ಇತ್ತೀಚೆಗೆ ಪ್ಯಾನ್ ಇಂಡಿಯಾ ಸಿನಿಮಾಗಳ ಸಂಖ್ಯೆ ಹೆಚ್ಚುತ್ತಿದೆ. ಪರಭಾಷೆಯ ಸಿನಿಮಾಗಳು ಕನ್ನಡಕ್ಕೆ ಡಬ್ ಆಗಿ ರಿಲೀಸ್ ಆಗುತ್ತಿದೆ. ಈಗ ಆ ಸಾಲಿಗೆ ‘ಜೈಲರ್’ ಸಿನಿಮಾ (Jailer Movie) ಕೂಡ ಸೇರ್ಪಡೆ ಆಗುತ್ತಿದೆ. ರಜನಿಕಾಂತ್, ಶಿವರಾಜ್ಕುಮಾರ್ (Shivarajkumar), ಮೋಹನ್ಲಾಲ್ ಮೊದಲಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಸಿನಿಮಾ ಆಗಸ್ಟ್ 10ರಂದು ವಿಶ್ವಾದ್ಯಂತ ರಿಲೀಸ್ ಆಗುತ್ತಿದೆ. ಈಗ ಕನ್ನಡಿಗರಿಗೆ ಬೇಸರ ಆಗುವಂಥ ಘಟನೆ ಒಂದು ನಡೆದಿದೆ. ಇದನ್ನು ಸೋಶಿಯಲ್ ಮೀಡಿಯಾ ಮೂಲಕ ಪ್ರಶ್ನೆ ಮಾಡಲಾಗುತ್ತಿದೆ.
‘ಜೈಲರ್’ ಸಿನಿಮಾ ಆಗಸ್ಟ್ 10ರಂದು ರಿಲೀಸ್ ಆಗುತ್ತಿದ್ದು, ಈಗಾಗಲೇ ಆನ್ಲೈನ್ಲ್ಲಿ ಟಿಕೆಟ್ ಬುಕಿಂಗ್ ಶುರು ಆಗಿದೆ. ಇದು ಪ್ಯಾನ್ ಇಂಡಿಯಾ ಸಿನಿಮಾ. ತಮಿಳು ಮಾತ್ರವಲ್ಲದೆ, ಕನ್ನಡ ಮೊದಲಾದ ಭಾಷೆಗಳಲ್ಲಿ ‘ಜೈಲರ್’ ಸಿನಿಮಾ ಮೂಡಿ ಬರುತ್ತಿದೆ. ಬೆಂಗಳೂರಿನಲ್ಲಿ ಈ ಚಿತ್ರಕ್ಕೆ ಮೊದಲ ದಿನ 800ಕ್ಕೂ ಅಧಿಕ ಶೋ ಸಿಕ್ಕಿದೆ. ಆ ಪೈಕಿ ತಮಿಳು ವರ್ಷನ್ಗೆ 806 ಶೋ ಹಾಗೂ ಕನ್ನಡಕ್ಕೆ ಕೇವಲ ನಾಲ್ಕು ಶೋ ಸಿಕ್ಕಿದೆ. ಇದು ಅನೇಕರಿಗೆ ಬೇಸರ ಮೂಡಿಸಿದೆ.
ರಿಲೀಸ್ಗೆ ಇನ್ನೂ ನಾಲ್ಕೈದು ದಿನ ಬಾಕಿ ಇದೆ. ಕನ್ನಡಕ್ಕೆ ಇನ್ನೂ ಹೆಚ್ಚಿನ ಶೋ ಸೇರ್ಪಡೆ ಆಗಬಹುದು. ಆದರೆ, ತಮಿಳು ವರ್ಷನ್ಗೆ ಕೊಟ್ಟಷ್ಟು ಶೋಗಳನ್ನು ಕನ್ನಡಕ್ಕೆ ನೀಡುವುದಿಲ್ಲ. ಹೀಗಾಗಿ, ಅನೇಕರು ಶಿವರಾಜ್ಕುಮಾರ್ ವಿರುದ್ಧ ಬೇಸರಗೊಂಡಿದ್ದಾರೆ. ಅವರು ಕರ್ನಾಟಕದಲ್ಲಿ ಕನ್ನಡಕ್ಕೆ ಹೆಚ್ಚಿನ ಶೋ ಕೊಡಿಸಬಹುದಿತ್ತು ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ.
‘ಜೈಲರ್’ ಸಿನಿಮಾದ ಟ್ರೇಲರ್ ಇತ್ತೀಚೆಗೆ ರಿಲೀಸ್ ಆಗಿದೆ. ಟ್ರೇಲರ್ ನೋಡಿದ ಅನೇಕರು ಮೆಚ್ಚಿಕೊಂಡಿದ್ದಾರೆ. ಸಿನಿಮಾ ಬಗ್ಗೆ ನಿರೀಕ್ಷೆ ಹೆಚ್ಚಿದೆ. ಈ ಚಿತ್ರ ಸೂಪರ್ ಹಿಟ್ ಆಗುವ ಸೂಚನೆ ಸಿಕ್ಕಿದೆ. ಈ ಚಿತ್ರದ ಮೂಲಕ ರಜನಿಕಾಂತ್ ಮತ್ತೊಂದು ದೊಡ್ಡ ಗೆಲುವು ಕಾಣುವ ಭರವಸೆಯಲ್ಲಿದ್ದಾರೆ. ಈ ಚಿತ್ರಕ್ಕೆ ನೆಲ್ಸನ್ ದಿಲೀಪ್ ಕುಮಾರ್ ಅವರು ನಿರ್ದೇಶನ ಮಾಡಿದ್ದಾರೆ.
ಇದನ್ನೂ ಓದಿ: ಜ‘ಜೈಲರ್’ ಎದುರು ಪೈಪೋಟಿ ನೀಡಲಿರುವ ‘ತೋತಾಪುರಿ 2’; ಆಗಸ್ಟ್ 11ರಂದು ಅದ್ದೂರಿಯಾಗಿ ಬಿಡುಗಡೆ
‘ಜೈಲರ್’ ಸಿನಿಮಾದಲ್ಲಿ ಶಿವರಾಜ್ಕುಮಾರ್ ಅವರ ಪಾತ್ರ ಕೇವಲ 10 ನಿಮಿಷ ಬರಲಿದೆ. ಈ ವಿಚಾರವನ್ನು ಅವರು ಈ ಮೊದಲೇ ಹೇಳಿಕೊಂಡಿದ್ದರು. ಈ ಚಿತ್ರದ ಟ್ರೇಲರ್ನಲ್ಲಿ ಅವರು ಕಾಣಿಸಲಿದ್ದಾರೆ ಎಂದು ಅನೇಕರು ಭಾವಿಸಿದ್ದರು. ಆದರೆ, ಅದು ಸುಳ್ಳಾಗಿದೆ. ಈ ಚಿತ್ರದ ‘ಕಾವಾಲ’ ಹಾಡು ಸೂಪರ್ ಹಿಟ್ ಎನಿಸಿಕೊಂಡಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ