ಹೊಸ ಚಿತ್ರ ಘೋಷಿಸಿದ ಹೊಂಬಾಳೆ, ಪೋಸ್ಟರ್​ ಮೂಡಿಸಿದೆ ಹಲವು ಪ್ರಶ್ನೆ

Hombale Films: ಇತ್ತೀಚೆಗಷ್ಟೆ ನಟ ಪ್ರಭಾಸ್​ ಜೊತೆಗೆ ಮೂರು ಸಿನಿಮಾ ಮಾಡುವುದಾಗಿ ಘೋಷಣೆ ಮಾಡಿರುವ ಹೊಂಬಾಳೆ ಫಿಲಮ್ಸ್ ಇದೀಗ ಹೊಸದೊಂದು ಸಿನಿಮಾ ಘೋಷಣೆ ಮಾಡಿದೆ. ಸಿನಿಮಾದ ಪೋಸ್ಟರ್ ಮಾತ್ರವೇ ಬಿಡುಗಡೆ ಮಾಡಲಾಗಿದ್ದು, ಸಿನಿಮಾದ ಇತರೆ ಮಾಹಿತಿ ನವೆಂಬರ್ 16ಕ್ಕೆ ತಿಳಿಯಲಿವೆ.

ಹೊಸ ಚಿತ್ರ ಘೋಷಿಸಿದ ಹೊಂಬಾಳೆ, ಪೋಸ್ಟರ್​ ಮೂಡಿಸಿದೆ ಹಲವು ಪ್ರಶ್ನೆ

Updated on: Nov 15, 2024 | 1:05 PM

ಭಾರತದ ಟಾಪ್ ನಿರ್ಮಾಣ ಸಂಸ್ಥೆಗಳಲ್ಲಿ ಒಂದೆನಿಸಿಕೊಂಡಿರುವ ಕರ್ನಾಟಕದ ಹೊಂಬಾಳೆ ಫಿಲಮ್ಸ್ ಹೊಸ ಸಿನಿಮಾ ಘೋಷಣೆ ಮಾಡಿದೆ. ನವೆಂಬರ್ 15 ರಂದು ಪೋಸ್ಟರ್ ಒಂದನ್ನು ಹಂಚಿಕೊಂಡಿರುವ ಹೊಂಬಾಳೆ, ಸಿನಿಮಾದ ಕುರಿತು ಕುತೂಹಲ ಹುಟ್ಟಿಸಿದೆ. ಈಗ ಬಿಡುಗಡೆ ಮಾಡಲಾಗಿರುವ ಪೋಸ್ಟರ್​ನಲ್ಲಿ ಸಿನಿಮಾ ಬಗ್ಗೆ ಹೆಚ್ಚಿನ ಮಾಹಿತಿ ಹಂಚಿಕೊಂಡಿಲ್ಲ, ಆದರೆ ಪೋಸ್ಟರ್ ನೋಡಿದವರಿಗೆ ಇದು ಪೌರಾಣಿಕ ಸಿನಿಮಾ ಇರಬಹುದು ಎಂಬ ಅನುಮಾನ ಮೂಡಿದೆ. ಜೊತೆಗೆ ಇದು ಅನಿಮೇಷನ್ ಸಿನಿಮಾ ಆಗಿರಬಹುದೆಂಬ ಅನುಮಾನವೂ ಮೂಡುತ್ತಿದೆ.

ಹೊಂಬಾಳೆ ಈಗ ಹಂಚಿಕೊಂಡಿರುವ ಪೋಸ್ಟರ್​ನಲ್ಲಿ ರಕ್ತ ಮೆತ್ತಿದ ಕೈ ಮಾತ್ರವೇ ಕಾಣುತ್ತಿದ್ದು, ಪೌರಾಣಿಕ ಕತೆಯಾದ ನರಸಿಂಹನ ಕೈ ರೀತಿ ಕಾಣುತ್ತಿದೆ. ಚೂಪಾದ ಉಗುರುಗಳು ಜೊತೆಗೆ ಕೈಗೆ ಧರಿಸಿರುವ ಕೆಲವು ಆಭರಣಗಳು ಗಮನ ಸೆಳೆಯುತ್ತಿವೆ. ಪೋಸ್ಟರ್ ಬಿಡುಗಡೆ ಮಾಡಿರುವ ಹೊಂಬಾಳೆ, ‘ನಂಬಿಕೆಗೆ ಸವಾಲು ಬಂದಾಗ ಅವನು ಬರುತ್ತಾನೆ’ ಎಂಬ ಅಡಿಬರಹವನ್ನು ನೀಡಿದೆ. ಸಿನಿಮಾದ ಇತರೆ ಮಾಹಿತಿಯನ್ನು ನಾಳೆ ಅಂದರೆ ನವೆಂಬರ್ 16 ಮಧ್ಯಾಹ್ನ 3:33 ಕ್ಕೆ ಹಂಚಿಕೊಳ್ಳುವುದಾಗಿ ಘೋಷಿಸಿದೆ.

ಸಿನಿಮಾ ಹಿಂದಿ, ಕನ್ನಡ, ತೆಲುಗು, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ಬರುತ್ತಿರುವಾಗಿ ಪೋಸ್ಟರ್​ನಲ್ಲಿದ್ದು, ಸಿನಿಮಾವನ್ನು ಅಶ್ವಿನ್ ಕುಮಾರ್ ಎಂಬುವರು ನಿರ್ದೇಶನ ಮಾಡುತ್ತಿದ್ದಾರೆ. ಅಂದಹಾಗೆ ಈ ಅಶ್ವಿನ್ ಕುಮಾರ್ ಯಾರು ಎಂಬುದು ಸಹ ಸದ್ಯಕ್ಕೆ ಅನುಮಾನ. ಆಸ್ಕರ್​ಗೆ ನಾಮಿನೇಟ್ ಆಗಿದ್ದ ‘ಲಿಟಲ್ ಟೆರರಿಸ್ಟ್’, ‘ನೋ ಫಾದರ್ ಇನ್ ಕಾಶ್ಮೀರ್’ ಅಂಥಹಾ ಸಿನಿಮಾಗಳನ್ನು ನಿರ್ದೇಶಿಸಿರುವ ಬೆಂಗಾಲಿ ನಿರ್ದೇಶಕ ಅಶ್ವಿನ್ ಕುಮಾರ್ ಅವರೇ ಈ ಸಿನಿಮಾ ನಿರ್ದೇಶಿಸುತ್ತಿದ್ದಾರಾ ಎಂಬ ಅನುಮಾನ ಇದೆಯಾದರೂ ಖಾತ್ರಿಗೆ ನಾಳೆಯ ವರೆಗೂ ಕಾಯಬೇಕಿದೆ.

ಇದನ್ನೂ ಓದಿ:ಪ್ರಭಾಸ್ ಜೊತೆ ಮೂರು ವರ್ಷಕ್ಕೆ ಮೂರು ಸಿನಿಮಾ, ಹೊಂಬಾಳೆ ಘೋಷಣೆ

ಸಿನಿಮಾವನ್ನು ಹೊಂಬಾಳೆ ಹಾಗೂ ಕ್ಲೀನ್ ಪ್ರೊಡಕ್ಷನ್ಸ್ ಒಟ್ಟಿಗೆ ನಿರ್ಮಾಣ ಮಾಡುತ್ತಿದ್ದು, ಕ್ಲೀನ್ ಪ್ರೊಡಕ್ಷನ್ಸ್​ನವರು ಅನಿಮೇಷನ್ ಸಿನಿಮಾಗಳನ್ನು ಮಾಡುವುದಕ್ಕೆ ಜನಪ್ರಿಯ. ಹಾಗಾಗಿ ಇದು ಅನಿಮೇಟೆಡ್ ಸಿನಿಮಾ ಆಗಿರಬಹುದಾ ಎಂಬ ಅನುಮಾನ ಮೂಡಿದೆ. ಪೋಸ್ಟರ್​ನಲ್ಲಿ ಕಾಣಿಸಿಕೊಂಡಿರುವ ವಾನರ ರೂಪಿಯ ಕೈ ಸಹ ಇದಕ್ಕೆ ಪುಷ್ಠಿ ನೀಡುತ್ತಿದೆ.

ಹೊಂಬಾಳೆ ಇತ್ತೀಚೆಗಷ್ಟೆ ನಟ ಪ್ರಭಾಸ್ ಜೊತೆಗೆ ಮೂರು ಸಿನಿಮಾ ಒಟ್ಟಿಗೆ ಘೋಷಣೆ ಮಾಡಿದೆ. ಮೊದಲಿಗೆ ‘ಸಲಾರ್ 2’ ಸಿನಿಮಾ ಬಿಡುಗಡೆ ಆಗಲಿದೆ. ‘ಕೆಜಿಎಫ್ 3’ ಸಹ ಮುಂದಿನ ವರ್ಷ ಪ್ರಾರಂಭ ಆಗಲಿದೆ. ಮಲಯಾಳಂನಲ್ಲಿ ಪೃಥ್ವಿರಾಜ್ ಸುಕುಮಾರ್ ನಿರ್ದೇಶನದಲ್ಲಿ ‘ಟೈಸನ್’ ಸಿನಿಮಾ ಪ್ರಾರಂಭ ಮಾಡಿದ್ದರಾದರೂ ಆ ಸಿನಿಮಾ ಸೆಟ್ಟೇರಿದಂತಿಲ್ಲ. ಈಗ ಹೊಸ ಸಿನಿಮಾ ಘೋಷಣೆ ಮಾಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 1:02 pm, Fri, 15 November 24

ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
Loading...
Unable to load recommendations.
Follow Us