
ಎಲ್ಲರ ಪ್ರೀತಿಯ ‘ಪವರ್ ಸ್ಟಾರ್’ ಪುನೀತ್ ರಾಜ್ಕುಮಾರ್ (Puneeth Rajkumar) ನಿಧನರಾಗಿ ಒಂದು ವರ್ಷ ಸಮೀಪಿಸುತ್ತಿದೆ. ಎಷ್ಟೇ ತಿಂಗಳುಗಳು ಉರುಳಿದರೂ ಕೂಡ ಅಭಿಮಾನಿಗಳ ಎದೆಯಲ್ಲಿ ನೋವು ಕಡಿಮೆ ಆಗಿಲ್ಲ. ಒಂದಿಲ್ಲೊಂದು ರೀತಿಯಲ್ಲಿ ಜನರು ಪುನೀತ್ ರಾಜ್ಕುಮಾರ್ ಅವರಿಗೆ ನಮನ ಸಲ್ಲಿಸುತ್ತಲೇ ಇದ್ದಾರೆ. ಅಭಿಮಾನಿಗಳು ಮಾತ್ರವಲ್ಲದೇ ಸ್ಟಾರ್ ಕಲಾವಿದರು ಕೂಡ ಅಪ್ಪು ಕುರಿತು ನೆನಪಿನ ಪುಟ ತೆರೆಯುತ್ತಿದ್ದಾರೆ. ಕನ್ನಡ ಚಿತ್ರರಂಗದ ಎಲ್ಲರ ಜೊತೆಗೂ ಪುನೀತ್ ಬಾಂಧವ್ಯ ಹೊಂದಿದ್ದರು. ಅದೇ ರೀತಿ ಪರಭಾಷೆಯ ಅನೇಕ ಸೆಲೆಬ್ರಿಟಿಗಳು ಕೂಡ ಅಪ್ಪು ಸ್ನೇಹಕ್ಕೆ ಮನಸೋತಿದ್ದರು. ಈಗ ಅವರನ್ನು ಎಲ್ಲರೂ ಮಿಸ್ ಮಾಡಿಕೊಳ್ಳುತ್ತಿದ್ದಾರೆ. ವಿಶೇಷ ಏನೆಂದರೆ, ಟಾಲಿವುಡ್ ನಟ ರಾಣಾ ದಗ್ಗುಬಾಟಿ (Rana Daggubati) ಅವರ ಕಚೇರಿಯಲ್ಲಿ ಪುನೀತ್ ರಾಜ್ಕುಮಾರ್ ಪುತ್ಥಳಿ ಇದೆ!
ತಮ್ಮ ಆಫೀಸ್ನಲ್ಲಿ ಪುನೀತ್ ರಾಜ್ಕುಮಾರ್ ಅವರ ಪುತ್ಥಳಿ ಇದೆ ಎಂಬುದನ್ನು ರಾಣಾ ದಗ್ಗುಬಾಟಿ ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಅವರೊಂದು ಫೋಟೋ ಹಂಚಿಕೊಂಡಿದ್ದಾರೆ. ‘ತುಂಬ ಸುಂದರವಾದ ಸ್ಮರಣಿಕೆ ಇಂದು ನನ್ನ ಕಚೇರಿಗೆ ಬಂತು. ಮಿಸ್ ಯೂ ಮೈ ಫ್ರೆಂಡ್ ಪುನೀತ್ ರಾಜ್ಕುಮಾರ್’ ಎಂದು ರಾಣಾ ದಗ್ಗುಬಾಟಿ ಪೋಸ್ಟ್ ಮಾಡಿದ್ದಾರೆ.
ರಾಣಾ ಹಂಚಿಕೊಂಡಿರುವ ಈ ಫೋಟೋ ನೋಡಿ ಪುನೀತ್ ರಾಜ್ಕುಮಾರ್ ಫ್ಯಾನ್ಸ್ ಖುಷಿಪಟ್ಟಿದ್ದಾರೆ. ಅಪ್ಪು ನಿಧನರಾದಾಗ ಪರಭಾಷೆಯ ಅನೇಕ ಸೆಲೆಬ್ರಿಟಿಗಳು ಕಂಬನಿ ಮಿಡಿದಿದ್ದರು. ಬೇರೆ ಬೇರೆ ರಾಜ್ಯಗಳ ಹಲವಾರು ನಟ-ನಟಿಯರು, ತಂತ್ರಜ್ಞರು ಪುನೀತ್ ನಿವಾಸಕ್ಕೆ ಆಗಮಿಸಿ ಅವರ ಕುಟುಂಬದವರಿಗೆ ಸಾಂತ್ವನ ಹೇಳಿದ್ದರು. ಇಂದಿಗೂ ಅನೇಕ ವೇದಿಕೆಯಲ್ಲಿ ಪರಭಾಷೆ ಸೆಲೆಬ್ರಿಟಿಗಳು ಅಪ್ಪು ಗುಣಗಾನ ಮಾಡುತ್ತಾರೆ.
ಪುನೀತ್ ರಾಜ್ಕುಮಾರ್ ಅವರು ವಿಶೇಷ ಕಾಳಜಿ ವಹಿಸಿ ತಯಾರಿಸಿದ ‘ಗಂಧದ ಗುಡಿ’ ಸಾಕ್ಷ್ಯಚಿತ್ರ ಬಿಡುಗಡೆಗೆ ಸಜ್ಜಾಗುತ್ತಿದೆ. ಅಕ್ಟೋಬರ್ 28ರಂದು ಚಿತ್ರಮಂದಿರಗಳಲ್ಲಿ ಈ ಡಾಕ್ಯುಮೆಂಟರಿ ರಿಲೀಸ್ ಆಗಲಿರುವುದು ವಿಶೇಷ. ಕರ್ನಾಟಕದ ಅರಣ್ಯ ಸಂಪತ್ತು ಮತ್ತು ವನ್ಯಜೀವಿಗಳ ಕುರಿತಾದ ಈ ಸಾಕ್ಷ್ಯಚಿತ್ರ ನೋಡಲು ಅಭಿಮಾನಿಗಳು ಕಾದಿದ್ದಾರೆ. ಹಲವು ಸೆಲೆಬ್ರಿಟಿಗಳು ಕೂಡ ಈ ಬಗ್ಗೆ ಟ್ವೀಟ್ ಮಾಡುತ್ತಿದ್ದಾರೆ.
ಇಂದು ಪುನೀತ್ ಭೌತಿಕವಾಗಿ ನಮ್ಮೊಂದಿಗೆ ಇಲ್ಲದೇ ಇರಬಹುದು. ಆದರೆ ಸಾಮಾಜಿಕ ಕಾರ್ಯಗಳ ಮೂಲಕ, ಸಿನಿಮಾಗಳ ಮೂಲಕ ಎಂದಿಗೂ ಅವರು ಅಭಿಮಾನಿಗಳ ಎದೆಯಲ್ಲಿ ಶಾಶ್ವತವಾಗಿ ನೆಲೆಸಿರುತ್ತಾರೆ. ಎಷ್ಟೋ ಊರಿನ ರಸ್ತೆ, ವೃತ್ತ, ಪಾರ್ಕ್ಗಳಿಗೆ ಪುನೀತ್ ರಾಜ್ಕುಮಾರ್ ಹೆಸರು ಇಡಲಾಗಿದೆ. ಅನೇಕರು ತಮ್ಮ ಮಕ್ಕಳಿಗೆ ಅಪ್ಪು, ಪುನೀತ್ ಎಂದು ನಾಮಕರಣ ಮಾಡಿ ಅಭಿಮಾನ ಮೆರೆಯುತ್ತಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.