರು ಈ ಚಿತ್ರಕ್ಕೆ 8 ಲಕ್ಷ ರೂಪಾಯಿ ಬಂಡವಾಳ ಹೂಡಿದ್ದರು. ಚಿತ್ರೀಕರಣಕ್ಕೆ ಹಣ ಒದಗಿಸಿಕೊಡು ಎಂದು ನಿರ್ಮಾಪಕ ಶಿವಶಂಕರ್ ಅವರು ಸಿದ್ದೇಶ ಬಳಿ ಕೇಳಿಕೊಂಡಿದ್ದರು. ಈ ವೇಳೆ ‘ಶಾಲಿನಿ ಆರ್ಟ್ಸ್’ನ ಮೇಲ್ವಿಚಾರಕ ಮುರುಳಿ ಎಂಬುವವರನ್ನು ಶಿವಶಂಕರ್ಗೆ ಸಿದ್ದೇಶ್ ಭೇಟಿ ಮಾಡಿಸಿದರು. ಸಿನಿಮಾ ನೋಡಿದ ಬಳಿಕ ಹಣ ಕೊಡಿಸುವುದಾಗಿ ಅವರು ಭರವಸೆ ನೀಡಿದ್ದರು.
ಇದನ್ನೂ ಓದಿ: ‘ವಿಕ್ರಾಂತ್ ರೋಣ’ ಸಿನಿಮಾ ಬಗ್ಗೆ ಅಪಪ್ರಚಾರ; ಗರಂ ಆದ ಜಾಕ್ ಮಂಜು
ಆ ಬಳಿಕ ‘ಶಾಲಿನಿ ಆರ್ಟ್ಸ್’ನ ಮಾಲೀಕ ಜಾಕ್ ಮಂಜುವಿನ ಪರಿಚಯ ಕೂಡ ಶಿವಶಂಕರ್ಗೆ ಬೆಳೆಯಿತು. ಮೂರ್ನಾಲ್ಕು ದಿನಗಳ ಬಳಿಕ ಹಣ ಕೊಡೋದಾಗಿ ಮುರುಳಿ ಅವರು ಶಿವಶಂಕರ್ಗೆ ಭರವಸೆ ನೀಡಿದ್ದರು. ಆದರೆ ಹಣ ಮಾತ್ರ ನೀಡಿಲ್ಲ. ಅಲ್ಲದೆ, ಚಿತ್ರ ಬಿಡುಗಡೆಗೆ ತೊಂದರೆ ಮಾಡುವ ಬೆದರಿಕೆ ಕೂಡ ಹಾಕಲಾಗಿದೆ. ಅಷ್ಟೇ ಅಲ್ಲದೆ, ಚಿತ್ರದ ವ್ಯಾಪಾರ ಆಗಬಾರದು ಎನ್ನುವ ಕಾರಣಕ್ಕೆ ಸಿನಿಮಾ ಆಗಲೇ ಸೇಲ್ ಆಗಿದೆ ಎಂದು ಪ್ರಚಾರ ಮಾಡಿದ್ದರು. ಈ ವಿಚಾರದ ಬಗ್ಗೆ ಜಾಕ್ ಮಂಜು ಅವರ ಸಂಪರ್ಕಿಸಿದರೂ ಅವರು ಸ್ಪಂದಿಸಿಲ್ಲ ಎನ್ನಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿ ದೂರು ದಾಖಲಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 2:18 pm, Sun, 18 August 24