‘ಮಠ’, ‘ಎದ್ದೇಳು ಮಂಜುನಾಥ’ ಅಂಥಹಾ ಕೆಲ ಕ್ಲಾಸಿಕ್ ಸಿನಿಮಾಗಳನ್ನು ನೀಡಿರುವ ಗುರುಪ್ರಸಾದ್ ಆತ್ಮಹತ್ಯೆಗೆ ಶರಣಾಗಿದ್ದಾರೆ. ಗುರುಪ್ರಸಾದ್ಗೆ ನಿರ್ದೇಶಕ ಆಗುವ ಅವಕಾಶ ಮೊದಲು ಕೊಟ್ಟಿದ್ದು ಜಗ್ಗೇಶ್ ತಮ್ಮ ‘ಮಠ’ ಸಿನಿಮಾದ ಮೂಲಕ. ಗುರುಪ್ರಸಾದ್ ನಿರ್ದೇಶಿಸಿದ ಕೊನೆಯ ಸಿನಿಮಾ ಸಹ ಜಗ್ಗೇಶ್ ಅವರಿಗಾಗಿಯೇ ನಿರ್ದೇಶಿಸಿದ ‘ರಂಗನಾಯಕ’ ಸಿನಿಮಾ. ಗುರುಪ್ರಸಾದ್ ಚಿತ್ರರಂಗಕ್ಕೆ ಬಂದಾಗಿನಿಂದಲೂ ಜಗ್ಗೇಶ್ ಅವರನ್ನು ಹತ್ತಿರದಿಂದ ನೋಡಿದ್ದಾರೆ. ಟಿವಿ9 ಜೊತೆಗೆ ಮಾತನಾಡಿರುವ ಜಗ್ಗೇಶ್, ಗುರುಪ್ರಸಾದ್ಗೆ ಇಂಥಹಾ ಗತಿ ಬರಲು ಕಾರಣ ಏನು? ಅವರು ಮೊದಲು ಹೇಗಿದ್ದರು? ಆ ನಂತರ ಹೇಗಾದರು ಎಂದು ವಿವರಿಸಿದ್ದಾರೆ.
‘ಗುರುಪ್ರಸಾದ್ ಬಹಳ ಒಳ್ಳೆಯ ನಿರ್ದೇಶಕ, ಪ್ರತಿಭಾಶಾಲಿ ಅವರ ಬರವಣಿಗೆ ಶೈಲಿ ಬಹಳ ಭಿನ್ನವಾಗಿತ್ತು. ಅವರು ಮನಸ್ಸು ಮಾಡಿದ್ದರೆ ಏನೋ ಸಾಧಿಸಬಹುದಾಗಿತ್ತು. ಆದರೆ ಎರಡು ವಿಷಯಗಳು ಅವರ ಬೆಳವಣಿಗೆಯನ್ನು ತಡೆದವು. ಒಂದು ಮಧ್ಯ ಮತ್ತು ಇನ್ನೊಂದು ಅಹಂ. ಅವೆರಡು ಇಲ್ಲದೇ ಹೋಗಿದ್ದರೆ ಗುರುಪ್ರಸಾದ್ ರಾಜ್ಯದ ನಂಬರ್ 1 ನಿರ್ದೇಶಕ ಆಗಿರುತ್ತಿದ್ದರು’ ಎಂದಿದ್ದಾರೆ ಜಗ್ಗೇಶ್.
‘ಮಠ’ ಸಿನಿಮಾ ಮಾಡಬೇಕಾದರೆ ಇದ್ದ ಗುರುಪ್ರಸಾದ್ ನನಗೆ ಈಗಲೂ ನೆನಪಿನಲ್ಲಿದೆ. ಆಗ ಗುರುಪ್ರಸಾದ್ ಸೆಟ್ಟಿಗೆ ಬಂದರೆ ಅವರ ಕೈಯಲ್ಲಿ ನಾಲ್ಕಾದರೂ ಪುಸ್ತಕ ಇರುತ್ತಿತ್ತು, ಅದೇ ಕೊನೆ-ಕೊನೆಗೆ ಗುರುಪ್ರಸಾದ್ ಸೆಟ್ಟಿಗೆ ಬಂದರೆ ಅವರ ಬ್ಯಾಗಿನಲ್ಲಿ ನಾಲ್ಕು ಬಾಟಲಿ ಇರುತ್ತಿದ್ದವು. ಬೆಳಿಗ್ಗೆಯಿಂದ ಸಂಜೆ ವರೆಗೂ ಅವರಿಂದ ಮದ್ಯದ ವಾಸನೆ ಹೋಗುತ್ತಲೇ ಇರಲಿಲ್ಲ. ಇದರ ಜೊತೆಗೆ ಅಹಂ, ಸಿಟ್ಟು ಸಹ ಹೆಚ್ಚಿಗೆ ಇತ್ತು. ನನಗೆ ಸರಿ ಅನಿಸಿದ್ದನ್ನಷ್ಟೆ ಮಾಡುವೆ, ಯಾರ ಮಾತು ಕೇಳುವುದಿಲ್ಲ ಎಂಬ ಅಹಂ ಅವರಲ್ಲಿ ಹೆಚ್ಚಿಗೆ ಇತ್ತು’ ಎಂದಿದ್ದಾರೆ ಜಗ್ಗೇಶ್.
‘ನಾನು ಅವರು ಸುಮಾರು ಹತ್ತು ವರ್ಷ ದೂರಾಗಿಬಿಟ್ಟಿದ್ದೆವು. ಆತನ ಜಗಳದ ಗುಣ ನನಗೆ ಇಷ್ಟವಾಗಿರಲಿಲ್ಲ. ಆ ನಂತರ ಕೆಲವು ಆಪ್ತರು ನಮ್ಮನ್ನು ಒಟ್ಟಿಗೆ ಕೆಲಸ ಮಾಡಲು ಸ್ಪೂರ್ತಿ ಕೊಟ್ಟರು, ನನ್ನ ಆತ್ಮೀಯರೆ ‘ರಂಗನಾಯಕ’ ಸಿನಿಮಾಕ್ಕೆ ಬಂಡವಾಳ ಹಾಕಿದರು. ನಿರ್ಮಾಪಕರು, ಗುರುಗೆ 90 ಲಕ್ಷ ಹಣ ಕೊಟ್ಟರು. ಅಷ್ಟೆಲ್ಲ ಮಾಡಿದರೂ ಸಹ ಗುರು ಅದಕ್ಕೆ ಗೌರವ ಕೊಡಲಿಲ್ಲ. ನನ್ನನ್ನು ಸೆಟ್ಗೆ ಎರಡು ಗಂಟೆಗೆ ಕರೆಸಿಕೊಂಡರೆ ಆತ ನಾಲ್ಕು ಗಂಟೆಗೆ ಬರುತ್ತಿದ್ದ. ಬಂದಾಗಲೂ ಸಹ ಮದ್ಯದ ವಾಸನೆ ಹೋಗಿರುತ್ತಿರಲಿಲ್ಲ. ಸೆಟ್ಗೆ ಬಂದು ಏನು ಶೂಟಿಂಗ್ ಮಾಡಬೇಕು ಎಂದು ಯೋಚಿಸುತ್ತಿದ್ದ, ಏನು ಡೈಲಾಗ್ ಇರಬೇಕು ಎಂದು ಬರೆಯುತ್ತಿದ್ದ. ಕೆಲವೊಮ್ಮೆ ನಾನೇ ಸೀನ್ಗಳನ್ನು ಬರೆದುಕೊಟ್ಟಿದ್ದೂ ಸಹ ಇದೆ’ ಎಂದಿದ್ದಾರೆ ಜಗ್ಗೇಶ್.
ಇದನ್ನೂ ಓದಿ:Breaking: ‘ಮಠ’ ಗುರುಪ್ರಸಾದ್ ನಿಧನ, ಆತ್ಮಹತ್ಯೆ ಶಂಕೆ
‘ಗುರು ಮೊದಲ ಹೆಂಡತಿ ಬಂಗಾರದಂಥಹಾ ಹುಡುಗಿ ಇವನನ್ನು ಹದ್ದುಬಸ್ತಿನಲ್ಲಿಡಲು ಪ್ರಯತ್ನಿಸಿದಳು. ಆದರೆ ಇವನ ಹೆಂಡದ ಚಟಕ್ಕೆ ದಾಸನಾಗಿದ್ದ. ಈತನನ್ನು ಸರಿದಾರಿಗೆ ತರಲು ಆಕೆ ಸಾಕಷ್ಟು ಪ್ರಯತ್ನ ಪಟ್ಟಳು ಆದರೆ ಸಾಧ್ಯವಾಗಲಿಲ್ಲ. ಆ ನಂತರ ಎರಡನೇ ಮದುವೆ ಆದ ಆ ಯುವತಿಗೆ ಸಣ್ಣ ಹೆಣ್ಣು ಮಗು ಇದೆ. ಆಕೆಯನ್ನೂ ಅನಾಥಳನ್ನಾಗಿ ಮಾಡಿದ. ‘ರಂಗನಾಯಕ’ ಸಿನಿಮಾದ ಶೂಟಿಂಗ್ ಸಂದರ್ಭದಲ್ಲಿ ಒಮ್ಮೆ ನನ್ನನ್ನು ಅವನ ಮನೆಗೆ ಕರೆದಿದ್ದ, ಮನೆಗೆ ಹೋದರೆ ಮನೆಯ ತುಂಬದ ಎಣ್ಣೆ ಬಾಟಲಿಗಳೇ ತುಂಬಿದ್ದವು’ ಎಂದು ನೆನಪು ಮಾಡಿಕೊಂಡಿದ್ದಾರೆ ಜಗ್ಗೇಶ್.
‘ರಂಗನಾಯಕ’ ಮೂಲಕ ತನ್ನದೇ ಜೀವನವನ್ನು ಸಿನಿಮಾ ಮಾಡಿಟ್ಟು ಹೋಗಿಬಿಟ್ಟಿದ್ದಾನೆ. ಆ ಸಿನಿಮಾದ ಶೂಟಿಂಗ್ ವೇಳೆ ಕೆಲವು ಬಾರಿ ಹೇಳುತ್ತಿದ್ದ ನೆನಪು ಬಿಟ್ಟು ಹೋಗ್ತೀನಿ ಅಂತ ಹಾಗೆಯೇ ಮಾಡಿಬಿಟ್ಟಿ ಅನ್ನಿಸುತ್ತೆ. ಅಥವಾ ಆತನಿಗೆ ಮೊದಲೇ ಮನಸ್ಸಿನಲ್ಲಿ ಊಹೆಯೊಂದು ಬಂದು ಬಿಟ್ಟಿತ್ತೆ ಎಂಬ ಅನುಮಾನ ಮೂಡುತ್ತಿದೆ’ ಎಂದಿದ್ದಾರೆ ಜಗ್ಗೇಶ್.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ