‘ಧುರಂಧರ್ 2’ ಎದುರು ತೆರೆಕಂಡರೂ ಸೂಪರ್ ಹಿಟ್ ಆದ ‘ಲವ್ ಮಾಕ್ಟೇಲ್ 3’

ಹಲವು ಕಡೆಗಳಲ್ಲಿ ಹೌಸ್​ಫುಲ್ ಪ್ರದರ್ಶನ ಕಾಣುವ ಮೂಲಕ ‘ಲವ್ ಮಾಕ್ಟೇಲ್ 3’ ಸಿನಿಮಾ ಗೆದ್ದಿದೆ. ಇತ್ತೀಚೆಗೆ ಚಿತ್ರತಂಡದವರು ಒಟ್ಟಿಗೆ ಸೇರಿ ತಮ್ಮ ಸಿನಿಮಾದ ಗೆಲುವನ್ನು ಸಂಭ್ರಮಿಸಿದರು. ಈ ಯಶಸ್ಸಿಗೆ ಕಾರಣರಾದ ಎಲ್ಲರಿಗೂ ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್ ಧನ್ಯವಾದ ತಿಳಿಸಿದರು.

‘ಧುರಂಧರ್ 2’ ಎದುರು ತೆರೆಕಂಡರೂ ಸೂಪರ್ ಹಿಟ್ ಆದ ‘ಲವ್ ಮಾಕ್ಟೇಲ್ 3’
Milana Nagaraj, Darling Krishna

Updated on: Mar 29, 2026 | 11:47 AM

‘ಧುರಂಧರ್ 2’ ಸಿನಿಮಾದ ಹವಾ ಹೇಗಿದೆ ಎಂಬುದು ಗೊತ್ತೇ ಇದೆ. ಅಂತಹ ದೈತ್ಯ ಸಿನಿಮಾದ ಎದುರು ಚಿಕ್ಕ ಸಿನಿಮಾಗಳು ಪೈಪೋಟಿ ನೀಡುವುದು ಕಷ್ಟ. ಆದರೆ ಕನ್ನಡದ ‘ಲವ್ ಮಾಕ್ಟೇಲ್ 3’ (Love Mocktail 3) ಸಿನಿಮಾ ಪೈಪೋಟಿ ನೀಡಿದೆ. ಕನ್ನಡದ ಪ್ರೇಕ್ಷಕರನ್ನು ಗಮನದಲ್ಲಿ ಇಟ್ಟುಕೊಂಡು ಬಿಡುಗಡೆ ಆದ ಈ ಸಿನಿಮಾ ಸೂಪರ್ ಹಿಟ್ ಆಗಿದೆ. ಆ ಖುಷಿಯನ್ನು ಹಂಚಿಕೊಳ್ಳಲು ಚಿತ್ರತಂಡದವರು ಇತ್ತೀಚೆಗೆ ಸಕ್ಸಸ್ ಮೀಟ್ ಆಯೋಜಿಸಿದ್ದರು. ನಿರ್ದೇಶಕ-ನಟ ಡಾರ್ಲಿಂಗ್ ಕೃಷ್ಣ (Darling Krishna), ಮಿಲನಾ ನಾಗರಾಜ್ ಸೇರಿದಂತೆ ಇಡೀ ಚಿತ್ರತಂಡದವರು ಇದರಲ್ಲಿ ಭಾಗಿಯಾಗಿದ್ದರು.

ಈ ಸಂದರ್ಭದಲ್ಲಿ ಮಿಲನಾ ನಾಗರಾಜ್ ಮಾತನಾಡಿದರು. ‘ಪಾರ್ಟ್ 1 ಹಾಗೂ 2 ಗೆದ್ದಾಗ ಖುಷಿಯಾಗಿತ್ತು. ಆದರೆ ಮೂರನೇ ಆವೃತ್ತಿಯ ಗೆಲುವು ನನ್ನನ್ನು ಭಾವುಕಳನ್ನಾಗಿಸಿದೆ. ಇದಕ್ಕೆ ಪ್ರೇಕ್ಷಕರ ಕಡೆಯಿಂದ ಬರುತ್ತಿರುವ ಪ್ರತಿಕ್ರಿಯೆಗಳಿಂದ ಮನದುಂಬಿ ಬಂದಿದೆ’ ಎಂದು ಅವರು ಹೇಳಿದರು. ಡಾರ್ಲಿಂಗ್ ಕೃಷ್ಣ ಮಾತನಾಡಿ, ಕ್ರಿಸ್‌ಮೀ ಬ್ಯಾನರಿನಡಿಯಲ್ಲಿ ವರ್ಷಕ್ಕೊಂದು ಸಿನಿಮಾ ಮಾಡುವ ಯೋಜನೆಯಿದೆ ಎಂದು ಹೇಳಿದರು.

‘ನಾವು ತುಂಬಾ ಲೆಕ್ಕಾಚಾರವಿಟ್ಟುಕೊಂಡೇ ಮುಂದುವರಿಯುತ್ತೇವೆ. ಯಾವುದೇ ಮುಲಾಜಿಗೆ ಬಿದ್ದು ಯಾರನ್ನೂ ಆಯ್ಕೆ ಮಾಡಿಕೊಳ್ಳುವುದಿಲ್ಲ. ನಮ್ಮ ತಂಡದಲ್ಲಿ ಇರುವವರೆಲ್ಲರೂ ಪಕ್ಕಾ ಪ್ರತಿಭಾವಂತರು ಆಗಿರುವುದರಿಂದಲೇ ಅವಕಾಶ ಪಡೆದುಕೊಂಡಿದ್ದಾರೆ. ಅವರ ಪ್ರತಿಭೆಯನ್ನು ನಾವು ಬಳಸಿಕೊಂಡಿದ್ದೇವೆ. ಆದ್ದರಿಂದ ಸಿನಿಮಾ ತಂಡದವರ್‍ಯಾರೂ ನಮಗೆ ಥ್ಯಾಂಕ್ಸ್ ಹೇಳುವ ಹಾಗಿಲ್ಲ’ ಎಂದು ಡಾರ್ಲಿಂಗ್ ಕೃಷ್ಣ ಹೇಳಿದರು.

‘ಕೆವಿಎನ್ ಪ್ರೊಡಕ್ಷನ್ಸ್’ ಸಂಸ್ಥೆಯು ಈ ಸಿನಿಮಾವನ್ನು ವಿತರಣೆ ಮಾಡಿದೆ. ಆ ಬಗ್ಗೆ ಮಾತನಾಡಿದ ಸುಪ್ರೀತ್ ಅವರು, ‘ಇದು ಈ ವರ್ಷದ ಮೊದಲ ಹಿಟ್ ಸಿನಿಮಾ. ಬಿಡುಗಡೆಗೂ ಒಂದಷ್ಟು ದಿನಗಳ ಮುಂಚೆ ಡಾರ್ಲಿಂಗ್ ಕೃಷ್ಣ ಸಿನಿಮಾ ತೋರಿಸಿದ್ದರು. ಅದಾದ ಬಳಿಕ ಟಾಕ್ಸಿಕ್‌ನಿಂದ ತೆರವಾದ ಜಾಗಕ್ಕೆ ಲವ್ ಮಾಕ್ಟೇಲ್ ಆಗಮಿಸಿತ್ತು. ಪ್ರೇಕ್ಷಕರೆಲ್ಲ ಅತ್ಯುತ್ತಮ ಪ್ರತಿಕ್ರಿಯೆ ನೀಡುವ ಮೂಲಕ ಲವ್ ಮಾಕ್ಟೇಲ್ 3 ಗೆದ್ದಿದೆ. ಯುಎಸ್‌ಎ, ಆಸ್ಟ್ರೇಲಿಯಾ, ಜರ್ಮನಿ ಮುಂತಾದ ಕಡೆಗಳಲ್ಲಿಯೂ ಭರ್ಜರಿಯಾಗಿಯೇ ಬುಕ್ಕಿಂಗ್ ಓಪನ್ ಆಗಿದೆ’ ಎಂದರು.

ಇದನ್ನೂ ಓದಿ: Love Mocktail 3 Review: ನಗಿಸುತ್ತಾ ಅಳಿಸುವ ತಂದೆ-ಮಗಳ ಎಮೋಷನಲ್ ಕಹಾನಿ

ನಿರ್ದೇಶಕ ಶಶಾಂಕ್ ಅವರು ಈ ಕಾರ್ಯಕ್ರಮಕ್ಕೆ ಅಥಿತಿಯಾಗಿ ಆಗಮಿಸಿದ್ದರು. ‘ಈ ಕಾಲಮಾನದಲ್ಲಿ ಯಾವುದೇ ಸಿನಿಮಾದ ಸಕ್ಸಸ್ ಮೀಟ್ ಎಂಬ ವಿಚಾರವೇ ಹಿತವೆನಿಸುತ್ತದೆ. ಈ ವರ್ಷದ ಆರಂಭದಿಂದ ಒಂದು ರೀತಿಯ ನಿರಾಶದಾಯಕ ವಾತಾವರಣ ಕನ್ನಡ ಚಿತ್ರರಂಗವನ್ನು ಆವರಿಸಿಕೊಂಡಿತ್ತು. ಇಂಥ ಹೊತ್ತಿನಲ್ಲಿ ಲವ್ ಮಾಕ್ಟೇಲ್ ಗೆದ್ದಿರುವುದರಿಂದ ಚಿತ್ರರಂಗಕ್ಕೆ ಹೊಸ ಚೈತನ್ಯ ಬಂದಂತಾಗಿದೆ’ ಎಂದು ಅವರು ಹೇಳಿದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us