
ದೀರ್ಘಕಾಲದಿಂದ ಕನ್ನಡ ಚಿತ್ರ ಪ್ರೇಮಿಗಳೂ ಸೇರಿದಂತೆ ವಿಶ್ವಾದ್ಯಂತ ಜನರು ಕಾದಿದ್ದ ‘ಕೆಜಿಎಫ್ ಚಾಪ್ಟರ್ 2’ (KGF Chapter 2) ಇಂದು (ಗುರುವಾರ) ರಿಲೀಸ್ ಆಗಿದೆ. ವಿಶ್ವಾದ್ಯಂತ ಸುಮಾರು 10,000ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ರಿಲೀಸ್ ಆಗಿರುವ ಚಿತ್ರಕ್ಕೆ ಎಲ್ಲೆಡೆಯಿಂದ ಧನಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಈಗಾಗಲೇ ಪ್ರಿ-ಬುಕ್ಕಿಂಗ್ನಿಂದ ದಾಖಲೆ ಬರೆದಿರುವ ಕೆಜಿಎಫ್ 2 ಮುಂದೆಯೂ ಭರ್ಜರಿ ಕಲೆಕ್ಷನ್ ಮಾಡುವ ಎಲ್ಲಾ ಸೂಚನೆಗಳಿವೆ. ಆದರೆ ಇತ್ತೀಚೆಗೆ ಎಲ್ಲಾ ಚಿತ್ರಗಳು ಎದುರಿಸುತ್ತಿರುವ ಗಂಭೀರವಾದ ಪೈರಸಿ ಕಂಟಕ ‘ಕೆಜಿಎಫ್ 2’ಗೂ ಎದುರಾಗಿದೆ. ಹಲವು ವೆಬ್ಸೈಟ್ಗಳಲ್ಲಿ ಹಾಗೂ ಟೊರೆಂಟ್ ಸೈಟ್ಗಳಲ್ಲಿ ಚಿತ್ರದ ಲಿಂಕ್ಗಳು ಹರಿದಾಡುತ್ತಿದ್ದು, ಹೆಚ್ಡಿ ಗುಣಮಟ್ಟದಲ್ಲಿ ಚಿತ್ರ ಲಭ್ಯವಿದೆ ಎಂಬ ಸಂದೇಶಗಳು ಶೇರ್ ಆಗುತ್ತಿವೆ. ಈ ಸರ್ಚಿಂಗ್ ಕುರಿತ ಹಲವು ಕೀವೆರ್ಡ್ಗಳು ಕೂಡ ಟ್ರೆಂಡ್ ಆಗಿವೆ. ಈ ಬಗ್ಗೆ ಲೇಟೆಸ್ಟ್ಲಿ ವರದಿ ಮಾಡಿದೆ.
ಪೈರಸಿ ತಡೆಗೆ ಶ್ರಮಿಸುತ್ತಿರುವ ಚಿತ್ರತಂಡ:
ಚಿತ್ರದ ರಿಲೀಸ್ಗೂ ಮುನ್ನ ನಿರ್ದೇಶಕ ಪ್ರಶಾಂತ್ ನೀಲ್ ಅಭಿಮಾನಿಗಳಲ್ಲಿ ಮನವಿ ಮಾಡಿದ್ದರು. ಪೈರಸಿಯಿಂದ ಹಲವು ವರ್ಷಗಳ ಶ್ರಮ ಒಂದೇ ಕ್ಷಣಕ್ಕೆ ಮಣ್ಣಾಗುತ್ತದೆ. ಈ ಕಾರಣಕ್ಕೆ ಪೈರಸಿ ಮಾಡದಂತೆ ಮತ್ತು ಪೈರಸಿಗೆ ಬೆಂಬಲ ನೀಡದಂತೆ ಮನವಿ ಮಾಡಿಕೊಂಡಿದ್ದರು ಕೆಜಿಎಫ್ 2 ನಿರ್ದೇಶಕ.
‘ಪೈರಸಿ ವಿರುದ್ಧದ ಫೈಟ್ ನಿಮ್ಮಿಂದಲೇ ಆರಂಭವಾಗಲಿದೆ. ಸಿನಿಮಾದ ವಿಡಿಯೋ ಹಾಗೂ ಫೋಟೋವನ್ನು ತೆಗೆಯಬೇಡಿ ಮತ್ತು ಆನ್ಲೈನ್ನಲ್ಲಿ ಅದನ್ನು ಪೋಸ್ಟ್ ಮಾಡಬೇಡಿ’ ಎಂದು ಬರೆದುಕೊಂಡಿದ್ದಾರೆ ಪ್ರಶಾಂತ್ ನೀಲ್. ಇದರ ಜತೆಗೆ ಹಾಕಿರುವ ಫೋಟೋದಲ್ಲಿ ತಮ್ಮ ಕಷ್ಟದ ಪಯಣದ ಬಗ್ಗೆ ಬರೆದುಕೊಂಡಿದ್ದಾರೆ ಅವರು. ‘ಕೆಜಿಎಫ್ ಅನ್ನು ನಿಮ್ಮ ಮುಂದಿಡಲು ಆರು ವರ್ಷ ಬೆವರು, ರಕ್ತ ಹಾಗೂ ಕಣ್ಣೀರು ಸುರಿಸಿದ್ದೇವೆ. ಕೆಜಿಎಫ್ 2 ವೀಕ್ಷಿಸುವಾಗ ವಿಡಿಯೋ ಮಾಡಬೇಡಿ. ಈ ಚಿತ್ರವನ್ನು ಚಿತ್ರಮಂದಿರದಲ್ಲೇ ವೀಕ್ಷಿಸಿ’ ಎಂದು ಕೋರಲಾಗಿದೆ.
ಅದಾಗ್ಯೂ ಪೈರಸಿ ಗಮನಕ್ಕೆ ಬಂದಲ್ಲಿ ಏನು ಮಾಡಬೇಕು ಎನ್ನುವುದನ್ನು ಚಿತ್ರತಂಡ ತಿಳಿಸಿತ್ತು. ಪೈರಸಿ ತಡೆಯುವ ಕಂಟ್ರೋಲ್ ರೂಮ್ ಸ್ಥಾಪಿಸಲಾಗಿದ್ದು, ಚಿತ್ರ ಲೀಕ್ ಆಗಿದ್ದರ ಮಾಹಿತಿ ಲಭ್ಯವಾಗಿದ್ದಲ್ಲಿ ತಿಳಿಸುವಂತೆ ಕೋರಲಾಗಿದೆ.
ಚಿತ್ರತಂಡ ಹಂಚಿಕೊಂಡಿದ್ದ ಟ್ವೀಟ್:
ಇದನ್ನೂ ಓದಿ: KGF 3: ‘ಕೆಜಿಎಫ್ ಚಾಪ್ಟರ್ 2’ ಕೊನೆಯಲ್ಲಿ ಬಿಗ್ ಸರ್ಪ್ರೈಸ್ ನೋಡಿ ಥ್ರಿಲ್ ಆದ ಅಭಿಮಾನಿಗಳು; ಟ್ರೆಂಡ್ ಆಯ್ತು ‘ಕೆಜಿಎಫ್ 3’
ಕೆಜಿಎಫ್ ತಾಲೂಕಿನಲ್ಲಿ ರಿಲೀಸ್ ಆಗದ ‘ಕೆಜಿಎಫ್ ಚಾಪ್ಟರ್ 2’- ಕಾರಣವೇನು? ರಾಜ್ಯದ ವಿವಿಧೆಡೆ ಬಿಡುಗಡೆ ಸಂಭ್ರಮ ಹೇಗಿದೆ?