
ಊಹಿಸಲು ಅಸಾಧ್ಯವಾದ ರೀತಿಯಲ್ಲಿ ಕನ್ನಡದ ‘ಕೆಜಿಎಫ್: ಚಾಪ್ಟರ್ 2’ (KGF Chapter 2) ಸಿನಿಮಾ ಯಶಸ್ಸು ಸಾಧಿಸಿದೆ. ಕನ್ನಡದ ಜೊತೆಗೆ ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಗೆ ಡಬ್ ಆದ ಈ ಸಿನಿಮಾವನ್ನು ಎಲ್ಲ ಭಾಷೆಯ ಜನರು ಇಷ್ಟಪಟ್ಟಿದ್ದಾರೆ. ನಟ ಯಶ್ (Rocking Star Yash) ಅವರ ಖ್ಯಾತಿ ವಿಶ್ವಾದ್ಯಂತ ಹಬ್ಬಿದೆ. ಅನೇಕ ಪ್ರತಿಷ್ಠಿತ ಮಾಧ್ಯಮ ಸಂಸ್ಥೆಗಳು ಅವರ ಸಂದರ್ಶನ ಮಾಡುತ್ತಿವೆ. ‘ಕೆಜಿಎಫ್’ ಸಿನಿಮಾ ಅನೌನ್ಸ್ ಆದಾಗ ಅದು ಎರಡು ಪಾರ್ಟ್ನಲ್ಲಿ ಬರುತ್ತದೆ ಎಂಬುದು ತಿಳಿದಿರಲಿಲ್ಲ. ಅದೇ ರೀತಿ ‘ಕೆಜಿಎಫ್: ಚಾಪ್ಟರ್ 2’ ರಿಲೀಸ್ ಆಗೋದಕ್ಕಿಂತ ಮುನ್ನ ‘ಕೆಜಿಎಫ್ 3’ (KGF 3) ಬಗ್ಗೆ ಪ್ರೇಕ್ಷಕರಿಗೆ ಕಲ್ಪನೆ ಇರಲಿಲ್ಲ. ‘ಕೆಜಿಎಫ್ 2’ ಚಿತ್ರದ ಕ್ಲೈಮ್ಯಾಕ್ಸ್ನಲ್ಲಿ ‘ಕೆಜಿಎಫ್: ಚಾಪ್ಟರ್ 3’ ಬಗ್ಗೆ ಹಿಂಟ್ ನೀಡಲಾಗಿದೆ. ಹಾಗಾಗಿ ಎಲ್ಲರೂ 3ನೇ ಚಾಪ್ಟರ್ ಸಲುವಾಗಿ ಕಾಯುವಂತಾಗಿದೆ. ಈ ಸಿನಿಮಾ ಬಗ್ಗೆ ‘ಹೊಂಬಾಳೆ ಫಿಲ್ಮ್ಸ್’ ಕಡೆಯಿಂದ ಹೆಚ್ಚಿನ ಮಾಹಿತಿ ಹೊರಬರಬೇಕಿದೆ. ಅಷ್ಟರಲ್ಲಾಗಲೇ ಯಶ್ ಅವರು ಒಂದು ವಿಚಾರವನ್ನು ಬಾಯಿಬಿಟ್ಟಿದ್ದಾರೆ. ‘ವೆರೈಟಿ’ ಮ್ಯಾಗಜಿನ್ಗೆ ನೀಡಿದ ಸಂದರ್ಶನದಲ್ಲಿ ಅವರು ‘ಕೆಜಿಎಫ್: ಚಾಪ್ಟರ್ 3’ ಬಗ್ಗೆ ಮಾತನಾಡಿದ್ದಾರೆ.
‘ನಾವು ಕೆಜಿಎಫ್ ಚಾಪ್ಟರ್ 2 ಸಿನಿಮಾದಲ್ಲಿ ತೋರಿಸಲು ಆಗದೇ ಇರುವ ಹಲವು ವಿಷಯಗಳು ಇವೆ. ಪ್ರಶಾಂತ್ ನೀಲ್ ಮತ್ತು ನಾನು ಸಾಕಷ್ಟು ದೃಶ್ಯಗಳ ಬಗ್ಗೆ ಯೋಚಿಸಿದ್ದೇವೆ. ಇನ್ನೂ ಅನೇಕ ಸಾಧ್ಯತೆಗಳಿವೆ ಎಂಬುದು ನಮಗೆ ತಿಳಿದಿದೆ. ಭರ್ಜರಿಯಾದ ದೃಶ್ಯಗಳಿವೆ. ಆದರೆ ಅದೆಲ್ಲವೂ ಒಂದು ಐಡಿಯಾ ಅಷ್ಟೇ. ಸದ್ಯಕ್ಕೆ ಅದನ್ನು ಹಾಗೆಯೇ ಇಟ್ಟಿದ್ದೇವೆ’ ಎಂದು ಯಶ್ ಹೇಳಿದ್ದಾರೆ.
‘ಕೆಜಿಎಫ್: ಚಾಪ್ಟರ್ 3’ ಸಿನಿಮಾ ಆದಷ್ಟು ಬೇಗ ಬರಲಿ ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ. ಯಶ್ ಒಪ್ಪಿಕೊಳ್ಳಲಿರುವ ಮುಂದಿನ ಸಿನಿಮಾ ಯಾವುದು ಎಂಬ ಬಗ್ಗೆಯೂ ಅಭಿಮಾನಿಗಳಿಗೆ ಕಾತರ ಇದೆ. ಇತ್ತೀಚೆಗೆ ‘ಕೆಜಿಎಫ್: ಚಾಪ್ಟರ್ 2’ ಸಿನಿಮಾದ ಯಶಸ್ಸನ್ನು ಇಡೀ ತಂಡ ಸೆಲೆಬ್ರೇಟ್ ಮಾಡಿದೆ. ಈ ವೇಳೆ ಕತ್ತರಿಸಿದ ಕೇಕ್ನಲ್ಲಿ ‘ಇದು ಕೇವಲ ಆರಂಭ ಮಾತ್ರ’ ಎಂದು ಬರೆದಿರುವುದು ಕಂಡು ಫ್ಯಾನ್ಸ್ ಥ್ರಿಲ್ ಆಗಿದ್ದಾರೆ. ಹಾಗಾಗಿ ಯಶ್, ಪ್ರಶಾಂತ್ ನೀಲ್, ಹೊಂಬಾಳೆ ಫಿಲ್ಮ್ಸ್ ಕಡೆಯಿಂದ ಬರುವ ಪ್ರತಿ ಅಪ್ಡೇಟ್ಗಾಗಿ ಸಿನಿಪ್ರಿಯರು ಕಾದಿದ್ದಾರೆ.
ಒಂದು ಕಾಲದಲ್ಲಿ ಕನ್ನಡ ಸಿನಿಮಾರಂಗವನ್ನು ಯಾರೂ ಗಂಭೀರವಾಗಿ ಪರಿಗಣಿಸಿರಲಿಲ್ಲ. ಇಲ್ಲಿನ ಮಾರುಕಟ್ಟೆ ತುಂಬ ಚಿಕ್ಕದು ಎಂದು ಹೇಳಲಾಗುತ್ತಿತ್ತು. ಆ ಬಗ್ಗೆಯೂ ಯಶ್ ಅವರು ಮಾತನಾಡಿದ್ದಾರೆ. ‘ಒಂದು ಹೆಜ್ಜೆಯಿಂದಾಗಿ ನಮ್ಮ ಚಿತ್ರರಂಗದಲ್ಲಿ ಬದಲಾವಣೆ ಸಾಧ್ಯವಾಗಿದೆ. ದೇಶದ ಎಲ್ಲ ಮೂಲೆಗಳಲ್ಲೂ ಜನರು ಈ ಸಿನಿಮಾವನ್ನು ಇಷ್ಟಪಟ್ಟಿದ್ದಾರೆ’ ಎಂದು ಯಶ್ ಹೇಳಿದ್ದಾರೆ.
ವಿಶ್ವಾದ್ಯಂತ ‘ಕೆಜಿಎಫ್: ಚಾಪ್ಟರ್ 2’ ಸಿನಿಮಾ ಭರ್ಜರಿ ಕಮಾಯಿ ಮಾಡಿದೆ. ಚಿತ್ರದ ಒಟ್ಟು ಕಲೆಕ್ಷನ್ ಸಾವಿರ ಕೋಟಿ ರೂಪಾಯಿ ಸಮೀಪದಲ್ಲಿದೆ. ಕೇವಲ ಹಿಂದಿ ವರ್ಷನ್ನಿಂದಲೇ 300 ಕೋಟಿ ರೂಪಾಯಿಗೂ ಹೆಚ್ಚು ಗಳಿಕೆ ಆಗಿದೆ. ಇದರಿಂದ ಯಶ್ ವೃತ್ತಿ ಜೀವನಕ್ಕೆ ಬಹುದೊಡ್ಡ ಗೆಲುವು ಸಿಕ್ಕಂತಾಗಿದೆ. ಅವರ ಡಿಮ್ಯಾಂಡ್ ಕೂಡ ಹೆಚ್ಚಿದೆ. ಚಿತ್ರದ ಗೆಲುವಿಗೆ ಕಾರಣರಾದ ಎಲ್ಲ ಪ್ರೇಕ್ಷಕರಿಗೆ ಅವರು ಸೋಶಿಯಲ್ ಮೀಡಿಯಾ ಮೂಲಕ ಇತ್ತೀಚೆಗೆ ಧನ್ಯವಾದ ಅರ್ಪಿಸಿದ್ದರು.
Published On - 8:03 am, Wed, 27 April 22