ಕನ್ನಡ ಸಾಹಿತ್ಯ ಲೋಕದಲ್ಲಿ ಗಿರೀಶ್ ಕಾರ್ನಾಡ್ (Girish Karnad) ಅವರ ಸಾಧನೆ ಅಪಾರ. ತಮ್ಮ ನಾಟಕಗಳ ಮೂಲಕ ಅವರು ಮಹತ್ವದ ಚಿಂತನೆಗಳನ್ನು ಓದುಗರ ಹೃದಯದಲ್ಲಿ ಬಿತ್ತಿದರು. ಇಂದಿಗೂ ಅವರ ನಾಟಕಗಳು ಗಮನಾರ್ಹ ಕೃತಿಗಳಾಗಿ, ಪ್ರಸ್ತುತತೆ ಉಳಿಸಿಕೊಂಡಿವೆ. ಹಾಗಂತ ಗಿರೀಶ್ ಕಾರ್ನಾಡ್ ಅವರ ಪ್ರತಿಭೆ ಕೇವಲ ನಾಟಕಗಳ ಬರವಣಿಗೆಗೆ ಮಾತ್ರ ಸೀಮಿತವಲ್ಲ. ಸಿನಿಮಾ ಜಗತ್ತಿಗೂ ಅವರು ನೀಡಿದ ಕೊಡುಗೆ ಅಪಾರ. ನಟನಾಗಿ, ನಿರ್ದೇಶಕನಾಗಿ, ಚಿತ್ರಕಥೆ ಬರಹಗಾರನಾಗಿ ಅವರು ಅನೇಕ ಸಿನಿಮಾಗಳಿಗೆ ಕೆಲಸ ಮಾಡಿದರು. ಕನ್ನಡ ಮಾತ್ರವಲ್ಲದೇ ಹಿಂದಿ, ತಮಿಳು, ತೆಲುಗು, ಮರಾಠಿ, ಮಲಯಾಳಂ ಮುಂತಾದ ಭಾಷೆಯ ಸಿನಿಮಾಗಳಲ್ಲಿ (Girish Karnad Movies) ನಟಿಸುವ ಮೂಲಕ ಜನಮೆಚ್ಚುಗೆ ಪಡೆದುಕೊಂಡರು. ಪೋಷಕ ಪಾತ್ರಗಳಲ್ಲಿನ ಅವರ ಅಭಿನಯಕ್ಕೆ ಪ್ರೇಕ್ಷಕರು ಮರುಳಾದರು. ನೂರಾರು ಬಗೆಯ ಪಾತ್ರಗಳಿಗೆ ಗಿರೀಶ್ ಕಾರ್ನಾಡ್ ಜೀವ ತುಂಬಿದರು. ಕಲಾತ್ಮಕ, ಕಮರ್ಷಿಯಲ್ ಎಂಬ ತಾರತಮ್ಯವಿಲ್ಲದೇ ಎಲ್ಲ ರೀತಿಯ ಸಿನಿಮಾಗಳಲ್ಲೂ ಅವರು ನಟಿಸಿದರು. 1970ರಿಂದ ಶುರುವಾದ ಅವರ ಸಿನಿಮಾ ಪಯಣ 2019ರವರೆಗೂ ನಡೆದುಬಂತು. ಅನೇಕ ಹೆಸರಾಂತ ಕಲಾವಿದರು ಮತ್ತು ತಂತ್ರಜ್ಞರ ಜೊತೆ ಅವರು ಕೆಲಸ ಮಾಡಿದರು. ನಟನೆಗಾಗಿ ಹಲವು ಪ್ರಶಸ್ತಿಗಳು ಅವರನ್ನು ಅರಸಿಬಂದವು. ಇಂದು (ಮೇ 19) ಗಿರೀಶ್ ಕಾರ್ನಾಡ್ ಅವರ ಜನ್ಮದಿನದ (Girish Karnad Birthday) ಪ್ರಯುಕ್ತ, 5 ದಶಕಗಳ ಸಿನಿಮಾ ಜರ್ನಿಯ ಮೆಲುಕು ಇಲ್ಲಿದೆ..
‘ಸಂಸ್ಕಾರ’ದಿಂದ ಆರಂಭ…
ಎಷ್ಟೋ ನಟರಿಗೆ, ನಿರ್ದೇಶಕರಿಗೆ ಗಿರೀಶ್ ಕಾರ್ನಾಡ್ ಸ್ಫೂರ್ತಿ. ರಂಗಭೂಮಿಯ ಹಿನ್ನೆಲೆಯಿಂದ ಬಂದ ಅವರಿಗೆ ಅಭಿನಯ ಕರಗತವಾಗಿತ್ತು. ನಾಟಕಗಳನ್ನು ಬರೆದು ಪ್ರಸಿದ್ಧಿ ಪಡೆದ್ದಿದ್ದ ಅವರಿಗೆ ಚಿತ್ರಕಥೆ ಬರವಣಿಗೆಯ ಕಲೆ ಕೂಡ ಸಿದ್ಧಿಸಿತ್ತು. ಒಂದಕ್ಕಿಂತ ಒಂದು ಗಮನಾರ್ಹ ಸಿನಿಮಾಗಳನ್ನು ಪ್ರೇಕ್ಷಕರಿಗೆ ನೀಡುವಲ್ಲಿ ಅವರು ಯಶಸ್ವಿಯಾದರು. ನಿರ್ದೇಶನ ಮತ್ತು ನಟನೆಯಲ್ಲಿ ಅವರು ತೊಡಗಿಕೊಂಡರು. ಅವರು ನಟಿಸಿದ ಮೊದಲ ಸಿನಿಮಾ ‘ಸಂಸ್ಕಾರ’ 1970ರಲ್ಲಿ ತೆರೆಕಂಡಿತು. ಯು.ಆರ್. ಅನಂತಮೂರ್ತಿ ಅವರು ಕೃತಿ ಆಧರಿಸಿದ ಆ ಚಿತ್ರ ದೊಡ್ಡ ಮಟ್ಟದಲ್ಲಿ ಚರ್ಚೆ ಹುಟ್ಟುಹಾಕಿತ್ತು. 5 ದಶಕಗಳ ಅವಧಿಯಲ್ಲಿ ಅವರು ನೂರಾರು ಸಿನಿಮಾಗಳಲ್ಲಿ ನಟಿಸಿದರು. ಹಲವಾರು ಸ್ಟಾರ್ ಹೀರೋಗಳ ಜತೆ ಅವರು ತೆರೆಹಂಚಿಕೊಂಡರು.
ಮೇರು ಕೃತಿಗಳಿಗೆ ಸಿನಿಮಾ ರೂಪ ನೀಡಿದ ನಿರ್ದೇಶಕ:
ಸಾಹಿತ್ಯ ಕೃತಿಗಳನ್ನು ಆಧರಿಸಿ ಗಿರೀಶ್ ಕಾರ್ನಾಡ್ ಅವರು ಅನೇಕ ಸಿನಿಮಾಗಳನ್ನು ನಿರ್ದೇಶಿಸಿದರು. ಎಸ್.ಎಲ್. ಭೈರಪ್ಪನವರ ‘ವಂಶ ವೃಕ್ಷ’ ಕೃತಿಯನ್ನು ಅದೇ ಹೆಸರಿನಲ್ಲಿ ಸಿನಿಮಾ ಮಾಡುವ ಮೂಲಕ ನಿರ್ದೇಶಕನಾಗಿ ಗಿರೀಶ್ ಕಾರ್ನಾಡ್ ಕಾರ್ಯಾರಂಭ ಮಾಡಿದರು. ‘ಗೋಧೂಳಿ’, ‘ತಬ್ಬಲಿಯು ನೀನಾದೆ ಮಗನೆ’ ಸಿನಿಮಾಗಳು ಕೂಡ ಎಸ್.ಎಲ್. ಭೈರಪ್ಪ ಅವರ ಕೃತಿಯನ್ನೇ ಆಧರಿಸಿದ್ದವು. ಕುವೆಂಪು ಅವರ ‘ಕಾನೂರು ಹೆಗ್ಗಡತಿ’ ಕೃತಿಯನ್ನು ಗಿರೀಶ್ ಕಾರ್ನಾಡ್ ಬೆಳ್ಳಿತೆರೆಗೆ ತಂದರು.
ಶಂಕರ್ನಾಗ್, ವಿಷ್ಣುವರ್ಧನ್ಗೆ ಮೊದಲ ಬಾರಿ ಆ್ಯಕ್ಷನ್-ಕಟ್:
ಕನ್ನಡ ಚಿತ್ರರಂಗದಲ್ಲಿ ಶಂಕರ್ನಾಗ್ ಮತ್ತು ವಿಷ್ಣುವರ್ಧನ್ ಅವರು ಅಪಾರ ಜನಪ್ರಿಯತೆ ಪಡೆದ ಹೀರೋಗಳು. ಅವರಿಗೆ ಮೊದಲ ಬಾರಿಗೆ ನಿರ್ದೇಶನ ಮಾಡಿದ್ದೇ ಗಿರೀಶ್ ಕಾರ್ನಾಡ್. ಅವರ ನಿರ್ದೇಶನದಲ್ಲಿ ಮೂಡಿಬಂದ ‘ವಂಶ ವೃಕ್ಷ’ ಸಿನಿಮಾ ಮೂಲಕ ವಿಷ್ಣುವರ್ಧನ್ ಮೊದಲ ಬಾರಿಗೆ ಕ್ಯಾಮೆರಾ ಎದುರಿಸಿದರು. ಶಂಕರ್ನಾಗ್ ಮೊದಲು ನಟಿಸಿದ ‘ಒಂದಾನೊಂದು ಕಾಲದಲ್ಲಿ’ ಸಿನಿಮಾಗೆ ಗಿರೀಶ್ ಕಾರ್ನಾಡ್ ನಿರ್ದೇಶನ ಮಾಡಿದರು.
ಒಲಿದು ಬಂದವು ಹಲವಾರು ಪ್ರಶಸ್ತಿಗಳು:
ಗಿರೀಶ್ ಕಾರ್ನಾಡ್ ನಿರ್ದೇಶನ ಮಾಡಿದ ಎಲ್ಲ ಸಿನಿಮಾಗಳು ವಿಮರ್ಶಕರ ಮೆಚ್ಚುಗೆಗೆ ಪಾತ್ರವಾದವು. ‘ವಂಶವೃಕ್ಷ’, ‘ಕಾಡು’, ‘ಒಂದಾನೊಂದು ಕಾಲದಲ್ಲಿ’ ಚಿತ್ರಗಳಿಗೆ ‘ಅತ್ಯುತ್ತಮ ಸಿನಿಮಾ’ ಫಿಲ್ಮ್ಫೇರ್ ಪ್ರಶಸ್ತಿ ಬಂತು. ‘ಆನಂದ ಭೈರವಿ’ ಚಿತ್ರದಲ್ಲಿನ ಅಭಿನಯಕ್ಕೆ ‘ಅತ್ಯುತ್ತಮ ನಟ’ ಫಿಲ್ಮ್ಫೇರ್ ಪ್ರಶಸ್ತಿ ಸಿಕ್ಕಿತು. 10 ಬಾರಿ ರಾಷ್ಟ್ರ ಪ್ರಶಸ್ತಿ, 6 ಬಾರಿ ಕರ್ನಾಟಕ ರಾಜ್ಯ ಪ್ರಶಸ್ತಿ ಪಡೆದ ಹೆಗ್ಗಳಿಕೆ ಗಿರೀಶ್ ಕಾರ್ನಾಡ್ ಅವರಿಗೆ ಸಲ್ಲುತ್ತದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.