
ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ‘ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್’ (Toxic Movie) ಚಿತ್ರದಲ್ಲಿ ಬಾಲಿವುಡ್ ನಟಿ ಕಿಯಾರಾ ಅಡ್ವಾಣಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇತ್ತೀಚಿನ ಸಂದರ್ಶನವೊಂದರಲ್ಲಿ ಚಿತ್ರೀಕರಣದ ದಿನಗಳ ಬಗ್ಗೆ ಮಾತನಾಡಿರುವ ಕಿಯಾರಾ, ನಿರ್ದೇಶಕಿ ಗೀತು ಮೋಹನ್‌ದಾಸ್ ಸೆಟ್‌ನಲ್ಲಿ ತಮಗೆ ಹಾಕಿದ್ದ ಖಡಕ್ ರೂಲ್ಸ್ ಹಾಗೂ ಕನ್ನಡದಲ್ಲಿ ನಟಿಸುವಾಗ ಎದುರಾದ ಸವಾಲುಗಳನ್ನು ಹಂಚಿಕೊಂಡಿದ್ದಾರೆ.
ಯಾವಾಗಲೂ ಶೂಟಿಂಗ್ ಸೆಟ್‌ಗೆ ಬಂದ ತಕ್ಷಣ ಎಲ್ಲರಿಗೂ ನಗುನಗುತ್ತಾ ‘ಹಾಯ್, ಗುಡ್ ಮಾರ್ನಿಂಗ್’ ಎಂದು ಮಾತನಾಡಿಸುವುದು ಕಿಯಾರಾ ಅವರ ಅಭ್ಯಾಸವಂತೆ. ಆದರೆ ‘ಟಾಕ್ಸಿಕ್’ ಸೆಟ್‌ನಲ್ಲಿ ಇದಕ್ಕೆ ಬ್ರೇಕ್ ಬಿದ್ದಿತ್ತು. ಈ ಬಗ್ಗೆ ಕಿಯಾರಾ ಮಾಹಿತಿ ನೀಡಿದ್ದಾರೆ.
‘ನಿರ್ದೇಶಕಿ ಗೀತು ಮೋಹನ್‌ದಾಸ್ ಅವರು ನನಗೆ ಮೊದಲೇ ಖಡಕ್ ಆಗಿ ಹೇಳಿದ್ದರು. ನಾಳೆ ನೀನು ಸೆಟ್‌ಗೆ ಬರುವಾಗ ನಿನ್ನ ಪಾತ್ರದ ಮೂಡ್‌ನಲ್ಲೇ ಇರಬೇಕು. ನನಗೆ ಯಾವುದೇ ಔಪಚಾರಿಕ ಮಾತುಕತೆಗಳು ಬೇಡ. ಯಾರಿಗೂ ಹಾಯ್, ಹಲೋ ಎನ್ನಬೇಡ. ನಿನ್ನ ಟೀಮ್ ಜೊತೆಯೂ ಮಾತನಾಡಬೇಡ. ಕೇವಲ ನಿನ್ನ ಕ್ಯಾರೆಕ್ಟರ್ ಜೋನ್‌ನಲ್ಲಿ ಮಾತ್ರ ಇರು ಎಂದು ಸೂಚಿಸಿದ್ದರು. ಪಾತ್ರದ ತೀವ್ರತೆಯನ್ನು ಕಾಯ್ದುಕೊಳ್ಳಲು ಗೀತು ಈ ರೀತಿ ಮಾಡುತ್ತಿದ್ದರು’ ಎಂದು ಕಿಯಾರಾ ನೆನಪಿಸಿಕೊಂಡಿದ್ದಾರೆ.
‘ಟಾಕ್ಸಿಕ್’ ಚಿತ್ರವನ್ನು ಏಕಕಾಲದಲ್ಲಿ ಇಂಗ್ಲಿಷ್ ಹಾಗೂ ಕನ್ನಡ ಎರಡೂ ಭಾಷೆಗಳಲ್ಲಿ ಚಿತ್ರೀಕರಿಸಲಾಗುತ್ತಿದೆ. ಇದು ತಮಗೆ ದೊಡ್ಡ ಸವಾಲಾಗಿತ್ತು ಎಂದು ಕಿಯಾರಾ ಒಪ್ಪಿಕೊಂಡಿದ್ದಾರೆ. ಮೊದಲಿಗೆ ಇಂಗ್ಲಿಷ್‌ನಲ್ಲಿ ದೃಶ್ಯದ ಶೂಟಿಂಗ್ ನಡೆಯುತ್ತಿತ್ತು. ಅದು ಓಕೆ ಆದ ಬಳಿಕ ಅದೇ ದೃಶ್ಯವನ್ನು ಕನ್ನಡದಲ್ಲಿ ಚಿತ್ರೀಕರಿಸಲಾಗುತ್ತಿತ್ತು. ಕನ್ನಡ ಭಾಷೆ ಬಾರದ ಕಾರಣ, ಕಿಯಾರಾ ಅವರು ಪ್ರತಿ ದಿನ ಶೂಟಿಂಗ್‌ಗೂ ಮುನ್ನ ಹಿಂದಿನ ರಾತ್ರಿಯೇ ಕುಳಿತು ಡೈಲಾಗ್‌ಗಳನ್ನು ಬಾಯಿಪಾಠ ಮಾಡುತ್ತಿದ್ದರಂತೆ.
ಇದನ್ನೂ ಓದಿ: ‘‘ಟಾಕ್ಸಿಕ್’ ಪ್ರೇಮಕತೆ ಸಂಪೂರ್ಣ ಭಿನ್ನ’: ಕತೆಯ ಬಗ್ಗೆ ನಾಯಕಿ ಕಿಯಾರಾ ಮಾತು
ಕನ್ನಡ ಚಿತ್ರರಂಗದಲ್ಲಿ ಕೆಲಸ ಮಾಡಿದ ಅನುಭವದ ಬಗ್ಗೆ ಮಾತನಾಡಿದ ಅವರು, ‘ಸಣ್ಣಪುಟ್ಟ ಸಾಂಸ್ಕೃತಿಕ ವ್ಯತ್ಯಾಸಗಳಿರಬಹುದು. ಆದರೆ ಅಂತಿಮವಾಗಿ ನಾವೆಲ್ಲರೂ ಭಾರತೀಯರು. ಹಾಗಾಗಿ ಇಲ್ಲಿನ ಕೆಲಸದ ಶೈಲಿ ನನಗೆ ಹೊಸದೇನೂ ಅನಿಸಲಿಲ್ಲ. ಬಾಲಿವುಡ್ ಹಾಗೂ ತೆಲುಗು ಚಿತ್ರರಂಗದಲ್ಲಿ ಕೆಲಸ ಮಾಡಿದಂತೆಯೇ ಇಲ್ಲೂ ಕೂಡ ಒಳ್ಳೆಯ ಅನುಭವ ಸಿಕ್ಕಿದೆ. ಇಲ್ಲಿನ ಸ್ಟಾರ್‌ಡಮ್ ಹಾಗೂ ಮೇಕಿಂಗ್ ಶೈಲಿ ಅದ್ಭುತವಾಗಿದೆ’ ಎಂದು ಹೊಗಳಿದ್ದಾರೆ.
ಕೆವಿಎನ್ ಪ್ರೊಡಕ್ಷನ್ಸ್ ಮತ್ತು ಮಾನ್‌ಸ್ಟರ್ ಮೈಂಡ್ ಕ್ರಿಯೇಷನ್ಸ್ ಜಂಟಿಯಾಗಿ ನಿರ್ಮಿಸುತ್ತಿರುವ ಈ ಚಿತ್ರದಲ್ಲಿ ಯಶ್, ನಯನತಾರಾ, ಹುಮಾ ಖುರೇಷಿ, ರುಕ್ಮಿಣಿ ವಸಂತ್ ಮತ್ತು ತಾರಾ ಸುತಾರಿಯಾ ಸೇರಿದಂತೆ ದೊಡ್ಡ ತಾರಾಬಳಗವೇ ಇದೆ. ಜೂನ್ 4ರಂದು ತೆರೆಕಾಣಬೇಕಿತ್ತು. ಆದರೆ ತಾಂತ್ರಿಕ ಕಾರಣಗಳಿಂದಾಗಿ ಚಿತ್ರದ ಬಿಡುಗಡೆ ದಿನಾಂಕವನ್ನು ಸದ್ಯಕ್ಕೆ ಮುಂದೂಡಲಾಗಿದ್ದು, ಹೊಸ ದಿನಾಂಕದ ಅಧಿಕೃತ ಪ್ರಕಟಣೆ ಬಾಕಿ ಇದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 7:01 am, Sat, 30 May 26