
ಕನ್ನಡದ ಸಿನಿಮಾ ಈ ಮಟ್ಟಕ್ಕೆ ಸಾಧನೆ ಮಾಡುತ್ತದೆ ಎಂದು ಯಾರೂ ಊಹಿಸಿರಲಿಲ್ಲ. ಪರಭಾಷೆಯ ಘಟಾನುಘಟಿಗಳು ಮಾಡಿದ್ದ ದಾಖಲೆಗಳನ್ನೆಲ್ಲ ಅಳಿಸಿ ಹಾಕುವ ಮಟ್ಟಕ್ಕೆ ‘ಕೆಜಿಎಫ್: ಚಾಪ್ಟರ್ 2’ (KGF Chapter 2) ಸಿನಿಮಾ ಗೆದ್ದು ಬೀಗಿದೆ. ಈ ಸಿನಿಮಾ ತೆರೆಕಂಡು 23 ದಿನ ಕಳೆದಿದೆ. ವಿಶ್ವಾದ್ಯಂತ ಅಬ್ಬರಿಸಿರುವ ರಾಕಿ ಭಾಯ್ ಭರ್ಜರಿ ಕಲೆಕ್ಷನ್ ಮಾಡಿದ್ದಾನೆ. ಹಿಂದಿ ಪ್ರೇಕ್ಷಕರು ಈ ಸಿನಿಮಾಗೆ ಭರಪೂರ ಮೆಚ್ಚುಗೆ ನೀಡಿದ್ದಾರೆ. ಅದರ ಪರಿಣಾಮವಾಗಿ ಬಾಲಿವುಡ್ ಮಾರ್ಕೆಟ್ನಲ್ಲಿ ‘ಕೆಜಿಎಫ್ 2’ (KGF 2) ಅಭೂತಪೂರ್ವ ಗೆಲುವು ಕಂಡಿದೆ. ಹಿಂದಿ ವರ್ಷನ್ನಿಂದ ಯಶ್ (Yash) ಸಿನಿಮಾಗೆ ಆಗಿರುವುದು ಬರೋಬ್ಬರಿ 400 ಕೋಟಿ ರೂಪಾಯಿ ಕಲೆಕ್ಷನ್! ಮೂಲ ಹಿಂದಿ ಸಿನಿಮಾಗಳೇ 100 ಕೋಟಿ ರೂ. ಕ್ಲಬ್ ಸೇರುವುದು ಕಷ್ಟ ಆಗಿರುವ ಈ ಕಾಲದಲ್ಲಿ ‘ಕೆಜಿಎಫ್ 2’ ಚಿತ್ರ ಹಿಂದಿಗೆ ಡಬ್ ಆಗಿ ಈ ಸಾಧನೆ ಮಾಡಿರುವುದು ನಿಜಕ್ಕೂ ಗ್ರೇಟ್. ಈ ಚಿತ್ರದ ಯಶಸ್ಸು ಕಂಡು ಭಾರತೀಯ ಚಿತ್ರರಂಗ ಮಾತ್ರವಲ್ಲದೇ ಜಾಗತಿಕ ಸಿನಿಮಾರಂಗದ ಮಂದಿಯೆಲ್ಲ ಬೆಕ್ಕಸ ಬೆರಗಾಗಿದ್ದಾರೆ.
‘ಕೆಜಿಎಫ್: ಚಾಪ್ಟರ್ 1’ ತೆರೆಕಂಡಾಗ ಅದು ಹಿಂದಿಯಲ್ಲಿ ಮಾಡಿದ್ದ ಲೈಫ್ಟೈಮ್ ಕಲೆಕ್ಷನ್ 44.09 ಕೋಟಿ ರೂ. ಮಾತ್ರ. ಆದರೆ ಈಗ ಆ ಚಿತ್ರದ ಸೀಕ್ವೆಲ್ನಿಂದ ಬಾಕ್ಸ್ ಆಫೀಸ್ನಲ್ಲಿ ಸುನಾಮಿಯೇ ಸೃಷ್ಟಿ ಆಗಿದೆ. ಮೊದಲ ದಿನ ‘ಕೆಜಿಎಫ್ 2’ ಸಿನಿಮಾ ಹಿಂದಿಯಲ್ಲಿ 53.95 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತು. ಈಗ ಒಟ್ಟು 23 ದಿನಕ್ಕೆ ಹಿಂದಿ ವರ್ಷನ್ನಿಂದ 400 ಕೋಟಿ ರೂಪಾಯಿ ಕಮಾಯಿ ಆಗಿದೆ. ಈ ಸಾಧನೆಯಿಂದ ಯಶ್ ಅವರು ಮತ್ತೊಂದು ಎತ್ತರಕ್ಕೆ ಏರಿದ್ದಾರೆ.
‘ಕೆಜಿಎಫ್: ಚಾಪ್ಟರ್ 2’ ಸಿನಿಮಾ ಎದುರು ಬಿಡುಗಡೆ ಆಗಲು ಬಾಲಿವುಡ್ನ ಸ್ಟಾರ್ ನಟರ ಚಿತ್ರಗಳು ಕೂಡ ಹೆದರಿಕೊಂಡವು. ಆದರೂ ಹುಂಬತನ ಮಾಡಿ ರಿಲೀಸ್ ಆಗಿದ್ದ ತಮಿಳಿನ ‘ಬೀಸ್ಟ್’ ಚಿತ್ರ ನೆಲ ಕಚ್ಚಿತು. ನಂತರದ ವಾರಗಳಲ್ಲಿ ಬಿಡುಗಡೆಯಾದ ಹಿಂದಿಯ ‘ಜೆರ್ಸಿ’, ‘ಹೀರೋಪಂತಿ 2’, ‘ರವ್ವೇ 34’ ಮುಂತಾದ ಸಿನಿಮಾಗಳು ಕೂಡ ‘ಕೆಜಿಎಫ್ 2’ ಎದುರು ನಿಲ್ಲಲು ಸಾಧ್ಯವಾಗದೇ ಸೋಲೊಪ್ಪಿಕೊಂಡವು. ಹೀಗೆ ಗಲ್ಲಾಪೆಟ್ಟಿಗೆಯಲ್ಲಿ ಈ ಚಿತ್ರ ತನ್ನ ಅಧಿಪತ್ಯ ಮೆರೆದಿದೆ.
ಪ್ರಶಾಂತ್ ನೀಲ್ ನಿರ್ದೇಶನದ ಈ ಸಿನಿಮಾಗೆ ಬಂಡವಾಳ ಹೂಡಿದ ‘ಹೊಂಬಾಳೆ ಫಿಲ್ಮ್ಸ್’ ಸಂಸ್ಥೆಗೆ ಭರಪೂರ ಲಾಭ ಆಗಿದೆ. ವಿಶ್ವಾದ್ಯಂತ ಈ ಸಿನಿಮಾ 24 ದಿನಗಳಲ್ಲಿ 1100 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಈ ಸಿನಿಮಾ ಮಾಡಿದ ದಾಖಲೆಯನ್ನು ಮುರಿಯಲು ಇನ್ಯಾರಿಗೆ ಸಾಧ್ಯ ಎಂದು ದೊಡ್ಡ ದೊಡ್ಡ ಸ್ಟಾರ್ ಹೀರೋಗಳೆಲ್ಲ ಅತ್ತಿತ್ತ ನೋಡುವಂತಾಗಿದೆ. ಸಂಜಯ್ ದತ್, ರವೀನಾ ಟಂಡನ್ ಅವರು ‘ಕೆಜಿಎಫ್ 2’ ಸಿನಿಮಾದಲ್ಲಿ ಗಮನಾರ್ಹ ಪಾತ್ರಗಳನ್ನು ಮಾಡಿ ಸೈ ಎನಿಸಿಕೊಂಡರು. ಹಿಂದಿ ಪ್ರೇಕ್ಷಕರಿಗೆ ಈ ಚಿತ್ರ ಆಪ್ತವಾಗಲು ಇದು ಕೂಡ ಒಂದು ಕಾರಣ.
ರವಿ ಬಸ್ರೂರು ಅವರ ಸಂಗೀತ, ಭುವನ್ ಗೌಡ ಛಾಯಾಗ್ರಹಣ, ಶಿವಕುಮಾರ್ ಅವರ ಕಲಾ ನಿರ್ದೇಶನ, ಯಶ್ ಮ್ಯಾನರಿಸಂ, ಎಲ್ಲ ಕಲಾವಿದರ ನಟನೆ, ತಾಯಿ ಸೆಂಟಿಮೆಂಟ್, ಮೈ ನವಿರೇಳಿಸುವ ಆ್ಯಕ್ಷನ್ ಸನ್ನಿವೇಶ, ಸರಿಸಾಟಿ ಇಲ್ಲದ ಮೇಕಿಂಗ್, ಬೃಹತ್ ಸೆಟ್ಗಳು ಸೇರಿದಂತೆ ಅನೇಕ ಅಂಶಗಳನ್ನು ಪ್ರೇಕ್ಷಕರು ಮೆಚ್ಚಿಕೊಂಡಿದ್ದಾರೆ. ಈ ಎಲ್ಲದರ ಪರಿಣಾಮವಾಗಿ ‘ಕೆಜಿಎಫ್: ಚಾಪ್ಟರ್ 2’ ಸಿನಿಮಾ ಜಯಭೇರಿ ಬಾರಿಸಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 11:36 am, Sat, 7 May 22