ಆಸ್ಪತ್ರೆಗೆ ದಾಖಲಾಗಿರುವ ದರ್ಶನ್ ಮೇಲೆ ಪೊಲೀಸರ ನಿಗಾ

ಕೊಲೆ ಆರೋಪಿ ದರ್ಶನ್ ತೂಗುದೀಪ, ಮಧ್ಯಂತರ ಜಾಮೀನು ಪಡೆದು ಬಿಜಿಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪೊಲೀಸರು ಆಸ್ಪತ್ರೆಯಲ್ಲಿ ದರ್ಶನ್ ಮೇಲೆ ನಿಗಾ ಇಟ್ಟಿದ್ದಾರೆ. ಆಸ್ಪತ್ರೆಗೂ ಸಹ ಕೆಲವು ಸೂಚನೆಗಳನ್ನು ನೀಡಿದ್ದಾರೆ.

ಆಸ್ಪತ್ರೆಗೆ ದಾಖಲಾಗಿರುವ ದರ್ಶನ್ ಮೇಲೆ ಪೊಲೀಸರ ನಿಗಾ
Follow us
ಮಂಜುನಾಥ ಸಿ.
|

Updated on: Nov 03, 2024 | 9:48 AM

ರೇಣುಕಾ ಸ್ವಾಮಿ ಕೊಲೆ ಆರೋಪಿ ನಟ ದರ್ಶನ್​ ಅನಾರೋಗ್ಯ ಕಾರಣ ನೀಡಿ ಹೈಕೋರ್ಟ್​ನಿಂದ ಮಧ್ಯಂತರ ಜಾಮೀನು ಪಡೆದುಕೊಂಡಿದ್ದಾರೆ. ಬಳ್ಳಾರಿ ಜೈಲಿನಲ್ಲಿದ್ದ ದರ್ಶನ್​ಗೆ ವಿಪರೀತ ಬೆನ್ನು ನೋವು ಕಾಡಿದ ಕಾರಣ ಚಿಕಿತ್ಸೆಗಾಗಿ ಅವರಿಗೆ ಜಾಮೀನು ನೀಡಲಾಗಿದೆ. ದರ್ಶನ್ ಇದೀಗ ಬೆಂಗಳೂರಿನ ಕೆಂಗೇರಿಯ ಬಿಜಿಎಸ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಮುಂದಿನ ಒಂದೆರಡು ವಾರಗಳ ಕಾಲ ಅದೇ ಆಸ್ಪತ್ರೆಯಲ್ಲಿದ್ದು ಚಿಕಿತ್ಸೆ ಪಡೆಯಲಿದ್ದಾರೆ ನಟ ದರ್ಶನ್. ಆದರೆ ಪೊಲೀಸರು ಮಾತ್ರ ದರ್ಶನ್ ಮೇಲೆ ವಿಶೇಷ ನಿಗಾ ಇಡಲಿದ್ದಾರೆ.

ದರ್ಶನ್ ಮಧ್ಯಂತರ ಜಾಮೀನಿಗೆ ಆಕ್ಷೇಪಣೆ ಸಲ್ಲಿಸಿದ್ದ ಪೊಲೀಸರು, ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಸಾಕ್ಷಿಗಳು ಬೆಂಗಳೂರಿನಲ್ಲಿಯೇ ಇದ್ದಾರೆ. ದರ್ಶನ್ ಸಹ ಪ್ರಭಾವಿ ಆಗಿರುವ ಕಾರಣ ಅವರು ಸಾಕ್ಷ್ಯಗಳ ಮೇಲೆ ಪ್ರಭಾವ ಬೀರಬಹುದು ಹಾಗಾಗಿ ಅವರಿಗೆ ಜಾಮೀನು ನೀಡಬಾರದು ಎಂದಿದ್ದರು. ಮೈಸೂರಿನಲ್ಲಿ ಚಿಕಿತ್ಸೆ ಪಡೆದುಕೊಳ್ಳಲಿ ಎಂಬ ವಾದವನ್ನೂ ಸಹ ಪೊಲೀಸರ ಪರವಾಗಿ ಎಸ್​ಪಿಪಿ ಸಲ್ಲಿಸಿದ್ದರು. ಆದರೆ ನ್ಯಾಮೂರ್ತಿಗಳು ಅದನ್ನು ಪರಿಗಣಿಸಿರಲಿಲ್ಲ.

ಈಗ ದರ್ಶನ್, ಬಿಜಿಎಸ್ ಆಸ್ಪತ್ರೆಗೆ ದಾಖಲಾದ ಬೆನ್ನಲ್ಲೆ ದರ್ಶನ್ ಮೇಲೆ ಪೊಲೀಸರು ನಿಗಾ ವಹಿಸಿದ್ದಾರೆ. ದರ್ಶನ್ ಅನ್ನು ಭೇಟಿಯಾಗಲು ಬರುವ ವ್ಯಕ್ತಿಗಳ ಮೇಲೂ ಸಹ ಪೊಲೀಸರು ಕಣ್ಣಿಟ್ಟಿದ್ದಾರೆ. ಆಸ್ಪತ್ರೆಗೆ ಬರುವವರು ಹೋಗುವವರ ಮೇಲೆ ಸಹ ಕಣ್ಣಿಟ್ಟಿರುವ ಪೊಲೀಸರು, ಆಸ್ಪತ್ರೆಯೊಂದಿಗೆ ಮಾತನಾಡಿ ಸಿಸಿಟಿವಿ ಸರಿಯಾಗಿರುವ ಬಗ್ಗೆ ಖಾತ್ರಿಪಡಿಸಿಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಅವಶ್ಯಕತೆ ಬಿದ್ದರೆ ಸಿಸಿಟಿವಿ ದೃಶ್ಯಾವಳಿಗಳು ನೀಡಬೇಕಾಗುತ್ತದೆ ಎಂದು ಸಹ ಆಸ್ಪತ್ರೆಯವರಿಗೆ ಹೇಳಿದ್ದಾರೆ ಎನ್ನಲಾಗುತ್ತಿದೆ.

ಇದನ್ನೂ ಓದಿ:ದರ್ಶನ್ ಭೇಟಿಯಾಗಲು ಅನುಮತಿ ಇರುವುದು ಈ ಏಳು ಜನರಿಗೆ ಮಾತ್ರ

ದರ್ಶನ್ ಅಡ್ಮಿಟ್ ಆಗಿರುವ ವಿಐಪಿ ರೂಮ್ ನ ಸಿಸಿಟಿವಿ, ಬಂದು ಹೋಗುವವರ ದಾಖಲಾತಿ ಪುಸ್ತಕ, ದರ್ಶನ್​ಗೆ ನೀಡಲಾಗುತ್ತಿರುವ ಚಿಕಿತ್ಸೆಯ ಮಾಹಿತಿ ಇನ್ನಿತರೆಗಳ ಬಗ್ಗೆಯೂ ಪೊಲೀಸರು ನಿಗಾ ಇರಿಸಿದ್ದು, ಈ ಎಲ್ಲ ಮಾಹಿತಿಯನ್ನು ಸೂಕ್ತವಾಗಿ ಸಂಗ್ರಹಿಸಿ ಇಡುವಂತೆ ಪೊಲೀಸರು ಆಸ್ಪತ್ರೆಯ ಸಿಬ್ಬಂದಿಗೆ ಸೂಚಿಸಿದ್ದಾರೆ ಎನ್ನಲಾಗುತ್ತಿದೆ. ಕರೆಗಳ ಮೇಲೆ ನಿಗಾ ವಹಿಸುವ ಅಧಿಕಾರ ಪೊಲೀಸರಿಗೆ ಇಲ್ಲವಾದರೂ, ಆಸ್ಪತ್ರೆಗೆ ಬಂದು ಹೋಗುವವರ ಮೇಲೆ ನಿಗಾ ಇಡಲಾಗುತ್ತಿದೆ.

ದರ್ಶನ್​ಗೆ ದೊರೆತಿರುವ ಮಧ್ಯಂತರ ಜಾಮೀನಿನ ಮೇಲೆ ಪೊಲೀಸರು ಮೇಲ್ಮನವಿ ಸಲ್ಲಿಸುವ ಸಾಧ್ಯತೆ ಇದೆ. ಸೋಮವಾರದಂದು ಪೊಲೀಸರು ಸುಪ್ರೀಂಕೋರ್ಟ್​ನಲ್ಲಿ ಮೇಲ್ಮನವಿ ಸಲ್ಲಿಸಲಿದ್ದಾರೆ ಎನ್ನಲಾಗುತ್ತಿದೆ. ಒಂದೊಮ್ಮೆ ಮೇಲ್ಮನವಿ ಸಲ್ಲಿಸಿದರೆ ದರ್ಶನ್​ಗೆ ಸಿಕ್ಕಿರುವ ಜಾಮೀನು ರದ್ದಾಗುವ ಸಾಧ್ಯತೆಯೂ ಇದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ