ಕನ್ನಡ ಚಿತ್ರರಂಗದ ಹಲವು ನಟರು ಬಹಳ ಕಷ್ಟಪಟ್ಟು ಚಿತ್ರರಂಗಕ್ಕೆ ಬಂದವರು. ಸಿನಿಮಾ ಹಿನ್ನೆಲೆ ಇದ್ದವರು ಸಹ ನಾಯಕ ನಟನಾಗಲು ನಾನಾ ಕಷ್ಟಗಳನ್ನು ಪಟ್ಟಿದ್ದಾರೆ. ಅಂಥಹಾ ಶ್ರಮಜೀವಿಗಳ ದೊಡ್ಡ ಪಟ್ಟಿಯೇ ಕನ್ನಡ ಚಿತ್ರರಂಗದಲ್ಲಿದೆ. ಇಂದು ಸ್ಟಾರ್ಗಳಾಗಿ ಮೆರೆಯುತ್ತಿರುವ ಹಲವರು ಹದಿನೈದು-ಇಪ್ಪತ್ತು ವರ್ಷದ ಹಿಂದೆ ತುತ್ತು ಅನ್ನಕ್ಕಾಗಿ ನಾನಾ ಕಷ್ಟಗಳನ್ನು ಪಟ್ಟಿದ್ದಾರೆ, ಕೈಗೆ ಸಿಕ್ಕ ಕೆಲಸಗಳನ್ನೆಲ್ಲ ಮಾಡಿದ್ದಾರೆ. ಅಂಥಹವರಲ್ಲಿ ನಟ ಶರಣ್ ಸಹ ಒಬ್ಬರು. ಇಂದು ಕನ್ನಡ ಚಿತ್ರರಂಗದ ಪೈಸಾ ವಸೂಲ್ ನಟ ಎನಿಸಿಕೊಂಡಿರುವ ಶರಣ್, ನಟನಾಗುವ ಮುಂಚೆ ಲಾರಿ ಕ್ಲೀನರ್ ಆಗಿದ್ದರು ಎಂದರೆ ನೀವು ನಂಬಲೇ ಬೇಕು.
ಕನ್ನಡ ಚಿತ್ರರಂಗದ ಖ್ಯಾತ ನಟಿ ಶ್ರುತಿ ಅವರ ಸಹೋದರ ಶರಣ್ ಹಲವು ವರ್ಷಗಳಿಂದಲೂ ಚಿತ್ರರಂಗದಲ್ಲಿದ್ದಾರೆ. ಆರಂಭದ ಹಲವಾರು ಸಿನಿಮಾಗಳಲ್ಲಿ ಹಾಸ್ಯನಟರಾಗಿ ನಟಿಸಿದ ಶರಣ್, ನಾಯಕ ನಟನಾಗಿ ಬಹಳ ವರ್ಷಗಳೇನೂ ಆಗಿಲ್ಲ. ನಾಯಕ ನಟನಾದ ಬಳಿಕವೂ ಲಾರ್ಜರ್ ದ್ಯಾನ್ ಲೈಫ್ ಪಾತ್ರಗಳನ್ನು ಆರಿಸಿಕೊಳ್ಳದೆ ತಮ್ಮ ಇಮೇಜಿಗೆ ತಕ್ಕಂತೆ ಹಾಸ್ಯ ಪ್ರಧಾನ ಕತೆಗಳನ್ನೇ ಆರಿಸಿಕೊಳ್ಳುತ್ತಾ ಸೀಮಿತ ಬಜೆಟ್ನಲ್ಲಿ ಸಿನಿಮಾಗಳನ್ನು ಮಾಡುತ್ತಾ ಪ್ರೇಕ್ಷಕರನ್ನು ರಂಜಿಸುತ್ತಾ ಸಾಗುತ್ತಿದ್ದಾರೆ. ತೆರೆಯ ಮೇಲೆ ಪ್ರೇಕ್ಷಕ ಹೊಟ್ಟೆ ಹುಣ್ಣಾಗಿಸುವಂತೆ ನಗಿಸುವ ಪ್ರತಿಭೆಯುಳ್ಳ ಶರಣ್, ಈ ಹಂತ ತಲುಪುವ ಮುಂಚೆ ಹಲವು ಕಷ್ಟಗಳನ್ನು ಜೀವನದಲ್ಲಿ ಕಂಡಿದ್ದಾರೆ. ಆ ಬಗ್ಗೆ ಅವರೇ ಸಣ್ಣ ಫೋಸ್ಟ್ ಒಂದನ್ನು ಫೇಸ್ಬುಕ್ನಲ್ಲಿ ಹಂಚಿಕೊಂಡಿದ್ದಾರೆ.
ಲಾರಿಯೊಂದರ ಮುಂದೆ ನಿಂತು ಟೀ ಕುಡಿಯುತ್ತಿರುವ ಚಿತ್ರ ಹಂಚಿಕೊಂಡಿರುವ ನಟ ಶರಣ್, ‘ಚಿತ್ರರಂಗಕ್ಕೆ ಕಾಲಿಡುವ ಮುನ್ನ , ಕೆಲಸ ಹುಡುಕುತ್ತಿದ್ದ ಸಮಯ. , ಕೆಲ ಸಮಯ ಲಾರಿ ಕ್ಲೀನರ್ ಆಗಿ ಕೆಲ್ಸ ಮಾಡಿದ್ದುಂಟು. ಆಗ ಲಾರಿ ಕೊಳ್ಳುವ ಕನಸು ಕಂಡಿದ್ದೂ ಉಂಟು. ಆದರೇ ಲಾರಿಯಲ್ಲಿ ಶುರುವಾದ ನನ್ನ ಪಯಣ ಬೆಳ್ಳಿ ಪರದೆಯ ಮೇಲೆ ಬಂದು ನಿಂತಿರುವುದು ಕಂಡರೆ ಆ ಭಗವಂತನ ಲೀಲೆಗೆ ಶರಣು’ ಎಂದಿದ್ದಾರೆ ಶರಣ್. ಮುಂದುವರೆದು, ‘ಲಾರಿಯ ಹಿಂದೆ ನಿಲ್ಲುವುದರಿಂದ ಆರಂಭವಾಗಿ ಬೆಳ್ಳಿ ಪರದೆಯ ಮುಂದೆ ಬಂದಿರುವ ಈ ಪಯಣ ಅದ್ಭುತ, ಜೀವನ ಅಚ್ಚರಿಗಳ ಸರಮಾಲೆ’ ಎಂದಿದ್ದಾರೆ ಶರಣ್.
ಇದನ್ನೂ ಓದಿ:ಬ್ರಿಜ್ ಭೂಷಣ್ ಶರಣ್ ಸಿಂಗ್ ಪುತ್ರ ಕರಣ್ ಬೆಂಗಾವಲು ವಾಹನ ಡಿಕ್ಕಿ, ಇಬ್ಬರು ಸಾವು
1996 ರಲ್ಲಿ ‘ಕರ್ಪೂರದ ಗೊಂಬೆ’, ‘ಪ್ರೇಮ ಪ್ರೇಮ ಪ್ರೇಮ’ ಸಿನಿಮಾಗಳ ಮೂಲಕ ಶರಣ್ ನಟರಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ಆ ಸಿನಿಮಾದಲ್ಲಿ ಅವರದ್ದು ಬಹಳ ಸಣ್ಣ ಪಾತ್ರ. ಈ ವರೆಗೆ 100 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಶರಣ್ ನಟಿಸಿದ್ದಾರೆ. 2012 ರಲ್ಲಿ ಬಿಡುಗಡೆ ಆದ ‘ರ್ಯಾಂಬೊ’ ಸಿನಿಮಾ ಮೂಲಕ ನಾಯಕ ನಟನಾಗಿ ಎಂಟ್ರಿ ಕೊಟ್ಟ ಶರಣ್ ಅಲ್ಲಿಯೂ ಗೆಲುವು ಸಾಧಿಸಿದರು. ‘ರ್ಯಾಂಬೊ’ ಬಳಿಕ ಹಲವು ಸಿನಿಮಾಗಳಲ್ಲಿ ಶರಣ್ ನಾಯಕನಾಗಿ ನಟಿಸಿದ್ದಾರೆ. ಸಾಕಷ್ಟು ಯಶಸ್ಸು ಸಹ ಗಳಿಸಿದ್ದು, ಕನ್ನಡ ಚಿತ್ರರಂಗದ ಪೈಸಾ ವಸೂಲ್ ನಟರಲ್ಲಿ ಒಬ್ಬರೆನಿಸಿಕೊಂಡಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ